ರಫ್ತು ವಹಿವಾಟು: ಶೇ 36ರಷ್ಟು ಹೆಚ್ಚಳ

7

ರಫ್ತು ವಹಿವಾಟು: ಶೇ 36ರಷ್ಟು ಹೆಚ್ಚಳ

Published:
Updated:

ನವದೆಹಲಿ (ಪಿಟಿಐ): ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣ ಶೇಕಡ 36ರಷ್ಟು ಏರಿಕೆ ಕಂಡಿದೆ. ಇದು ಕಳೆದ 33 ತಿಂಗಳಲ್ಲೇ ಗರಿಷ್ಠ ಪ್ರಗತಿಯಾಗಿದ್ದು, 22.5ಶತಕೋಟಿ ಏರಿಕೆ ದಾಖಲಿಸಿದೆ. ಯೂರೋಪ್ ಮತ್ತು ಅಮೆರಿಕ ಮಾರುಕಟ್ಟೆಯಿಂದ ವ್ಯಕ್ತವಾದ ಹೆಚ್ಚಿನ ಬೇಡಿಕೆ ಈ ಏರಿಕೆ ಕಾರಣ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.2009ರ ಇದೇ ಅವಧಿಯಲ್ಲಿ 16.4 ಶತಕೋಟಿ ಡಾಲರ್ ರಫ್ತು ವಹಿವಾಟು ದಾಖಲಾಗಿತ್ತು. ಈಗಿನ ಪ್ರಗತಿಯೇ  ಮುಂದುವರೆದರೆ ಇದು ವಾರ್ಷಿಕ ಗುರಿ 200 ಶತಕೋಟಿ ಡಾಲರ್ ಅನ್ನು ದಾಟಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಆದರೆ, ಇದೇ ಅವಧಿಯಲ್ಲಿ ಆಮದು ಪ್ರಮಾಣ ಶೇ 11ರಷ್ಟು ಕುಸಿತ ಕಂಡಿದ್ದು 25 ಶತಕೋಟಿ ಡಾಲರ್‌ಗೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2.6 ಶತಕೋಟಿ ಡಾಲರ್ ಖೋತಾ ವರಮಾನ ದಾಖಲಿಸಿದೆ ಎಂದು ವಾಣಿಜ್ಯ ಸಚಿವಾಲಯ ಅಂಕಿ ಅಂಶಗಳು ತಿಳಿಸಿವೆ.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಹಡಗು ಮೂಲಕ ನಡೆಯುವ ಸರಕು ವಹಿವಾಟು ಶೇ 29ರಷ್ಟು ಪ್ರಗತಿ ಕಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 127 ಶತಕೋಟಿ ಡಾಲರ್ ಇದ್ದ ಈ ವಹಿವಾಟು ಈ ವರ್ಷ 164 ಶತಕೋಟಿ ಡಾಲರ್‌ಗೆ ಏರಿದೆ.‘ದೇಶದ ರಫ್ತು ವಾರ್ಷಿಕ ಗುರಿಯ ಅಂದಾಜನ್ನು ದಾಟುವ ಸಾಧ್ಯತೆ ಇದ್ದು, ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಯಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದ್ದಾರೆ.ಆರ್ಥಿಕ ಹಿಂಜರಿತದಿಂದ ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳು ಚೇತರಿಸಿಕೊಳ್ಳುತ್ತಿದೆ. ಹಡಗು ಮೂಲಕ ನಡೆಯುವ ಭಾರತದ, ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಸರಕು ವಹಿವಾಟು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಯನ್ನು ಪ್ರಮುಖವಾಗಿ ಅವಲಂಬಿಸಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊಲಂಬಿಯಾ ಸೇರಿದಂತೆ ಇತರೆ  ಲ್ಯಾಟಿನ್ ಅಮೆರಿಕ ದೇಶಗಳಿಂದ ಹೆಚ್ಚಿನ ಸರಕು ಬೇಡಿಕೆ ವ್ಯಕ್ತವಾಗಿದ್ದು, ಎಂಜಿನಿಯರಿಂಗ್ ಉತ್ಪನ್ನಗಳ ರಫ್ತು ಶೇ 112ರಷ್ಟು ಪ್ರಗತಿ ಕಂಡಿದೆ. ಆದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಖೋತಾ ವರಮಾನ 80 ಶತಕೋಟಿ ಡಾಲರ್‌ನಿಂದ 82 ಶತಕೋಟಿ ಡಾಲರ್‌ಗೆ ಏರಿದೆ.2010-11ನೇ ಸಾಲಿನಲ್ಲಿ ಸರ್ಕಾರ 200 ಶತಕೋಟಿ ಡಾಲರ್‌ಗಳಷ್ಟು ರಫ್ತು ವಹಿವಾಟು ಗುರಿಯನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry