ರಷ್ಯಾದಲ್ಲಿ ಉಲ್ಕಾ ಸ್ಫೋಟ

7
ಅಪರೂಪದ ವಿದ್ಯಮಾನ- ಸಾವಿರ ಮಂದಿಗೆ ಗಾಯ

ರಷ್ಯಾದಲ್ಲಿ ಉಲ್ಕಾ ಸ್ಫೋಟ

Published:
Updated:
ರಷ್ಯಾದಲ್ಲಿ ಉಲ್ಕಾ ಸ್ಫೋಟ

ಮಾಸ್ಕೊ (ಎಪಿ): ಮಧ್ಯ ರಷ್ಯಾದ ಮೂರು ಪ್ರದೇಶಗಳಲ್ಲಿ ಶುಕ್ರವಾರ ಅಂತರಿಕ್ಷದಿಂದ ಬೆಂಕಿಯ ಉಂಡೆಯಂತೆ ಬಂದು ಸಿಡಿದ ಉಲ್ಕಾಪಾತದಲ್ಲಿ 200ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 1000 ಮಂದಿ ಗಾಯಗೊಂಡಿದ್ದಾರೆ.ಈ ವಿಲಕ್ಷಣ ಘಟನೆಯಲ್ಲಿ ಅಂದಾಜು 10 ಟನ್‌ಗಳಷ್ಟು ಭಾರದ ಉಲ್ಕೆಯು ರಷ್ಯಾದ ಅರಲ್ ಪರ್ವತ ಪ್ರದೇಶದಲ್ಲಿ  ಉರಿದು ಸಿಡಿದು ಚೂರು ಚೂರಾಗಿ ಬಿದ್ದು ಜನರನ್ನು ಭಯಭೀತರನ್ನಾಗಿಸಿತು. ಉಲ್ಕೆ ಸಿಡಿದು ಸಂಭವಿಸಿದ ಆಘಾತ ಅಲೆಗಳಲ್ಲಿ ಕಟ್ಟಡಗಳ ಕಿಟಕಿಗಳೆಲ್ಲ ಒಡೆದು ಚೂರಾದವು.ತೀವ್ರವಾಗಿ ಗಾಯಗೊಂಡವರನ್ನು  ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಇದು ಅಂತರಿಕ್ಷದಲ್ಲಿನ ಅಪರೂಪದ ವಿದ್ಯಮಾನ ವಾಗಿದೆ. ಚೆಲ್ಯಾಬಿನ್ಸ್ಕ್ ಸುತ್ತಮುತ್ತ ಉಲ್ಕಾಪಾತದ ತೀವ್ರತೆ ಹೆಚ್ಚಾಗಿತ್ತು. ಈ ಪ್ರದೇಶದಲ್ಲಿ ಪರಿಹಾರ ಕಾರ್ಯಕ್ಕಾಗಿ ತುರ್ತು ಕಾರ್ಯಪಡೆಯ 20 ಸಾವಿರ ಸಿಬ್ಬಂದಿ  ನಿಯೋಜಿಸಲಾಗಿದೆ. ಇದರ ಫಾಸಲೆಯಲ್ಲಿ ಇರುವ ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ರಕ್ಷಣಾ ಸ್ಥಾವರಗಳಿಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.`ಚೆಲ್ಯಾಬಿನ್ಸ್ಕ್ ನಗರದ ನಾಗರಿಕರೆಲ್ಲ ಕಣ್ಣು ಕೋರೈಸುವ ಬೆಳಕಿನ ಚೆಂಡು ಭೂಮಿಯತ್ತ ವೇಗವಾಗಿ ಧಾವಿಸಿ ಬರುವುದನ್ನು ಕಂಡರು. ಏಕಾಏಕಿ ಅದರ ಪ್ರಖರತೆ ಹೆಚ್ಚಿತು. ಅಂಥ ಬೆಳಕನ್ನು ನಾವು ಹಿಂದೆಂದೂ ಕಂಡಿರಲಿಲ್ಲ' ಎಂದು ನಗರದ ಶಿಕ್ಷಕೆಯೊಬ್ಬರು ವಾರ್ತಾಸಂಸ್ಥೆಗೆ ತಿಳಿಸಿದ್ದಾರೆ.ನಗರದಲ್ಲಿ ಅನೇಕ ಕಟ್ಟಡಗಳ ಗಾಜುಗಳು ಚೂರು ಚೂರಾಗಿವೆ. ಕಾರ್ಖಾನೆಯೊಂದರ ತಾರಸಿ ಮತ್ತು ಗೋಡೆ ಕುಸಿದಿದೆ ಎಂದು ಒಳಾಡಳಿತ ಸಚಿವಾಲಯ ದೃಢಪಡಿಸಿದೆ.ದಕ್ಷಿಣ ಅರಲ್ ವಿಶ್ವವಿದ್ಯಾಲಯದ ಕಾಲೇಜಿನ ಛಾವಣಿ ಬಿರುಕು ಬಿಟ್ಟಿದ್ದು, ಎರಡು ದಿನ ತರಗತಿಗಳನ್ನು ರದ್ದುಗೊಳಿಸಲಾಗಿದೆ. `ತಾರಸಿಯ ಒಂದೆರಡು ಕಡೆ ಕುಸಿದಿದೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಿಟಕಿ ಚೌಕಟ್ಟು ಮತ್ತು ಗಾಜುಗಳು ಜಖಂಗೊಂಡಿವೆ' ಎಂದು ವಿವಿ ವಕ್ತಾರರು ತಿಳಿಸಿದ್ದಾರೆ.

ಯುಝ್ನೌರಲ್‌ಸ್ಕಯಾ ಜಿಲ್ಲೆಯಲ್ಲಿರುವ ವಿದ್ಯುತ್ ಕೇಂದ್ರಗಳ ಕಟ್ಟಡಗಳ ಕಿಟಕಿಗಳು ಬಿರುಕು ಬಿಟ್ಟಿವೆ. ಆದರೆ ವಿದ್ಯುತ್ ಉತ್ಪಾದನೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.ಸ್ಫೋಟ: `ಅರಲ್ ಪರ್ವತದ ಮೇಲ್ಭಾಗದ ಆಕಾಶದಲ್ಲಿ ಸಿಡಿಲಿನಂತಹ ಬೃಹತ್ ಸ್ಫೋಟವೊಂದು ಸಂಭವಿಸಿತು. ಅದನ್ನು ನೋಡಲು ಮನೆಯಿಂದ ಹೊರಗೆ ಬಂದೆವು' ಎಂದು ನಾಗರಿಕರೊಬ್ಬರು ಸುದ್ದಿ ಸಂಸ್ಥೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಖರ ಬೆಳಕು ಮತ್ತು ಭಾರಿ ಶಬ್ದ ಕೇಳುತ್ತಿದ್ದಂತೆ ಭೀತರಾದ ಸುತ್ತಲಿನ ಪ್ರದೇಶಗಳ ಜನ ತಮ್ಮ ಬಂಧುಬಾಂಧವರಿಗೆ ಕರೆಮಾಡಿ ಯೋಗಕ್ಷೇಮ ವಿಚಾರಿಸಿದರು.ಕ್ಷುದ್ರಗ್ರಹಕ್ಕೆ ಸಂಬಂಧವಿಲ್ಲ

ರಷ್ಯಾದಲ್ಲಿ ಸಂಭವಿಸಿರುವ ಉಲ್ಕಾಪಾತಕ್ಕೂ, ಶುಕ್ರವಾರ ರಾತ್ರಿ ಭೂಮಿ ಸಮೀಪ ಹಾದು ಹೋಗಲಿದ್ದ ಕ್ಷುದ್ರಗ್ರಹದ ಚಲನೆಗೂ ಯಾವುದೇ ಸಂಬಂಧವಿಲ್ಲ ಎಂದು ಯೂರೋಪ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ಶುಕ್ರವಾರ ಸಂಜೆ ಸ್ಪಷ್ಟಪಡಿಸಿತು.ಆಘಾತದ ಅಲೆಗಳು

ಸೂರ್ಯನ ಸುತ್ತ ಭೂಮಿ ತಿರುಗುವಂತೆ, ಭೂಮಿಯ ಸುತ್ತ ಕ್ಷುದ್ರ ಆಕಾಶ ಕಾಯಗಳು ತಿರುಗುತ್ತಿರುತ್ತವೆ. ಗಾತ್ರದಲ್ಲಿ ಚಿಕ್ಕದಾಗಿರುವ ಕ್ಷುದ್ರ ಕಾಯಗಳನ್ನು ಉಲ್ಕೆಗಳೆಂದು ಕರೆಯುತ್ತಾರೆ.ಆಕಾಶದಲ್ಲಿ ಉಲ್ಕಾಪಾತ ಸಂಭವಿಸಿದಾಗ ಉಂಡೆ ಗಾತ್ರದಲ್ಲಿದ್ದ ಉಲ್ಕೆಗಳು ಚೂರು ಚೂರಾಗಿ ಭೂಮಿಯತ್ತ ಬರುತ್ತವೆ. ಹೀಗೆ ಚಲಿಸುತ್ತಲೇ ಬಿಸಿ ಅಲೆಗಳನ್ನು ವಾತಾವರಣಕ್ಕೆ ಸೇರಿಸುತ್ತವೆ. ಇವುಗಳ ತೀವ್ರತೆ ಎಂಥ ಗಟ್ಟಿಯಾದ ಪದಾರ್ಥವನ್ನು ಚೂರು ಚೂರು ಮಾಡುತ್ತದೆ. ಇದನ್ನು `ಆಘಾತದ ಅಲೆಗಳು' ಎಂದು ಕರೆಯುತ್ತಾರೆ.ಒಂದೇ ಉಲ್ಕೆ

`ಇಷ್ಟೆಲ್ಲ ಅನಾಹುತಕ್ಕೆ ಕಾರಣವಾದದ್ದು ಒಂದೇ ದೊಡ್ಡ ಉಲ್ಕೆ. ಅದರ ಭಾರ 10 ಟನ್‌ಗಳಷ್ಟಿತ್ತು. ಭೂ ವಾತಾವರಣವನ್ನು ಗಂಟೆಗೆ 54 ಸಾವಿರ ಕಿ. ಮೀ ವೇಗದಲ್ಲಿ ಪ್ರವೇಶಿಸಿದ ಈ ಉಲ್ಕೆ ಭೂಮಿಯಿಂದ 30ರಿಂದ 50 ಕಿ.ಮೀ ಎತ್ತರದಲ್ಲಿ ಸಿಡಿದು ಚೂರುಚೂರಾಯಿತು. ಆಗ ವಾತಾವರಣದಲ್ಲಿ ಸೃಷ್ಟಿಯಾದ ಭಾರಿ  ಕಂಪನದ ಅಲೆಗಳು ಮತ್ತು ಉಲ್ಕೆಯ ತುಣುಕುಗಳಿಂದ ಕಟ್ಟಡಗಳ ಕಿಟಕಿ, ಬಾಗಿಲಿನ ಗಾಜುಗಳು ಒಡೆದು ಜನ ಗಾಯಗೊಂಡರು. ಬಹುತೇಕ ಉಲ್ಕೆಗಳು ಸುಟ್ಟು ಹೋಗುತ್ತವೆ.

- ಎಲಿನಾ ಸ್ಮಿರನಿಕ್ , ರಷ್ಯದ ತುರ್ತು ನಿರ್ವಹಣಾ   ಕಚೇರಿಯ ಮಾಧ್ಯಮ ವಿಭಾಗದ ಉಪ ಮುಖ್ಯಸ್ಥೆ

ಭೂಮಿಗೆ ಆಪತ್ತು

`ಉಲ್ಕಾಪಾತದಿಂದ ಯಾವುದೇ ಗಂಭೀರವಾದ ಪರಿಣಾಮಗಳಾಗಿಲ್ಲ. ಆದರೆ, ಈ ಘಟನೆ ಭವಿಷ್ಯದಲ್ಲಿ  ಭೂ ಗ್ರಹಕ್ಕೆ ಒದಗಬಹುದಾದ ಆಪತ್ತನ್ನು ಸೂಚಿಸುತ್ತದೆ. ಪ್ರಸ್ತುತ ಸಂಕಷ್ಟದಲ್ಲಿರುವುದು ದೇಶವೊಂದರ ಅರ್ಥ ವ್ಯವಸ್ಥೆಯಷ್ಟೇ ಅಲ್ಲ; ನಮ್ಮ ಭೂಮಿ ಕೂಡ'.

- ಡಿಮಿಟ್ರಿ ಮೆಡ್ವೆಡೆವ್, ರಷ್ಯಾ ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry