ರವೆ ಪಾಯಸ

7

ರವೆ ಪಾಯಸ

Published:
Updated:

ಸಿಟಿಶೈನ್ ಆಸ್ಪತ್ರೆಯ ಹಾಲ್. ಸಾಯಿಬಾಬಾನ ಫೋಟೋದ ಮುಂದೆ ಉರೀತಿರೋ ಊದಿನಕಡ್ಡಿಯ ಪರಿಮಳವೂ ರೂಢಿಯಾಗಬೇಕು ಹಾಗೆ ಆರು ತಿಂಗಳಿಗೊಮ್ಮೆ ಹಾಜರಿ ಹಾಕೋದೆ. ಪ್ರತಿಸಲವೂ ಎದೆ ಪುಕುಪುಕು ಅನ್ನೋದಾಗಲಿ, ದಕ್ಕು ಬಡಿದಂತೆ ಬರ-ಹೋಗುವವರನ್ನು ನೋಡುತ್ತಾ ಕೂಡ್ರುವುದಾಗಲಿ ತಪ್ಪಿರಲಿಲ್ಲ.

 

ಅಂಥದ್ದರಲ್ಲಿ ಸಣ್ಣಿರುವಾಗ ಕೂಡ ಕೂಡೇ ಹೊಡ್ಲಮುಂಡೆ, ಕುಂಟಾಬಿಲ್ಲೆ ಆಡಿದ್ದ ರತ್ನಿ ಸಿಗಬಹುದಂತ ನನಗೇನು ಕನಸು ಬೀಳಬಹುದೇ? ಇದಿರು ನಿಂತು `ಇದೆ, ಅಕ್ಕೋ~ ಅಂತ ಹಲ್ಲುಕಿರಿದವಳು ರತ್ನಿ ಅಂತ ಗೊತ್ತಾಗಲು ತುಸುಹೊತ್ತೇ ಬೇಕಾಯಿತು. ರತ್ನಿ ನನ್ನ ತಮ್ಮನ ಕ್ಲಾಸಿನವಳು. ನಮ್ಮ ಶಾಲೆ ಶಾಂತಕ್ಕೋರ ಮಗಳು.ಶಾಂತಕ್ಕೋರು ನಮಗೆ ದೂರವಲ್ಲವಾದ್ದರೂ ಶಾಲೆ ಕಲಿಸಿದ್ದರಿಂದ ಅವರು `ಅಕ್ಕೋರೆ~. ಆಟದ ಪಿರಿಯಡ್ಡಿನಲ್ಲಿ ಖೊ ಖೊ ಆಡಿಸುತ್ತ, ಕಿಸಿ ಕಿಸಿ ನಗುತ್ತ, ಚಂದ ಚಂದ ಸೀರಿ ಉಡುತ್ತಿದ್ದ ಶಾಂತಕ್ಕೋರ ಮಗಳಾಗೋ ಪುಣ್ಯ ರತ್ನಿಗೆ ಸಿಕ್ಕಿದ್ದಕ್ಕೆ ನಾವೆಲ್ಲ ಆಗ ಒಂಚೂರು ಹೊಟ್ಟೆ ಉರಕೊಂಡವರೇ.ಆದರೆ ರತ್ನಿ ಮಾತ್ರ ನೆತ್ತಿ ಇನ್ನೇನು ಸೀಳಿ ಎರಡಾಗ್ತದೋ ಅನ್ನೋ ಭಾವದಲ್ಲೇ ಇರ್ತಿದ್ದಳು. ಆಟಕ್ಕೂ ನಹಿ, ಅಭ್ಯಾಸಕ್ಕೂ ನಹಿ. ಕಡೆಗೆ ಶಾಲೆಯ ಅಂಗಳದಲ್ಲಿ ಸುರಿದ ಪಾರಿಜಾತವನ್ನ ಮೆಟ್ಟಲಿಗೆ ಅಲಂಕಾರವಾಗಿ ಜೋಡಿಸುವಾಗಲೂ ಉಮೇದಿ ಸತ್ತವಳಂತೆ ಇರ್ತಿದ್ದಳು. ಅಂಥ ರತ್ನಿ ಮೂರು ಆನೆಮರಿಗಳು ಒಟ್ಟಿಗೇ ಎದುರು ಆವರಿಸಿಕೊಂಡು ನಿಂತಂತೆ ನಿಂತರೆ ನಂಗೆ ಗೊತ್ತಾಗಬೇಕಾದರೂ ಹೇಗೆ ? ನಾನೇನು ನಾಜೂಕು ನಾರಿಯಾಗಿ ಉಳಿದಿರಲಿಲ್ಲವಾದರೂ ರತ್ನಿಯ ಸ್ಥಿತಿ ಮಾತ್ರ ಅಬಂಡ ಅನ್ನಿಸ್ತು.ಆ ಉದ್ದ ಹಾಲ್‌ನ ಕಪ್ಪು ಕುರ್ಚಿಗಳಲ್ಲಿ ಉಸ್ಸಂತ ಮೈ ಒಗೆದು ಕುಂತೆವು. ರಕ್ತ ತಪಾಸಿಗೆ ಕೊಟ್ಟಾಗಿತ್ತು. ರಿಪೋರ್ಟು ಬರುವವರೆಗೂ ಕಾಯುವುದೇ. ಜೋರು ಗಿರಗಿಟ್ಲೆ ಸುತ್ತತಾ ಮುಖ ನೋಡಿ ನಗುವವರ ಹಾಗಾಗಿತ್ತು ನಮ್ಮ ಸ್ಥಿತಿ.ಇನ್ನೂ ನಲವತ್ತು ಮುಟ್ಟದ ರತ್ನಿ ಹೈ ಬಿ.ಪಿ., ಹೈ ಶುಗರ್ ಕಂಪ್ಲೇಟ್ಸ್‌ನಲ್ಲಿದ್ದಳು. `ಸಿಹಿ ಬಿಡೂದೆ, ಬ್ಯಾರೆ ದಾರಿಯಿಲ್ಲ~ ಅಂದಿದ್ದಕ್ಕೆ ತಲೆ ಒಗದುಬಿಟ್ಟಳು. ಏನೋ ಗುಟ್ಟು ಹೇಳುವವರ ಹಾಗೆ ಗಂಟಲ ಸೆರೆ ಉಬ್ಬಿ ಎತ್ತಗೋ ನೋಡುತ್ತ ಅಂದಳು, `ಆಗೂದಲ್ವೆ, ಆಗೂದಲಾ~. ನನಗೂ ಮಜಾ ಅನ್ನಿಸ್ತು. ದೊಡ್ಡವಳೆಂಬ ಗತ್ತಿನಲ್ಲೇ `ಹ, ಹ, ನೀನೂ ಇಚಿತ್ರ ಮಾರಾಯ್ತಿ, ಆಗೂದಲಾ ಅಂದ್ರೇನೇ?~ ಅಂದೆ.ರತ್ನಿಯೇನು ನನ್ನ ಮಾತು ಕಿವಿಮೇಲೆ ಹಾಕ್ಕೊಳ್ಳಲಿಲ್ಲ. ನನಗಂದಳೋ, ತನಗೇ ಅಂದಳೋ ತಿಳಿಯದ ಹಾಗೆ ಯಾವುದೋ ನಾಚಿಕೆಯಲ್ಲಿ ಅಂದಳು- “ನಮ್ಮಮ್ಮ ಪ್ರಕಾಶಗೆ ದಿನಾ ಸಂಜೀಗೆ ರವಿಪಾಯ್ಸ ಮಾಡಿ ತಟ್ಟೀಲಿ ಹಾಕ್ಕಂಡ ಊಬಿ ಊಬಿ ಕುಡ್ಸುದ, ನಾ ಏನರೂ ಆ ಮಂಚದ ಬುಡ್ಕ ಹೋದ್ರೆ, ನೀ ಅತ್ತಗ ಹೋಗೆ, ಅಂವಾ ಸಣ್ಣಂವಾ, ಹೊಟ್ಟೀಗ ಹತ್ತಾ ಅಂತೆ ಕಸಕ್ ಅನ್ನೂಳ. ಬಾಯ್ಲೆಲ್ಲ ಚಪ್ಪನೀರ ಮಾರಾಯ್ತಿ, ಆ ಚಪ್ಪನೀರ ಆರ‌್ಸಕಣೂಕೆ ಕಂಡ ಕಂಡ ಸಿಮಿ ವಸ್ತು ತಿಂಬೂದೆ ಆಗೊಯ್ತೆ. ಏಗೂ ಬಿಡೂಕಾಗುದಲ್ವೇ.

 

ಏನ್ ಮಾಡೂಕಾಗೂದ ಅಲ್ಲಾ?”. `ರತ್ನಾ ಅಗಸಿಮನಿ~ ಎಂಬ ನರ್ಸ ಕೂಗಿಗೆ ನನ್ನ ಕೈ ಒತ್ತಿ ಗಡಿಬಿಡೀಲಿ ಅತ್ತಿತ್ತ ವಾಲುತ್ತ ಎದ್ದಳು. ಫ್ರಿಲ್ ಫ್ರಾಕಿನ ಪುಟ್ಟ ರತ್ನಿ ನನ್ನ ಕಣ್ಣಿಗೆ ಒತ್ತುತ್ತಿದ್ದಳು. ಆ ಸಾಲು ಪೂರಾ ರತ್ನಿಯೇ ಕಂಡ ಹಾಗೆ, ನನ್ನೂ ಒಳಗೊಂಡು.. ಒಂದು ಮುಟಿಗಿ ರವಾ, ಒಂದು ಮುಟಿಗೆ ಸಕ್ಕರೆ, ಒಂದೀಟು ಹಾಲು, ತುಪ್ಪದ ಪಾಯಸ ಕೊತ ಕೊತ ಕುದ್ದು ನಮ್ಮ ನಿನ್ನೆಗಳ ಮೇಲೆ ಚೆಲ್ಲಿ, ನೇವರಿಸಿದರೂ ಚರ್ಮ ಕಿತ್ತು ರಕ್ತ ಒಸರುವಂತಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry