ಸೋಮವಾರ, ಮೇ 17, 2021
22 °C

ರವಿ ಪೂಜಾರಿ ಸಹಚರ ನಿಖಿಲ್ ಭಾರತ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹಾಗೂ ಬನ್ನಂಜೆ ರಾಜಾನ ಸಹಚರ ನಿಖಿಲ್ ಪ್ರಕಾಶ್ ಶೆಟ್ಟಿ (41)ಯನ್ನು ಇಂಟರ್‌ಪೋಲ್ ಪೊಲೀಸರ ನೆರವಿನಿಂದ ಬಂಧಿಸಿ, ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಗುರುವಾರ ಆತನನ್ನು ವಶಕ್ಕೆ ಪಡೆದ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ವಿವಿಧ ಅಪರಾಧ ಪ್ರಕರಣಗಳ ವಿಚಾರಣೆಗಾಗಿ ಮಂಗಳೂರಿಗೆ ಕರೆ ತಂದಿದ್ದಾರೆ.ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್ ಅವರು ಈ ಬಗ್ಗೆ ಮಾಹಿತಿ ನೀಡಿದರು.`ಮೂಲತಃ ಮಂಗಳೂರು ತಾಲ್ಲೂಕಿನ ಎಕ್ಕಾರಿನವನಾದ ನಿಖಿಲ್ ಪ್ರಕಾಶ್ ಶೆಟ್ಟಿ ಹೆಸರನ್ನು ನಿಶಿತ್ ಪ್ರಕಾಶ್ ಅರಸ ಎಂದು ಬದಲಾಯಿಸಿ, ವಿಳಾಸದ ನಕಲಿ ದೃಢೀಕರಣ ಪತ್ರ ನೀಡಿ ಬೆಂಗಳೂರು ಕಚೇರಿಯಿಂದ ಪಾಸ್‌ಪೋರ್ಟ್ ಪಡೆದಿದ್ದ. 2007ರಿಂದ ದುಬೈನಲ್ಲಿ ತಲೆಮರೆಸಿಕೊಂಡು ಹಫ್ತಾ ವಸೂಲಿ, ಸುಪಾರಿ ಕೊಲೆಗಳನ್ನು ನಡೆಸಲು ರವಿ ಪೂಜಾರಿ ಹಾಗೂ ಬನ್ನಂಜೆ ರಾಜಾನಿಗೆ ನೆರವಾಗುತ್ತಿದ್ದ' ಎಂದು ಅವರು ತಿಳಿಸಿದರು.ನಿಖಿಲ್ ಶೆಟ್ಟಿಯು ಮಂಗಳೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ವಾಮಂಜೂರಿನಲ್ಲಿ ನಡೆದ ರೌಡಿ ರೋಹಿದಾಸ ಶೆಟ್ಟಿ ಕೊಲೆ ಪ್ರಕರಣ, ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಮಠದಲ್ಲಿ ಸೋಜಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಪಾಲುದಾರ ರಿಚರ್ಡ್ ಪಿಂಟೊ ಅವರಿಗೆ ಗುಂಡು ಹಾರಿಸಿದ ಪ್ರಕರಣ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಅಕ್ರಮ ಸಾಗಣೆ ಪ್ರಕರಣ ಹಾಗೂ ಬೆಂಗಳೂರಿನ ಬಾಣಸವಾಡಿಯಲ್ಲಿ ನಡೆದ ಚೆಮ್ಮನೂರ್ ಚಿನ್ನಾಭರಣ ಮಳಿಗೆ ದರೋಡೆ ಪ್ರಕರಣಗಳಲ್ಲಿ ಆರೋಪಿ.`ನಿಖಿಲ್ ಶೆಟ್ಟಿ ನಕಲಿ ವಿಳಾಸ ನೀಡಿ ಬೇರೆ ಹೆಸರಿನಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದನ್ನು ಪತ್ತೆ ಹಚ್ಚಿದ ಮಂಗಳೂರು ಸಿಸಿಬಿ ಪೊಲೀಸರು 2012ರ ಜುಲೈ 5ರಂದು ಆತನ ಬಂಧನಕ್ಕಾಗಿ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದ್ದರು.ಆತನನ್ನು ದುಬೈಗೆ ಕರೆದೊಯ್ಯಲು ನೆರವಾದ ವ್ಯಕ್ತಿಯ ವಿಳಾಸ ಕಲೆಹಾಕಿದ ಸಿಸಿಬಿ ಪೊಲೀಸರು, ಆತ ದುಬೈನಲ್ಲಿ ನೆಲೆಸಿದ್ದ ವಿಳಾಸವನ್ನೂ ಪತ್ತೆ ಮಾಡಿ ಇಂಟರ್‌ಪೋಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಫೆ. 28ರಂದು ದುಬೈನಲ್ಲಿ ನಿಖಿಲ್ ಶೆಟ್ಟಿಯನ್ನು ಬಂಧಿಸಿದ ಇಂಟರ್‌ಪೋಲ್ ಪೊಲೀಸರು ಆತನ ಗಡಿಪಾರು ಕುರಿತ ಕಡತವನ್ನು ಕಳುಹಿಸಿಕೊಡುವಂತೆ ಕೋರಿದ್ದರು. ವಾಮಂಜೂರು ರೋಹಿದಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಆಧರಿಸಿ ಮಂಗಳೂರು ಸಿಸಿಬಿ ಪೊಲೀಸರು ಗಡಿಪಾರು ಕಡತ ಸಿದ್ಧಪಡಿಸಿ ಕಳುಹಿಸಿದ್ದರು.  ಈ ಆಧಾರದಲ್ಲಿ ಗುರುವಾರ ಆತನನ್ನು ದುಬೈನಿಂದ ದೆಹಲಿಯ ಇಂದಿರಾಗಾಂಧಿ ವಿಮಾನನಿಲ್ದಾಣಕ್ಕೆ ಗಡಿಪಾರು ಮಾಡಲಾಯಿತು.ಮಂಗಳೂರು ಸಿಸಿಬಿ ಪೊಲೀಸರ ತಂಡ ದೆಹಲಿ ವಿಮಾನನಿಲ್ದಾಣದಲ್ಲಿ ಗುರುವಾರ ರಾತ್ರಿ ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದೆ' ಎಂದು ಅವರು ತಿಳಿಸಿದರು.`ಆರೋಪಿ ನಿಖಿಲ್ ಶೆಟ್ಟಿ ಮೇಲೆ ಕೊಲೆ, ಸುಲಿಗೆ, ದರೋಡೆ, ಶಸ್ತ್ರಾಸ್ತ್ರಗಳ ಅಕ್ರಮ ಸಾಗಣೆ, ಅಪರಾಧಕ್ಕೆ ಒಳಸಂಚು ಹಾಗೂ ಹಫ್ತಾಕ್ಕಾಗಿ ಬೆದರಿಕೆ ಒಡ್ಡಿದ ಆರೋಪಗಳಿವೆ. ಆತನನ್ನು ಇನ್ನೂ ವಿಚಾರಣೆಗೆ ಒಳಪಡಿಸಿಲ್ಲ. ಆತನಿಂದ ಭೂಗತ ಲೋಕದ ಚಟುವಟಿಕೆ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಇದೆ' ಎಂದು ಆಯುಕ್ತರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಉಪಾಯುಕ್ತರಾದ ಮುತ್ತೂರಾಯ, ಧರ್ಮಯ್ಯ ಹಾಗೂ ಸಿಸಿಬಿ ಇನ್‌ಸ್ಪೆಕ್ಟರ್ ವೆಂಕಟೇಶ ಪ್ರಸನ್ನ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.