ರಥಯಾತ್ರೆ ಪ್ರಸ್ತುತವೇ?

7

ರಥಯಾತ್ರೆ ಪ್ರಸ್ತುತವೇ?

Published:
Updated:

ಅಣ್ಣಾ ಹಜಾರೆಯವರ ಯಶಸ್ವಿ ನಿರಶನದ ನಂತರ ದೇಶದಲ್ಲಿ ಜನಪ್ರತಿನಿಧಿಗಳು  ಸಮೂಹ ಸನ್ನಿಗೆ ಒಳಗಾದಂತೆ ಕಾಣುತ್ತಿದ್ದಾರೆ. ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಸಾಂಕೇತಿಕ ನಿರಶನದ ಮೂಲಕ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತು ಹಾಕುವರಂತೆ ತಮ್ಮ ವಿರಾಟ ಸ್ವರೂಪವನ್ನು ಜನತೆಗೆ ತೋರಿಸಿದರು.ಮೋದಿಯವರ ಆ ಪ್ರಹಸನ ಮುಗಿಯುವ ಮೊದಲೇ ಭಾರತೀಯ ಜನತಾ ಪಕ್ಷದ ಅಗ್ರಗಣ್ಯ ನಾಯಕ ಲಾಲ್‌ಕೃಷ್ಣ ಕಿಶನಚಂದ್ ಅಡ್ವಾಣಿಯವರು ಅಕ್ಟೋಬರ್ 11 ರಿಂದ ರಥಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ. ಅಡ್ವಾಣಿಯವರ ರಥಯಾತ್ರೆ ಎಂದ ಕೂಡಲೇ ನೆನಪಿಗೆ ಬರುವುದು 1991ರ ರಥಯಾತ್ರೆ ಸಂದರ್ಭದಲ್ಲಿ ದೇಶದಾದ್ಯಂತ ನಡೆದ ಕೊಮುಗಲಭೆಗಳು. ಲೆಕ್ಕವಿಲ್ಲದಷ್ಟು ಅಮಾಯಕರ ಮಾರಣ ಹೋಮ ಆ ಸಂದರ್ಭದಲ್ಲಿ ನಡೆದು ಹೋಯಿತು. ನಮ್ಮ ರಾಜ್ಯದ ದಾವಣಗೆರೆ ಅಕ್ಷರಶಃ ಉರಿದು ಹೋಯಿತು, ಅಲ್ಲಿ ನಡೆದ ಕೊಲೆ ಸುಲಿಗೆಗಳಿಗೆ ಇಂದಿಗೂ ಲೆಕ್ಕ ಸಿಕ್ಕಿಲ್ಲ.ದೇಶದಾದ್ಯಂತ ಆಗ ನಡೆದ ಕೊಮುದಳ್ಳುರಿಯ ನೆನಪು ಇದುವರೆಗೂ ಜನರ ಮನಸ್ಸಿನಲ್ಲಿ ತನ್ನ ಕರಾಳ ನೆನಪನ್ನು ಬಿಟ್ಟು ಹೊಗಿದೆ. ಆ ಸಮಯದಲ್ಲಿ ತಮ್ಮವರನ್ನು ಕಳೆದುಕೊಂಡು ಅವರ ಅಗಲುವಿಕೆಯ ನೋವಲ್ಲಿ ಜೀವನ ನಡೆಸುತ್ತಿರುವವರ ಆಕ್ರಂದನ ಕೇಳುವವರಾರು? ಒಬ್ಬ ಅಮಾಯಕ ವ್ಯಕ್ತಿಯ ಸಾವು ಸಮಾಜಕ್ಕೆ ಅಥವಾ ದೇಶಕ್ಕೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡಲಾರದು. ಆದರೆ ಅವನ ಕುಟುಂಬಕ್ಕೆ ಹಾಗೂ ಆತನ ಅವಲಂಬಿತರಿಗೆ ಜೀವನಪರ್ಯಂತ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ.ಗಲಭೆ ಸಂದರ್ಭದಲ್ಲಿ ತಮ್ಮವರನ್ನು ಕಳೆದುಕೊಂಡವರು ಎಂದಿಗೂ ಆ ರಥಯಾತ್ರೆ ಹಾಗೂ ಲಾಲ್ ಕೃಷ್ಣ ಅಡ್ವಾಣಿಯವರನ್ನು ಮಾತ್ರ ಮರೆಯಲಾರರು.ರಥಯಾತ್ರೆ ಎಂದರೆ ಅವರ ಪಾಲಿಗೆ ಸುನಾಮಿ ಇದ್ದಂತೆ. ದಾವಣಗೆರೆಯದು ಈ ಸ್ಥಿತಿಯಾದರೆ ಹುಬ್ಬಳ್ಳಿ, ಶಿವಮೊಗ್ಗ, ಭದ್ರಾವತಿ ಮುಂತಾದ ನಗರಗಳು ಗಲಭೆ ಪಿಡಿತ ಪ್ರದೇಶಗಳಾಗಿ ಸಾಕಷ್ಟು ಸಾವು ನೋವು ಹಾಗೂ ವಾರಗಟ್ಟಲೆ ಕರ್ಫ್ಯೂ ಸ್ಥಿತಿಗೆ ಒಳಗಾಗಿ ವ್ಯಾಪಾರ ವಹಿವಾಟಿನ ನಷ್ಟ ಅನುಭವಿಸಿದವು.ಆ ಸಮಯದಲ್ಲಿ ಕೇವಲ ನಮ್ಮ ರಾಜ್ಯದ ಸ್ಥಿತಿ ಈ ರೀತಿಯಾಗಿರಬೇಕಾದರೆ ದೇಶದ ಇನ್ನುಳಿದ ರಾಜ್ಯಗಳ ಪರಸ್ಥಿತಿ ಹೇಗಿರಬೇಡ? ಒಂದು ರಥಯಾತ್ರೆ ಸಮಾಜದ ಮೇಲೆ ಯಾವರೀತಿಯ ಪರಿಣಾಮವನ್ನು ಬೀರಬಲ್ಲದು ಎನ್ನುವುದಕ್ಕೆ ಇದೊಂದು ನಿದರ್ಶನ ಮಾತ್ರ. ನಿರಶನ, ರ‌್ಯಾಲಿ, ರಥಯಾತ್ರೆಗಳು ಸಮಾಜದ ಶಾಂತಿ ನೆಮ್ಮದಿ ಹಾಳುಮಾಡಿ ಅಮಾಯಕರ ಪ್ರಾಣಹಾನಿ,ಆಸ್ತಿಹಾನಿ ಮಾಡುವಂತಾಗಬಾರದು.

ಇತ್ತೀಚಿನ ಕೆಲ ವರ್ಷಗಳಿಂದ ದೇಶದಾದ್ಯಂತ ಶಾಂತ ವಾತಾವರಣ ನಿರ್ಮಾಣವಾಗಿದೆ. ಈಗ ಮತ್ತೊಮ್ಮೆ ರಥಯಾತ್ರೆ ಎಂಬ ಸುನಾಮಿ ದೇಶದ ಹಾಗು ರಾಜ್ಯದ ಶಾಂತಿ ನೆಮ್ಮದಿಯನ್ನು ಭಂಗ ಮಾಡದಿರಲಿ.                         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry