ಸೋಮವಾರ, ಜೂನ್ 21, 2021
30 °C

ರಮ್ಯಾ ರಾಜಕೀಯ ಯಾನ

ಸಂದರ್ಶನ: ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಸಿನಿ ಬದುಕಿನ ಇಳಿಸಂಜೆಯಲ್ಲಿರುವ ರಮ್ಯಾ ಈಗ ಸಂಪೂರ್ಣವಾಗಿ ಸಂಸದೆ ಪಟ್ಟಕ್ಕೆ ಮುಡುಪಾಗಿ ತೊಡಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.  ತಮ್ಮ ಕ್ಷೇತ್ರದ ಹಳ್ಳಿಗಳನ್ನು ಸುತ್ತಾಡಿರುವ ರಮ್ಯಾ ಸಕ್ರಿಯ ರಾಜಕಾರಣದ ಸೂಚನೆ ನೀಡಿದ್ದಾರೆ. ಸಂಸತ್‌ ಅಧಿವೇಶನದ ಕೊನೆಯ ದಿನ ಎಥೆನಾಲ್‌ ಕುರಿತು ನಿರರ್ಗಳವಾಗಿ ಮಾತನಾಡಿ ವಿರೋಧ ಪಕ್ಷದ ಸಂಸದರಿಂದಲೂ ಬೆನ್ನು ತಟ್ಟಿಸಿಕೊಂಡ ಈ ಅತಿ ಕಿರಿಯ ಸಂಸದೆ ಎರಡನೇ ಬಾರಿ ಸಂಸತ್‌ ಮೆಟ್ಟಿಲೇರುವ ಸಿದ್ಧತೆ ನಡೆಸಿದ್ದಾರೆ.ಮಹಿಳಾ ಸಬಲೀಕರಣ, ಶಿಕ್ಷಣದಲ್ಲಿ ಸಕಾರಾತ್ಮಕ ಬೆಳವಣಿಗೆಗಳನ್ನು ಗುರ್ತಿಸುತ್ತಿರುವ ಅವರು ರಾಜಕಾರಣದಲ್ಲಿನ ನೆಲೆ ಗಟ್ಟಿಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.ಸಂಸತ್ತಿನ ಮೊದಲ ಅನುಭವ ಹೇಗಿತ್ತು?

ಚುನಾವಣೆಗೆ ಕೆಲ ದಿನಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡೆ. ಅದರ ನಂತರದ ವಾರ ಸಂಸತ್ತಿನಲ್ಲಿ ಕುಳಿತಿದ್ದೆ. ಅಪ್ಪ ಲೋಕಸಭಾ ಚಾನೆಲ್‌ ಅನ್ನು ತುಂಬಾ ನೋಡುತ್ತಿದ್ದರು. ನಾನು ಶೂಟಿಂಗ್ ಮುಗಿಸಿ ಬಂದಾಗ ‘ಅದೇನು ನೋಡುತ್ತಿದ್ದೀರಿ? ಯಾರು ಏನು ಹೇಳುತ್ತಿದ್ದಾರೆ ಎನ್ನುವುದೇ ತಿಳಿಯುತ್ತಿಲ್ಲ’ ಎಂದು ಹೇಳುತ್ತಿದ್ದೆ. ಈಗ ನಾನು ಅದೇ ಸಂಸತ್ತಿನಲ್ಲಿ ಕುಳಿತಿದ್ದೇನೆ. ಏನಾಗುತ್ತಿದೆ ನನ್ನ ಜೀವನದಲ್ಲಿ? ದೇವರಿಗೆ ನನ್ನನ್ನು ಎಲ್ಲಿಗೆ ಕೊಂಡೊಯ್ಯಬೇಕೆಂದು ಅನಿಸಿದೆ? ವಿಸ್ಮಯ ಅನಿಸಿತ್ತು. ಸಂಸತ್‌ ಪ್ರವೇಶಿಸಿದ ಮೊದಲ ದಿನವೇ ಪ್ರತಿಯೊಬ್ಬರೂ ಪ್ರೀತಿ, ಆದರ ತೋರಿದರು. ನಾನು ಎಲ್ಲರಿಗಿಂತ ಅತಿ ಕಿರಿಯಳು. ಅವರೆಲ್ಲರಿಗೂ ಈ ಚುನಾವಣೆ ಮತ್ತು ನನ್ನ ಗೆಲುವಿನ ಬಗ್ಗೆ ತಿಳಿದಿತ್ತು. ನನ್ನದೊಂದು ಕೆಲಸ ಆಗಬೇಕು ಎಂದು ಕೋರಿದರೆ ತಕ್ಷಣವೇ ಅದನ್ನು ನೆರವೇರಿಸಲು ಮುಂದಾಗುತ್ತಿದ್ದರು. ಮಾರ್ಗದರ್ಶನ ಮಾಡುತ್ತಿದ್ದರು. ಕೊನೆಯ ದಿನ ನಾನು ಮಾತನಾಡಿದಾಗ ವಿರೋಧಪಕ್ಷದ ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಎಲ್ಲರೂ ಪಕ್ಷಭೇದ ಮರೆತು ಬಳಿ ಬಂದು ಅಭಿನಂದಿಸಿದರು. ‘ಬೆಸ್ಟ್ ಮೇಡನ್ ಸ್ಪೀಚ್’ ಎಂದು ಬೆನ್ನುತಟ್ಟಿದರು. ಅವರಿಗೆ ಗೊತ್ತಿಲ್ಲ, ನಾನು ಎರಡು ಸೆಷನ್‌ಗಳಿಂದ ಅದಕ್ಕಾಗಿ ತಯಾರಿ ನಡೆಸಿ ಕಾಯುತ್ತಿದ್ದೆ ಎಂದು (ನಗು). ತೆಲಂಗಾಣ ಗದ್ದಲದಿಂದ ಮಾತನಾಡಲು ಅವಕಾಶವೇ ಸಿಕ್ಕಿರಲಿಲ್ಲ. ಒಳ್ಳೆಯ ಅನುಭವ. ಕಲಿಯಲು ಇದಕ್ಕಿಂತ ಅದ್ಭುತ ಜಾಗ ಇನ್ನೇನಿದೆ?

ರಾಜಕೀಯದಲ್ಲಿ ಅನನುಭವಿ. ಮಹಿಳೆಯಾಗಿ ಸವಾಲುಗಳನ್ನು ಹೇಗೆ ಎದುರಿಸಿದಿರಿ?

ಅಪ್ಪ ತೀರಿಹೋದ ಮೇಲೆ ಸ್ವಲ್ಪ ಕಷ್ಟವಾಯ್ತು. ಅವರಿಗೆ ರಾಜಕೀಯದಲ್ಲಿ ದೊಡ್ಡ ಸಂಪರ್ಕವಿತ್ತು. ಆ ಧೈರ್ಯದಿಂದಲೇ ನಾನು ರಾಜಕೀಯಕ್ಕೆ ಕಾಲಿಟ್ಟಿದ್ದು.  ಆದರೆ ಅಪ್ಪನ ನನಂತರ ನನಗೆ ಉಳಿದ ಬಲವೆಂದರೆ ಜನ. ಅವರು ನನ್ನ ಕೈ ಹಿಡಿಯದೆ ಹೋಗಿದ್ದರೆ ನನ್ನ ಮಾನಸಿಕ ಸ್ಥಿರತೆಯನ್ನೇ ಕಳೆದುಕೊಳ್ಳುತ್ತಿದ್ದೆ.ಮುಖ್ಯವಾಗಿ ನನ್ನ ಕ್ಷೇತ್ರದ ಬಗ್ಗೆ ತಿಳಿದಿರಲಿಲ್ಲ. ಕಲಿಯಬೇಕು ಎನ್ನುವ ಪ್ಯಾಷನ್‌, ಮಾಡಬೇಕು ಎನ್ನುವ ಛಲ ಎರಡೂ ಇತ್ತು. ರಾಜಕೀಯದಲ್ಲಿ ಒಂದಷ್ಟು ಕಹಿ ಅನುಭವಗಳು ಆಗಲೇ ಆಗಿವೆ. ಯಾವುದೇ ಒಳ್ಳೆ ಕೆಲಸ ಮಾಡಲು ಹೋದರೂ ಅಡ್ಡಿಪಡಿಸುತ್ತಾರೆ. ನಾನು ಪ್ರಚಾರ ಬಯಸುವವಳಲ್ಲ. ರಮ್ಯಾ ಹೆಸರಿದ್ದರೆ ಜನರನ್ನು ಸೆಳೆಯಲು ಸಾಧ್ಯ ಎಂದು ನನ್ನ ಹೆಸರನ್ನು ತಮ್ಮ ಅನುಕೂಲಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ. ನನ್ನ ಹೆಸರು ಹೇಳಿಕೊಳ್ಳುವುದು, ನನ್ನ ಬಗ್ಗೆ ವಿವಾದ ಕೆದಕುವುದು, ಇದರಿಂದ ಪ್ರಚಾರ ಪಡೆದುಕೊಳ್ಳುವುದು ನಡೆಯುತ್ತಲೇ ಇದೆ. ಇಷ್ಟೆಲ್ಲಾ ಇದ್ದರೂ ನಿರ್ಲಕ್ಷಿಸಿ ತಂದೆಯ ಆಸೆಯಂತೆ ಜನರಿಗಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ.ಸಿನಿಮಾ ನಟಿ ಏನು ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದರು...?

ನಿಜ. ಆ ರೀತಿಯ ಮಾತುಗಳು ಕೇಳಿಬಂದಿದ್ದವು. ಆದರೆ ಮೊದಲಿನಿಂದಲೂ ಜನರೊಂದಿಗೆ ಬೆರೆಯುವ ವ್ಯಕ್ತಿತ್ವ ನನ್ನದು. ಚಿತ್ರೀಕರಣದಲ್ಲಿದ್ದಾಗ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳಲು ಬರುವ ಅಭಿಮಾನಿಗಳಿಗೆ ಯಾವತ್ತೂ ಇಲ್ಲವೆಂದಿಲ್ಲ. ನಾನು ಓದಿದ್ದು ಬೋರ್ಡಿಂಗ್ ಶಾಲೆಯಲ್ಲಿ. ಎಲ್ಲರೊಂದಿಗೆ ಬೆರೆಯುವ ಸ್ನೇಹ ಭಾವ ಬೆಳೆದಿತ್ತು. ನನ್ನ ಜವಾಬ್ದಾರಿ ನಿರ್ವಹಣೆ, ಕರ್ತವ್ಯ ಬದ್ಧತೆ ಬೆಳೆದು ಬಂದಿದ್ದು ಅಲ್ಲಿಯೇ.ರಾಜಕೀಯದ ಒಳ ಗುಟ್ಟುಗಳನ್ನು  ಅರಿತು ಕೊಳ್ಳುತ್ತಿದ್ದೇನೆ. ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸುತ್ತಿದ್ದೇನೆ. ಹೆಣ್ಣುಮಕ್ಕಳ ಪ್ರಗತಿ ಬಗ್ಗೆ ಹೊಟ್ಟೆಕಿಚ್ಚು, ಅಸಹನೆ ಇದ್ದೇ ಇರುತ್ತದೆ.  ಹೆಣ್ಣುಮಕ್ಕಳ ಕೈಗೆ ಅಧಿಕಾರ ಸಿಗುತ್ತಿದೆ ಎಂದಕೂಡಲೇ  ಪುರುಷರಲ್ಲಿ ಅಭದ್ರತೆ ಕಾಡತೊಡಗುತ್ತದೆ. ಇದು ರಾಜಕೀಯ ಮಾತ್ರವಲ್ಲ ಎಲ್ಲೆಡೆ ಇದೆ. ನಮ್ಮಂಥವರು ಹೀಗೆ ಮುಂದೆ ಬಂದು ವೇದಿಕೆ ಸೃಷ್ಟಿಸಿದರೆ, ನಮ್ಮ ಮುಂದಿನ ತಲೆಮಾರಿನ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ.ಆರು ತಿಂಗಳಲ್ಲಿ ಜನರ ಅಗತ್ಯಗಳೇನೆಂದು ಅರಿತುಕೊಂಡಿದ್ದೀರಿ?

ಜನರಿಗೆ ಬೇಕಿರುವುದು ಮೂಲ ಅಗತ್ಯಗಳು. ಬಸ್ ಸೌಲಭ್ಯ. ಕುಡಿಯುವ  ನೀರು, ವಿದ್ಯುತ್, ರಸ್ತೆ ಇತ್ಯಾದಿ...  ನಗರಗಳಲ್ಲಿ ಜನ ಮತ ಹಾಕುವುದಿಲ್ಲ.  ಹಳ್ಳಿಗಳಲ್ಲಿ ಹಾಕುತ್ತಾರೆ. ಆದರೆ ಅವರಿಗೇನೇ ಅಗತ್ಯ ಸೌಕರ್ಯಗಳಿಲ್ಲ.ನಾನೇ  ಹಳ್ಳಿಗಳಲ್ಲಿ ಓಡಾಡುತ್ತೇನೆ. ಜನರೊಂದಿಗೆ ಮುಖಾಮುಖಿಯಾಗಿ ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುತ್ತೇನೆ. ಅವರ ಕಷ್ಟಗಳು ಅರ್ಥವಾಗದೇ ಹೇಗೆ ತಾನೆ ಮಾತನಾಡಲು ಸಾಧ್ಯ?ಎಥೆನಾಲ್‌ ಬಳಕೆ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿ ದೇಶದ ಗಮನ ಸೆಳೆದಿರಿ...

ಇತ್ತೀಚೆಗೆ ಕಾಲೇಜೊಂದರ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದಾಗ ಕಾಲೇಜಿಗೆ ಹೋಗಲು ಅವರು ಮೂರು ಬಸ್ ಬದಲಿಸಬೇಕು ಎಂದು ತಿಳಿದು ಬಂತು. ಕೆಎಸ್‌ಆರ್‌ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿದಾಗ ನಾಲ್ಕೈದು ಜನರಿಗೆ ಬಸ್‌ ವ್ಯವಸ್ಥೆ ಮಾಡುವುದು ಆರ್ಥಿಕ ಹೊರೆ  ಎಂದರು. ಆಗ ಎಥೆನಾಲ್‌ ಬಳಕೆಯ ಅಗತ್ಯ ಅರಿವಾಯಿತು. ಬ್ರೆಜಿಲ್‌ನಲ್ಲಿ ೪೪% ಸಾರ್ವಜನಿಕ ವಾಹನಗಳು ಎಥೆನಾಲ್ ಬಳಸಿಯೇ ಓಡುತ್ತವೆ. ನಾವು ಕಬ್ಬು ಬೆಳೆಯುವುದರಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ ಬ್ರೆಜಿಲ್‌ನಲ್ಲಿ ಇರುವಂತೆ ಎಥೆನಾಲ್‌ ಬಳಕೆ ನಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ? ಈಗ ನಮ್ಮ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಕೆ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ. ಕ್ರಮೇಣ ಕಬ್ಬನ್ನು ಬಿಟ್ಟು ಬೇರೆ ಬೆಳೆಯತ್ತ ಮುಖಮಾಡುತ್ತಿದ್ದಾರೆ. ಕೃಷಿಗೆ ಬೆಂಬಲ ಇಲ್ಲದೆ ರೈತರ ಮಕ್ಕಳು ಬೇರೆ ಉದ್ಯೋಗಗಳತ್ತ ಹೋಗುತ್ತಿರುವ ಆತಂಕದ ಕುರಿತು ಪ್ರಸ್ತಾಪಿಸಬೇಕಿತ್ತು.ಹಳ್ಳಿಯ ಬದುಕಿನ ಪರಿಚಯ ಇತ್ತೇ?

ಎಲ್ಲಿ ಹಳ್ಳಿಯ ನಂಟು? ಚಿತ್ರೀಕರಣಕ್ಕೆ ಹೋದಾಗ ಜನ ಬಂದು ಮಾತನಾಡಿಸುತ್ತಿದ್ದರು ಅಷ್ಟೇ. ಆದರೆ ಮಂಡ್ಯಕ್ಕೆ ಹೋದಾಗ ನಿಮ್ಮ ತಾತ ನಮಗೆ ಬಹಳ ಪರಿಚಯ ಎಂದೆಲ್ಲಾ ಹೇಳುತ್ತಿದ್ದರು. ತಾತ ತೀರಿದ ಒಂದು ವರ್ಷದ ಬಳಿಕ ನಾನು ಹುಟ್ಟಿದ್ದು. ಚಿಕ್ಕವಳಿದ್ದಾಗ ಅಜ್ಜಿ ಗದ್ದೆಗೆ ಕರೆದುಕೊಂಡು ಹೋಗುತ್ತಿದ್ದರು. ಹೆಂಚಿನ ಮನೆ ನಮ್ಮದು. ಇಡೀ ಹಳ್ಳಿಯಲ್ಲಿ ನಮ್ಮ ಮನೆಯಲ್ಲಿ ಮಾತ್ರ ಟೀವಿ ಇದ್ದದ್ದು. ಅಜ್ಜಿ ಜೊತೆಗಿನ ಒಡನಾಟದ ಕೆಲವು ನೆನಪುಗಳಿವು. ಅದಾದ ಬಳಿಕ ಬೋರ್ಡಿಂಗ್ ಶಾಲೆಗೆ ಸೇರಿದೆ. ಮುಂದೆ ಅಜ್ಜಿ ತೀರಿಹೋದರು. ಆಮೇಲೆ ನಮ್ಮ ಕುಟುಂಬ ಪೂರ್ತಿ ಮಂಡ್ಯದಿಂದ ಬೆಂಗಳೂರಿಗೆ ಬಂದು ನೆಲೆಸಿತು. ಈಗ ಆ ನಂಟಿನ ಮರುಸಂಪರ್ಕ ಆಗಿದೆ. ಮಣ್ಣಿನ ಋಣ ಇದ್ದೇ ಇರುತ್ತದೆ ಅಲ್ಲವೇ?ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ಆಗಬೇಕಾದ ಕೆಲಸಗಳೇನು?

ನಮ್ಮಂಥವರು ಎಷ್ಟೇ ಕಷ್ಟ ಬಂದರೂ ಎದುರಿಸಿ ಮುಂದೆ ಸಾಗಬೇಕು. ನಮ್ಮನ್ನು ನೋಡಿ ಮತ್ತಷ್ಟು ಮಹಿಳೆಯರಿಗೆ ಪ್ರೇರಣೆ ಸಿಗಬೇಕು. ಸಿನಿಮಾದಲ್ಲಿಯೂ  ಕಷ್ಟಗಳನ್ನು ಅನುಭವಿಸಿದ್ದೇವೆ. ಈ ಮುಂಚೆ ನಟಿಯರಿಗೆ ಕ್ಯಾರವಾನ್ ಕೊಡುತ್ತಿರಲಿಲ್ಲ. ಯಾರದಾದರೂ ಮನೆಗೆ ಹೋಗಿ ಉಡುಗೆ ಬದಲಿಸಬೇಕಾಗುತ್ತಿತ್ತು. ಯಾವ ನಟಿಗೂ ಹೆಚ್ಚಿನ ಸಂಭಾವನೆ ಸಿಗುತ್ತಿರಲಿಲ್ಲ.  ಈಗ ನಾಯಕಿಯರು ಒಪ್ಪಂದಕ್ಕೆ ಸಹಿ ಮಾಡುತ್ತಾರೆ. ಅವರಿಗೆ ಸೂಕ್ತ ಗೌರವ ಸಿಗುತ್ತಿದೆ. ಇದೆಲ್ಲವೂ ಬದಲಾಗುತ್ತಿದೆ. ಬದಲಿಸುವುದರಲ್ಲಿ ನನ್ನ ಪಾಲೂ ಇದೆ. ಈಗ ಅದನ್ನು ನಾನು ಸಾಧನೆ ಎಂದು ಹೇಳಿಕೊಳ್ಳುವುದಿಲ್ಲ. ಸಮಾನತೆಗೆ ಜಾಗವಿರಲಿಲ್ಲ. ಅದನ್ನೆಲ್ಲಾ ಬದಲಿಸಿದ್ದೇನೆ ಎಂಬ ಹೆಮ್ಮೆಯಿದೆ.ಸಮಾನತೆ ಮಾತು ಬಂದಾಗ ನೆನಪಾಗುವುದು ಮಹಿಳಾ ಸಬಲೀಕರಣ ಎನ್ನುವ ವ್ಯಾಖ್ಯಾನ. ಈಗಿನ ಸನ್ನಿವೇಶದಲ್ಲಿ ಅದು ಸಾಧ್ಯವಾಗುತ್ತಿದೆಯೇ?

ಖಂಡಿತಾ. ಹಂತ ಹಂತವಾಗಿ ಸುಧಾರಣೆಯಾಗುತ್ತಿದೆ. ಸಮಸ್ಯೆಗಳು ಇವೆಯಾದರೂ ಅವುಗಳನ್ನು ನಿಧಾನವಾಗಿ ತೊಲಗಿಸಬಹುದು ಎನ್ನುವ ವಿಶ್ವಾಸ ನನ್ನದು. ತುಂಬಾ ಬುದ್ದಿವಂತ ಯುವ ಮಹಿಳೆಯರಿದ್ದಾರೆ. ಆಡಳಿತದಲ್ಲಿಯೂ ಚುರುಕಾಗಿದ್ದಾರೆ. ಅವರಿಗೆಲ್ಲಾ ಅವಕಾಶ ಸಿಗಬೇಕು. ಅದು ನಿಧಾನವಾಗಿ ಆಗುತ್ತಿದೆ.ಹಳ್ಳಿಗಳಲ್ಲಿ ಪರಿಸ್ಥಿತಿ ಹಾಗೆಯೇ ಇದೆಯಲ್ಲ?

ಇಲ್ಲ. ಸ್ವಸಹಾಯ ಸಂಘಗಳೊಂದಿಗೆ ಸಂವಾದ ನಡೆಸಿದಾಗ ಕಾಲ  ಬದಲಾಗಿದೆ ಎಂದು ತಿಳಿಯಿತು. ಅವರು ನಾವು ಬಿಜಿನೆಸ್ ಮಾಡುತ್ತೇವೆ. ಸ್ವಸಹಾಯ ಸಂಘಗಳಿಂದ ಸಾಲ ನೀಡುತ್ತೇವೆ ಎಂದು ಹೇಳಿಕೊಳ್ಳುತ್ತಾರೆ.  ಮಹಿಳೆ ಬಯಸುವುದು ಗೌರವವನ್ನು.  ಇವತ್ತು ಮಹಿಳೆಯರು ಅಗರಬತ್ತಿ, ಬಟ್ಟೆ ನೇಯ್ಗೆ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಆರ್ಥಿಕ ಪ್ರಗತಿ ಕಾಣುತ್ತಿದ್ದಾರೆ. ಗದ್ದೆಗಳಲ್ಲಿ ಕೆಲಸ ಮಾಡುತ್ತಾರೆ, ರಾಜಕೀಯಕ್ಕೂ ಬರುತ್ತಿದ್ದಾರೆ. ನಾನು ಸಮಾನ ಸಮಾಜದಲ್ಲಿ ನಂಬಿಕೆ ಹೊಂದಿದ್ದೇನೆ. 10 ವರ್ಷದ ಹಿಂದಿನ ಮಹಿಳೆಯರ ಸ್ಥಿತಿಗತಿಗೂ ಈಗಿನ ಸ್ಥಿತಿಗೂ ಹೋಲಿಕೆ ಮಾಡಿದರೆ ನಿಮಗೇ ಉತ್ತರ ಸಿಗುತ್ತದೆ.ಆ ಸುಧಾರಣೆ ಪ್ರಕ್ರಿಯೆ ನಿಧಾನ ಎನಿಸುವುದಿಲ್ಲವೆ?

ಪ್ರಗತಿ ಎನ್ನುವುದು ಇದೆಯಲ್ಲ? ಆಗುತ್ತಿದೆ. ಅದಕ್ಕೇ ೩೩% ರಿಂದ ೫೦% ರಾಜಕೀಯ ಮೀಸಲಾತಿಯ ಬಗ್ಗೆ ಮಾತನಾಡುತ್ತಿರುವುದು.  ಮೀಸಲಾತಿ ಬಗ್ಗೆಯೂ ವಿರೋಧ ಇದ್ದೇ ಇರುತ್ತದೆ. ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಸುಧಾರಣೆ ತಂದರೆ ಈ ಪ್ರಕ್ರಿಯೆ ಚುರುಕು ಗೊಳ್ಳುತ್ತದೆ. ಬ್ರಿಟನ್ನಿನಿಂದ ಮಂಡ್ಯಕ್ಕೆ ಬಂದಿದ್ದ ಆಯೋಗವೊಂದು ಸ್ವಸಹಾಯ ಸಂಘಗಳನ್ನು ಇಷ್ಟಪಟ್ಟು ಆ ಮಾದರಿಯನ್ನು ಬ್ರಿಟನ್ನಿನಲ್ಲಿಯೂ ಪ್ರಾರಂಭಿಸಬೇಕು ಎಂಬ ಆಶಯ ವ್ಯಕ್ತಪಡಿಸಿತ್ತು.  ಮಹಿಳೆಯರ ಕುರಿತ ಪುರುಷರ ಮನೋಭಾವ ಬದಲಾಗಬೇಕು. ಈ ಎಲ್ಲ ಬೇಕುಗಳಿಗೆ ಭರವಸೆಯ ಉತ್ತರವಾಗಿ ಯುವಜನಾಂಗ ಕಾಣಿಸುತ್ತಿದೆ.  ಈ ಚಿಕ್ಕ ಅವಧಿಯ ರಾಜಕೀಯ ಪಯಣ ತೃಪ್ತಿ ತಂದಿದೆಯೇ?

ಇನ್ನೊಂದು ಅವಕಾಶ ಸಿಕ್ಕರೆ ಒಳ್ಳೆಯ ಕೆಲಸಗಳನ್ನು ಮಾಡಬಹುದು ಎನಿಸುತ್ತಿದೆ. ಮಂಡ್ಯದ ಹಳ್ಳಿಗಳಲ್ಲಿ ಓಡಾಡಿದಷ್ಟೂ ಅಲ್ಲಿನ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸುಧಾರಣೆಯ ಅಗತ್ಯಗಳು ಕಣ್ಣಿಗೆ ರಾಚುತ್ತವೆ. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಮೂಲಮಟ್ಟದ ಕಾರ್ಯಯೋಜನೆಗಳನ್ನು ತರಬೇಕಿದೆ.ಸಿನಿಮಾ ಮತ್ತು ರಾಜಕೀಯ ಎರಡನ್ನೂ ಒಟ್ಟಿಗೆ ತೂಗಿಸಿಕೊಂಡು ಹೋಗುವ ಇರಾದೆ ಇದೆಯೇ?

ಇಲ್ಲ. ಹನ್ನೆರಡು ವರ್ಷದ ಸಿನಿಮಾದ ನಂಟು ಈಗ ಸಾಕೆನಿಸುತ್ತಿದೆ. ಉತ್ತುಂಗದಲ್ಲಿ ಇರುವಾಗಲೇ ವಿದಾಯ ಹೇಳುವುದು ಸೂಕ್ತ. ಈಗ ‘ಆರ್ಯನ್‌’ ಮತ್ತು ‘ದಿಲ್‌ ಕಾ ರಾಜ’ ಚಿತ್ರಗಳು ಮಾತ್ರ ಉಳಿದಿವೆ. ಇದರ ಬಳಿಕ ಸಿನಿಮಾದಲ್ಲಿ ಮುಂದುವರೆಯುವ ಬಯಕೆ ಇಲ್ಲ. ಮುಂದೆ ನಟಿಸಲೇಬೇಕು ಎನ್ನುವಂಥ ಅಪೂರ್ವ ಕಥೆಯಿರುವ ಸಿನಿಮಾ ಸಿಕ್ಕರೆ ನೋಡೋಣ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.