ರಫ್ತು ಹೆಚ್ಚಿದರೆ ಆರ್ಥಿಕ ಸ್ಥಿತಿ ಸುಧಾರಣೆ: ರಂಗರಾಜನ್‌

7

ರಫ್ತು ಹೆಚ್ಚಿದರೆ ಆರ್ಥಿಕ ಸ್ಥಿತಿ ಸುಧಾರಣೆ: ರಂಗರಾಜನ್‌

Published:
Updated:

ಬೆಂಗಳೂರು: ‘ದೇಶದಲ್ಲಿ ರಫ್ತು ಹೆಚ್ಚಾಗಿ ಆಮದು ಪ್ರಮಾಣ ಕಡಿಮೆಯಾಗಬೇಕು. ಕೃಷಿ ಹಾಗೂ ಕೈಗಾರಿಕಾ ವಲಯಗಳಲ್ಲಿ ಉತ್ಪಾದನೆ ಹೆಚ್ಚಾಗುವ ನಿಟ್ಟಿನಲ್ಲಿ  ನೀತಿಗಳನ್ನು ರೂಪಿಸಿ, ವೇಗವಾಗಿ ಯೋಜನೆಗಳನ್ನು ಪೂರ್ಣಗೊಳಿಸದರೆ ದೇಶದ ಆರ್ಥಿಕತೆಯಲ್ಲಿ ಉತ್ತಮ ಸುಧಾರಣೆಯನ್ನು ಕಾಣಬಹುದು’ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಸಿ.ರಂಗರಾಜನ್‌ ಅಭಿಪ್ರಾಯಪಟ್ಟರು.   ನ್ಯಾಯಮೂರ್ತಿ ಎಸ್‌.ರಂಗರಾಜನ್‌ ಅವರ ಸ್ಮರಣಾರ್ಥ  ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಾರಂಭಿಸಲಾಗಿರುವ ಹಲವಾರು ಯೋಜನೆಗಳು ಪೂರ್ಣಗೊಂಡಿಲ್ಲ. ಕೆಲವೊಂದು ಯೋಜನೆಗಳು ಭೂಮಿ ಹಾಗೂ ಇತರೆ ಸಮಸ್ಯೆಗಳಿಂದ ಪ್ರಾರಂಭವೇ ಆಗಿಲ್ಲ ಎಂದರು.ಈ ಹಿಂದೆ ದೇಶದ ಜನ ಭೂಮಿ ಮೇಲೆ ಹಣವನ್ನು ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಚಿನ್ನದ ಮೇಲೆ ಹೆಚ್ಚಾಗಿ ಹೂಡಿಕೆ ಮಾಡಿದ್ದು ಹಣದುಬ್ಬರಕ್ಕೆ ಒಂದು ಕಾರಣವಾಯಿತು ಎಂದರು.ದೇಶದಲ್ಲಿ 2011–12ನೇ ಸಾಲಿನಲ್ಲೇ ಹಣದುಬ್ಬರ ಪ್ರಾರಂಭವಾಗಿತ್ತು. ಆದರೆ ಆಗ ರಫ್ತು ಹೆಚ್ಚಾಗಿದ್ದ ಕಾರಣ ರೂಪಾಯಿಯ ಮೌಲ್ಯದ ಮೇಲೆ ಹೆಚ್ಚಿನ ಒತ್ತಡ ಬೀಳಲಿಲ್ಲ. ಕ್ರಮೇಣ ರಫ್ತಿನ ಪ್ರಮಾಣದಲ್ಲಿ ಇಳಿಕೆಯಾಗಿ, ಚಿನ್ನ, ಕಚ್ಚಾ ತೈಲ ಹಾಗೂ ಕಲ್ಲಿದ್ದಲಿನ ಆಮದು ಹೆಚ್ಚಾಗ ತೊಡಗಿತು. ಇದರಿಂದಾಗಿ ರೂಪಾಯಿ ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಯಿತು ಎಂದು ಹೇಳಿದರು.ದೇಶದ ಆರ್ಥಿಕ ವ್ಯವಸ್ಥೆಯ ಬೆಳವಣಿಗೆಗೆ ವಿದೇಶಿ ನೇರ ಬಂಡವಾಳ ಹೂಡಿಕೆ, ಅನಿವಾಸಿ ಭಾರತೀಯರು ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಾಗೂ ವಿದೇಶಗಳಿಂದ ಪಡೆಯುವ ಸಾಲದ ಹಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.ಇವುಗಳ ಜೊತೆಗೆ ದೇಶದಲ್ಲಿ ಪ್ರಾರಂಭವಾಗುವ ಯೋಜನೆಗಳು ತ್ವರಿತಗತಿಯಲ್ಲಿ ಪೂರ್ಣಗೊಂಡು, ಅದರಿಂದ ಫಲ ಸಿಗುವುದು ಅತಿ ಮುಖ್ಯ. ಆದರೆ ದೇಶದಲ್ಲಿ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳಲು ಅನುಕೂಲಕರವಾದ  ನೀತಿಗಳು ಇಲ್ಲ. ಈ ಹಿನ್ನೆಲೆಯಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆಗಳನ್ನು ಸುಲಭವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನೀತಿಗಳನ್ನು ರೂಪಿಸಬೇಕಿದೆ ಎಂದು ಸಲಹೆ ನೀಡಿದರು.ನೆರೆ ದೇಶಗಳಿಗೆ ಹೋಲಿಕೆ ಮಾಡಿದರೆ ದೇಶದ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ ದರ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿ ಬದ್ಧತೆಯಿಂದ ಕಾಯರ್ನಿವರ್ಹಿಸಿದರೆ ದೇಶದ ಆರ್ಥಿಕ ಬೆಳವಣಿಗೆ ಉತ್ತಮವಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry