ರಥೋತ್ಸವದ ಸೊಬಗಲ್ಲಿ `ಸಾಂಬ್ರಾಣಿ'

7

ರಥೋತ್ಸವದ ಸೊಬಗಲ್ಲಿ `ಸಾಂಬ್ರಾಣಿ'

Published:
Updated:
ರಥೋತ್ಸವದ ಸೊಬಗಲ್ಲಿ `ಸಾಂಬ್ರಾಣಿ'

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ಸಾಂಬ್ರಾಣಿ ಗ್ರಾಮದ ಜನರ ಮೊಗದಲ್ಲೆಗ `ಶತಮಾನದ ನಗು'. 100 ವರ್ಷಗಳ ನಂತರ ಆಚರಿಸಲಾಗುತ್ತಿರುವ ಗ್ರಾಮದೇವಿಯರ ರಥೋತ್ಸವವನ್ನು ಕಣ್ಣಾರೆ ಕಾಣುವ ಭಾಗ್ಯ. ಇಷ್ಟು ವರ್ಷಗಳ ಕಾಲ ಬರೀ ವಾರ್ಷಿಕ ಉತ್ಸವದ ಸವಿ ಸವಿಯುತ್ತಿದ್ದವರಿಗೀಗ ಜೀವಮಾನದಲ್ಲಿ ಒಮ್ಮೆ ಮಾತ್ರ ಇಂಥ ಅಪೂರ್ವ ದೃಶ್ಯ ದೊರಕುತ್ತಿರುವ ಕಾರಣ ಎಲ್ಲರಲ್ಲೂ ಕಾತರ.ಇನ್ನೇನು ಮೂರೇ ಮೂರು ದಿನ ಬಾಕಿ. 15ರಂದೇ ಶತಮಾನದ ರಥೋತ್ಸವ. ಇದಕ್ಕಾಗಿ ಸಾಗಿದೆ ಭರದ ಸಿದ್ಧತೆ. ಅಂದಹಾಗೆ ಇದು ಗ್ರಾಮದೇವಿಯರಾದ ದೇಮವ್ವಾ ಮತ್ತು ದುರ್ಗವ್ವಾ ದೇವಿಯರ ರಥೋತ್ಸವ. ಗ್ರಾಮದೇವಿ ದೇವಸ್ಥಾನದ ವ್ಯಾಪ್ತಿಗೆ ಬರುವ ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕನಕೊಪ್ಪ ಗ್ರಾಮಗಳು ಹಿರಿಯರು ಸೇರಿ ನಡೆಸುತ್ತಿದ್ದಾರೆ.ಐತಿಹಾಸಿಕ ಹಿನ್ನೆಲೆ

ಸಾಂಬ್ರಾಣಿ ರಥೋತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ಸ್ವಾದಿ ಅರಸ ಸಾಂಬ ಸದಾಶಿವರಾಜನ ಆಳ್ವಿಕೆಯಲ್ಲಿ ಸಾಂಬ್ರಾಣಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಸಾಂಬ್ರಾಣಿಯಿಂದ ರಾಜ್ಯದ ವರಮಾನಕ್ಕೆ ಪ್ರತಿ ತಿಂಗಳು ಎರಡು ಲಕ್ಷ ರೂಪಾಯಿ ಜಮೆ ಆಗುತ್ತಿತ್ತು. ಅಂದು ಸಂಪದ್ಭರಿತವಾಗಿದ್ದ ಸಾಂಬ್ರಾಣಿಯಲ್ಲಿ ಜಾತ್ರೆ, ರಥೋತ್ಸವಗಳು ವೈಭವದಿಂದ ನಡೆಯುತ್ತಿದ್ದವು. ಕಾಲಕ್ರಮೇಣ ರಥೋತ್ಸವ ನಿಂತು ಹೋಗಿ ಗ್ರಾಮದೇವಿಯ ವಾರ್ಷಿಕ ಉತ್ಸವ ಮಾತ್ರ ನಡೆಯುತ್ತಿತ್ತು. ರಥೋತ್ಸವ ಹೇಗೆ ನಿಂತು ಹೋಯಿತು ಎನ್ನುವ ಬಗ್ಗೆ ಗ್ರಾಮದ ಹಿರಿಯರ ಬಳಿ ಸ್ಪಷ್ಟವಾದ ಮಾಹಿತಿ ಇಲ್ಲ.ಶತಮಾನದ ನಂತರ ನಡೆಯಲಿರುವ ರಥೋತ್ಸವಕ್ಕೆ ಅಂದಾಜು 15 ಲಕ್ಷ ವೆಚ್ಚದಲ್ಲಿ ಐದು ಅಂಕಣದ, ಸುಮಾರು 70 ಅಡಿ ಎತ್ತರದ ರಥದ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಲಘಟಗಿ ತಾಲ್ಲೂಕಿನ ಹುಲಕೊಪ್ಪದ ವಿಶ್ವಕರ್ಮ ಸಮುದಾಯದವರು ರಥ ನಿರ್ಮಿಸುವ ಹೊಣೆ ಹೊತ್ತಿದ್ದಾರೆ.ಆರು ಚಕ್ರದ ರಥದ ಐದೂ ಅಂಕಣಗಳಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ,  ಜೈನ ಮುನಿಗಳ, ಮಹಾಪುರುಷರ, ಸಮಾಜ ಸೇವಕರ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅಳವಡಿಸಲಾಗುತ್ತಿದೆ. ರಥದ ಸುತ್ತಲೂ ಪರಿಸರ ಜಾಗೃತಿಯ ಸಂದೇಶ ಸಾರುವ ಬರಹಗಳನ್ನೂ ಬರೆಯಲು ಗ್ರಾಮಸ್ಥರು ನಿರ್ಧರಿಸಿದ್ದು ಇದು ಭಾವೈಕ್ಯದೊಂದಿಗೆ ಪರಿಸರ ಜಾಗೃತಿ ಮೂಡಿಸುವ ರಥೋತ್ಸವವೂ ಆಗಲಿದೆ.ಪ್ರಾಣಿಬಲಿ ನಿಷೇಧ

ಶತಮಾನಗಳ ಹಿಂದೆ ಗ್ರಾಮದೇವಿಯ ರಥೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ಇತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ಶತಮಾನದ ನಂತರ ನಡೆಯುತ್ತಿರುವ ರಥೋತ್ಸವದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸುವ ನಿರ್ಣಯವನ್ನು ಗ್ರಾಮಸ್ಥರು ಕೈಗೊಂಡು ಮಾದರಿಯಾಗಿದ್ದಾರೆ.ಜಾತ್ರೆಯ ಹಿನ್ನೆಲೆಯಲ್ಲಿ ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕನಕೊಪ್ಪ ಗ್ರಾಮಸ್ಥರು ಮಾಂಸ ಆಹಾರವನ್ನು ತ್ಯಜಿಸಿದ್ದಾರೆ. ಜ.25ರಿಂದಲೇ ಗ್ರಾಮಸ್ಥರು ಈ ಆಚರಣೆ ಕೈಗೊಂಡಿದ್ದು ರಥೋತ್ಸವದವರೆಗೆ ಮುಂದುವರಿಯಲಿದೆ. ನಾಲ್ಕು ಗ್ರಾಮದಲ್ಲಿರುವ ಎಲ್ಲ ಧರ್ಮಿಯರೂ ಈ ಆಚರಣೆ ಪಾಲಿಸುತ್ತಿರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry