ಶನಿವಾರ, ಡಿಸೆಂಬರ್ 14, 2019
25 °C

ರವಿಶಂಕರ್, ಅನುಷ್ಕಾ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರವಿಶಂಕರ್, ಅನುಷ್ಕಾ ಸಂಗೀತ

ದಿನೇದಿನೇ ನಗರದಲ್ಲಿ ಅನೇಕ ಕಾರ್ಯಕ್ರಮ, ಉತ್ಸವಗಳು ನಡೆಯುತ್ತಲೇ ಇರುತ್ತವೆ. ಆದರೆ ಅದರಲ್ಲಿ ಕೆಲವು ಮಾತ್ರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತವೆ. ಅಂತಹ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ಸಜ್ಜಾಗಿದೆ ಪ್ರೇಮಾಂಜಲಿ ಫೌಂಡೇಶನ್.

ಪ್ರಸಿದ್ಧ ಸಿತಾರ್ ವಾದಕ ಭಾರತ ರತ್ನ ಪಂಡಿತ್ ರವಿಶಂಕರ್ ಮತ್ತು ಅವರ ಪುತ್ರಿ ಅನುಷ್ಕಾ ಶಂಕರ್ ಅವರ ಅದ್ಭುತ ಸಂಗೀತ ಕಛೇರಿಗೆ  ಸಜ್ಜಾಗುತ್ತಿದೆ ಬೆಂಗಳೂರು.

ಸಹಾಯಾರ್ಥ ಸಂಸ್ಥೆ ಪ್ರೇಮಾಂಜಲಿ ಫೌಂಡೇಶನ್ ತನ್ನ ಏಳನೇ ವರ್ಷದ  ಪ್ರೇಮಾಂಜಲಿ ಉತ್ಸವದ ಸಲುವಾಗಿ ಪಂಡಿತ್ ರವಿಶಂಕರ್ ಅವರ ಅಪರೂಪದ ಸಂಗೀತ ಕಛೇರಿಯನ್ನು ಹಮ್ಮಿಕೊಂಡಿದೆ.

ಭಾರತೀಯ ಸಂಗೀತವನ್ನು ವಿಶ್ವವೇದಿಕೆಗೆ ಕೊಂಡೊಯ್ದ ಖ್ಯಾತಿ ಹೊಂದಿರುವ ರವಿಶಂಕರ್ ಅವರ ಬೆಂಗಳೂರು ಭೇಟಿ ಬಹುಶಃ ಈ ಬಾರಿ ಕೊನೆಯದ್ದಾದ್ದರಿಂದ `ಫೇರ್ ವೆಲ್ ಟು ಬೆಂಗಳೂರು~ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪ್ರೇಮಾಂಜಲಿ ಫೌಂಡೇಶನ್ ಅಧ್ಯಕ್ಷ ಎ.ಬಾಲಕೃಷ್ಣ ಹೆಗ್ಡೆ ತಿಳಿಸಿದ್ದಾರೆ.

ಪುರವಂಕರ ಪ್ರಾಜೆಕ್ಟ್ಸ್ ಸಹಯೋಗದೊಂದಿಗೆ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮ ಫೆಬ್ರುವರಿ 7ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.

ಪಂಡಿತ್ ರವಿಶಂಕರ್ ಮತ್ತು ಅನುಷ್ಕಾ ಶಂಕರ್ ಇಬ್ಬರ ಈ ಸಂಗೀತದ ಸಂಗಮ ನಿಜಕ್ಕೂ ಅಪರೂಪದ ಕ್ಷಣ. ಈ ಸಂಗೀತ ಸಂಜೆ ಬೆಂಗಳೂರಿನ ಸಂಗೀತ ರಸಿಕರ ಪುಳಕಗೊಳಿಸುವುದರಲ್ಲಿ ಸಂಶಯವೇ ಇಲ್ಲ ಎಂದರು ಪುರವಂಕರ ಪ್ರಾಜೆಕ್ಟ್ಸ್‌ನ  ಕಾರ್ಯ ನಿರ್ವಾಹಕ ಅಧಿಕಾರಿ ಜ್ಯಾಕ್‌ಬಾಸ್ಟಿನ್ ಕೆ. ನಝರತ್.

ಸೂರಿಲ್ಲದ ಮಕ್ಕಳಿಗೆ, ಅನಾಥ ಮಕ್ಕಳಿಗೆ ಮತ್ತು ಅಂಧ ಮಕ್ಕಳಿಗೆ ಇದುವರೆಗೆ ನೆರವು ನೀಡುತ್ತಿರುವ ಪ್ರೇಮಾಂಜಲಿ ಸಂಸ್ಥೆ ಈ ಕಾರ್ಯಕ್ರಮದಿಂದ ಬರುವ ಹಣವನ್ನು ದುರ್ಬಲ ಮಕ್ಕಳ ನೆರವಿಗೆ ಬಳಸಲಿದೆ. 2002ರಿಂದಲೂ ಸಂಸ್ಥೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. 2004ರಲ್ಲಿ ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್ ಭೀಮ್‌ಸೇನ್ ಜೋಷಿಯವರ ಸಂಗೀತ ಕಛೇರಿ ಪ್ರಸಿದ್ಧಿಯಾಗಿತ್ತು.

ಈ ಸಂಗೀತ ಕಛೇರಿಗೆಂದು 3,200 ಜನರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮ ಟಿಕೆಟ್‌ಗಳು ಜಯನಗರದ ಕ್ಯಾಲಿಪ್ಸೊ, ಬ್ರಿಗೇಡ್ ರಸ್ತೆಯ ಸೂಪರ್ ಮಾರ್ಕೆಟ್, 100 ಫೀಟ್ ರೋಡ್‌ನ ರೇಮಂಡ್ ಶೋರೂಂ, ಇಂದಿರಾ ನಗರ, ಸ್ವಪ್ನಾ ಬುಕ್ ಹೌಸ್ ಮತ್ತು ಸದಾಶಿವನಗರದಲ್ಲಿ ಲಭ್ಯವಾಗಲಿದೆ. ಟಿಕೆಟ್ ದರ 5000, 2000, 1000, 500 ಮತ್ತು 250 ರೂ.

ಪ್ರತಿಕ್ರಿಯಿಸಿ (+)