ರತ್ನಾಪುರಿ ಸೌಹಾರ್ದದ ಉತ್ಸವಕ್ಕೆ ತೆರೆ

7

ರತ್ನಾಪುರಿ ಸೌಹಾರ್ದದ ಉತ್ಸವಕ್ಕೆ ತೆರೆ

Published:
Updated:

ಹುಣಸೂರು: ಕೋಮು ಸೌಹಾರ್ದ ಬೆಸೆಯುವ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದ ಹನುಮಂತೋತ್ಸವ ಮತ್ತು ಜಮಾಲಮ್ಮ ಬೀಬಿ ಉರುಸ್ ಭಾನುವಾರ ಗಂಧದ ಧೂಪ ಕಾರ್ಯ ಕ್ರಮದೊಂದಿಗೆ  ಅಂತ್ಯಗೊಂಡಿತು.ಭಾನುವಾರ ರಾತ್ರಿ 8 ಗಂಟೆಗೆ ಸರಿಯಾಗಿ ಜಮಾಲಮ್ಮ ಬೀಬಿ ದರ್ಗದಲ್ಲಿ ಮೌಲ್ವಿಗಳ ವಿಶೇಷ ಪ್ರಾರ್ಥನೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರಕಿತು. ಮುಸ್ಲಿಂ ಸಮಾಜದ ಭಕ್ತರು ಉಪವಾಸವಿದ್ದು ಮಣ್ಣಿನ ನೀರಿನ ಕುಡುಕೆಯನ್ನು ಹೊತ್ತು ಖುರಾನ್ ಪಠಿಸುತ್ತಾ ಮೆರವಣಿಗೆಯಲ್ಲಿ ತೆರಳಿದರು.

ಗ್ರಾಮದ ಗಣೇಶನ ದೇವಸ್ಥಾನದ ಬಳಿ ಹರಕೆ ಹೊತ್ತವರು ವಿವಿಧ ತಂತ್ರಗಳಿಂದ ಕಬ್ಬಿಣದ ಸರಳನ್ನು ತುಟಿ, ನಾಲಿಗೆ, ಕೆನ್ನೆ ಹೀಗೆ ಅನೇಕ ಭಾಗದಲ್ಲಿ ಚುಚ್ಚಿಸಿಕೊಂಡು ಜಮಾಲ್‌ಬೀಬಿ ದರ್ಗದ ಮೆರವಣಿಗೆಯಲ್ಲಿದ್ದರು. ಜಮಾಲಮ್ಮ ಬೀಬಿ ದರ್ಗದಲ್ಲಿ ಹರಕೆ ಹೊತ್ತವರು ಹೊಸ ಬಟ್ಟೆಯನ್ನು ಹೊದಿಸಿ, ಖುರಾನ್ ಪುಸ್ತಕ ಓದುವ ಮೂಲಕ ತಮ್ಮ    ಹರಕೆ ತೀರಿಸುತ್ತಿದ್ದರು. ಕೆಲವು ಹಿಂದು ಭಕ್ತರು ದೀಪ ಬೆಳಗಿಸಿ, ಗೋರಿಗಳಿಗೆ ಹೂವಿನ ಹೊದಿಕೆ ಅರ್ಪಿಸಿ, ಗಂಧದ ಧೂಪವನ್ನು ಹಾಕುತ್ತಿದ್ದರು.ಜಾನುವಾರು ಜಾತ್ರೆಯಲ್ಲಿ ಹೊಸದಾಗಿ ಜಾನುವಾರು ಖರೀದಿಸಿದ ರೈತರು ದರ್ಗದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಬೂಂದಿ ಪ್ರಸಾದ    ಸ್ವೀಕರಿಸಿ ತೆರಳುತ್ತಿದ್ದದ್ದು ವಿಶೇಷವಾಗಿತ್ತು.

ಬೂಂದಿ: ಸೌಹಾರ್ದ ಜಾತ್ರೆಯಲ್ಲಿ ಮೊದಲ ದಿನ (ಶನಿವಾರ )ಹಿಂದುಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಆಂಜನೇಯೋತ್ಸವ ಆಚರಿಸಿ ಸಿಹಿ ಊಟ ಏರ್ಪಡಿಸಿದ್ದರು. ಭಾನುವಾರ ಮುಸ್ಲಿಂ ಸಮಾಜದವರು  ಬಂದ ಭಕ್ತರಿಗೆ ಬೂಂದಿಯನ್ನು ಪ್ರಸಾದವಾಗಿ ವಿತರಿಸುತ್ತಿದ್ದರು.ಜಾತ್ರೆಗೆ ಬರುವವರೆಲ್ಲರೂ ಬೂಂದಿ ಖರೀದಿಸಿ ಹೋಗುವುದು ವಾಡಿಕೆ. ಪ್ರತಿ ವರ್ಷ ಜಾತ್ರೆಯಲ್ಲಿ ಬೂಂದಿ ಬೀದಿ ತೆರೆಯಲಾಗುತ್ತದೆ. ಇಲ್ಲಿ ಕನಿಷ್ಠ 100-150 ಬೂಂದಿ ಅಂಗಡಿಗಳು ತಲೆ ಎತ್ತುವವು. ಜಾತ್ರೆಯಲ್ಲಿ ಬೂಂದಿ ಅಂಗಡಿ ಹಾಕುವ ಪ್ರತಿಯೊಬ್ಬರೂ ಕನಿಷ್ಠ 200-300 ಕೆ.ಜಿ ಬೂಂದಿ ವಹಿವಾಟು ಮಾಡುತ್ತಾರೆ. ಒಟ್ಟಾರೆ ಜಾತ್ರೆಯಲ್ಲಿ ಕನಿಷ್ಠ 4-5 ಸಾವಿರ ಕೆ.ಜಿ. ಬೂಂದಿ ವಹಿವಾಟು ನಡೆಯುತ್ತದೆ. ಅಂದಾಜು ರೂ 4 ಲಕ್ಷದ ವಹಿವಾಟು ನಡೆಯುತ್ತದೆ ಎನ್ನುತ್ತಾರೆ   ಜಮಾಲಮ್ಮ ಬೀಬಿ ಉರುಸ್ ಸಮಿತಿ ಸದಸ್ಯ ಅಜ್ಗರ್ ಪಾಷಾ.ಮಾಂಸಹಾರಿ ಖಾದ್ಯ: ಜಮಾಲಮ್ಮ ಬೀಬಿ ಜಾತ್ರೆಯಂದು ಬಹುತೇಕ ಮುಸ್ಲಿಂ ಸಮಾಜದವರು ಹೆಚ್ಚಾಗಿ ಉರುಸ್‌ಗೆ ಕುಟುಂಬ ಸಮೇತರಾಗಿ ಆಗಮಿಸಿ ರಾತ್ರಿ ಜಾಗರಣೆ ಇರುತ್ತಾರೆ. ಜಾತ್ರೆಗೆ ಬಂದವರಿಗೆ  ಇಲ್ಲಿ ಮಾಂಸಹಾರ ಖಾದ್ಯ ಭಕ್ತರ ರುಚಿಗೆ ತಕ್ಕಂತೆ ಸಿಗುತ್ತದೆ.ಸ್ಥಳಿಯವಾಗಿ ಕೋಡಿ ಕೆರೆಯಲ್ಲಿ ಬೇಟೆಯಾಡಿದ ಮೀನು ಈ ಭಾಗದ ಜನರಿಗೆ ಬಲು ರುಚಿ. ಮೀನಿನ  ವಿವಿಧ ಭಕ್ಷ್ಯ ಜಾತ್ರೆಯಲ್ಲಿ ಕೈಗೆಟುಕುವ ದರದಲ್ಲಿ ಲಭ್ಯ. ಇದೇ ರೀತಿ ಕೋಳಿ ಮಾಂಸದ ವಿವಿಧ ಭಕ್ಷ್ಯಗಳು ಜಾತ್ರೆಯಲ್ಲಿ ಮಾಂಸ ಭೋಜನ  ಪ್ರಿಯರನ್ನು ಆಕರ್ಷಿಸುತ್ತಿತ್ತು.

ಉರುಸ್ ಕಾರ್ಯಕ್ರಮದಲ್ಲಿ ಶಾಸಕ ಎಚ್.ಪಿ.ಮಂಜುನಾಥ್, ವಿಧಾನಪರಿಷತ್ ಸದಸ್ಯ ಎಸ್.ಚಿಕ್ಕ ಮಾದು, ಜಿ.ಪಂ ಸದಸ್ಯ ಸಿ.ಟಿ.ರಾಜಣ್ಣ, ಆಂಜನೇಯ ಸ್ವಾಮಿ ಸಮಿತಿ ಅಧ್ಯಕ್ಷ ಪ್ರಭು ಮತ್ತು ಸದಸ್ಯರು    ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry