ಶುಕ್ರವಾರ, ಮೇ 7, 2021
20 °C

`ರಣಬೀರ್ ನನಗೆ ವಿಶೇಷ ವ್ಯಕ್ತಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರಣಬೀರ್ ಕಪೂರ್ ಯಾವಾಗಲೂ ನನಗೆ ವಿಶೇಷ ವ್ಯಕ್ತಿಯೇ. ಅವರೊಂದಿಗೆ ಸಿನಿಮಾದಲ್ಲಿ ಅಭಿನಯಿಸಿರುವುದು ನನಗೆ ಬಹಳ ಖುಷಿಕೊಟ್ಟಿದೆ. ಯಾಕೆಂದರೆ ಸ್ಕ್ರೀನ್‌ನಲ್ಲಿ ನಮ್ಮ ನಡುವೆ ಒಂದು ಕೆಮಿಸ್ಟ್ರಿ ಇರುತ್ತದೆ. ಹೀಗಾಗಿ ಅವರೊಂದಿಗೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸಲು ಇಚ್ಛಿಸುತ್ತೇನೆ' ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..ಒಂದು ಕಾಲದಲ್ಲಿ ಪ್ರೇಮಿಗಳಾಗಿ, ಪರಸ್ಪರ ದೂರವಾಗಿ, ನಡುವೆ ಒಂದು ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸಿ ಇದೀಗ ಮತ್ತೆ `ಯೇ ಜವಾನಿ ಹೈ ದೀವಾನಿ' ಚಿತ್ರದಲ್ಲಿ ಡುಯೆಟ್ ಹಾಡಿದ್ದು ದೀಪಿಕಾ-ರಣಬೀರ್.“ಗಂಡು ಹೆಣ್ಣಿನ ನಡುವಿನ ಕೆಮಿಸ್ಟ್ರಿ ಅವರವರ ಭಾವಕ್ಕೆ ಸಂಬಂಧಿಸಿದ್ದು. ಅದನ್ನು ಯಾರೂ ರೂಪಿಸಲಾಗದು. ಅದು ಇದೆ ಅಥವಾ ಇಲ್ಲ ಎಂಬುದಷ್ಟೇ ವಾಸ್ತವ. ಸಿನಿಮಾದಲ್ಲಿ ಚಿತ್ರಕಥೆ ಅಂತಹುದೊಂದು `ಕೆಮಿಸ್ಟ್ರಿ'ಯನ್ನು ನಮ್ಮಿಂದ ಹೊರಹೊಮ್ಮಿಸುತ್ತದೆ.

`ಯೇ ಜವಾನಿ...'ಯಲ್ಲಿ ನಮ್ಮಿಬ್ಬರ ನಡುವೆ ಗಾಢವಾದ ಕೆಮಿಸ್ಟ್ರಿಯನ್ನು ಕಾಣಬಹುದು. ಅದರ ಬಗ್ಗೆ ನನಗೆ ನಿಜಕ್ಕೂ ಸಂತೃಪ್ತಿಯಿದೆ” ಎಂದು ಮುಂಬೈನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಹೇಳಿಕೊಂಡಿದ್ದಾರೆ.ಒಂದೆಡೆ ರಣಬೀರ್-ದೀಪಿಕಾ ಜೋಡಿಯ ನಟನೆಯ ಪರಿಣಾಮ `ಯೇ ಜವಾನಿ..' ಭಾರೀ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇವರಿಬ್ಬರೂ ನಿಜಜೀವನದಲ್ಲೂ ಮತ್ತೆ ಒಂದಾಗುತ್ತಾರೆಯೇ ಎಂಬ ಪ್ರಶ್ನೆಯೇ ಎಲ್ಲೆಡೆ ಕೇಳಿಬರುತ್ತಿದೆ.ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ಗೆ ಕಾಲಿಟ್ಟ ನಟಿಯರ ಪೈಕಿ ತಮ್ಮ ಖ್ಯಾತಿಯನ್ನು ಉಳಿಸಿಕೊಂಡವರಲ್ಲಿ ಮುಂಚೂಣಿ ಹೆಸರು ದೀಪಿಕಾ. ಈ ಹಿನ್ನೆಲೆಯಲ್ಲಿ ಅವರು ಎದುರಿಸಿದ ಸ್ಪರ್ಧೆಯ ಬಗ್ಗೆ ಕೇಳಿದರೆ, ತಮಗೆ ತಾವೇ ಸ್ಪರ್ಧಿ ಎಂಬ ಜಾಣ ಉತ್ತರ ನೀಡುತ್ತಾರೆ.

`ನಾನಂತೂ ಪ್ರತಿ ಬಾರಿ ಹೊಸ ಚಿತ್ರಕ್ಕೆ ಸಹಿ ಹಾಕಿದಾಗಲೂ ಹಿಂದಿನ ಸಲಕ್ಕಿಂತ ನನ್ನ ನಿರ್ವಹಣೆ ಉತ್ತಮವಾಗಿರಬೇಕೆಂದು ಬಯಸುತ್ತೇನೆಯೇ ಹೊರತು ಬೇರೆ ಯಾವುದೇ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಅಭಿನಯ ಆತ್ಮಸಂತೋಷ ನೀಡಬೇಕಷ್ಟೆ. ನನ್ನ ಪ್ರಕಾರ ಅದೇ ಸ್ಪರ್ಧೆ. ನಮ್ಮ ಅಭಿನಯದ ಮೂಲಕ ಜನ ನಮ್ಮನ್ನು ನೆನಪಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಪುಳಕ ಇನ್ಯಾವುದಿದೆ' ಎಂಬುದು 27ರ ಹರೆಯದ ಸುಂದರಿಯ ಪ್ರತಿಕ್ರಿಯೆ.ಯುವಜನರ ಮನಸ್ಸು ಗೆಲ್ಲುವಂತಹ ಪಾತ್ರಗಳನ್ನೇ ಇಲ್ಲಿವರೆಗೂ ನಿರ್ವಹಿಸಿರುವ ದೀಪಿಕಾ, `ಚೆನ್ನೈ ಎಕ್ಸ್‌ಪ್ರೆಸ್' ಮತ್ತು `ರಾಮ್‌ಲೀಲಾ'ದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.