ಶುಕ್ರವಾರ, ಏಪ್ರಿಲ್ 16, 2021
20 °C

ರಮ್ಯಾಗೆ ಪ್ರದರ್ಶಕರ ವಲಯ ಬೆಂಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಟಿ ರಮ್ಯಾಗೆ ಚಿತ್ರರಂಗದಿಂದ ಒಂದು ವರ್ಷ ನಿಷೇಧ ಹೇರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ವಿವಾದಕ್ಕೆ ಕಾರಣವಾಗಿರುವ ನಿರ್ಮಾಪಕ ಎ.ಗಣೇಶ್ ಅವರ ಚಿತ್ರಗಳಿಗೆ ನಿಷೇಧ ಹೇರಲು ಪ್ರದರ್ಶಕರು ನಿರ್ಧರಿಸಿದ್ದಾರೆ.ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿಯು ಬುಧವಾರ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸದಾ ವಿವಾದದಿಂದಲೇ ಕುಖ್ಯಾತಿಗೆ ಒಳಗಾಗಿರುವ ಎ.ಗಣೇಶ್ ಕೂಡಲೇ ನಟಿ ರಮ್ಯಾ ಕ್ಷಮೆ ಕೋರಿ, ಹಣಕಾಸಿನ ವ್ಯವಹಾರ ಬಗೆಹರಿಸಿಕೊಂಡು ವಿವಾದಕ್ಕೆ ಅಂತ್ಯ ಹಾಡಿದರೆ ಮಾತ್ರ ಅವರ ನಿರ್ಮಾಣದ ‘ದಂಡಂ ದಶಗುಣಂ’ ಚಿತ್ರವನ್ನು ಪ್ರದರ್ಶಿಸುವುದಾಗಿ ಮಹಾಮಂಡಳಿ ಅಧ್ಯಕ್ಷ ಆರ್.ಆರ್. ಓದುಗೌಡರ್ ತಿಳಿಸಿದ್ದಾರೆ.ಜನ ನಿರ್ಮಾಪಕನ ಹೆಸರು ನೋಡಿ ಸಿನಿಮಾ ನೋಡಲು ಬರುವುದಿಲ್ಲ. ಕಲಾವಿದರ ಖ್ಯಾತಿ, ನಟನೆ, ಅಭಿಮಾನದಿಂದ ಚಿತ್ರಮಂದಿರಗಳಿಗೆ ಬರುತ್ತಾರೆ. ಕಲಾವಿದರಿಂದಲೇ ನಿರ್ಮಾಪಕರು, ಪ್ರದರ್ಶಕರು, ವಿತರಕರು ಹೊಟ್ಟೆ ಹೊರೆಯುತ್ತಿದ್ದಾರೆ.ಆದರೆ, ಒಬ್ಬ ಕಲಾವಿದೆಗೆ ಅಗೌರವ ಸೂಚಿಸುವಂಥ  ಹೇಳಿಕೆ ನೀಡಿದ್ದಲ್ಲದೆ, ಹಾದಿ- ಬೀದಿ ರಂಪ ಮಾಡಿಕೊಂಡಿರುವ ಎ.ಗಣೇಶ್, ಮೊದಲು ಕಲೆಯ ಮಹತ್ವ ಅರಿಯಲಿ ಎಂಬ ಕಾರಣದಿಂದ ಅವರ ನಿರ್ಮಾಣದ ಚಿತ್ರಗಳಿಗೆ ನಿಷೇಧ ಹೇರಲು ಮಹಾಮಂಡಳಿ ತೀರ್ಮಾನಿಸಿದ್ದಾಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ನಿರ್ಮಾಪಕ ಕಲಾವಿದರನ್ನು ಆಯ್ಕೆ ಮಾಡಿ, ಅವರಿಂದ ಕೆಲಸ ಪಡೆದು ಸೂಕ್ತ ಸಂಭಾವನೆ ಸಂದಾಯ ಮಾಡುವುದು ವಾಡಿಕೆ. ಆದರೆ. ನಿರ್ಮಾಪಕ ಗಣೇಶ್ ಒಬ್ಬ ನಟಿಯಿಂದಲೇ ಹಣ ಪಡೆದು, ಅದನ್ನು ಮರಳಿಸದೆ ಸತಾಯಿಸಿದರೂ, ಚಲನಚಿತ್ರ ವಾಣಿಜ್ಯ ಮಂಡಳಿ ಅವಮಾನಕ್ಕೆ ಒಳಗಾದ ನಟಿಯನ್ನೇ ಚಿತ್ರರಂಗದಿಂದ ನಿಷೇಧಿಸುವ ನಿರ್ಧಾರ ಕೈಗೊಂಡಿರುವುದು ಹಾಸ್ಯಾಸ್ಪದ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.ಚಲನಚಿತ್ರ ವಾಣಿಜ್ಯ ಮಂಡಳಿಯು ಇಂಥ ಅಸಂಬದ್ಧ ನಿರ್ಧಾರಗಳನ್ನು ಏಕಪಕ್ಷೀಯವಾಗಿ ಕೈಗೊಳ್ಳುತ್ತ, ಕಲಾವಿದರಿಗೆ ಅಗೌರವ ಸೂಚಿಸುವುದು ಸರಿಯಲ್ಲ. ಎಲ್ಲರೂ ಒಂದೇ ಎಂಬ ಭಾವನೆ ಇರಬೇಕು ಎಂಬುದನ್ನು ಮರೆತಿರುವ ವಾಣಿಜ್ಯ ಮಂಡಳಿಯು ಇತ್ತೀಚಿನ ವರ್ಷಗಳಲ್ಲಿ ಕೆಲವೇ ಕೆಲವು ಪಟ್ಟಭದ್ರರ ಕೈಯಲ್ಲಿ ಸಿಲುಕಿದೆ. ಈ ಹಿನ್ನೆಲೆಯಲ್ಲಿ 500ಕ್ಕೂ ಅಧಿಕ ಚಿತ್ರಮಂದಿರಗಳ ಮಾಲೀಕರು ಮಂಡಳಿಯಿಂದ ಹೊರಬಂದು ಪ್ರದರ್ಶಕರ ಮಹಾಮಂಡಳಿ ಸ್ಥಾಪಿಸುವ ಅನಿವಾರ್ಯತೆ ಒಳಗಾಯಿತು ಎಂದಿದ್ದಾರೆ.ಚಿತ್ರೋದ್ಯಮ ಮೊದಲಿನಿಂದಲೂ ‘ಸ್ಟಾರ್ ವ್ಯಾಲ್ಯೂ’ ಇರುವ ನಟ- ನಟಿಯರನ್ನೇ ನೆಚ್ಚಿಕೊಂಡಿದೆ. ಕನ್ನಡದಲ್ಲಿ ಅಂಥ ಖ್ಯಾತಿ ಇರುವ ನಟಿ ಎಂದರೆ ರಮ್ಯಾ ಮಾತ್ರ. ಅವರನ್ನೇ ನಿಷೇಧಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇತ್ತೀಚಿನ ಚಿತ್ರಗಳಲ್ಲಿನ ಗುಣಮಟ್ಟದ ಕೊರತೆಯಿಂದಾಗಿ ಪ್ರೇಕ್ಷಕ ಚಿತ್ರಮಂದಿರಗಳತ್ತ ಬರುವುದನ್ನೇ ಕೈಬಿಟ್ಟಿದ್ದಾನೆ. ನಿರ್ಮಾಪಕರು ಇದನ್ನು ಅರಿತು ಗುಣಮಟ್ಟದ ಚಿತ್ರ ನಿರ್ಮಿಸುವತ್ತ ಆಲೋಚಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ.ನಿರ್ಮಾಪಕ ಗಣೇಶ್ ಆದಷ್ಟು ಬೇಗ ನಟಿ ರಮ್ಯಾ ಜತೆಗಿನ ಹಣಕಾಸು ವ್ಯವಹಾರ ಬಗೆಹರಿಸಿಕೊಂಡು, ವಿವಾದಕ್ಕೆ ಮಂಗಳ ಹಾಡಿದರೆ ಮಾತ್ರ ಅವರ ಚಿತ್ರ ಪ್ರದರ್ಶಿಸಲಾಗುವುದು. ಇಲ್ಲದಿದ್ದರೆ, ಅವರ ಚಿತ್ರಗಳನ್ನು ನಿಷೇಧಿಸುವುದು ಅನಿವಾರ್ಯವಾಗಲಿದೆ ಎಂದು ಮಹಾಮಂಡಳಿಯ ಉಪಾಧ್ಯಕ್ಷ ಬಾಳು ಜೋಶಿ, ಕಾರ್ಯಕಾರಿ ಸಮಿತಿ ಸದಸ್ಯ ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.