ರಣಜಿ: ರಾಬಿನ್ ಭರ್ಜರಿ ಶತಕ

7

ರಣಜಿ: ರಾಬಿನ್ ಭರ್ಜರಿ ಶತಕ

Published:
Updated:
ರಣಜಿ: ರಾಬಿನ್ ಭರ್ಜರಿ ಶತಕ

ನವದೆಹಲಿ: ಇಲ್ಲಿಯ ಕರ್ನೇಲ್ ಸಿಂಗ್ ಕ್ರೀಡಾಂಗಣದಲ್ಲಿ ಗುರುವಾರ ಒಂದೆಡೆ ರಾಬಿನ್ ಉತ್ತಪ್ಪ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರೆ, ಇನ್ನೊಂದೆಡೆ ಮುರಳಿ ಕಾರ್ತಿಕ್ ಪಟಪಟನೆ ಐದು ವಿಕೆಟ್ ಉರುಳಿಸಿ ಮಂದಹಾಸ ಬೀರಿದರು.ರೇಲ್ವೇಸ್ ವಿರುದ್ಧದ ರಣಜಿ ಟ್ರೋಫಿ  ಕ್ರಿಕೆಟ್ ಸೂಪರ್ ಲೀಗ್ `ಎ~ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡ, ರಾಬಿನ್ ಅವರ ಶತಕದ ಆಶ್ರಯ ಇಲ್ಲದಿದ್ದರೆ ಅಪಾಯದ ಸುಳಿಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿತ್ತು. ಏಕೆಂದರೆ, ವಿಕೆಟ್‌ನ ಇನ್ನೊಂದು ತುದಿಯಲ್ಲಿ ಮುರಳಿ ಅವರ ಸ್ಪಿನ್ ತಿರುಗಣಿ ಕೆಲಸ ಮಾಡುತ್ತಿತ್ತು.ಮುರಳಿ ಮ್ಯಾಜಿಕ್ ಹೊರತಾಗಿಯೂ ವಿನಯ್ ಪಡೆ ದಿನಾದಟ ಅಂತ್ಯಕ್ಕೆ 99 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 284 ರನ್ ಗಳಿಸಿತು. ಜೊತೆಗಾರ ರಾಬಿನ್ ದಿನದ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ವಿನಯ್ (43) ಮಾತ್ರ ಕ್ರೀಸ್‌ನಲ್ಲಿ ಉಳಿದರು. ರೇಲ್ವೇಸ್ ತಂಡ ವಿಕೆಟ್ ಪಡೆದ ಸಮಾಧಾನದಲ್ಲಿ ತೇಲಿದರೆ, ಕರ್ನಾಟಕ ತಂಡ ರನ್ ಗಳಿಸಿದ ತೃಪ್ತಿ ಅನುಭವಿಸಿತು. ಹೀಗಾಗಿ ಎರಡೂ ತಂಡಗಳು ದಿನದ ಸಿಹಿ-ಕಹಿಯನ್ನು ಸಮಾನವಾಗಿ ಹಂಚಿಕೊಂಡವು.ಮೊದಲ ನಾಲ್ಕು ಓವರ್‌ಗಳ ಆಟದಲ್ಲಿ ಒಂದಿಷ್ಟು ತಿಣುಕಾಡಿದ ರಾಬಿನ್, ವೇಗದ ಬೌಲರ್ ಜೈಪ್ರಕಾಶ್ ಯಾದವ್ ಅವರ ಎಸೆತದಲ್ಲಿ ಸ್ಟ್ರೇಟ್ ಡ್ರೈವ್ ಮಾಡಿ, ಚೆಂಡನ್ನು ಬೌಂಡರಿಗೆ ಅಟ್ಟುವ ಮೂಲಕ ಸೊಗಸಾದ ಇನಿಂಗ್ಸ್‌ಗೆ ಮುನ್ನುಡಿ ಬರೆದರು. ಆಮೇಲೆ ವಿಶ್ವಾಸದಿಂದ ಬ್ಯಾಟ್ ಬೀಸಿದ ಅವರು, ಸ್ಪಿನ್ನರ್ ನಿಲೇಶಕುಮಾರ್ ಚವ್ಹಾಣ್ ಎಸೆತದಲ್ಲಿ ಅತ್ಯಾಕರ್ಷಕ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.ಯಾದವ್ ಅವರ ಎಸೆತದಲ್ಲಿ ಬಾರಿಸಿದ ಸ್ಟ್ರೇಟ್ ಡ್ರೈವ್ ಬೌಂಡರಿ ಮೂಲಕ ಶತಕದ ಗಡಿ ತಲುಪಿದ ರಾಬಿನ್, ಜನ್ಮದಿನದ ಮುನ್ನಾದಿನವೇ ಖುಷಿ ಅನುಭವಿಸಿದರು. ಕಳೆದ ವರ್ಷವೂ ಮೊಹಾಲಿಯಲ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಜನ್ಮದಿನವೇ ಅವರು ಶತಕ ಸಿಡಿಸಿದ್ದರು. ರಾಬಿನ್ ಪಾಲಿಗೆ ಇದು 12ನೇ ಪ್ರಥಮದರ್ಜೆ ಕ್ರಿಕೆಟ್ ಶತಕವಾಗಿದೆ.ರಾಬಿನ್ ಆಟದ ವೇಗ ಹೇಗಿತ್ತೆಂದರೆ ಭೋಜನ ವಿರಾಮದ ವೇಳೆಗಾಗಲೇ ಅವರ ಬ್ಯಾಟ್‌ನಿಂದ ಶತಕ ದಾಖಲಾಗಿಬಿಟ್ಟಿತ್ತು. ಐದು ಮೋಹಕ ಸಿಕ್ಸರ್‌ಗಳನ್ನು ಸಿಡಿಸಿದ ರಾಬಿನ್, ಸ್ಪಿನ್ನರ್ ಆರ್ಲೆನ್ ಕೋನ್ವಾರ್ ಅವರನ್ನು ವಿಶೇಷವಾಗಿ ದಂಡನೆಗೆ ಗುರಿ ಮಾಡಿದರು. ಆರ್ಲೆನ್ ಅವರ ಒಂದು ಓವರ್‌ನಲ್ಲಿ ರಾಬಿನ್ ಕಳುಹಿಸಿದ ಎರಡು `ಲಾಂಗ್ ಆನ್~ ಸಿಕ್ಸರ್‌ಗಳು, ಸೇರಿದ್ದ ಅಲ್ಪ ಸಂಖ್ಯೆಯ ಪ್ರೇಕ್ಷಕರಿಗೆ ಮುದ ನೀಡಿದವು. ಆರ್ಲೆನ್ ಅವರ ಎಸೆತದಲ್ಲೇ ಇನ್ನೊಂದು ಸಿಕ್ಸರ್ ಬಾರಿಸಿದ ಈ `ಕೊಡಗಿನ ಕುವರ~, ಕೊನೆಯ ಸಲ ಚೆಂಡನ್ನು ಬೌಂಡರಿ ಗೆರೆಯ ಹೊರಗೆ `ಲ್ಯಾಂಡ್~ ಮಾಡಿಸಲು ಬಳಸಿಕೊಂಡಿದ್ದು ಮುರಳಿ ಅವರ ಎಸೆತವನ್ನು.ಕೇವಲ 108 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ಸಹಾಯದಿಂದ ಶತಕ ಪೂರೈಸಿದ ರಾಬಿನ್, ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ ಊಟದ ನಂತರ ಬ್ಯಾಟ್ ಮಾಡಲು ಬರಲಿಲ್ಲ. ಆಗ ತಂಡ 40 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತ್ತು.ಚಹಾ ವಿರಾಮದ ಬಳಿಕ ಸ್ಟುವರ್ಟ್ ಬಿನ್ನಿ ವಿಕೆಟ್ ಉರುಳುತ್ತಿದ್ದಂತೆಯೇ ಮತ್ತೆ ಆಡಲು ಬಂದ ರಾಬಿನ್, ಯಾದವ್ ಅವರ ಎಸೆತದಲ್ಲಿ ಹೊರಹೋಗುತ್ತಿದ್ದ ಚೆಂಡನ್ನು ತಡವಿ ತಪ್ಪು ಮಾಡಿದರು. ಬ್ಯಾಟಿಗೆ `ಹಾಯ್~ ಹೇಳಿದ ಚೆಂಡು ಸೀದಾಹೋಗಿ ಮುರಳಿ ಕೈಸೇರಿತು. ಸ್ನಾಯು ಸೆಳೆತದಿಂದ ಚೇತರಿಸಿಕೊಂಡು ಬಂದನಂತರ ಅವರು ಕೇವಲ 17 ರನ್ ಪೇರಿಸಿದರು.`ಸ್ಪಿನ್ನರ್‌ಗಳ ಸ್ವರ್ಗ~ ಎನಿಸಿದ ಕರ್ನೇಲ್ ಸಿಂಗ್ ಕ್ರೀಡಾಂಗಣದ ಪಿಚ್‌ನ ಲಾಭ ಪಡೆಯಲು ದಿನದ ಎಂಟನೇ ಓವರ್‌ನಲ್ಲೇ ರೇಲ್ವೇಸ್ ತಂಡ, ಮುರಳಿ ಅವರನ್ನು ದಾಳಿಗಿಳಿಸಿತು. ಉದಯಪುರ ಪಂದ್ಯದಲ್ಲಿ ದ್ವಿಶತಕ ಗಳಿಸಿದ್ದ ಕೆ.ಬಿ. ಪವನ್ ಅವರನ್ನು ತಮ್ಮ ಮೂರನೇ ಓವರ್‌ನಲ್ಲೇ ಈ ಸ್ಪಿನ್ನರ್ ಪೆವಿಲಿಯನ್‌ಗೆ ಅಟ್ಟಿದರು.ಒಂದು ಸಿಕ್ಸರ್ ಬಾರಿಸಿ ಬಳಿಕ ಸುಮ್ಮನಾಗಿದ್ದ ಗಣೇಶ್ ಸತೀಶ್, ರನ್ ಗಳಿಸದಿದ್ದರೂ ರಾಬಿನ್‌ಗೆ ಉತ್ತಮ ಸಾಥ್ ನೀಡಿದ್ದರು. ಎರಡನೇ ವಿಕೆಟ್‌ಗೆ ಈ ಜೋಡಿ 101 ರನ್‌ಗಳನ್ನೂ ಕಲೆ ಹಾಕಿತ್ತು. ಗಣೇಶ್ ಸಹ ಮುರಳಿ ಗಾನಕ್ಕೆ ಮರುಳಾದಾಗ ಕರ್ನಾಟಕ ತಂಡ ಮತ್ತೆ ಆತಂಕ ಅನುಭವಿಸಿತು. ಮನೀಷ್ ಪಾಂಡೆ, ಅಮಿತ್ ವರ್ಮಾ ಹಾಗೂ ಸಿ.ಎಂ. ಗೌತಮ್ ಸ್ಟ್ಯಾಂಡ್‌ನಲ್ಲಿ ನಿಂತ ಸೈಕಲ್‌ಗಳು ಒಂದರ ಮೇಲೆ ಒಂದು ಉರುಳಿದಂತೆ ಒಬ್ಬರ ಹಿಂದೆ ಒಬ್ಬರು ವಿಕೆಟ್ ಒಪ್ಪಿಸಿದರು.ಆರನೇ ವಿಕೆಟ್‌ಗೆ ಬಿನ್ನಿ ಹಾಗೂ ಆರ್.ವಿನಯಕುಮಾರ್ ಜೋಡಿ 93 ರನ್ ಪೇರಿಸುವ ಮೂಲಕ ತಂಡದ ಕುಸಿತವನ್ನು ತಡೆಯಿತು. ದಿನದ ಬಹುತೇಕ ಅವಧಿಯಲ್ಲಿ ಸ್ಪಿನ್ನರ್‌ಗಳೇ ದಾಳಿ ನಡೆಸಿದ್ದರಿಂದ ರೇಲ್ವೇಸ್ ತಂಡ 99 ಓವರ್ ಪೂರೈಸಿತು. ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದೆ.ಸ್ಕೋರು ವಿವರ

ಕರ್ನಾಟಕ ಮೊದಲ ಇನಿಂಗ್ಸ್ 99 ಓವರ್‌ಗಳಲ್ಲಿ 7 ವಿಕೆಟ್‌ಗೆ 284

ರಾಬಿನ್ ಉತ್ತಪ್ಪ ಸಿ ಮುರಳಿ ಕಾರ್ತಿಕ್ ಬಿ ಜೈಪ್ರಕಾಶ್ ಯಾದವ್  117


(188 ನಿಮಿಷ, 141 ಎಸೆತ, 10 ಬೌಂಡರಿ, 5 ಸಿಕ್ಸರ್)

ಕೆ.ಬಿ. ಪವನ್ ಸಿ. ಎಸ್.ಎಸ್. ಮರುಪುರಿ ಬಿ. ಮುರಳಿ ಕಾರ್ತಿಕ್  08

(44 ನಿಮಿಷ, 34 ಎಸೆತ, 1 ಬೌಂಡರಿ)

ಗಣೇಶ್ ಸತೀಶ್ ಸಿ ಸಂಜಯ್ ಬಂಗಾರ್ ಬಿ ಮುರಳಿ ಕಾರ್ತಿಕ್  26

(94 ನಿಮಿಷ, 82 ಎಸೆತ, 2 ಬೌಂಡರಿ, 1 ಸಿಕ್ಸರ್)

ಮನೀಷ್ ಪಾಂಡೆ ಸಿ ಶ್ರೇಯಸ್ ಖನೋಲ್ಕರ್ ಬಿ ಮುರಳಿ ಕಾರ್ತಿಕ್  04

(8 ನಿಮಿಷ, 5 ಎಸೆತ, 1 ಬೌಂಡರಿ)

ಅಮಿತ್ ವರ್ಮಾ ಸಿ ಜೈಪ್ರಕಾಶ್ ಯಾದವ್ ಬಿ ಆರ್ಲೆನ್ ಕೋನ್ವಾರ್  08

(48 ನಿಮಿಷ, 37 ಎಸೆತ) 

ಸಿ.ಎಂ. ಗೌತಮ್ ಸಿ ಶ್ರೇಯಸ್ ಖನೋಲ್ಕರ್ ಬಿ ಮುರಳಿ ಕಾರ್ತಿಕ್  07

(13 ನಿಮಿಷ, 11 ಎಸೆತ, 1 ಬೌಂಡರಿ)

ಸ್ಟುವರ್ಟ್ ಬಿನ್ನಿ ಸಿ ಶ್ರೇಯಸ್ ಖನೋಲ್ಕರ್ ಬಿ ಮುರಳಿ ಕಾರ್ತಿಕ್  68

(157 ನಿಮಿಷ, 138 ಎಸೆತ, 9 ಬೌಂಡರಿ)

ಆರ್.ವಿನಯಕುಮಾರ್ ಬ್ಯಾಟಿಂಗ್  43

(163 ನಿಮಿಷ, 156 ಎಸೆತ, 3 ಬೌಂಡರಿ)

ಇತರೆ: (ನೋಬಾಲ್-3) 03

ವಿಕೆಟ್ ಪತನ: 1-34 (11.3, ಪವನ್), 2-135 (37.4, ಗಣೇಶ್), 3-148 (39.3, ಪಾಂಡೆ), 4-148 (43.4, ಗೌತಮ್), 5-165 (54.1, ವರ್ಮಾ), 6-259 (89.2, ಬಿನ್ನಿ), 7-98.6, ಉತ್ತಪ್ಪ).

ಬೌಲಿಂಗ್: ಜೈಪ್ರಕಾಶ್ ಯಾದವ್ 14-5-31-1, ಸಂಜಯ್ ಬಂಗಾರ್ 7-2-28-0, ಮುರಳಿ ಕಾರ್ತಿಕ್ 32-5-76-5 (ನೋಬಾಲ್-3), ನಿಲೇಶಕುಮಾರ್ ಚವ್ಹಾಣ್ 17-2-60-0, ಆರ್ನೆಲ್ ಕೋನ್ವಾರ್ 24-4-81-1, ಶ್ರೇಯಸ್ ಖನೋಲ್ಕರ್ 5-2-8-0.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry