ರಣಜಿ: ಪವನ್‌ಗೆ ಚೊಚ್ಚಲ ದ್ವಿಶತಕ ಸಂಭ್ರಮ

7

ರಣಜಿ: ಪವನ್‌ಗೆ ಚೊಚ್ಚಲ ದ್ವಿಶತಕ ಸಂಭ್ರಮ

Published:
Updated:
ರಣಜಿ: ಪವನ್‌ಗೆ ಚೊಚ್ಚಲ ದ್ವಿಶತಕ ಸಂಭ್ರಮ

ಉದಯಪುರ: ಚೊಚ್ಚಲ ದ್ವಿಶತಕದ ಪ್ರಸವ `ಸುಖ~ ಅನುಭವಿಸಿದ ಕೆ.ಬಿ. ಪವನ್ ಹಾಗೂ ಟ್ವೆಂಟಿ-20 ಮಾದರಿಯಲ್ಲಿ ಸೊಗಸಾದ ಶತಕ ಪೂರೈಸಿದ    ಸ್ಟುವರ್ಟ್ ಬಿನ್ನಿ, ಇಲ್ಲಿಯ ಜಗತ್ಪ್ರಸಿದ್ಧ `ಪೊಪೆಟ್ ಷೋ~ ಗೊಂಬೆಗಳಂತೆಯೇ ರಾಜಸ್ತಾನ ತಂಡದ ಆಟಗಾರರನ್ನು ಕ್ರೀಡಾಂಗಣದ ತುಂಬಾ ಕುಣಿಸಿದರು.ಪವನ್-ಬಿನ್ನಿ ಜೋಡಿ ಫೀಲ್ಡ್ ಕ್ಲಬ್ ಅಂಗಳದಲ್ಲಿ ಹರಿಸಿದ ರನ್ ಪ್ರವಾಹದೊಳಗೆ ಸಿಕ್ಕ ಕಾನಿಟ್ಕರ್ ಬಳಗ, ಏನು ಮಾಡಬೇಕು ಎಂಬುದು ತೋಚದೆ ಒದ್ದಾಡಿ ಹೋಯಿತು.ಪರಿಣಾಮ - ಆತಿಥೇಯ ರಾಜಸ್ತಾನ ತಂಡದ ಎದುರಿನ ರಣಜಿ ಟ್ರೋಫಿ  ಕ್ರಿಕೆಟ್ ಸೂಪರ್ ಲೀಗ್ `ಎ~ ಗುಂಪಿನ ಮೊದಲ ಪಂದ್ಯದ ಎರಡನೇ ದಿನವಾದ ಶುಕ್ರವಾರ ಕರ್ನಾಟಕ ತಂಡ ರನ್‌ಗಳ ಎವರೆಸ್ಟ್ ಏರಿ ನಿಂತಿತು. ತಂಡ 160.4 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 623 ರನ್ ಗಳಿಸಿದ್ದಾಗ ನಾಯಕ ವಿನಯ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.ದಿನದಾಟದ ಅಂತ್ಯಕ್ಕೆ ರಾಜಸ್ತಾನ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಳೆದುಕೊಂಡು 49 ರನ್ ಗಳಿಸಿತ್ತು. ವಿನೀತ್ ಸಕ್ಸೆನಾ ಹಾಗೂ ಅಶೋಕ ಮೆನೇರಿಯಾ ಕ್ರೀಸ್ ಬಳಿ ಇದ್ದರು. ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವೈಭವ್ ದೇಶಪಾಂಡೆ ಅವರ ವಿಕೆಟ್ ಕಳೆದುಕೊಂಡಿದ್ದ ರಾಜಸ್ತಾನ, ನಾಯಕ ಹೃಷಿಕೇಶ್ ಕಾನಿಟ್ಕರ್ ಕೂಡ ಬೇಗ ಪೆವಿಲಿಯನ್‌ಗೆ ಹಿಂದಿರುಗಿದ್ದರಿಂದ ಆಘಾತ ಅನುಭವಿಸಿತು.ಗುರುವಾರದ ಆಟ ಮುಂದುವರಿಸಿದ (ಮೂರು ವಿಕೆಟ್‌ಗೆ 273) ವಿನಯ್ ಪಡೆ, ದಿನದ ಮೂರನೇ ಓವರ್‌ನಲ್ಲಿ ಅಮಿತ್ ವರ್ಮಾ ಅವರ ರೂಪದಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ವೇಗಿ ಪಂಕಜ್ ಸಿಂಗ್ ಅವರ ಎಸೆತವನ್ನು ವರ್ಮಾ ಗುರುತಿಸುವಲ್ಲಿ ವಿಫಲವಾಗಿದ್ದೇ ತಡ, ಎಡ ಹಾಗೂ ಮಧ್ಯದ ಸ್ಟಂಪ್‌ಗಳೆರಡೂ ಧರೆಗುರುಳಿದ್ದವು. ಐದು ಓವರ್‌ಗಳ ಅಂತರದಲ್ಲಿ ಸಿ.ಎಂ. ಗೌತಮ್ ಕೂಡ ಪಂಕಜ್ ಅವರ ಎಲ್‌ಬಿಡಬ್ಲ್ಯು ಜಾಲಕ್ಕೆ ಬಿದ್ದಾಗ ಕರ್ನಾಟಕದ ಪಾಳೆಯದಲ್ಲಿ ಆತಂಕ ಸೃಷ್ಟಿಯಾಗಿತ್ತು.ಈ ಹಂತದಲ್ಲಿ ಜೊತೆಯಾದ ಪವನ್-ಬಿನ್ನಿ ಆರನೇ ವಿಕೆಟ್‌ಗೆ 237 ರನ್ ಕಲೆಹಾಕುವ ಮೂಲಕ ಆಟದ ಗತಿಯನ್ನೇ ಬದಲಿಸಿದರು. ದ್ವಿಶತಕದ ಮೇಲೆ ಮತ್ತೊಂದು ಅರ್ಧಶತಕ (251) ಪೂರೈಸಿದ ಪವನ್, ಎರಡು ದಿನ ಆಡಿಯೂ ಔಟಾಗದೆ ಉಳಿದರು. ಯಾವ ಅವಸರವನ್ನೂ ತೋರದ ಈ ಆರಂಭಿಕ ಬ್ಯಾಟ್ಸ್‌ಮನ್, ಅವಕಾಶ ಸಿಕ್ಕಾಗಲೆಲ್ಲ ಬೌಂಡರಿ ಬಾರಿಸುತ್ತಾ, ಮಿಕ್ಕ ಸಮಯದಲ್ಲಿ ರಕ್ಷಣಾತ್ಮಕ ಆಟವಾಡಿ ಇನಿಂಗ್ಸ್ ಕಟ್ಟಿದರು.ಮಧುರ್ ಖತ್ರಿ ಎಸೆತದಲ್ಲಿ ಸ್ಟ್ರೇಟ್ ಡ್ರೈವ್ ಮೂಲಕ ಒಂದು ರನ್ ಪಡೆದು ದ್ವಿಶತಕ ಪೂರೈಸಿದ ಪವನ್, ಮೇಲಕ್ಕೆ ನೆಗೆದು, ಗಾಳಿಗೆ ಬಲವಾಗಿ ಗುದ್ದು ನೀಡುವ ಮೂಲಕ ಮೊದಲ ಬಾರಿಗೆ 200ರ ಗಡಿ ದಾಟಿದ ಸಂಭ್ರಮ ಆಚರಿಸಿಕೊಂಡರು. ರಣಜಿಯಲ್ಲಿ ಕರ್ನಾಟಕದ ಪರ 20ನೇ ದ್ವಿಶತಕ (13ನೇ ಆಟಗಾರ) ದಾಖಲಿಸಿದ  ಹಿರಿಮೆಯೂ ಅವರದಾಯಿತು.ತಮ್ಮ ಬೌಲಿಂಗ್ ಬತ್ತಳಿಕೆಯಲ್ಲಿದ್ದ ಎಲ್ಲ ಅಸ್ತ್ರಗಳನ್ನು ಕಾನಿಟ್ಕರ್ ಪ್ರಯೋಗಿಸಿದರಾದರೂ `ಮೈಸೂರಿನ ಹುಡುಗ~ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ಸುಮಿತ್ ಮಾಥೂರ್ ಎಸೆತದಲ್ಲಿ ಚೆಂಡಿಗೆ ಬ್ಯಾಕ್‌ಪುಟ್ ಪಂಚ್ ನೀಡುವ ಮೂಲಕ ತಂದ ಬೌಂಡರಿ, ಪವನ್ ಕಲಾತ್ಮಕ ಆಟಕ್ಕೆ ಸಾಕ್ಷ್ಯ ನುಡಿದಿತ್ತು. ಕೆಲಕಾಲ ಸ್ಲಿಪ್ `ನೋ ಮ್ಯಾನ್    ಲ್ಯಾಂಡ್~ ಆಗಿದ್ದಾಗ, ಅದರ ಸಂಪೂರ್ಣ ಪ್ರಯೋಜನವನ್ನು ಪಡೆದ ಈ ಆಟಗಾರ, ಆಕರ್ಷಕ ಕಟ್‌ಗಳ ಮೂಲಕ ಬೌಂಡರಿಗಳನ್ನು ಹರಿಸಿದರು.ವಿಕೆಟ್‌ನ ಇನ್ನೊಂದು ತುದಿಯಲ್ಲಿ ಬಿನ್ನಿ ಅವರ ಬ್ಯಾಟಿನ ಅಬ್ಬರಕ್ಕೆ ಬೆದರಿದ ಕೆಂಪು ಚೆರ‌್ರಿ ಚೆಂಡು, ಕ್ರೀಡಾಂಗಣದ ಅಷ್ಟ ದಿಕ್ಕುಗಳ ಕಡೆಗೆ ತೆರಪಿಲ್ಲದಂತೆ ಓಡಾಡಿತು. ಮೇಲಿಂದ ಮೇಲೆ ಕ್ರೀಸ್‌ನಿಂದ ಮುಂದೆ ಬರುತ್ತಿದ್ದ ಬಿನ್ನಿ, ಕವರ್ ಹಾಗೂ ಸ್ಟ್ರೇಟ್ ಡ್ರೈವ್‌ಗಳ ಮೂಲಕ ಬೌಂಡರಿಗಳ ಮಳೆಯನ್ನೇ ಸುರಿಸಿದರು. ಅಶೋಕ ಮೆನೇರಿಯಾ ಎಸೆತದಲ್ಲಿ ಸ್ವೀಪ್ ಮಾಡಿ ಕಳುಹಿಸಿದ ಎರಡು ಬೌಂಡರಿಗಳು ಮೋಹಕವಾಗಿದ್ದವು. ಪಂಕಜ್ ಸಿಂಗ್, ಮಾಥೂರ್ ಸೇರಿದಂತೆ ರಾಜಸ್ತಾನದ ಎಲ್ಲ ಪ್ರಮುಖ ಬೌಲರ್‌ಗಳು ತೀವ್ರ ದಂಡನೆಗೆ ಒಳಗಾದರು.ನಿರ್ಜೀವವಾಗಿದ್ದ ಪಿಚ್‌ನಲ್ಲಿ ಪುಟಿದು ನೇರವಾಗಿ ಬ್ಯಾಟಿಗೆ ಬರುತ್ತಿದ್ದ ಚೆಂಡು, ವಿನಯ್ ಪಡೆ ಬ್ಯಾಟಿಂಗ್ `ಬಲ~ಕ್ಕೆ ಇನ್ನಷ್ಟು ನೀರೆರೆಯಿತು. ಊಟ ಪೂರೈಸಿ ಬಂದ ನಂತರ ಟೀ ವಿರಾಮದವರೆಗೆ ಎಸೆಯಲಾದ 25 ಓವರ್‌ಗಳಲ್ಲಿ ಪವನ್-ಬಿನ್ನಿ ಜೋಡಿ, ತಂಡದ ಖಾತೆಗೆ 151 ರನ್ ಜಮೆ ಮಾಡಿತು.

 

ಇದರಲ್ಲಿ ಬಿನ್ನಿ ಕಾಣಿಕೆಯೇ ಸಿಂಹಪಾಲನ್ನು ಆಕ್ರಮಿಸಿತ್ತು. ಶತಕದ ಮೇಲೊಂದು ಅರ್ಧಶತಕ ಬಂದ ಕೂಡಲೇ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಇಳಿದ ಈ ಎಡಗೈ ಬ್ಯಾಟ್ಸ್‌ಮನ್, ಸಿಕ್ಸರ್ ಬಾರಿಸಲು ಯತ್ನಿಸಿ, ಮಾಥೂರ್ ಎಸೆತದಲ್ಲಿ ಲಾಂಗ್ ಆನ್‌ನಲ್ಲಿದ್ದ ವೈಭವ್ ದೇಶಪಾಂಡೆಗೆ ಕ್ಯಾಚ್ ನೀಡಿದರು.ಹನ್ನೊಂದೂವರೆ ಗಂಟೆಗಳ ಕಾಲ (687 ನಿಮಿಷ) ಕ್ರೀಸ್‌ಗೆ ಅಂಟಿಕೊಂಡಿದ್ದ ಪವನ್, 250ರ ಗಡಿ ದಾಟುತ್ತಿದ್ದಂತೆ ನಾಯಕ ವಿನಯ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.   ಸ್ಕೋರ್ ವಿವರ

ಕರ್ನಾಟಕ ಮೊದಲ ಇನಿಂಗ್ಸ್ 160.4 ಓವರ್‌ಗಳಲ್ಲಿ 6 ವಿಕೆಟ್‌ಗೆ 623 ಡಿಕ್ಲೇರ್ಡ್

(ಗುರುವಾರ 87.1 ಓವರ್‌ಗಳಲ್ಲಿ 3 ವಿಕೆಟ್‌ಗೆ 273)

ಕೆ.ಬಿ. ಪವನ್ ನಾಟೌಟ್  251

(687 ನಿಮಿಷ, 476 ಎಸೆತ, 32 ಬೌಂಡರಿ, 1 ಸಿಕ್ಸರ್)

ಅಮಿತ್ ವರ್ಮಾ ಬಿ ಪಂಕಜ್ ಸಿಂಗ್  69

(192 ನಿಮಿಷ, 147 ಎಸೆತ, 11 ಬೌಂಡರಿ, 1 ಸಿಕ್ಸರ್)

ಸಿ.ಎಂ. ಗೌತಮ್ ಎಲ್‌ಬಿಡಬ್ಲ್ಯು ಬಿ ಪಂಕಜ್ ಸಿಂಗ್  10

(24 ನಿಮಿಷ, 18 ಎಸೆತ, 2 ಬೌಂಡರಿ)

ಸ್ಟುವರ್ಟ್ ಬಿನ್ನಿ ಸಿ ವೈ ದೇಶಪಾಂಡೆ ಬಿ ಮಾಥೂರ್  151

(193 ನಿಮಿಷ, 141 ಎಸೆತ, 23 ಬೌಂಡರಿ, 3 ಸಿಕ್ಸರ್)

ಆರ್.ವಿನಯಕುಮಾರ್ ಔಟಾಗದೆ 34

(78 ನಿಮಿಷ, 65 ಎಸೆತ, 4 ಬೌಂಡರಿ, 1 ಸಿಕ್ಸರ್)

ಇತರೆ: (ಬೈ-14, ಲೆಗ್‌ಬೈ-7, ನೋಬಾಲ್-1, ವೈಡ್-11) 33

ವಿಕೆಟ್ ಪತನ:  1-4 (0.6, ರಾಬಿನ್), 2-45 (19.2,    ಗಣೇಶ್), 3-133 (41.6, ಪಾಂಡೆ), 4-285 (89.6, ವರ್ಮಾ), 5-303 (95.4, ಗೌತಮ್), 6-540 (141.5, ಬಿನ್ನಿ)

ಬೌಲಿಂಗ್: ಪಂಕಜ್ ಸಿಂಗ್ 35-9-108-3 (ವೈಡ್-5), ದೀಪಕ್ ಚಹಾರ್ 42-7-165-1 (ನೋಬಾಲ್-1, ವೈಡ್-1), ಮಧುರ್ ಖತ್ರಿ 35.4-3-155-0 (ವೈಡ್-2), ಸುಮಿತ್ ಮಾಥೂರ್ 35-5-127-2 (ವೈಡ್-3), ಅಶೋಕ ಮೆನೇರಿಯಾ 12-0-39-0, ವೈಭವ್ ದೇಶಪಾಂಡೆ 1-0-8-0.

ರಾಜಸ್ತಾನ ಮೊದಲ ಇನಿಂಗ್ಸ್ 15 ಓವರ್‌ಗಳಲ್ಲಿ            

 2 ವಿಕೆಟ್‌ಗೆ 49

ವೈಭವ್ ದೇಶಪಾಂಡೆ ಸಿ ಸಿ.ಎಂ.ಗೌತಮ್ ಬಿ ಆರ್.ವಿನಯ್‌ಕುಮಾರ್  00

(1 ನಿಮಿಷ, 1 ಎಸೆತ)

ವಿನೀತ್ ಸೆಕ್ಸೆನಾ ನಾಟೌಟ್  20

(71 ನಿಮಿಷ, 49 ಎಸೆತ, 4 ಬೌಂಡರಿ)

ಹೃಷಿಕೇಶ್ ಕಾನಿಟ್ಕರ್ ಸಿ ಮನೀಷ್ ಪಾಂಡೆ ಬಿ ಮಿಥುನ್ ಅಭಿಮನ್ಯು  17

(33 ನಿಮಿಷ, 25 ಎಸೆತ, 3 ಬೌಂಡರಿ)

ಅಶೋಕ ಮೆನೇರಿಯಾ ನಾಟೌಟ್  07

(35 ನಿಮಿಷ, 19 ಎಸೆತ, 1 ಬೌಂಡರಿ)

ಇತರೆ: (ಲೆಗ್‌ಬೈ-1, ವೈಡ್-4)  05

ವಿಕೆಟ್ ಪತನ: 1-0 (0.1, ವೈಭವ್), 2-31 (6.4, ಕಾನಿಟ್ಕರ್).

ಬೌಲಿಂಗ್: ಆರ್.ವಿನಯಕುಮಾರ್ 3-0-17-1 (ವೈಡ್-2), ಮಿಥುನ್ ಅಭಿಮನ್ಯು 5-1-16-1 (ನೋಬಾಲ್-1, ವೈಡ್-1), ಎಸ್.ಅರವಿಂದ್ 5-2-10-0 (ವೈಡ್-1), ಅಮಿತ್ ವರ್ಮಾ 2-0-5-0.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry