ಭಾನುವಾರ, ಮೇ 9, 2021
27 °C

ರತ್ನಸಾಗರಕ್ಕೆ ಸಾಕು ಕಡಿಮೆ ನೀರು

ಸುರೇಶ. ನಿ. ಧಾರವಾಡಕರ Updated:

ಅಕ್ಷರ ಗಾತ್ರ : | |

ರಾಯಚೂರು ಜಿಲ್ಲೆ ಗಂಗಾವತಿ, ಸಿಂಧನೂರು ತಾಲ್ಲೂಕುಗಳ `ಡೈಮಂಡ್ ಸೋನಾ~ ಅಕ್ಕಿ ರಾಜ್ಯದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಪ್ರಸಿದ್ಧ.  ಆದರೆ ಈ ಭತ್ತದ ಬೆಳೆಗೆ ರಸಗೊಬ್ಬರ, ಕೀಟನಾಶಕ ಬಳಕೆ ಅತಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.

 

ಇದರ ನಡುವೆಯೇ ಸಿಂಧನೂರು ತಾಲೂಕಿನ ಹೊಸಳ್ಳಿ ಕ್ಯಾಂಪ್ ರೈತ ಚಿದಾನಂದಪ್ಪ ಅಂಗಡಿ ಅವರು ದೇಸಿ ಭತ್ತದ ತಳಿ `ರತ್ನಸಾಗರ~ವನ್ನು ಅಪ್ಪಟ ಸಾವಯವ ವಿಧಾನದಲ್ಲಿ ಬೆಳೆಯುತ್ತಿದ್ದಾರೆ.ಇಷ್ಟೊಂದು ತರಹೇವಾರಿ ಭತ್ತಗಳಿರುವಾಗ ರತ್ನಸಾಗರದ ಹಿಂದೆ ಇವರೇಕೆ ಬಿದ್ದರು? ಇದಕ್ಕೆ ಕಾರಣವೂ ಇದೆ. ಚಿದಾನಂದಪ್ಪ ಅವರ ಮನೆಯಲ್ಲಿ ಮೊದಲೆಲ್ಲ ಭತ್ತದ ದೇಸಿ ತಳಿಗಳನ್ನು ಬೆಳೆದು ಅದರ ಅಕ್ಕಿಯ ಅನ್ನವನ್ನೇ ಊಟ ಮಾಡುತ್ತಿದ್ದರು. ಅವರ ಹಳ್ಳಿಯ ಜನರೂ ದೇಸಿ ತಳಿ ಆಹಾರ ತಿಂದು ಗಟ್ಟಿಮುಟ್ಟಾಗಿದ್ದರು. ಹೀಗಾಗಿ ಅಲ್ಲ ಆಸ್ಪತ್ರೆಯ ಅಗತ್ಯವೇ ಬಂದಿರಲಿಲ್ಲ.ಕಾಲಾನಂತರ ರಾಸಾಯನಿಕ ಕೃಷಿಯ ಹಾವಳಿ ಹೆಚ್ಚಾದಂತೆ ರತ್ನಸಾಗರ ತಳಿಯೇ ನಾಪತ್ತೆಯಾಗಿತ್ತು. ಅದರ ಜಾಗದಲ್ಲಿ ರಸಗೊಬ್ಬರ, ಕೀಟನಾಶಕ ಬೇಡುವ `ಸುಧಾರಿತ~ ತಳಿಗಳು ಬಂದವು. ತಿಂದವರ ಸಮಸ್ಯೆಯೂ ಜಾಸ್ತಿಯಾಯಿತು.ಇದನ್ನೆಲ್ಲ ನೋಡಿದ ಚಿದಾನಂದಪ್ಪ ಸುಮ್ಮನೆ ಕೂರಲಿಲ್ಲ. ಸಿಂಧನೂರು ತಾಲೂಕಿನ ಕಲ್ಲೂರು ಗ್ರಾಮದ ಜಂಬನಗೌಡರು ದೇಸಿ ಭತ್ತದ ತಳಿ ವೈವಿಧ್ಯ ಸಂರಕ್ಷಣೆಗೆ ಯತ್ನಿಸುತ್ತಿರುವ ವಿಷಯ ತಿಳಿಯಿತು. ಅವರಿಂದ ಒಂದು ಸಾವಿರ ರೂಪಾಯಿ ಕೊಟ್ಟು 20 ಕಿಲೊ ರತ್ನಸಾಗರ  ಭತ್ತದ ಬೀಜ ತಂದರು. ಸಾವಯವ ವಿಧಾನದಲ್ಲೇ ಬೆಳೆಸಬೇಕು ಎಂದು ನಿರ್ಧರಿಸಿದರು.ಅವರ ಹೊಲದಲ್ಲಿ ಹತ್ತಾರು ವರ್ಷಗಳಿಂದ ನೀರು ನಿಂತು ಜೌಗು ಆಗಿತ್ತು. ಅಲ್ಲಿಂದ ನೀರು ಹೊರ ಹೋಗಲು ಬಸಿಗಾಲುವೆ ಮಾಡಿದರು. ಹಸಿರೆಲೆ ಗೊಬ್ಬರಕ್ಕಾಗಿ ಡಾವಿಂಚಿ ಸಸ್ಯ ಹಾಗೂ ಅಜೋಲಾ ಹಾಕಿದರು. ಮನೆಯಲ್ಲಿ ಸಾಕಿದ್ದ 4 ಆಕಳ ಸಗಣಿ, ಗಂಜಲ ಹೊಲದ ಮಣ್ಣಿನ ಜೊತೆ ಸೇರಿತು.ಬೆಳೆ ಹೇಗೆ

ರತ್ನಸಾಗರ ಸಸಿಗಳು ಬೇಗ ಬೆಳೆಯುತ್ತವೆ. ಹೀಗಾಗಿ 20 ದಿನದೊಳಗೆ ನಾಟಿ ಮಾಡಬೇಕು. ಉಳಿದ ತಳಿಗಳಿಗೆ ಹೋಲಿಸಿದರೆ ಹೊಡೆ (ತೆನೆ) ಸಂಖ್ಯೆ ಹೆಚ್ಚು. ತೆನೆಗಳು ಕಡ್ಡಿಯ ಆಕಾರದಲ್ಲಿ ಇರುತ್ತವೆ. ಗಾತ್ರದಲ್ಲಿ ಸೋನಾ ಮಸೂರಿ ಅಕ್ಕಿಗಿಂತಲೂ ಸಣ್ಣದು, ಆದರೆ ಅದಕ್ಕಿಂತಲೂ ಹೆಚ್ಚು ರುಚಿಕರ. ನೂರು ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ವರ್ಷದ ಎಲ್ಲ ಕಾಲದಲ್ಲೂ ಬೆಳೆಯಬಹುದು. ಮೂಲತಃ ಇದು ಕರ್ನಾಟಕದ ತಳಿ. ಅಕ್ಕಿಗೆ ಸಿಂಗಲ್ ಪಾಲಿಶ್ ಮಾಡಿಸಿದರೆ ಒಳ್ಳೆಯದು.ಈ ತಳಿಯ ಇನ್ನೊಂದು ವಿಶೇಷ ಎಂದರೆ ಕಡಿಮೆ ನೀರಿನಲ್ಲಿಯೂ ಸಮೃದ್ಧವಾಗಿ ಬೆಳೆಯುತ್ತದೆ. `ಈ ಸಲಾ ಬರಗಾಲ ಬಿದ್ದೇತ್ರಿ, ಕಾಲುವ್ಯಾಗ ನೀರ ಇಲ್ಲಾ, ಹೊಲ ಎರೆಕಲ ಬೀಡ ಬಿಟ್ಟೇತಿ. ಆದರೂ ಬೆಳಿ ಹ್ಯಾಂಗ್ ಬಂದೈತಿ ನೋಡ್ರಿ~ ಎಂದು ತೋರಿಸಿ ಸಂತಸ ವ್ಯಕ್ತಪಡಿಸುತ್ತಾರೆ ಚಿದಾನಂದಪ್ಪ. ಜೊತೆಗೆ ಈ ವರ್ಷ ತಮ್ಮ ಹೊಲದ ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುವ ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿ ಜೀವಾಮೃತ, ಹಸಿರೆಲೆ ಗೊಬ್ಬರ, ಅಜೋಲಾ ಸಂಗ್ರಹ ಮಾಡುವತ್ತ ಹೆಜ್ಜೆ ಹಾಕಿದ್ದಾರೆ.ಮಾರುಕಟ್ಟೆ ಸಮಸ್ಯೆ

ರತ್ನಸಾಗರದ ವೈಶಿಷ್ಟ್ಯ ಹಾಗೂ ಗುಣದ ಕುರಿತು ಜನರಿಗೆ ಮಾಹಿತಿ ಒದಗಿಸಿದರೂ ಮೊದಮೊದಲು ಖರೀದಿಗೆ ಯಾರೂ ಮುಂದೆ ಬರಲಿಲ್ಲ. ಆದ್ದರಿಂದ ಪ್ರಚಾರಕ್ಕಾಗಿ ಸಾವಯವ ಕೃಷಿ ಪರಿವಾರದ ಸಭೆಗಳನ್ನು ಆಯ್ಕೆ ಮಾಡಿಕೊಂಡರು. ನೇರವಾಗಿ ಭತ್ತ ಮಾರುವ ಬದಲಿಗೆ ಅಕ್ಕಿ ಮಾಡಿ ಮಾರುವ ಪ್ರಯತ್ನದಲ್ಲಿ ಸ್ವಲ್ಪ ಮಟ್ಟಿಗೆ ಸಫಲರಾದರು.ಈ ಅಕ್ಕಿ ಕೊಂಡ ಕೆಲವರು ಇದರ ಸೇವನೆಯಿಂದ ಖುಷಿಯಾಗಿದ್ದಾರಂತೆ. ಸುಧಾರಿತ ತಳಿಯ ಅಕ್ಕಿಗಿಂತ ಬೆಲೆ ಕೊಂಚ ಜಾಸ್ತಿ. ಆದರೆ ಪೌಷ್ಟಿಕಾಂಶವಿಲ್ಲದ ಅಕ್ಕಿ ತಿನ್ನುವುದಕ್ಕಿಂತ ರುಚಿಯಾದ ಈ ಅಕ್ಕಿ ಒಳ್ಳೆಯದು ಎಂಬುದು ಖರೀದಿಸಿದ ಗ್ರಾಹಕರ ಅಭಿಪ್ರಾಯ.ಸಾವಯವ ವಿಧಾನದಲ್ಲಿ ಬೆಳೆದಿದ್ದು, ಮಾರುಕಟ್ಟೆ ಸಮಸ್ಯೆ ಇದೆ. ಸದ್ಯಕ್ಕೆ ಗ್ರಾಹಕರನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಸೂಕ್ತ ಪ್ರಚಾರ ಸಿಕ್ಕರೆ ಗ್ರಾಹಕರೇ ಹುಡುಕಿಕೊಂಡು ಬರುತ್ತಾರೆ ಎಂಬ ಆತ್ಮವಿಶ್ವಾಸದ ಮಾತು ಚಿದಾನಂದಪ್ಪ ಅವರದು.

ಅವರೊಡನೆ ಮಾತನಾಡಲು 99023 66620ಗೆ ಕರೆ ಮಾಡಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.