ಬುಧವಾರ, ನವೆಂಬರ್ 20, 2019
21 °C
ವಾರ್ಷಿಕ ವಾಣಿಜ್ಯ ಚಟುವಟಿಕೆ ಪೂರಕ ನೀತಿ ಪ್ರಕಟಿಸಿದ ಕೇಂದ್ರ

ರಫ್ತು ಹೆಚ್ಚಳ-ಎಸ್‌ಇಜೆಡ್ ಸ್ಥಾಪನೆಗೆ ಉತ್ತೇಜನ

Published:
Updated:

ನವದೆಹಲಿ(ಪಿಟಿಐ): ದೇಶದ ರಫ್ತು ಪ್ರಮಾಣ ಹೆಚ್ಚಿಸುವ ಸಲುವಾಗಿ `ಪ್ರಧಾನ ಸರಕುಗಳ ರಫ್ತಿಗೆ ಉತ್ತೇಜನ'(ಇಪಿಸಿಜಿ) ಅವಧಿ ವಿಸ್ತರಣೆ ಮತ್ತು `ವಿಶೇಷ ಆರ್ಥಿಕ ವಲಯ'ಕ್ಕೆ(ಎಸ್‌ಇಜೆಡ್) ಮತ್ತಷ್ಟು ಸವಲತ್ತು ಸೇರಿದಂತೆ ಹಲವು ಉತ್ತೇಜನಾ ಕ್ರಮಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿತು.2012-13ನೇ ಹಣಕಾಸು ವರ್ಷದಲ್ಲಿ ದೇಶದ ರಫ್ತು ಪ್ರಮಾಣ ಶೇ 1.76ರಷ್ಟು ಇಳಿಮುಖವಾಗಿ 30,060 ಕೋಟಿ ಡಾಲರ್ರೂ16.30 ಲಕ್ಷ ಕೋಟಿ)ಗೆ ತಗ್ಗಿತ್ತು. ಆ ಮೂಲಕ ರಫ್ತು -ಆಮದು ನಡುವಿನ ವಹಿವಾಟು ಅಂತರ 19091 ಕೋಟಿ ಡಾಲರ್ರೂ10.35 ಲಕ್ಷ ಕೋಟಿ)ಗೆ ಹೆಚ್ಚುವಂತಾಗಿತ್ತು. ಈ ಹಿನ್ನೆಲೆಯಲ್ಲಿ ರಫ್ತು ಹೆಚ್ಚಿಸಬೇಕಿದ್ದು, ಉತ್ತೇಜನ ಕ್ರಮಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಹೇಳಿದರು.`ವಾರ್ಷಿಕ ವಾಣಿಜ್ಯ ಚಟುವಟಿಕೆ ಪೂರಕ ನೀತಿ'ಯನ್ನು ಇಲ್ಲಿ ಪ್ರಕಟಿಸಿದ ಅವರು, ವಿವಿಧ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುವವರು ಅಗತ್ಯವಾದ ಪ್ರಧಾನ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ಸುಂಕ ವಿನಾಯ್ತಿಯನ್ನು `ಇಪಿಸಿಜಿ' ಯೋಜನೆಯಡಿ ನೀಡಲಾಗುತ್ತಿದೆ. ಈ ಸುಂಕ ವಿನಾಯ್ತಿ ಸವಲತ್ತನ್ನು 2013ರ ಮಾರ್ಚ್ ನಂತರವೂ ಮುಂದುವರಿಸಲಾಗುವುದು. ಜತೆಗೆ  ಈ ಸವಲತ್ತನ್ನು ರಫ್ತು ಕ್ಷೇತ್ರದ ಎಲ್ಲ ವಿಭಾಗಗಳಿಗೂ ವಿಸ್ತರಿಸಲಾಗುವುದು ಎಂದರು.ಇದೇ ವೇಳೆ ಆಮದು ಪ್ರಮಾಣವನ್ನೂ ಕಡಿಮೆ ಮಾಡಬೇಕಿದೆ. ಇನ್ನೊಂದೆಡೆ ರಫ್ತು ಹೆಚ್ಚಿಸಬೇಕಿದೆ. ಆ ಮೂಲಕ ವಾಣಿಜ್ಯ ಕೊರತೆ (ರಫ್ತು-ಆಮದು) ಅಂತರವನ್ನು ತಗ್ಗಿಸಬೇಕಿದೆ ಎಂದರು.ಎಸ್‌ಇಜೆಡ್ ಭೂಮಿ ಮಿತಿ

ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್) ಸ್ಥಾಪನೆಗೆ ಅಗತ್ಯವಾದ ಭೂಮಿಯ `ಕನಿಷ್ಠ ಮಿತಿ'ಯನ್ನು ಇನ್ನೂ ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಈ ಕ್ಷೇತ್ರವನ್ನು ಆಧರಿಸಿದ ಸೇವೆಗಳ ಉದ್ಯಮಗಳ `ಎಸ್‌ಇಜೆಡ್' ಸ್ಥಾಪನೆಗೆ ಅಗತ್ಯವಾದ ಭೂಮಿ ವಿಚಾರದಲ್ಲಿ ಕನಿಷ್ಠ ಮಿತಿಯ ಷರತ್ತನ್ನೇ ವಿಧಿಸುವುದಿಲ್ಲ ಎಂದರು.`ಎಸ್‌ಇಜೆಡ್' ಸ್ಥಾಪನೆಗಾಗಿ ಕೃಷಿ ಚಟುವಟಿಕೆಗಳೇ ನಡೆಯದ ವಿಸ್ತಾರವಾದ ಭೂಮಿಯನ್ನು ಒಂದೇ ನೆಲೆಯಲ್ಲಿ ಗುರುತಿಸುವುದು ಅಸಾಧ್ಯವಾದ ಕಾರಣ `ಅಗತ್ಯ ಭೂಮಿ ಮಿತಿ'ಯಲ್ಲಿ ಈ ರಿಯಾಯ್ತಿ ತೋರಲಾಗುತ್ತಿದೆ ಎಂದು ಆನಂದ್ ಶರ್ಮಾ ಸ್ಪಷ್ಟಪಡಿಸಿದರು.ಮಿಶ್ರ ಪ್ರತಿಕ್ರಿಯೆ

`ಇದು ಮಾಮೂಲಿ ನೀತಿ. ಇದರಲ್ಲಿ ಹೇಳಿಕೊಳ್ಳುವಂತಹ ಅಥವಾ ಪರಿಣಾಮಕಾರಿಯಾದಂತಹ ಯಾವುದೇ ರಫ್ತು ಉತ್ತೇಜನ ಕ್ರಮಗಳೇ ಇಲ್ಲ' ಎಂದು `ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟ'(ಎಫ್‌ಐಇಒ)ದ ಅಧ್ಯಕ್ಷ ಆರ್.ಅಹಮದ್ ಅತೃಪ್ತಿ ಹೊರಹಾಕಿದ್ದಾರೆ.ಇನ್ನೊಂದೆಡೆ, ಸಿದ್ಧ ಉಡುಪು ರಫ್ತು ಉತ್ತೇಜನ ಸಮಿತಿ(ಎಇಪಿಸಿ) ಮತ್ತು ಎಂಜಿನಿಯರಿಂಗ್ ರಫ್ತು ಉತ್ತೇಜನ ಸಮಿತಿ(ಇಇಪಿಸಿ) ಸರ್ಕಾರದ ಕ್ರಮಗಳನ್ನು ಮೆಚ್ಚಿ ಸ್ವಾಗತಿಸಿವೆ.

 

ಪ್ರತಿಕ್ರಿಯಿಸಿ (+)