ಬುಧವಾರ, ಆಗಸ್ಟ್ 21, 2019
27 °C

ರಮ್ಜಾನ್ ಹಬ್ಬಕ್ಕೆ ಖರೀದಿ ಜೋರು

Published:
Updated:

ಬೆಳಗಾವಿ: ನಗರದ ಮಾರುಕಟ್ಟೆಗಳಿಗೆ ಈಗ ವಿಶೇಷ ಕಳೆ. ತಡರಾತ್ರಿವರೆಗೂ ವ್ಯಾಪಾರ-ವಹಿವಾಟು ನಡೆಸುವ ಮಾರುಕಟ್ಟೆಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಆದರೆ, ಮಳೆ ಸುರಿಯುತ್ತಿರುವುದರಿಂದ ವ್ಯಾಪಾರ ಕಡಿಮೆಯಾಗುತ್ತಿದೆ ಎಂಬ ಮಾತು ಸಹ ಮಾರುಕಟ್ಟೆಯಲ್ಲಿ ಕೇಳಿಬರುತ್ತಿದೆ.ಮುಸ್ಲಿಮ್‌ರ ಪವಿತ್ರ ಹಬ್ಬವಾದ ರಮ್ಜಾನ್ (ಈದ್-ಉಲ್-ಫಿತರ್) ತಿಂಗಳು ಬಂತೆಂದರೆ ಸಾಕು ಮುಸ್ಲಿಮರಷ್ಟೇ ಅಲ್ಲದೆ ಹಿಂದೂಗಳು ಸಂಭ್ರಮಪಡುತ್ತಾರೆ. ಖಡೇಬಜಾರ್, ದರ್ಬಾರ್ ಗಲ್ಲಿ, ಭೆಂಡಿ ಬಜಾರ್ ಇದಕ್ಕೆ ಸಾಕ್ಷಿ.ರಮ್ಜಾನ್ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಗೆ ಜನರು ಮುಗಿ ಬೀಳುತ್ತಿದ್ದಾರೆ. ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದಾರೆ. ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ.ತಮ್ಮ ಇಷ್ಟದ ಸಿಹಿ ತಿನಿಸುಗಳನ್ನು ಸವಿಯುತ್ತ, ಖರ್ಜುರ, ಉತ್ತತ್ತಿ, ಒಣ ದ್ರಾಕ್ಷಿ, ಗೋಡಂಬಿ, ಬದಾಮ್ ಸೇರಿದಂತೆ ಡ್ರೈ ಫ್ರುಟ್ಸ್‌ಗಳನ್ನು ಖರೀದಿಸುತ್ತಿದ್ದಾರೆ. ದುಬೈದಿಂದ ಬಂದಿರುವ ಖರ್ಜುರಕ್ಕೆ ಬಹಳ ಬೆಲೆ ಇದೆ. ಅತ್ಯಂತ ಸಿಹಿಯಾಗಿರುವ ಈ ಖರ್ಜುರವು ಸ್ಥಳೀಯ ಖರ್ಜುರಕ್ಕಿಂತ ಬೆಲೆಯಲ್ಲಿ ಎರಡು ಪಟ್ಟು ಹೆಚ್ಚಿದೆ.ಮಾರುಕಟ್ಟೆಗೆ ಈ ಬಾರಿ ವಿದೇಶದ ವಿವಿಧ ಅತ್ತರ್ (ಸುವಾಸನೆ ಎಣ್ಣೆ) ಉತ್ಪನ್ನಗಳು ಲಗ್ಗೆ ಇಟ್ಟಿವೆ. ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಅತ್ತರ್‌ಗಳಲ್ಲಿ ಜನ್ನತ್-ಉಲ್-ಫಿರ್ದೋಸ್‌ಗೆ ಅಗ್ರಸ್ಥಾನ. ಇದರ ಬೆಲೆ ದುಬಾರಿಯಾದರೂ ಗ್ರಾಹಕರು ಖರೀದಿಸುವಲ್ಲಿ ಹಿಂದೆ ಬಿದ್ದಿಲ್ಲ. ಇದರ ಜೊತಗೆ ಸುಗಂಧಭರಿತವಾದ ವಾಸನೆ ಸೂಸುವ ಮಜುಮಾ, ಮೋಗ್ರಾ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಕರಿಗೊಳ್ಳುತ್ತಿವೆ. 50 ರೂಪಾಯಿಗಳಿಂದ 2000 ರೂಪಾಯಿಗಳವರೆಗಿನ ಅತ್ತರ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯ. ಅತ್ತರ್ ಜೊತೆಗೆ ಟೋಪಿ, ಮೆಹಂದಿ, ಮೇಕಪ್ ಸೆಟ್‌ಗಳಿಗೂ ಎಲ್ಲಿಲ್ಲದ ಬೇಡಿಕೆ ಬಂದಿದೆ.`ಮುಂಬೈ ಹಾಗೂ ಹೈದರಾಬಾದ್‌ನ ಕುರ್ತಾ, ಪೈಜಾಮ್‌ಗಳು ಲಗ್ಗೆ ಇಟ್ಟಿವೆ. ಹೋದ ವರ್ಷದ ಶೇ. 50 ರಷ್ಟು ಈ ಬಾರಿ ವ್ಯಾಪಾರವಿಲ್ಲ. ಕಳೆದ ವರ್ಷ ರಮ್ಜಾನ್ ತಿಂಗಳ ಕೊನೆಯ 15 ದಿನದಲ್ಲಿ ನಿತ್ಯ ಸುಮಾರು 25,000 ರೂಪಾಯಿಯಿಂದ 30,000 ರೂಪಾಯಿ ವ್ಯಾಪಾರವಾಗುತ್ತಿತ್ತು. ಈಗ ಕೇವಲ 8,000 ರಿಂದ 10,000 ರೂಪಾಯಿ ವ್ಯಾಪಾರವಾಗುತ್ತಿದೆ. ವ್ಯಾಪಾರ ಕುಂದಲು ಸತತವಾಗಿ ಸುರಿಯುತ್ತಿರುವ ಮಳೆಯೂ ಕಾರಣ' ಎಂದು ವ್ಯಾಪಾರಸ್ಥ ಎಂ.ಎ. ಪಠಾಣ `ಪ್ರಜಾವಾಣಿ' ಗೆ ತಿಳಿಸಿದರು.`ಯುವತಿಯರು ಹಾಗೂ ಮಹಿಳೆಯರಿಗಾಗಿ ಅತ್ಯಾಕರ್ಷಕ ಸೀರೆಗಳು ಹಾಗೂ ಬಟ್ಟೆಗಳು ಮುಂಬೈ, ಸೂರತ್, ಮೈಸೂರು, ಹೈದರಾಬಾದ್‌ನಿಂದ ಬಂದಿವೆ. ಚೂಡಿದಾರ, ಅನಾರ್ಕಲಿ, ಕಾಟನ್ ಚೂಡಿದಾರ ಸೆಟ್, ಲೆಡೀಸ್ ಜೀನ್ಸ್, ಎಂಬ್ರಾಯಿಡರಿ ಟಾಪ್ಸ್, ಶರಾರಾಗಳು ಹೆಚ್ಚು ಮಾರಾಟವಾಗುತ್ತಿವೆ.  ಕಳೆದ ವರ್ಷಕ್ಕಿಂತ ಶೇ. 30 ರಷ್ಟು ವ್ಯಾಪಾರ ಕಡಿಮೆ. ಆದರೂ ದಿನದಿಂದ ದಿನಕ್ಕೆ ವ್ಯಾಪಾರ ವಹಿವಾಟುಗಳು ಚುರುಕುಗೊಳ್ಳುತ್ತಿವೆ' ಎನ್ನುತ್ತಾರೆ ಬಟ್ಟೆ ಅಂಗಡಿಯ ವ್ಯಾಪಾರಸ್ಥ ಮೊಹಮ್ಮದ್ ಇದ್ರಿಸ್.ಮಕ್ಕಳ, ಯುವಕ ಯುವತಿಯರ ಬಟ್ಟೆಗಳ ದರದಲ್ಲಿ ಕಳೆದ ವರ್ಷಕ್ಕಿಂತ ಶೇ. 25 ರಷ್ಟು ಹೆಚ್ಚಳವಾಗಿದೆ. ಈ ಹಿಂದೆ 500 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಮಕ್ಕಳ ಬಟ್ಟೆಗಳು 800 ರಿಂದ 1000 ರೂಪಾಯಿ ಬೆಲೆಗೆ ಮಾರಾಟವಾಗುತ್ತಿವೆ.`ರಮ್ಜಾನ್ ತಿಂಗಳ ಕೊನೆಯ ವಾರ ಬಟ್ಟೆ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಆಗ ಗ್ರಾಹಕರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದೆವು. ಆದರೆ, ಗ್ರಾಹಕರ ನಿರೀಕ್ಷೆಯಲ್ಲಿ ಈಗ ಕುಳಿತುಕೊಳ್ಳಬೇಕಾಗಿದೆ. ಸುಮಾರು ದಿನನಿತ್ಯ 50,000 ರೂಪಾಯಿವರೆಗೆ ಆಗುತ್ತಿದ್ದ ವ್ಯಾಪಾರ 20,000-25,000 ಬಂದಿಳಿದಿದೆ' ಎಂದು ವ್ಯಾಪಾರಸ್ಥ ಸಲೀಮ್ ಹುಣಸೀಕಟ್ಟಿ ಹೇಳುತ್ತಾರೆ.`ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರ ಕೈ ಸುಡುತ್ತಿದೆ. ಮಕ್ಕಳ ಬಟ್ಟೆಗಳ ದರವನ್ನಂತೂ ಕೇಳುವಂತಿಲ್ಲ. ಇದರಿಂದ ಯಾವುದೇ ಬಟ್ಟೆ ಖರೀದಿಸಲು ಯೋಚಿಸಬೇಕಾಗಿದೆ' ಎನ್ನುತ್ತಾರೆ ಬಟ್ಟೆ ಖರೀದಿಸಲು ಖಡೇಬಜಾರಿಗೆ ಬಂದಿದ್ದ ಹನುಮಾನ ನಗರದ ನದೀಮ್ ಕಟ್ಟಿ.

Post Comments (+)