ರಫ್ತಿನಿಂದ ರೂಪಾಯಿ ಮೌಲ್ಯ ವೃದ್ಧಿ

7
ಜಿಲ್ಲಾಮಟ್ಟದ ರಫ್ತು ಜಾಗೃತಿ ಕಾರ್ಯಕ್ರಮದಲ್ಲಿ ಅಥಣಿ ವೀರಣ್ಣ ಅಭಿಮತ

ರಫ್ತಿನಿಂದ ರೂಪಾಯಿ ಮೌಲ್ಯ ವೃದ್ಧಿ

Published:
Updated:
ರಫ್ತಿನಿಂದ ರೂಪಾಯಿ ಮೌಲ್ಯ ವೃದ್ಧಿ

ದಾವಣಗೆರೆ: ರಫ್ತಿನಿಂದಾಗಿ ರೂಪಾಯಿ ಮೌಲ್ಯ ವೃದ್ಧಿಯಾಗುತ್ತದೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಸುಧಾರಿಸಬಲ್ಲದು ಎಂದು ಉದ್ಯಮಿ ಅಥಣಿ ವೀರಣ್ಣ ಹೇಳಿದರು.ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ (ಕರ್ನಾಟಕ ಸರ್ಕಾರದ ರಫ್ತು ಉತ್ತೇಜನಾ ಸಂಸ್ಥೆ), ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ವಾಣಿಜ್ಯೋದ್ಯಮ ಸಂಸ್ಥೆ, ಫೆಡರೇಷನ್ ಆಫ್ ಇಂಡಿಯನ್ ಎಕ್ಸ್‌ಪೋರ್ಟ್ ಆರ್ಗನೈಸೇಷನ್ (ಫಿಯೊ), ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ದಾವಣಗೆರೆ ಟೆಕ್ಸ್‌ಟೈಲ್ಸ್ ಪಾರ್ಕ್, ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ರಫ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ರಫ್ತು ಹೆಚ್ಚಾದಂತೆ ರೂಪಾಯಿ ಮೌಲ್ಯ ವೃದ್ಧಿಯಾಗುತ್ತದೆ. ಇತ್ತೀಚೆಗೆ ರೂಪಾಯಿ ಮೌಲ್ಯದಲ್ಲಿ ಶೇ 20ರಷ್ಟು ಅಭಿವೃದ್ಧಿ ಆಗಿದೆ. ರಫ್ತಿನಿಂದಾಗಿ ಇತರ ದೇಶಗಳೊಂದಿಗೆ ನಾವು ಜಾಗತಿಕಮಟ್ಟದಲ್ಲಿ ಸ್ಪರ್ಧಿಸಬಹುದು. ಆದರೆ, `ಲೆಟರ್ ಆಫ್ ಕ್ರೆಡಿಟ್' ಬಂದಲ್ಲಿ ಮಾತ್ರ ಉದ್ಯಮಿಗಳು ರಫ್ತು ಮಾಡಬೇಕು. ಇದರಿಂದ ನಷ್ಟ ಅನುಭವಿಸುವುದು ತಪ್ಪುತ್ತದೆ. ಚೀನಾ, ಮಲೇಷ್ಯಾ ದೇಶಗಳು ರಫ್ತು ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಅವುಗಳೊಂದಿಗೆ ಸ್ಪರ್ಧಿಸಲು ನಮ್ಮ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ ಹೊಂದಿರಬೇಕು. ಉತ್ಪನ್ನಗಳು ಪ್ರಥಮದರ್ಜೆಯಲ್ಲಿದ್ದಾಗ ಮಾತ್ರ ದೇಶಕ್ಕೂ ಉತ್ತಮ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.ಹಿಂದೆ ದಾವಣಗೆರೆಯಲ್ಲಿ 9 ಹತ್ತಿ ಗಿರಣಿಗಳಿದ್ದವು. ಅಂದು ದಾವಣಗೆರೆ ಕಾಟನ್‌ಮಿಲ್‌ನ ಉತ್ತಮ ದರ್ಜೆಯ ಬಟ್ಟೆ ವಿದೇಶಕ್ಕೂ ರಫ್ತಾಗುತ್ತಿತ್ತು. ಆದರೆ, ಇಂದು ದಾವಣಗೆರೆಯಲ್ಲಿ ಹತ್ತಿ ಗಿರಣಿಗಳೇ ಇಲ್ಲ. ನಗರದ ಹೊರವಲಯದಲ್ಲಿ `ಟೆಕ್ಸ್‌ಟೈಲ್‌ಪಾರ್ಕ್' ನಿರ್ಮಾಣವಾಗಿದ್ದು, ಅದಿನ್ನೂ ಪೂರ್ಣಪ್ರಮಾಣದಲ್ಲಿ ಅಸ್ತಿತ್ವ ಕಂಡುಕೊಂಡಿಲ್ಲ. ಟೆಕ್ಸ್‌ಟೈಲ್, ಆಹಾರ ಉದ್ಯಮದಲ್ಲಿ ರಫ್ತಿಗೆ ಹೇರಳ ಅವಕಾಶವಿದ್ದು, ಇದನ್ನು ಉದ್ದಿಮೆದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ದಾವಣಗೆರೆ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಕಾಸಲ್ ಎಸ್. ವಿಠಲ್ ಅಧ್ಯಕ್ಷತೆ ವಹಿಸಿದ್ದರು. `ಫಿಯೊ' ಜಂಟಿ ನಿರ್ದೇಶಕ ವಿ. ಶ್ರೀನಿವಾಸನ್, ಡಾ.ವಿಷಕಂಠ, ದಾವಣಗೆರೆ ಟೆಕ್ಸ್‌ಟೈಪಾರ್ಕ್‌ನ ನಿರ್ದೇಶಕ ಶೇಖ್ ಹಫೀಜುಲ್ಲಾ ಖಾನ್, ಪ್ರೊ.ವೈ. ವೃಷಭೇಂದ್ರಪ್ಪ, ದಾವಣಗೆರೆ ಸ್ಟೀಲ್ ಫ್ಯಾಬ್ರಿಕೇಟರ್‌ಅಸೋಸಿಯೇಷನ್ ಕಾರ್ಯದರ್ಶಿ ಎಚ್.ಎಂ. ಉಮೇಶ, ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಯಣ್ಣ ಅಮತಿ ಹಾಜರಿದ್ದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಎನ್. ಗದಗ ಸ್ವಾಗತಿಸಿದರು. ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ ಉಪ ನಿರ್ದೇಶಕ ಎಂ.ಎ. ಷರೀಫ್ ಪ್ರಾಸ್ತಾವಿಕ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry