ಬುಧವಾರ, ನವೆಂಬರ್ 20, 2019
26 °C
ಜಾಗತಿಕ ಮಟ್ಟದಲ್ಲಿ ಆರ್ಥಿಕ ಚೇತರಿಕೆ

ರಫ್ತು ಶೇ10 ವೃದ್ಧಿ ನಿರೀಕ್ಷೆ: ಪಿಎಂಇಎಸಿ

Published:
Updated:
ರಫ್ತು ಶೇ10 ವೃದ್ಧಿ ನಿರೀಕ್ಷೆ: ಪಿಎಂಇಎಸಿ

ನವದೆಹಲಿ (ಪಿಟಿಐ): ಜಾಗತಿಕ ಮಟ್ಟದಲ್ಲಿ ಸದ್ಯ ಪ್ರಗತಿಯ ಚಿತ್ರಣ ಕಂಡುಬರುತ್ತಿದೆ. ಹಾಗಾಗಿ ದೇಶದ ರಫ್ತು ಚಟುವಟಿಕೆ 2013-14ನೇ ಹಣಕಾಸು ವರ್ಷದಲ್ಲಿ ಶೇ 10ರ ವೃದ್ಧಿಯೊಂದಿಗೆ 32970 ಕೋಟಿ ಡಾಲರ್(ರೂ.17,80,380 ಕೋಟಿ)  ಪ್ರಮಾಣಕ್ಕೆ ಹೆಚ್ಚಲಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ(ಪಿಎಂಇಎಸಿ) ಅಂದಾಜು ಮಾಡಿದೆ.2012-13ನೇ ಹಣಕಾಸು ವರ್ಷದಲ್ಲಿ ರಫ್ತು 30,100 ಕೋಟಿ ಡಾಲರ್(ರೂ.16,25,400 ಕೋಟಿ) ಇದ್ದಿತು. ರಫ್ತು ಚಟುವಟಿಕೆಯಲ್ಲಿ ಅಲ್ಪ ಪ್ರಮಾಣದ ಹೆಚ್ಚಳವಾಗುತ್ತಿರುವುದು ನಿರಾಶಾದಾಯಕ ಸಂಗತಿ. ಈ ಪರಿಸ್ಥಿತಿ 2011-12ನೇ ಹಣಕಾಸು ವರ್ಷದ ದ್ವಿತೀಯಾರ್ಧದಿಂದ ಆರಂಭಗೊಂಡಿದ್ದು, 2012-13ರಲ್ಲಿಯೂ ಮುಂದುವರಿಯಿತು ಎಂದು ಸಮಿತಿ ಗಮನ ಸೆಳೆದಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿನ ಆಮದು 54,270 ಕೋಟಿ ಡಾಲರ್(ರೂ.29,30,580 ಕೋಟಿ)ಗೆ ಹೆಚ್ಚಳವಾಗುವ ಸಂಭವವಿದೆ ಎಂದೂ `ಪಿಎಂಇಎಸಿ' ಹೇಳಿದೆ. ಹಿಂದಿನ ವರ್ಷ 50,110 ಕೋಟಿ ಡಾಲರ್(ರೂ.27,05,940 ಕೋಟಿ) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.ವಹಿವಾಟು ಅಂತರ ಕೊರತೆ

ಆಮದು-ರಫ್ತು ನಡುವಿನ ಅಂತರ ಹೆಚ್ಚುತ್ತಲೇ ಇದೆ. ಈ ವಹಿವಾಟು ಅಂತರ 2012-13ನೇ ಹಣಕಾಸು ವರ್ಷದಲ್ಲಿ 20,000 ಕೋಟಿ ಡಾಲರ್‌ನಷ್ಟು ಇತ್ತು. 2013-14ನೇ ಹಣಕಾಸು ವರ್ಷದಲ್ಲಿ ಈ ಅಂತರ ಮತ್ತಷ್ಟು ವಿಸ್ತರಿಸಿ 21,300 ಕೋಟಿ ಡಾಲರ್‌ಗೇರುವ ಸಂಭವವಿದೆ ಎಂದು `ಪಿಎಂಇಎಸಿ' ಭವಿಷ್ಯ ನುಡಿದಿದೆ.2013ರಲ್ಲಿ ಜಾಗತಿಕ ಮಟ್ಟದ ಆರ್ಥಿಕ ಚಿತ್ರಣ ಬದಲಾಗಲಿದೆ. ತಕ್ಕಮಟ್ಟಿಗಿನ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ. ಇದು ಭಾರತದ ರಫ್ತು ಕ್ಷೇತ್ರಕ್ಕೆ ಆಶಾದಾಯಕ ಸಂಗತಿ ಎಂದಿದೆ.2006-07ರಲ್ಲಿ ಯೂರೋಪ್ ಒಕ್ಕೂಟದೊಂದಿಗಿನ ರಫ್ತು ಚಟುವಟಿಕೆ ಒಟ್ಟಾರೆ ರಫ್ತಿನಲ್ಲಿ ಶೇ 21ರಷ್ಟು ಇದ್ದಿತು. ಅದು 2012-13ರಲ್ಲಿ ಶೇ 17ಕ್ಕೆ ತಗ್ಗಿತು. ಉತ್ತರ ಅಮೆರಿಕಕ್ಕೆ ನಡೆಯುತ್ತಿದ್ದ ರಫ್ತು ಶೇ 16.2ರಿಂದ ಶೇ 14.1ಕ್ಕೆ ಇಳಿಕೆಯಾಗಿದೆ. ಜತೆಗೆ `ಆಸಿಯಾನ್' ದೇಶಗಳಿಗೆ ರವಾನೆ ಆಗುತ್ತಿದ್ದ ಸರಕುಗಳ ಪ್ರಮಾಣದಲ್ಲಿಯೂ ಶೇ 12ರಷ್ಟು ಕುಸಿತವಾಗಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ ಎಂದಿದೆ `ಪಿಎಂಇಎಸಿ'.ಇದ್ದುದರಲ್ಲಿ ಆಫ್ರಿಕಾ ದೇಶಗಳೊಂದಿಗಿನ ರಫ್ತು ಚಟುವಟಿಕೆಯಲ್ಲಿ ನಿರಂತರವಾಗಿ ಹೆಚ್ಚಳವಾಗಿದೆ. ಮುಖ್ಯವಾಗಿ ದಕ್ಷಿಣ ಆಫ್ರಿಕಾ, ಕೇನ್ಯಾ, ನೈಜೀರಿಯಾ, ತಾಂಜೇನಿಯಾ, ಮೊಜಾಂಬಿಕ್, ಘಾನಾ ಹಾಗೂ ಮಾರಿಷಸ್‌ಗೆ ಭಾರತದಿಂದ ಹೆಚ್ಚು ರಫ್ತು ನಡೆಯುತ್ತಿದೆ.ಉತ್ತರ ಆಫ್ರಿಕಾ, ಈಜಿಪ್ಟ್, ಅಲ್ಜೀರಿಯಾ ಮತ್ತು ಸೂಡಾನ್ ಭಾರತದಿಂದ ಹೆಚ್ಚು ರಫ್ತು ಮಾಡಿಕೊಳ್ಳುವ ದೇಶಗಳಾಗಿವೆ.  ಇದೆಲ್ಲದರ ಜತೆಗೆ, ಜಪಾನ್ ಮತ್ತು ದಕ್ಷಿಣ ಕೊರಿಯಾ ಜತೆಗೆ ಮುಕ್ತ ವ್ಯಾಪಾರ ಒಪ್ಪಂದವಾಗಿದ್ದು, ಇಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದಾಗಿದೆ ಎಂದು ಸಮಿತಿ ಹೇಳಿದೆ.

ಪ್ರತಿಕ್ರಿಯಿಸಿ (+)