ಶುಕ್ರವಾರ, ನವೆಂಬರ್ 15, 2019
23 °C
ಐಒಸಿ ಜೊತೆಗಿನ ಜಂಟಿ ಸಭೆ ಹಿನ್ನೆಲೆ

ರಣಧೀರ್ ಸಿಂಗ್-ಜಿತೇಂದ್ರ ಮಾತುಕತೆ

Published:
Updated:

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಜೊತೆಗೆ ಮೇ ಏಳನೇ ತಾರೀಕಿನಂದು ಜಂಟಿ ಸಭೆ ಆಯೋಜನೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗೆ ಐಒಸಿಯನ್ನು ಪ್ರತಿನಿಧಿಸುವ ಭಾರತದ ಸದಸ್ಯ ರಣಧೀರ್ ಸಿಂಗ್ ಮಾತುಕತೆ ನಡೆಸಲಿದ್ದಾರೆ.ಭಾರತೀಯ ಒಲಿಂಪಿಕ್ ಸಂಸ್ಥೆಯ(ಐಒಎ) ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಲು ಮಾರ್ಗಸೂಚಿಗಳನ್ನು ಚರ್ಚಿಸುವ ಸಲುವಾಗಿ ಲೂಸಾನ್‌ನಲ್ಲಿ ಜಂಟಿ ಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವುದನ್ನು ದೃಢಪಡಿಸಿ ಎಂದು ಐಒಸಿ, ಐಒಎ   ಮತ್ತು ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿತ್ತು.ಐಒಸಿ ಜೊತೆ ಜಂಟಿ ಸಭೆ ನಡೆಸುವ ಮೊದಲು ನೂತನ ಕ್ರೀಡಾ ನೀತಿ ಕುರಿತಂತೆ ಐಒಎ ಮತ್ತು ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ತನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಬಯಸಿದೆ. ಆದರೆ, ಈ ವಿಚಾರದಲ್ಲಿ ಐಒಎ ಮತ್ತು ಸರ್ಕಾರದ ನಡುವೆ ಸಹಮತ ಮೂಡದ ಕಾರಣ ಮೂರು ಬಾರಿ ಜಂಟಿ ಸಭೆಯನ್ನು  ಮುಂದೂಡಲಾಗಿತ್ತು.ಕೇಂದ್ರ ಕ್ರೀಡಾ ಸಚಿವರೊಂದಿಗೆ ಐಒಎನ ಹಂಗಾಮಿ ಮುಖ್ಯಸ್ಥ ವಿ.ಕೆ ಮಲ್ಹೋತ್ರಾ ಕೂಡ ಔಪಚಾರಿಕ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ರೀಡಾ ಕಾರ್ಯದರ್ಶಿ ಪಿ.ಕೆ ದೇಬ್, `ಮಲ್ಹೋತ್ರಾ ಅವರು ಈ ವಾರದ ಕೊನೆಯಲ್ಲಿ ಕ್ರೀಡಾ ಸಚಿವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ. ವಾರದ ಕೊನೆಯ ಯಾವುದಾದರೊಂದು ದಿನ ಇಬ್ಬರೂ ಭೇಟಿಯಾಗುವ ಸಾಧ್ಯತೆಯಿದೆ' ಎಂದರು.

ಪ್ರತಿಕ್ರಿಯಿಸಿ (+)