ಗುರುವಾರ , ಫೆಬ್ರವರಿ 25, 2021
18 °C
ಉಕ್ರೇನ್‌ ಆಕ್ರಮಣ: ‘ಜಿ–8’ ಶೃಂಗ ಸಭೆ ಬಹಿಷ್ಕಾರ ಎಚ್ಚರಿಕೆ

ರಷ್ಯಾ ವಿರುದ್ಧ ಒಂದಾದ ಪಶ್ಚಿಮ ದೇಶಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಷ್ಯಾ ವಿರುದ್ಧ ಒಂದಾದ ಪಶ್ಚಿಮ ದೇಶಗಳು

ವಾಷಿಂಗ್ಟನ್‌ (ಪಿಟಿಐ): ಉಕ್ರೇನ್‌ ವಿರುದ್ಧ ರಷ್ಯಾ ಕೈಗೊಂಡಿರುವ ಸೇನಾ ಕ್ರಮಕ್ಕೆ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.ಉಕ್ರೇನ್‌ ಸಾರ್ವಭೌಮತ್ವದ ಉಲ್ಲಂಘನೆಯ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಸೇನೆಯನ್ನು ಕ್ರಿಮಿಯಾದ ನೆಲೆಗೆ ವಾಪಸ್‌ ಕರೆಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.ಸೇನೆಯನ್ನು ವಾಪಸ್‌ ಕರೆಸಿಕೊಳ್ಳದೇ ಇದ್ದರೆ ರಷ್ಯಾದ ಸೋಚಿಯಲ್ಲಿ ನಡೆಯಲಿರುವ ‘ಜಿ--–8’ ಶೃಂಗಸಭೆಯನ್ನು ಬಹಿಷ್ಕರಿಸ­ಲಾ­ಗು­ವುದು ಎಂದು ಒಬಾಮ ಎಚ್ಚರಿಸಿದ್ದಾರೆ.‘ಉಕ್ರೇನ್‌ನಲ್ಲಿರುವ ರಷ್ಯಾ ಮೂಲದ ಜನರು ಮತ್ತು ಅಲ್ಪಸಂಖ್ಯಾತರನ್ನು ನಡೆಸಿ­ಕೊಳ್ಳುತ್ತಿರುವ ರೀತಿಯ ಬಗ್ಗೆ ರಷ್ಯಾ ಕಳವಳ ಹೊಂದಿದ್ದರೆ ಅದನ್ನು ಉಕ್ರೇನ್‌ ಸರ್ಕಾರದ ಜೊತೆ ಶಾಂತಿಯುತ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೇತೃತ್ವದಲ್ಲಿ ಅಂತರ­ರಾಷ್ಟ್ರೀಯ ವೀಕ್ಷಕರನ್ನೂ ಕಳುಹಿಸಬಹುದು’ ಎಂದು ಪುಟಿನ್‌ ಅವರಿಗೆ ಒಬಾಮ ಸಲಹೆ ಮಾಡಿ­ದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಇದು ಅಂತರರಾಷ್ಟ್ರೀಯ ಕಾನೂನು ಮತ್ತು ಉಕ್ರೇನ್‌ ಜೊತೆ ರಷ್ಯಾ 1997ರಲ್ಲಿ ಮಾಡಿ­ಕೊಂಡಿರುವ ಸೇನಾ ಒಪ್ಪಂದದ ಉಲ್ಲಂಘನೆ ಎಂದಿರುವ ಒಬಾಮ, ಮಧ್ಯಪ್ರವೇಶಕ್ಕೆ ಅಮೆರಿಕ ಸಿದ್ಧವಿದೆ ಎಂದೂ ಹೇಳಿದ್ದಾರೆ.ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ­ಯನ್ನು ರಷ್ಯಾ ಮುಂದುವರಿಸಿದರೆ ಆ ದೇಶವನ್ನು ರಾಜಕೀಯ ಮತ್ತು ಆರ್ಥಿಕ­ವಾಗಿ ದೂರ ಇರಿಸಲಾಗುವುದು ಎಂಬ ಎಚ್ಚರಿಕೆ­ಯನ್ನೂ ನೀಡಲಾಗಿದೆ. ‘ರಷ್ಯಾ ಮೂಲದ ಜನರ ಜೀವಕ್ಕೆ ಅಲ್ಲಿ ನಿಜವಾದ ಬೆದರಿಕೆ ಇದೆ. ಉಕ್ರೇನ್‌ನ ಹೊಸ ಸರ್ಕಾರ ಉಗ್ರ ರಾಷ್ಟ್ರೀಯ­ವಾದಿಗಳ ಅಪರಾಧ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ’ ಎಂದು ಒಬಾಮ ಅವರಿಗೆ ಪುಟಿನ್‌ ವಿವರಿಸಿದ್ದಾರೆ.ಮುಂದಿನ ದಿನಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಯೂರೋಪ್‌ನ ಭದ್ರತೆ ಮತ್ತು ಸಹಕಾರ ಸಂಘಟನೆಯಾದ ಉತ್ತರ ಅಟ್ಲಾಂಟಿಕ್‌ ಮಂಡಳಿಯ ಸದಸ್ಯ ರಾಷ್ಟ್ರಗಳ ಜೊತೆ ತುರ್ತಾಗಿ ಸಮಾಲೋಚನೆ ನಡೆಸಲಾಗುವುದು ಎಂದೂ ಅಮೆರಿಕ ಹೇಳಿದೆ.

ಕೆನಡ ಪ್ರಧಾನಿ ಸ್ಟೀಫನ್‌ ಹಾರ್ಪರ್‌, ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್‌ ಹಾಲನ್‌ ಮತ್ತು ಅಟ್ಲಾಂಟಿಕ್‌ ಪ್ರದೇಶದ ಇತರ ದೇಶಗಳ ಮುಖಂಡರ ಜೊತೆಯೂ ಒಬಾಮ ಮಾತುಕತೆ ನಡೆಸಿದ್ದಾರೆ.ಸಂಬಂಧದ ಮೇಲೆ ಪರಿಣಾಮ: ಉಕ್ರೇನ್‌ ಮೇಲೆ ನಡೆಸಿರುವ ‘ಆಕ್ರಮಣ’ ಅಮೆರಿಕ–ರಷ್ಯಾ ನಡುವಣ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಹೇಳಿದ್ದಾರೆ.ಮುಂದಿನ ಕ್ರಮಗಳ ಬಗ್ಗೆ ವಿವಿಧ ದೇಶಗಳ ವಿದೇಶಾಂಗ ಸಚಿವರ ಜೊತೆ ಸಮಾಲೋಚನೆ ನಡೆಸಿರುವುದಾಗಿಯೂ ಕೆರಿ ಹೇಳಿದ್ದಾರೆ.ಕೆನಡ ವಿರೋಧ: ಕೆನಡದ ಪ್ರಧಾನಿ ಸ್ಟೀಫನ್‌ ಹಾರ್ಪರ್‌ ಕೂಡ ರಷ್ಯಾ ಕ್ರಮವನ್ನು ಖಂಡಿ­ಸಿದ್ದು, ಜಿ8 ಶೃಂಗ ಸಭೆಯಲ್ಲಿ ಭಾಗವಹಿ­ಸು­ವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಮಾಸ್ಕೊ­ದಲ್ಲಿರುವ ರಾಯಭಾರಿಯನ್ನು ಕರೆಸಿಕೊಂಡು ಅವರು ಸಮಾಲೋಚನೆ ನಡೆಸಿದ್ದಾರೆ.ವಿಶ್ವಸಂಸ್ಥೆ ಕಳವಳ: ಪುಟಿನ್‌ ಅವರೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಮಾತುಕತೆ ನಡೆಸಿ, ಕ್ರಿಮಿಯಾ ಪರ್ಯಾಯ ದ್ವೀಪದ ಮೇಲೆ ನಡೆಸಿರುವ ಆಕ್ರಮಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ­ದ್ದಾರೆ. ಉಕ್ರೇನ್‌ ಸರ್ಕಾರದ ಜೊತೆ ಮಾತು­ಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ ನಡೆಸಲಾಗಿದ್ದು, ಶಾಂತಿ ಮತ್ತು ಸಂಯಮ­ದಿಂದ ಮಾತುಕತೆ ನಡೆಸಿ ವಿವಾದವನ್ನು ಪರಿಹರಿಸಿಕೊಳ್ಳಬೇಕು ಎಂದು ಅಭಿಪ್ರಾಯ­ಪಡಲಾಗಿದೆ.ಕ್ರಿಮಿಯಾದತ್ತ ರಷ್ಯಾ ಸೇನೆ

ಸಿಂಫರ್‌ಪೊಲ್‌ (ಎಪಿ):
ಕಪ್ಪು ಸಮುದ್ರ ಪ್ರದೇಶವನ್ನು ಶನಿವಾರ ನಿರಾಯಾಸವಾಗಿ ಕೈವಶ ಮಾಡಿಕೊಂಡ ನಂತರ ಭಾನುವಾರ ನೂರಾರು ಯೋಧರನ್ನು ಒಳಗೊಂಡ ರಷ್ಯಾ ಸೇನೆಯ ತುಕಡಿಗಳು ಉಕ್ರೇನ್‌ನ ಕ್ರಿಮಿಯಾ ಪ್ರಾಂತ್ಯದ ರಾಜಧಾನಿಯತ್ತ ಪ್ರಯಾಣ ಆರಂಭಿಸಿವೆ.

ಉಕ್ರೇನ್‌ ಸಂಸತ್‌ ಈ ಬಗ್ಗೆ ಚರ್ಚೆ ನಡೆಸಿದ್ದರೂ, ರಷ್ಯಾ ಆಕ್ರಮಣಕ್ಕೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಈ ದೇಶಕ್ಕೆ ಇಲ್ಲ. ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಅಮೆರಿಕ ಸೇರಿದಂತೆ ಪಶ್ಚಿಮದ ದೇಶಗಳು ಹೇರುತ್ತಿರುವ ಒತ್ತಡವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಗಣನೆಗೆ ತೆಗೆದುಕೊಂಡಿಲ್ಲ. ಕ್ರಿಮಿಯಾ ಮತ್ತು ಉಕ್ರೇನ್‌ನಲ್ಲಿ ಇರುವ ರಷ್ಯನ್‌ ಭಾಷಿಕ ಜನರು ಮತ್ತು ರಷ್ಯಾದ ಹಿತಾಸಕ್ತಿಯನ್ನು ರಕ್ಷಿಸುವ ಹಕ್ಕು ತನಗೆ ಇದೆ ಎಂದು ಪುಟಿನ್‌ ಹೇಳಿದ್ದಾರೆ.ಅಸಹಾಯಕ ಉಕ್ರೇನ್‌: ದೇಶ ಸಂಪೂರ್ಣ ಕುಸಿತದ ಅಂಚಿನಲ್ಲಿದೆ ಎಂದು ಹೇಳಿರುವ ಉಕ್ರೇನ್‌, ಮೀಸಲು ಪಡೆಗಳಿಗೆ ಸನ್ನದ್ಧ ಸ್ಥಿತಿಯಲ್ಲಿರಲು ತಿಳಿಸಿದೆ.ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆ, ಶೀತಲ ಸಮರದ ನಂತರದ ದಿನಗಳಲ್ಲಿ ಪಶ್ಚಿಮದ ದೇಶಗಳು ಮತ್ತು ರಷ್ಯಾ ನಡುವಣ ಅತಿ ದೊಡ್ಡ ಬಿಕ್ಕಟ್ಟಾಗಿ ಮಾರ್ಪಡುವ ಭೀತಿ ಉಂಟು ಮಾಡಿದೆ.ಯಾವುದೇ ರೀತಿಯ ಆಕ್ರಮಣ ಎರಡು ದೇಶಗಳ ನಡುವೆ ಇರುವ ಎಲ್ಲ ಸಂಬಂಧಗಳನ್ನು ಕೊನೆಗೊಳಿಸುತ್ತದೆ ಎಂದು ಉಕ್ರೇನ್‌ ಉಸ್ತುವಾರಿ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್‌ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದಾರೆ.ರಷ್ಯಾ ಸೈನಿಕರು 400ಕ್ಕೂ ಹೆಚ್ಚು ಉಕ್ರೇನ್‌ ನೌಕಾಪಡೆ ಯೋಧರನ್ನು ಅಡ್ಡಗಟ್ಟಿದ್ದು, ಶಸ್ತ್ರಗಳನ್ನು ಒಪ್ಪಿಸಿ ಶರಣಾಗುವಂತೆ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.