ಸೋಮವಾರ, ಜೂನ್ 21, 2021
21 °C

ರವಿ ಮಂತ್ರ

ಎಚ್.ಎಸ್.ರೋಹಿಣಿ Updated:

ಅಕ್ಷರ ಗಾತ್ರ : | |

`ದೇವ್ರಾಣೆ~ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಾಗಿರುವ ರವಿಶಂಕರ್ ತಮ್ಮ ವೃತ್ತಿ ಬದುಕಿನ ಏಳು-ಬೀಳುಗಳನ್ನು ನಗುನಗುತ್ತಲೇ ಹಂಚಿಕೊಳ್ಳುತ್ತಾರೆ. ಮಂಡ್ಯದವರಾದ ರವಿಶಂಕರ್ ಗಾಯಕನಾಗಬೇಕೆಂಬ ಕನಸು ಹೊತ್ತು ಗಾಂಧಿನಗರಕ್ಕೆ ಬಂದವರು. ಆದರೆ ನಟನಾಗಿ ಯಶಸ್ಸಾದವರು. `ಸಿಲ್ಲಿ ಲಲ್ಲಿ~ ಧಾರಾವಾಹಿಯ `ಸರ್ಜರಿ ಭರ್ಜರಿ~ ವೈದ್ಯನ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಅದರ ಯಶಸ್ಸಿನ ಬೆನ್ನೇರಿ ಅವರು `ಪಯಣ~ ಚಿತ್ರದ ನಾಯಕನಾಗಿ ಆಯ್ಕೆಯಾದರು.

ಇನ್ನೇನು ತಮ್ಮ ವೃತ್ತಿಬದುಕಿಗೆ ಬಡ್ತಿ ಸಿಕ್ಕೇ ಬಿಡ್ತು ಎಂಬ ಸಂತಸದಲ್ಲಿದ್ದ ರವಿಶಂಕರ್‌ಗೆ `ಪಯಣ~ದ ನಂತರ ಹೇಳಿಕೊಳ್ಳುವಂಥ ಅವಕಾಶಗಳು ಒದಗಿ ಬರಲಿಲ್ಲ. ಅದರಿಂದ ಅವರು ಪೋಷಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದರು. ಇದೀಗ `ನಾನೊಬ್ಬ ನಟ. ನಾಯಕನಟನೇ ಆಗಬೇಕೆಂಬ ಹಟವೇನೂ ನನಗಿಲ್ಲ. ಆದರೆ ಯಶಸ್ಸಿಗಾಗಿ ಕಾಯುತ್ತಿರುವುದಂತೂ ದಿಟ~ ಎನ್ನುತ್ತಾರೆ.

`ನನಗೆ ಒಪ್ಪುವಂಥ ನಾಯಕನ ಪಾತ್ರಕ್ಕೆ ಕರೆ ಬಂದರೆ ಖಂಡಿತಾ ನಟಿಸುವೆ. `ನಂಜನಗೂಡು ನಂಜುಂಡ~, `ಭಗವಂತ ಕೈಕೊಟ್ಟ~ ಚಿತ್ರಗಳಲ್ಲಿ ಅಂಥ ಅವಕಾಶಗಳು ಸಿಕ್ಕವು. ಇದೀಗ ಬಹುತಾರಾಗಣದ `ಸ್ನೇಹಿತರು~, `ಹಕ್ಕಾಬುಕ್ಕಾ~, `ದೇವ್ರಾಣೆ~, `ಬಳೇ ಪೇಟೆ ಬ್ರದರ್ಸ್‌, ಸುಂಕದಕಟ್ಟೆ ಸಿಸ್ಟರ್ಸ್‌~ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳು ಸಿಕ್ಕಿವೆ. ನಟನೆ ಎಂಬುದು ನನಗೆ ಜೀವನದ ಪ್ರಶ್ನೆಯಾಗಿರುವುದರಿಂದ ನಟನಾಗಿ ತೃಪ್ತಿ ಕೊಡುವಂಥ ಪಾತ್ರಗಳನ್ನೂ ನಾನು ಒಪ್ಪಿಕೊಳ್ಳುವುದು ಇದೆ~ ಎನ್ನುತ್ತಾರೆ.

ಆ ನಿಟ್ಟಿನಲ್ಲಿ ಅವರು `ಜೋಗಯ್ಯ~ ಚಿತ್ರದ ಶಾಸ್ತ್ರಿ ಪಾತ್ರವನ್ನು ತುಂಬಾ ಇಷ್ಟಪಟ್ಟು, ಕಷ್ಟಪಟ್ಟು ಮಾಡಿದ್ದರಂತೆ. `ಮಂಡ್ಯದವನಾದ ನನಗೆ ಉತ್ತರ ಕರ್ನಾಟಕದ ಶೈಲಿಯ ಕನ್ನಡ ಕಷ್ಟವಾಗಿತ್ತು. ಅದನ್ನು ಕಲಿತು ನಟಿಸಿದೆ. ಅದಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಆದರೆ ಪ್ರಶಸ್ತಿ ನೀಡುವವರು ಯಥಾ ಪ್ರಕಾರ ರೀಮೇಕ್ ಚಿತ್ರಗಳಲ್ಲಿ ನಟಿಸಿದವರ ಕಡೆ ವಾಲಿಕೊಂಡರು~ ಎಂದು ನೊಂದುಕೊಳ್ಳುತ್ತಾರೆ.

`ಪ್ರತಿಭೆಗೆ ಪ್ರೋತ್ಸಾಹ ಇಲ್ಲವೇ ಇಲ್ಲ~ ಎಂದು ಬೇಸರಿಸಿಕೊಳ್ಳುವ ರವಿಶಂಕರ್ ಮರುಕ್ಷಣವೇ, `ಯೋಗಿ ಪಡೆದಿದ್ದು ಯೋಗಿಗೆ; ಜೋಗಿ ಪಡೆದಿದ್ದು ಜೋಗಿಗೆ~ ಎಂಬ ಮಂತ್ರ ಜಪಿಸುತ್ತಾರೆ.

`ಕಾವ್ಯಾಂಜಲಿ~ ಧಾರಾವಾಹಿಯ ಖಳನ ಪಾತ್ರ ಕೊಟ್ಟ ಖುಷಿಯನ್ನು ಮತ್ಯಾವ ಪಾತ್ರವೂ ತಮಗೆ ನೀಡಲಿಲ್ಲ ಎಂದು ಹಳೆಯ ನೆನಪನ್ನು ಮೆಲುಕು ಹಾಕುವ ರವಿಶಂಕರ್, ಇಂದೂ ನೆಗೆಟಿವ್ ರೋಲ್‌ಗಳಿಗೆ ಕರೆ ಬಂದರೆ ನಟಿಸಲು ಸಿದ್ಧವಂತೆ.

`ಸಿಲ್ಲಿ ಲಲ್ಲಿ~ ಪಾತ್ರದಂಥದೇ ಹುಡುಕಿ ಬಂದರೆ ಮಾತ್ರ ಖಂಡಿತಾ ನಟಿಸುವುದಿಲ್ಲ ಎಂದು ಖಡಕ್ಕಾಗಿ ಹೇಳುವ ಅವರಿಗೆ `ಆ ಪಾತ್ರ ನನಗೆ ಜನಪ್ರಿಯತೆ ತಂದುಕೊಟ್ಟಿದ್ದಂತೂ ನಿಜ. ಆದರೆ ನಾಲ್ಕೂವರೆ ವರ್ಷ ಒಂದೇ ಪಾತ್ರ ನಿರ್ವಹಿಸಿ ಬೇಜಾರು ಬಂದುಬಿಟ್ಟಿದೆ. ಅದರಿಂದ ಬದಲಾವಣೆ ಬಯಸುತ್ತಿರುವೆ. ಆ ಸಂದರ್ಭದಲ್ಲಿ ಬಂದಿದ್ದ `ಮಿ.ಗರಗಸ~ ಚಿತ್ರವನ್ನೂ ಕೂಡ ನಿರಾಕರಿಸಿದ್ದೆ~ ಎಂದು ನೆನಪಿಗೆ ಜಾರುತ್ತಾರೆ.

`ಯಾವುದೇ ಪಾತ್ರವಾಗಲಿ ಅದು ಶೇ 50ರಷ್ಟು ನಿರ್ದೇಶಕರ ಕಲ್ಪನೆ. ಇನ್ನು ಶೇ 50ರಷ್ಟು ಪಾತ್ರಧಾರಿಯ ನಿರ್ವಹಣಾ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ~ ಎಂಬುದು ರವಿಶಂಕರ್ ಅಭಿಪ್ರಾಯ.

ಬಿಡುವಿದ್ದಾಗ ರಿಯಾಲಿಟಿ ಶೋಗಳನ್ನು ಕೂಡ ನಡೆಸಿಕೊಡುವ ಅವರು ತಮ್ಮ ಗಾಯನ ಸಾಮರ್ಥ್ಯವನ್ನು ಗುರುತಿಸಿ ಹಾಡಲು ಅವಕಾಶ ನೀಡಿದ `ಭಾಗೀರತಿ~ ಚಿತ್ರ ತಂಡವನ್ನು ನೆನೆಯುತ್ತಾರೆ. ಯಾವುದೇ ಪಾತ್ರವಾದರೂ ಸರಿ ನಟನಾಗಿಯೇ ಮುಂದುವರಿದು ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕೆಂಬ ಕನಸು ಅವರದು. `ಸಿಕ್ಕ ಪಾತ್ರಗಳನ್ನು ಎಂಜಾಯ್ ಮಾಡುವುದಷ್ಟೇ ನಾನು ಮಾಡುವ ಕೆಲಸ. ನನಗೂ ಎಂದಾದರೂ ಒಳ್ಳೆ ಕಾಲ ಬಂದೇ ಬರುತ್ತೆ~ ಎನ್ನುವ ರವಿಶಂಕರ್ ಒಂದು `ಭರ್ಜರಿ~ ಯಶಸ್ಸಿಗಾಗಿ ಕಾಯುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.