ರಮಣದೀಪ್ ಚೌಧರಿ, ಖುಷ್ಬೂ ಅಧಿಕಾರ ಸ್ವೀಕಾರ

ಗುರುವಾರ , ಜೂಲೈ 18, 2019
24 °C

ರಮಣದೀಪ್ ಚೌಧರಿ, ಖುಷ್ಬೂ ಅಧಿಕಾರ ಸ್ವೀಕಾರ

Published:
Updated:

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರಮಣದೀಪ್ ಚೌಧರಿ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅವರ ಪತ್ನಿ ಖುಷ್ಬೂ ಸೋಮವಾರ ಅಧಿಕಾರ ಸ್ವೀಕರಿಸಿಕೊಂಡರು.ಇಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದು ಪಂಜಾಬ್ ಇವರ ಮೂಲ. ರಮಣದೀಪ್ ಬಿಹಾರದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಉಪ ಅಭಿವೃದ್ಧಿ ಆಯುಕ್ತರಾಗಿ, ಉಪ ವಿಭಾಗ ದಂಡಾಧಿಕಾರಿಯಾಗಿ, ಕೇಂದ್ರ ಸರ್ಕಾರದ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚುವರಿ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ನವದೆಹಲಿಯ ಐಐಟಿಯಿಂದ ಮೆಕ್ಯಾನಿಕಲ್ ವಿಷಯದಲ್ಲಿ ಬಿ.ಟೆಕ್ ಪದವಿ ಗಳಿಸಿರುವ ರಮಣ್‌ದೀಪ್ ಸಾರ್ವಜನಿಕ ಸೇವೆ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಮಾಡಿದ್ದಾರೆ. ಕೈಗಾರಿಕಾ ಎಂಜಿನಿಯರಿಂಗ್ ವಿಷಯದಲ್ಲಿ ಎಂ.ಇ ಪದವೀಧರರೂ ಆಗಿದ್ದಾರೆ.   ಬೀದರ್‌ನಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ಖುಷ್ಬೂ, ಬೆಂಗಳೂರಿನ ಕಾರ್ಯಸೌಧದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಪ್ರಭಾರ ಆಯುಕ್ತರಾಗಿದ್ದ ರಾಜೇಂದ್ರ ಚೋಳನ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ರಮಣ್‌ದೀಪ್, ಜನಸ್ನೇಹಿ ಆಯುಕ್ತರಾಗಿ ಕಾರ್ಯನಿರ್ವಹಿಸುವುದು ತಮ್ಮ ಉದ್ದೇಶ ಎಂದು ಹೇಳಿದರು. `ಸಾರ್ವಜನಿಕ ಸೇವೆಗಾಗಿಯೇ ಇರುವ ಅಧಿಕಾರಿ ನಾನು. ಹೀಗಾಗಿ ನಾಗರಿಕರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಅಗತ್ಯವಾಗಿ ನಡೆಯಬೇಕಾದ ಕೆಲಸಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಮನ್ನಿಸಲಾಗುವುದು' ಎಂದು ಅವರು ತಿಳಿಸಿದರು.`ಪಾಲಿಕೆಯಲ್ಲಿ ಕೊರತೆ ಇರುವ ನೌಕರರ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕಾರ್ಮಿಕರು, ನೌಕರರ ಕೊರತೆಯಿಂದ ಯಾವುದೇ ಕೆಲಸಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ಮಳೆಗಾಲ ಮುಗಿಯುವ ವರೆಗೆ ಆರೋಗ್ಯಕ್ಕೆ ಸಂಬಂಧಪಟ್ಟ ವಿಷಯಗಳ ಕಡೆಗೆ ಹೆಚ್ಚು ಗಮನ ನೀಡಲಾಗುವುದು.ಘನತ್ಯಾಜ್ಯ ನಿರ್ವಹಣೆಗಾಗಿ ಸೂಕ್ತ ತಂತ್ರಜ್ಞಾನವನ್ನು ಬಳಸಲಾಗುವುದು. ತ್ಯಾಜ್ಯ ಸಾಗಾಟಕ್ಕಾಗಿ ಅಗೆದಿರುವ ರಸ್ತೆಯನ್ನು ದುರಸ್ತಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುವುದು. ಪಾರ್ಕಿಂಗ್ ಜಾಗವನ್ನು ಅತಿಕ್ರಮಣ ಮಾಡಿದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು' ಎಂದು ರಮಣ ದೀಪ್ ಹೇಳಿದರು.`ನಷ್ಟ ಕಡಿತಕ್ಕೆ ಕ್ರಮ'

ಹುಬ್ಬಳ್ಳಿ:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಖುಷ್ಬೂ, ಅಧಿಕಾರಿಗಳ ಸಭೆ ನಡೆಸಿ   ಮಾತನಾಡಿ ಸಂಸ್ಥೆಯ ನಷ್ಟವನ್ನು ನೀಗಿಸಿ ಲಾಭದತ್ತ ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದರು.`ವಾಹನಗಳು ಹಾಳಾಗುವುದನ್ನು ತಡೆಯುವುದು, ನೌಕರರ ಗೈರು ಹಾಜರಿಯನ್ನು ಗುರುತಿಸಿ ಕ್ರಮ ಕೈಗೊಳ್ಳುವುದು, ಉತ್ತಮ ಆದಾಯ ಬರುವ ಕಡೆಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುವುದು, ಅಗತ್ಯವಿಲ್ಲದಲ್ಲಿ ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವುದು ಇತ್ಯಾದಿ ಕಾರ್ಯಗಳಿಂದ ನಷ್ಟದ ಪ್ರಮಾಣವನ್ನು ಇಳಿಸಬಹುದಾಗಿದೆ' ಎಂದರು.`ಖಾಸಗಿ ಬಸ್‌ಗಳ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ನಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗುವುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry