ಶುಕ್ರವಾರ, ಮೇ 20, 2022
26 °C

ರಸಋಷಿ ಕುವೆಂಪು ಶ್ರೇಷ್ಠ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಸಋಷಿ ಕುವೆಂಪು~, `ಮನಸಾರೆ~ ಹಾಗೂ `ಲವ್ ಗುರು~ ಸಿನಿಮಾಗಳಿಗೆ  ಕ್ರಮವಾಗಿ 2009-10ನೇ ಸಾಲಿನ ಮೊದಲ ಮೂರು ಶ್ರೇಷ್ಠ ಚಿತ್ರ ಪ್ರಶಸ್ತಿ ಲಭಿಸಿದೆ.ನಟ-ನಿರ್ಮಾಪಕ ದ್ವಾರಕೀಶ್ ನೇತೃತ್ವದ ಆಯ್ಕೆ ಸಮಿತಿಯು ಸಿದ್ಧಪಡಿಸಿದ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಬುಧವಾರ ಪ್ರಕಟಿಸಿದರು.ಜೀವಮಾನ ಸಾಧನೆಗಾಗಿ ನೀಡುವ ರಾಜ್‌ಕುಮಾರ್ ಪ್ರಶಸ್ತಿಯು ನಟ, ನಿರ್ಮಾಪಕ ಆರ್.ಎನ್. ಸುದರ್ಶನ್ ಅವರಿಗೆ ಸಂದಿದೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಚಿತ್ರ ಸಾಹಿತಿ, ನಿರ್ದೇಶಕ ಸಿ.ವಿ.ಶಿವಶಂಕರ್ ಅವರು ಆಯ್ಕೆಯಾಗಿದ್ದು, ವಿಷ್ಣುವರ್ಧನ್ ಪ್ರಶಸ್ತಿಗೆ ಎಸ್.ಡಿ.ಅಂಕಲಗಿ ಅವರನ್ನು ಆರಿಸಲಾಗಿದೆ. ಈ ಎಲ್ಲಾ ಪ್ರಶಸ್ತಿಗಳ ಮೊತ್ತ ತಲಾ ಎರಡು ಲಕ್ಷ ರೂಪಾಯಿ.`ರಸಋಷಿ ಕುವೆಂಪು~ ಚಿತ್ರದ ನಿರ್ಮಾಪಕರಾದ ಪದ್ಮಾ ಪ್ರಕಾಶ್-ಅರವಿಂದ ಪ್ರಕಾಶ್‌ಗೆ ಒಟ್ಟು 1ಲಕ್ಷ ರೂಪಾಯಿ ಬಹುಮಾನ ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುತ್ತದೆ. ಇಷ್ಟೇ ಮೊತ್ತದ ಬಹುಮಾನ ಹಾಗೂ ಪದಕ ನಿರ್ದೇಶಕ ಋತ್ವಿಕ್ ಸಿಂಹ ಅವರಿಗೂ ಸಲ್ಲಲಿದೆ.ಎರಡನೇ ಉತ್ತಮ ಚಿತ್ರ ಎನ್ನಿಸಿಕೊಂಡಿರುವ `ಮನಸಾರೆ~ಗೆ 75 ಸಾವಿರ ರೂಪಾಯಿ ಹಾಗೂ ಬೆಳ್ಳಿ ಫಲಕ ದೊರೆಯಲಿದ್ದು, ಮೂರನೇ ಉತ್ತಮ ಚಿತ್ರವಾದ `ಲವ್‌ಗುರು~ 50 ಸಾವಿರ ರೂ. ಬಹುಮಾನಕ್ಕೆ ಭಾಜನವಾಗಲಿದೆ. ವಿಶೇಷ ಸಾಮಾ ಜಿಕ ಪರಿಣಾಮ ಬೀರಿದ ಚಿತ್ರ ವಾಗಿ ಬರ ಗೂರು ರಾಮ ಚಂದ್ರಪ್ಪ ನಿರ್ದೇಶನದ `ಶಬರಿ~ಯನ್ನು ಆರಿಸಲಾಗಿದೆ.`ಆಪ್ತರಕ್ಷಕ~ ಚಿತ್ರದಲ್ಲಿ 3 ಪಾತ್ರಗಳನ್ನು ನಿರ್ವಹಿಸಿದ್ದ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಶ್ರೇಷ್ಠ ನಟ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. `ಪರೀಕ್ಷೆ~ ಚಿತ್ರದ ಅಭಿನಯಕ್ಕೆ ಅನುಪ್ರಭಾಕರ್ ಅವರಿಗೆ ಶ್ರೇಷ್ಠ ನಟಿಯ ಗರಿ. `ಬನ್ನಿ~ ಚಿತ್ರದಲ್ಲಿ ಭಾವಾಭಿನಯದ ಮೂಲಕ ಗಮನ ಸೆಳೆದ ನೀನಾಸಂ ಅಶ್ವತ್ಥ್ ಹಾಗೂ `ಋಣಾನುಬಂಧ~ ಚಿತ್ರದ ಅಭಿನಯಕ್ಕಾಗಿ ಚಂದ್ರಕಲಾ ಕ್ರಮವಾಗಿ ಶ್ರೇಷ್ಠ ಪೋಷಕ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಬಹುಮಾನಗಳ ನಗದು ಮೊತ್ತ ತಲಾ 20 ಸಾವಿರ ರೂಪಾಯಿ.ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರಿಗೆ `ಕಳ್ಳರ ಸಂತೆ~ ಚಿತ್ರದ ಕೆಲಸಕ್ಕಾಗಿ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿ ಸಂದಿದೆ. ಶ್ರೇಷ್ಠ ಸಂಗೀತ ನಿರ್ದೇಶಕ ಪ್ರಶಸ್ತಿಯು ಈ ಬಾರಿ ಹರಿಕೃಷ್ಣ ಅವರ ಪಾಲಾಗಿದೆ. `ರಾಜ್~ ಚಿತ್ರದ ಸಂಗೀತ ಅವರಿಗೆ ಪ್ರಶಸ್ತಿ ತಂದಿತ್ತಿದೆ. `ಎದ್ದೇಳು ಮಂಜುನಾಥಾ~ ಸಿನಿಮಾ ಚಿತ್ರಕಥೆಗಾಗಿ ಗುರುಪ್ರಸಾದ್, `ಬನ್ನಿ~ ಸಂಭಾಷಣೆಗಾಗಿ ಗೊಡಚಿ ಮಹಾರುದ್ರ ಹಾಗೂ `ಒಲವೇ ಜೀವನ ಲೆಕ್ಕಾಚಾರ~ ಚಿತ್ರದ ಕಥಾಬರಹಕ್ಕೆ ನಾಗತೀಹಳ್ಳಿ ಚಂದ್ರಶೇಖರ್ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.  ರಾಷ್ಟ್ರಪ್ರಶಸ್ತಿ ಪಡೆದಿರುವ, ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕನಸೆಂಬೋ ಕುದುರೆಯನೇರಿ~ ಚಿತ್ರಕ್ಕೆ ಯಾವ ಪ್ರಶಸ್ತಿಯೂ ದೊರೆಯದ ಬಗ್ಗೆ ಪತ್ರಕರ್ತರಿಂದ ಪ್ರಶ್ನೆ ಎದುರಾಯಿತು. `ನಮ್ಮ ಸಮಿತಿಯ ಸದಸ್ಯರು ಯಾವ ಚಿತ್ರಕ್ಕೆ ಹೆಚ್ಚು ಅಂಕಗಳನ್ನು ಕೊಟ್ಟರೋ ಆ ಚಿತ್ರಗಳಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಕನಸೆಂಬೋ ಕುದುರೆಯನೇರಿ ಚಿತ್ರಕ್ಕೆ ಹೆಚ್ಚು ಅಂಕಗಳು ಸಿಗಲಿಲ್ಲ. ನಾವು ಕಮರ್ಷಿಯಲ್, ಕಲಾತ್ಮಕ ಎಂಬ ಭೇದವಿಲ್ಲದೆ ಚಿತ್ರಗಳನ್ನು ನೋಡಿ ಪ್ರಶಸ್ತಿಗೆ ಆರಿಸಿದ್ದೇವೆ~ ಎಂದು ದ್ವಾರಕೀಶ್ ಪ್ರತಿಕ್ರಿಯಿಸಿದರು.ವಿಷ್ಣುವರ್ಧನ್ ತಮ್ಮ ಗೆಳೆಯ ಎನ್ನುವ ಕಾರಣಕ್ಕಾಗಿ ಪ್ರಶಸ್ತಿ ನೀಡಿಲ್ಲ. `ಆಪ್ತರಕ್ಷಕ~ ಚಿತ್ರದಲ್ಲಿನ ಮೂರು ಪಾತ್ರಗಳನ್ನು ಅವರು ಅದ್ಭುತವಾಗಿ ನಿಭಾಯಿಸಿದ್ದಾರೆ. ಉತ್ತಮ ನಟಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಅನು ಪ್ರಭಾಕರ್ ನಟನಾ ಕೌಶಲ್ಯವನ್ನು ಸಂಯಮದಿಂದ ಪ್ರದರ್ಶಿಸಿದ್ದಾರೆ ಎಂದರು.ವಾರ್ತಾ ಇಲಾಖೆ ನಿರ್ದೇಶಕ ಮುದ್ದು ಮೋಹನ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ನಟ ಲೋಕನಾಥ್, ನಿರ್ದೇಶಕ ಎಂ.ಎಸ್.ರಾಜಶೇಖರ್, ಚಿತ್ರಸಾಹಿತಿ ಹಾಗೂ  ಕವಿ ಎಂ.ಎನ್.ವ್ಯಾಸರಾವ್, ಸಂಗೀತ ನಿರ್ದೇಶಕ ರಾಜನ್ ಹಾಗೂ ಪತ್ರಕರ್ತ ರಘುನಾಥ ಚ.ಹ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ ಹಾಗೂ ಯಾವಾಗ ನಡೆಸಬೇಕು ಎಂಬುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುದ್ದುಮೋಹನ್ ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.