ಗುರುವಾರ , ಫೆಬ್ರವರಿ 25, 2021
30 °C

ರಥೋತ್ಸವದ ಸಡಗರದಲ್ಲಿ ಮಿಂದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಥೋತ್ಸವದ ಸಡಗರದಲ್ಲಿ ಮಿಂದ ಭಕ್ತರು

ಹಗರಿಬೊಮ್ಮನಹಳ್ಳಿ: ಪಟ್ಟಣದ ಕೆವಿಒಆರ್ ಕಾಲೊನಿಯಲ್ಲಿ ಪತ್ರಿಬಸವೇಶ್ವರರ ಪ್ರಥಮ ಹೂವಿನ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಶಿವರಾತ್ರಿ ಹಬ್ಬದ ಪ್ರಯುಕ್ತ ಮಧ್ಯರಾತ್ರಿ ಮಹಿಳೆಯರು ಹೂವಿನ ರಥೋತ್ಸವನ್ನು ಎಳೆದು ಪತ್ರಿಬಸವೇಶ್ವರರಿಗೆ ಜಯಘೋಷ ಹಾಕುವ ಮೂಲಕ ಸಂಭ್ರಮಿಸಿದರು.ಇದೇ ಸಂದರ್ಭದಲ್ಲಿ ನಡೆದ ಪಟಾಕ್ಷಿ ಹರಾಜಿನಲ್ಲಿ ಕಾಲೊನಿಯ ಕಾಯಿಗಡ್ಡಿ ಕೊಟ್ರೇಶ್ ₨ 22 ಸಾವಿರಗಳಿಗೆ ಪಡೆದರು. ನಂದಿಪುರದ ಮಹೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳಾದ ಬನ್ನಿಗೋಳ ವೆಂಕಣ್ಣ,ಬಿ.ಗಂಗಾಧರ, ಅಕ್ಕಿ ಮಲ್ಲಿಕಾರ್ಜುನ, ಅಕ್ಕಿ ಚಂದ್ರಶೇಖರ್, ಎಚ್ಎಂ. ವಿರೂಪಾಕ್ಷಯ್ಯ, ಡಾ. ಬಸವರೆಡ್ಡಿ, ಜಿ. ಲಕ್ಷ್ಮೀಪತಿ ಸೇರಿದಂತೆ ಅನೇಕ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಅರ್ಚಕ ಕೆಕೆಬಿಎಂ ಕೊಟ್ರಯ್ಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿರು.ಈಶ್ವರ ದೇವರ ರಥೋತ್ಸವ

ಕಂಪ್ಲಿ:
ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ತೃತೀಯ ವರ್ಷದ ಈಶ್ವರ ದೇವರ  ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೇರು ಈಶ್ವರ ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ರಸ್ತೆಯ ಮೂಲಕ ಬಸವಣ್ಣನಪೇಟೆ ಬಸವಣ್ಣನ ದೇವಸ್ಥಾನದವರೆಗೆ ತೆರಳಿ ಸ್ವಸ್ಥಾನಕ್ಕೆ ಬಂದು ತಲುಪಿತು.ತೇರು ಸಾಗುವಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಡೊಳ್ಳು, ತಾಷ, ಭಜನೆ, ನಂದಿಕೋಲು, ಕೋಲಾಟ, ಕೀಲುಕುದುರೆ, ಹಗಲು ವೇಷಗಾರ, ಮಂಗಳವಾದ್ಯ ತಂಡಗಳು ಭಾಗವಹಿಸಿ ರಥೋತ್ಸವಕ್ಕೆ ಹೆಚ್ಚು ಮೆರಗು ನೀಡಿದವು. ನೆರೆದ್ದಿದ ಭಕ್ತರು ತೇರಿಗೆ ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.ಮಹಾರಥೋತ್ಸವ ಅಂಗವಾಗಿ ಈಶ್ವರ ದೇವರಿಗೆ ವಿಶೇಷ ಮಹಾರುದ್ರಾಭೀಷೇಕ, ಶಿವಾರ್ಚನೆ, ಗಂಗೆಸ್ಥಳ, ಅಡ್ಡಪಲ್ಲಕ್ಕಿ ಉತ್ಸವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.ಕಾರ್ಯಕ್ರಮಕ್ಕೆ ಆಗಮಿಸಿದ್ದ ಹರಗಿನಡೋಣಿ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಸರ್ವರೂ ಸನ್ಮಾರ್ಗದಲ್ಲಿ ನಡೆಯುವಂತೆ ಉಪೇಶಿಸಿದರು.ರಥೋತ್ಸವ ಅಂಗವಾಗಿ ಈಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಶಿವಶರಣ ಚೆಳ್ಳಗುರ್ಕಿ ಯರಿತಾತಾನವರ ಪುರಾಣ' ಮಹಾಮಂಗಲಗೊಂಡಿತು. ವೇ. ಸೋಮಯ್ಯಶಾಸ್ತ್ರಿ ಅವರ ಪುರಾಣ ಪ್ರವಚನಕ್ಕೆ  ಬಂಡ್ರಾಳ್ ಮಲ್ಲನಗೌಡರು ಹಾರ್ಮೋನಿಯಂ ನುಡಿಸಿದರೆ, ಚನ್ನದಾಸರ ದುರ್ಗಾದಾಸ್ ತಬಲಾಸಾಥ್ ನೀಡಿದರು.ಕಾರ್ಯಕ್ರಮದಲ್ಲಿ ಈಶ್ವರ ದೇವಸ್ಥಾನ ಸಮಿತಿಯವರು, ಗ್ರಾಮದ ಗಣ್ಯರು, ಸ್ಥಳೀಯ ಹಾಲಿ, ಮಾಜಿ ಪ್ರತಿನಿಧಿಗಳು, ಸದ್ಭಕ್ತರು ಭಾಗವಹಿಸಿದ್ದರು.ಬಯಲಾಟ ಪ್ರದರ್ಶನ: ಮಹಾರಥೋತ್ಸವ ನಿಮಿತ್ತ ಈಶ್ವರ ದೇವಸ್ಥಾನ ಬಳಿ ಹಾಕಲಾಗಿದ್ದ ರಂಗಸಜ್ಜಿಕೆಯಲ್ಲಿ ‘ಗಿರಿಜಾ ಕಲ್ಯಾಣ ಅರ್ಥಾತ್‌ ತಾರಕಾಸುರನ ಸಂಹಾರ’ ಬಯಲಾಟ ಪ್ರದರ್ಶನ ನಡೆಯಿತು.ಮಲ್ಲಿಕಾರ್ಜುನ ಸ್ವಾಮಿ

ಕೂಡ್ಲಿಗಿ:
ತಾಲ್ಲೂಕಿನ ಗಜಾಪುರ ಸಮೀಪದಲ್ಲಿರುವ ಶ್ರೀ ವಸಂತ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಶಿವರಾತ್ರಿ ಪ್ರಯುಕ್ತ ಪ್ರತಿ ವರ್ಷದಂತೆ  ದೇವಲಾಪುರದ ಸುತ್ತಮುತ್ತಲಿರುವ ಹತ್ತು ಹಲವು  ಗ್ರಾಮಗಳ ಭಕ್ತರ ನಡುವೆ ಅದ್ದೂರಿಯಾಗಿ ನೆರವೇರಿತು.ದೇವಲಾಪುರ  ಈಗ ಪಾಳೂರು ಆಗಿದ್ದರೂ ಗಜಾಪುರ ಕಂದಾಯ ಗ್ರಾಮಕ್ಕೆ ಸೇರಿದ ಈ ದೇವಾಲಯ ಬಡೇಲಡಕು, ತುಪ್ಪಾಕನಹಳ್ಳಿ, ಅಕ್ಕಾಪುರ, ದೊಡ್ಡ ಗೊಲ್ಲರಹಟ್ಟಿ, ಕಂದಗಲ್ಲು, ಕೊಟ್ಟೂರು, ಕೂಡ್ಲಿಗಿ, ಈಚಲಬೊಮ್ಮನಹಳ್ಳಿ, ನಾಗಲಾಪುರ ಸೇರಿದಂತೆ ಹತ್ತು ಹಲವು ಗ್ರಾಮಗಳ ಭಕ್ತರ ನಡುವೆ  ಶ್ರೀ ವಸಂತ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ನಡೆಯಿತು. ಭಕ್ತರು ವಸಂತ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಪಡೆದು ತೇರಿಗೆ ಬಾಳೆಹಣ್ಣು ತೂರಿ ಕಾಯಿ ಒಡೆದು ಭಕ್ತಿ ಅರ್ಪಿಸಿದರು.ಶಂಭುಲಿಂಗೇಶ್ವರ ರಥೋತ್ಸವ

ಕುರುಗೋಡು:
ಸಮೀಪದ ಸಿರಿಗೇರಿ ಗ್ರಾಮದ ಮಹಾಶಿವರಾತ್ರಿಯ ಅಂಗವಾಗಿ ಐತಿಹಾಸಕ ಮಹತ್ವದ ಶಂಭುಲಿಂಗೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.ಶಿವರಾತ್ರಿ ಮತ್ತು ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಸಿದ್ಧರಾಂಪುರ ಕದಳೀವನ ಸಿದ್ಧೇಶ್ವರ ಮಠದ ಚಿದಾನಂದಯ್ಯ ತಾತನವರು ಸಂಜೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ಬಗೆಯ ಹೂ ಮತ್ತು ಗೊಂಬೆಗಳಿಂದ ಅಲಂಕೃತಗೊಂಡ್ದಿದ ರಥವನ್ನು ಭಕ್ತರು ದೇವಸ್ಥಾನದ ಆವರಣದಿಂದ  ನಾಗನಾಥೇಶ್ವರ ದೇವಸ್ಥಾನದ ವರೆಗೆ ಎಳೆದೊಯ್ದು ಪುನಃ ಸ್ವಸ್ಥಳಕ್ಕೆ ಎಳೆದುತಂದರು. ಕಳಸ, ದೊಳ್ಳು, ಸಮಾಳ, ನಂದಿಧ್ವಜ ಮತ್ತು ಮಂಗಲವಾಧ್ಯಗಳು ರಥೋತ್ಸವಕ್ಕೆ ಮೆರಗುತಂದಿದ್ದವು.ಸಿರಿಗೇರಿ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ರಥದ ದರ್ಶನ ಪಡೆದು ಹೂ ಮತ್ತು ಹಣ್ಣು ಎಸೆದು ಮನದ ಅರಕೆ ತೀರಿಸಿ ಪುನಿತರಾದರು. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು.ಶಿಲಾಮೂರ್ತಿ ಪ್ರತಿಷ್ಠಾಪನೆ

ಕಂಪ್ಲಿ:
ಇಲ್ಲಿಗೆ ಸಮೀಪದ ದೇವಸಮುದ್ರ ಗ್ರಾಮದಲ್ಲಿ ಗುರುವಾರ ಕರಿಯಮ್ಮ ದೇವಿ ನೂತನ ಶಿಲಾಮೂರ್ತಿ  ಪ್ರಾಣ ಪ್ರತಿಷ್ಠಾಪನೆ ಶ್ರದ್ಧೆ ಹಾಗೂ ಭಕ್ತಿಯಿಂದ ಜರುಗಿತು.ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ, ನೈತಿಕತೆ, ಮಾನವೀಯ ಮೌಲ್ಯ ಗುಣಗಳನ್ನು ಕಲಿಸಿಕೊಡುವಂತೆ ಸಲಹೆ ನೀಡಿದರು. ಗ್ರಾಮದ ಸರ್ವರೂ ಸಾಮರಸ್ಯದಿಂದ ನೆಮ್ಮದಿಯ ಜೀವನ ಸಾಗಿಸುವಂತೆ ತಿಳಿಸಿದರು.ಕಂಪ್ಲಿ ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರ ಶಾಸ್ತ್ರಿಗಳು ಹಾಗೂ ಗುರುನಾಥ, ಶಿವಯ್ಯ ತಾತರವರ ಪೌರೋಹಿತ್ಯದಲ್ಲಿ ನೂತನ ಕರಿಯಮ್ಮದೇವಿ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗಾಗಿ ಚಂಡಿ ಯಾಗ, ಮಹಾ ರುದ್ರಾಭಿಷೇಕ, ಕುಂಕುಮಾರ್ಚನೆ, ವಾಸ್ತು, ನವಗ್ರಹ ಪೂಜೆ, ಕಲಶ ಸ್ಥಾಪನೆ ನಂತರ ಗೋಪುರಕ್ಕೆ ಕಲಶಾರೋಹಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮದ ಭಕ್ತರು ಹಣ್ಣು, ಕಾಯಿ ಮತ್ತು ಎಡೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಕಡೇಮನಿ ದೊಡ್ಡ ಪಕ್ಕೀರಪ್ಪ, ಕರೆಗೌಡ್ರು ಪಕ್ಕೀರಪ್ಪ, ಕಡೇಮನಿ ಪಂಪಾಪತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೂಗೂರು ಲಕ್ಷ್ಮಿ ಶೇಖರಪ್ಪ, ಕೆ. ಷಣ್ಮುಖಪ್ಪ, ಅಳ್ಳಳ್ಳಿ ವೀರೇಶ್, ಜಿ. ಬಸವನಗೌಡ, ಹೊಸ್ಮನಿ ಮಲ್ಲಪ್ಪ, ವಿ. ವೆಂಕಟೇಶ್, ಕಬ್ಬೇರು ತಿಪ್ಪಣ್ಣ, ವಾಲ್ಮೀಕಿ ಹೊನ್ನೂರಪ್ಪ ಗ್ರಾಮದ ಮುಖಂಡರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.