ಮಂಗಳವಾರ, ಏಪ್ರಿಲ್ 13, 2021
32 °C

ರಣಜಿ ಟ್ರೋಫಿ: ವಿನಯ್ ಪಡೆಗೆ ಇನಿಂಗ್ಸ್ ಹಿನ್ನಡೆ

ಪ್ರಮೋದ್ ಜಿ.ಕೆ. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಡೋದರ: ಕನ್ನಡನಾಡಿನ ಹುಡುಗರ ಇನಿಂಗ್ಸ್ ಮುನ್ನಡೆಯ ಕನಸು ನನಸಾಗಲಿಲ್ಲ. ಉತ್ತಮ ಆರಂಭವನ್ನೇ ಪಡೆದರೂ, ರಾಶಿ ವಿಶ್ವಾಮಿತ್ರ ನದಿಯ ಅಂಚಿನಿಂದ ಬೀಸಿಬಂದ ಗಗನ್‌ದೀಪ್ ಎಂಬ      `ಬಿರುಗಾಳಿ~ಯ ವೇಗಕ್ಕೆ ರಾಜ್ಯ ತಂಡದ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು.ಬರೋಡ ಕ್ರಿಕೆಟ್ ಸಂಸ್ಥೆಯ ಮೋತಿಭಾಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ `ಬಿ~ ಗುಂಪಿನ ಪಂದ್ಯದಲ್ಲಿ ರಾಜ್ಯದ ಬ್ಯಾಟ್ಸ್‌ಮನ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ. ಬರೋಡ ಮೊದಲ ಇನಿಂಗ್ಸ್‌ನಲ್ಲಿ ನೀಡಿದ್ದ 406 ರನ್‌ಗಳ ಗುರಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕಕ್ಕೆ ಭಾರಿ ಸವಾಲು ಎನಿಸಿತು.ರಾಬಿನ್ ಉತ್ತಪ್ಪ ಮತ್ತು ಸ್ಟುವರ್ಟ್ ಬಿನ್ನಿ ಅವರ ಅರ್ಧಶತಕದ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 109 ಓವರ್‌ಗಳಲ್ಲಿ 284 ರನ್ ಗಳಿಸಿತು. ಎರಡನೇ ದಿನದಾಟದ ಅಂತ್ಯಕ್ಕೆ ರಾಜ್ಯ ತಂಡ 55 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 148 ರನ್ ಕಲೆ ಹಾಕಿತ್ತು. ಇದರಿಂದ ಬರೋಡ ಮೊದಲ ಇನಿಂಗ್ಸ್‌ನಲ್ಲಿ 122 ರನ್‌ಗಳ ಮುನ್ನಡೆ ಸಾಧಿಸಿತು.ಈ ಖುಷಿಯಲ್ಲಿಯೇ ಬರೋಡ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿತು. ಮೂರನೇ ದಿನವಾದ ಭಾನುವಾರದ ಅಂತ್ಯಕ್ಕೆ ಯೂಸುಫ್ ಪಠಾಣ್ ನೇತೃತ್ವದ ತಂಡ 29 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 115 ರನ್ ಗಳಿಸಿದೆ. ಬರೋಡ ಇದರಿಂದ ಒಟ್ಟು 237 ರನ್‌ಗಳ ಮುನ್ನಡೆ ತನ್ನದಾಗಿಸಿಕೊಂಡಿತು.ಆರಂಭದಲ್ಲಿಯೇ ಮಿಂಚು: ಇನಿಂಗ್ಸ್ ಹಿನ್ನಡೆಯ ಸಂಕಷ್ಟದೊಂದಿಗೆ ಬೌಲಿಂಗ್ ಆರಂಭಿಸಿದ ಕರ್ನಾಟಕ ತಂಡ ಬರೋಡದ ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್‌ಗೆ ಆರಂಭದಲ್ಲಿಯೇ ಪೆಟ್ಟು ನೀಡಿತು.

`ದಾವಣಗೆರೆ ಎಕ್ಸ್‌ಪ್ರೆಸ್~ ಆರ್. ವಿನಯ್ ಮೊದಲ ಎಸೆತದಲ್ಲಿಯೇ ಕೇದಾರ್ ದೇವಧರ್ ಅವರನ್ನು ಎಲ್‌ಬಿಡಬ್ಲ್ಯು `ಖೆಡ್ಡಾ~ಕ್ಕೆ ಕೆಡವಿದರು. ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಅಭಿಮನ್ಯು ಮಿಥುನ್ ಬೀಸಿದ ಬಲೆಗೆ ಆದಿತ್ಯ ವಾಘ್ಮೋಡೆ ಬಿದ್ದರು. ಇವರ ಬ್ಯಾಟಿನ ಅಂಚಿಗೆ ಸವರಿದ ಚೆಂಡು ಸ್ಲಿಪ್‌ನಲ್ಲಿದ್ದ ಮನೀಷ್ ಪಾಂಡೆ ಕೈಯಲ್ಲಿ ಭದ್ರವಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಆದಿತ್ಯ ಇಲ್ಲಿ `ಸೊನ್ನೆ~ ಸುತ್ತಿದರು.ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಎದುರಾದರೂ ಸ್ಥಳೀಯ ಅಭಿಮಾನಿಗಳು ಎದೆಗುಂದಲಿಲ್ಲ. ಆಪದ್ಭಾಂಧವ `ಭಯ್ಯಾ~ ಇದ್ದಾರೆಂದು ಅವರಿಗೆ ಭಾರಿ ನಂಬಿಕೆ. ಈ ನಂಬಿಕೆಯನ್ನು ಇರ್ಫಾನ್ ಪಠಾಣ್ ಹುಸಿಗೊಳಿಸಲಿಲ್ಲ. ಈ ಎಡಗೈ ಬ್ಯಾಟ್ಸ್‌ಮನ್ 34 ಎಸೆತಗಳಲ್ಲಿ 33 ರನ್ ಕಲೆ ಹಾಕಿದರು. ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡ ಬೇಸರದಲ್ಲಿದ್ದ ಬರೋಡದ ಜನತೆಗೆ ಕೊಂಚ ಹೊತ್ತು ಟ್ವೆಂಟಿ-20 ಆಟದ ಸೊಬಗನ್ನು ಅವರು ನೆನಪು ಮಾಡಿಕೊಟ್ಟರು.ಸ್ಟ್ರೈಟ್‌ಡ್ರೈವ್‌ನಲ್ಲಿ ಮೇಲಿಂದ ಮೇಲೆ ಎರಡು ಬೌಂಡರಿಗಳನ್ನು ಬಾರಿಸಿದ ಇರ್ಫಾನ್ ಒಟ್ಟು ಆರು ಸಲ ಚೆಂಡನ್ನು ಬೌಂಡರಿಗೆ ಅಟ್ಟಿದರು. ಭಾನುವಾರ ರಜೆಯ ದಿನವಾದ ಕಾರಣ ತಮ್ಮೂರ ನೆಚ್ಚಿನ ಆಟಗಾರನ ಬ್ಯಾಟಿಂಗ್ ನೋಡಲು ಹೆಚ್ಚಿನ ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಇರ್ಫಾನ್ ಜೊತೆಗೂಡಿ ಆಡುತ್ತಿದ್ದ ಅಭಿಮನ್ಯು ಚವ್ಹಾಣ್ ಕೂಡಾ ಮೊದಲ ಇನಿಂಗ್ಸ್‌ನಲ್ಲಿ ಅನುಭವಿಸಿದ್ದ ವೈಫಲ್ಯವನ್ನು ಮೆಟ್ಟಿ ನಿಂತರು.ಮೇಲಿಂದ ಮೇಲೆ ವಿಕೆಟ್ ಉರುಳುತ್ತಿದ್ದರೂ, ಈ ಬಲಗೈ ಬ್ಯಾಟ್ಸ್‌ಮನ್ 137 ನಿಮಿಷ ಕ್ರೀಸ್‌ಗೆ ಕಚ್ಚಿಕೊಂಡು ನಿಂತು ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. 98 ಎಸೆತಗಳಲ್ಲಿ 52 ರನ್ ಗಳಿಸಿ ಇರ್ಫಾನ್ ಆಟಕ್ಕೆ ತಕ್ಕ ಬೆಂಬಲ ನೀಡಿದರು. ಇದರಲ್ಲಿ ಒಂಬತ್ತು ಬೌಂಡರಿಗಳು ಸೇರಿವೆ.ಇನಿಂಗ್ಸ್ ಹಿನ್ನಡೆ: ಕರ್ನಾಟಕದ ಇನಿಂಗ್ಸ್ ಮುನ್ನಡೆ ಕನಸಿಗೆ ಕಾವಲಾಗಿದ್ದ ರಾಬಿನ್ ಉತ್ತಪ್ಪ (82, 325 ನಿಮಿಷ, 219 ಎಸೆತ, 11ಬೌಂಡರಿ), ಭರವಸೆಯ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ (55, 102ಎಸೆತ, 7 ಬೌಂಡರಿ, 1 ಸಿಕ್ಸರ್) ತಂಡಕ್ಕೆ ನೆರವಾದರು. ಆದರೂ ಇನಿಂಗ್ಸ್ ಹಿನ್ನಡೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂತರ ಬಂದ ಸಿ.ಎಂ. ಗೌತಮ್ (21), ವಿನಯ್ (11) ಬೇಗನೇ ಪೆವಿಲಿಯನ್ ಹಾದಿ ಹಿಡಿದರು.ಉತ್ತಮವಾಗಿ ಆಡುತ್ತಿದ್ದ ಬಲಗೈ ಬ್ಯಾಟ್ಸ್‌ಮನ್ ಉತ್ತಪ್ಪ ರಿವರ್ಸ್ ಸ್ಲಿಪ್‌ನಲ್ಲಿ ಹೊಡೆಯಲು ಯತ್ನಿಸಿ ಔಟಾದರು. ನಂತರ ಬಿನ್ನಿ ಹಾಗೂ ಗೌತಮ್ ಆರನೇ ವಿಕೆಟ್‌ಗೆ 70 ರನ್ ಕಲೆ ಹಾಕಿದರು. ಆಗ ರಾಜ್ಯ ತಂಡದ ಇನಿಂಗ್ಸ್ ಮುನ್ನಡೆಯ ಕನಸಿಗೆ ಮತ್ತೆ ಜೀವ ಬಂತು. ಆದರೆ, ಗಗನ್‌ದೀಪ್ (49ಕ್ಕೆ5) ಬೀಸಿದ `ಬಿರುಗಾಳಿ~ಯಿಂದ ಪಾರಾಗಲು ವಿನಯ್ ಪಡೆಗೆ ಸಾಧ್ಯವಾಗಲಿಲ್ಲ.ರಾಬಿನ್ ಔಟಾದ ನಂತರ ಬಿನ್ನಿ ತಂಡದ ಭರವಸೆ ಎನ್ನಿಸಿದರು. ಆದರೆ, 100ನೇ ಓವರ್‌ನಲ್ಲಿ ಲೆಗ್‌ಸೈಡ್‌ನಲ್ಲಿ ಬೌಂಡರಿ ಸಮೀಪ ಎತ್ತಿದ ಭರ್ಜರಿ ಹೊಡೆತವನ್ನು ಇರ್ಫಾನ್ ಪಠಾಣ್ ಅದ್ಭುತವಾಗಿ ಕ್ಯಾಚ್ ಪಡೆದರು. ಇದರಿಂದ ಕರ್ನಾಟಕದ ಇನಿಂಗ್ಸ್ ಮುನ್ನಡೆಯ ಕನಸು ಕ್ಷೀಣಗೊಂಡಿತು.ಶನಿವಾರ ಎರಡು ವಿಕೆಟ್ ಪಡೆದಿದ್ದ ಗಗನ್‌ದೀಪ್ ಭಾನುವಾರ ಬಿನ್ನಿ, ಸುನಿಲ್ ರಾಜು ಹಾಗೂ ಅಭಿಮನ್ಯು ಮಿಥುನ್ ವಿಕೆಟ್ ಕೆಡವಿದರು. ಇರ್ಫಾನ್ (64ಕ್ಕೆ2), ಫಿರ್ದೋಷ್ ಭಾಜಾ (82ಕ್ಕೆ2) ಪಡೆದರೆ, ಎಡಗೈ ಬೌಲರ್ ಭಾರ್ಗವ್ ಭಟ್ ಅವರು ಉತ್ತಪ್ಪ ಅವರನ್ನು ಆಕರ್ಷಕವಾಗಿ ಬೌಲ್ಡ್ ಮಾಡಿ ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬಿಗೆ ಪೆಟ್ಟು ನೀಡಿದರು.12 ವಿಕೆಟ್: ಸಂಪೂರ್ಣವಾಗಿ ಬೌಲರ್‌ಗಳಿಗೆ ನೆರವು ನೀಡಿದ ಪಿಚ್‌ನಲ್ಲಿ ಮೂರನೇ ದಿನ ಒಟ್ಟು 12 ವಿಕೆಟ್‌ಗಳು ಉರುಳಿದವು. ಕರ್ನಾಟಕದ ಎಂಟು ಹಾಗೂ ಬರೋಡದ ನಾಲ್ಕು ವಿಕೆಟ್‌ಗಳು ಪತನಗೊಂಡವು.

---

ಸ್ಕೋರ್ ವಿವರ: 

 

ಬರೋಡ ಮೊದಲ ಇನಿಂಗ್ಸ್ 123.4 ಓವರ್‌ಗಳಲ್ಲಿ 406

ಕರ್ನಾಟಕ 109 ಓವರ್‌ಗಳಲ್ಲಿ 284

(ಶನಿವಾರದ ಅಂತ್ಯಕ್ಕೆ 55 ಓವರ್‌ಗಳಲ್ಲಿ 2 ವಿಕೆಟ್‌ಗೆ 148)
ರಾಬಿನ್ ಉತ್ತಪ್ಪ ಬಿ ಭಾರ್ಗವ್ ಭಟ್  82

ಮನೀಷ್ ಪಾಂಡೆ ಸಿ ಪಿನಲ್ ಷಾ ಬಿ ಇರ್ಫಾನ್ ಪಠಾಣ್  18

ಅಮಿತ್ ವರ್ಮಾ ಸಿ ಯೂಸುಫ್ ಪಠಾಣ್ ಬಿ ಫಿರ್ದೋಷ್ ಭಾಜಾ  05

ಸ್ಟುವರ್ಟ್ ಬಿನ್ನಿ ಸಿ ಇರ್ಫಾನ್ ಬಿ ಗಗನ್‌ದೀಪ್ ಸಿಂಗ್  55

ಸಿ.ಎಂ. ಗೌತಮ್ ಸಿ ಪಿನಲ್ ಷಾ ಬಿ ಇರ್ಫಾನ್ ಪಠಾಣ್  21

ಸುನಿಲ್ ಎನ್. ರಾಜು ಬಿ ಗಗನ್‌ದೀಪ್ ಸಿಂಗ್  00

ಆರ್. ವಿನಯ್ ಕುಮಾರ್ ಸಿ ಗಗನ್‌ದೀಪ್ ಸಿಂಗ್ ಬಿ ಫಿರ್ದೋಷ್ ಭಾಜಾ  11

ಅಭಿಮನ್ಯು ಮಿಥುನ್ ಸಿ ಪಿನಲ್ ಷಾ ಬಿ ಗಗನ್‌ದೀಪ್ ಸಿಂಗ್ 00

ಕೆ.ಪಿ. ಅಪ್ಪಣ್ಣ ಔಟಾಗದೆ  02

ಇತರೆ: (ಬೈ-12, ಲೆಗ್ ಬೈ-2, ವೈಡ್-13, ನೋ ಬಾಲ್-2)

 29

ವಿಕೆಟ್ ಪತನ: 1-112 (ಪವನ್; 38.1), 2-126 (ಗಣೇಶ್; 46.5), 3-162 (ಪಾಂಡೆ; 62.5), 4-169 (ಅಮಿತ್; 65.2), 5-193 (ರಾಬಿನ್; 75.5), 6-263 (ಗೌತಮ್; 98.4), 7-269 (ಬಿನ್ನಿ; 99.6), 8-273 (ಸುನಿಲ್; 101.6), 9-278 (ಮಿಥುನ್; 105.4), 10-284 (ವಿನಯ್; 108.6)

ಬೌಲಿಂಗ್: ಇರ್ಫಾನ್ ಪಠಾಣ್ 25-2-64-2, ಫಿರ್ದೂಷ್ ಭಾಜಾ 26-7-82-2, ಗಗನ್‌ದೀಪ್ ಸಿಂಗ್ 24-7-49-5, ಭಾರ್ಗವ್ ಭಟ್ 24-6-57-1, ಅಭಿಮನ್ಯು ಚವ್ಹಾಣ್ 6-2-9-0, ಕೇತನ್ ಪಾಂಚಲ್ 3-0-8-0, ಯೂಸುಫ್ ಪಠಾಣ್ 1-0-1-0.

ಬರೋಡ ಎರಡನೇ ಇನಿಂಗ್ಸ್ 29 ಓವರ್‌ಗಳಲ್ಲಿ

4 ವಿಕೆಟ್‌ಗೆ 115

ಕೇದಾರ್ ದೇವಧರ್ ಎಲ್‌ಬಿಡಬ್ಲ್ಯು ಬಿ ಆರ್. ವಿನಯ್ ಕುಮಾರ್  00

ಆದಿತ್ಯ ವಾಘ್ಮೋಡೆ ಸಿ ಮನೀಷ್ ಪಾಂಡೆ ಬಿ ಅಭಿಮನ್ಯು ಮಿಥುನ್  00

ಅಭಿಮನ್ಯು ಚವ್ಹಾಣ್ ಬ್ಯಾಟಿಂಗ್  52

ಅಂಬಟಿ ರಾಯುಡು ಸಿ  ಗೌತಮ್ ಬಿ ಸ್ಟುವರ್ಟ್ ಬಿನ್ನಿ  21

ಯೂಸುಫ್ ಪಠಾಣ್ ಎಲ್‌ಬಿಡಬ್ಲ್ಯು ಬಿ ಮನೀಷ್ ಪಾಂಡೆ  00

ಇರ್ಫಾನ್ ಪಠಾಣ್ ಬ್ಯಾಟಿಂಗ್  33

ಇತರೆ: (ಬೈ-5, ಲೆಗ್ ಬೈ-2, ನೋ ಬಾಲ್-2)  09

ವಿಕೆಟ್ ಪತನ: 1-00 (ಕೇದಾರ್; 0.1), 2-9 (ಆದಿತ್ಯ; 1.3), 3-64 (ರಾಯುಡು; 16.5), 4-65 (ಯೂಸುಫ್; 17.4).

ಬೌಲಿಂಗ್: ಆರ್. ವಿನಯ್ ಕುಮಾರ್ 7-1-30-1, ಅಭಿಮನ್ಯು ಮಿಥುನ್ 8-2-31-1, ಸ್ಟುವರ್ಟ್ ಬಿನ್ನಿ 6-2-23-1, ಕೆ.ಪಿ. ಅಪ್ಪಣ್ಣ 3-1-11-0, ಮನೀಷ್ ಪಾಂಡೆ 5-2-13-1.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.