ರಸಗೊಬ್ಬರ: ಇರಲಿ ಎಚ್ಚರ

7

ರಸಗೊಬ್ಬರ: ಇರಲಿ ಎಚ್ಚರ

Published:
Updated:
ರಸಗೊಬ್ಬರ: ಇರಲಿ ಎಚ್ಚರ

ಮುಂಗಾರು ಮಳೆ ಆರಂಭಕ್ಕೆ ಇನ್ನು ಕೆಲವೇ ದಿನಗಳಿವೆ. ಯಾವ ಬೆಳೆ ಬೆಳೆಯಬೇಕು ಮತ್ತು ಯಾವ ರಸಗೊಬ್ಬರ ಹಾಕಬೇಕು ಎಂದು ಯೋಚಿಸುವ ರೈತರೇ ಒಂದು ನಿಮಿಷ ತಾಳಿ. ಬೆಳೆ ಸಮೃದ್ಧವಾಗಿ ಬೆಳೆದರೆ ಮಾತ್ರ ಫಸಲು ನಿರೀಕ್ಷೆಯಷ್ಟು ಬರಲು ಸಾಧ್ಯ ಎಂಬುದನ್ನು ನಿಮಗೆ ಯಾರೂ ಹೇಳಿಕೊಡಬೇಕಿಲ್ಲ.ಕೆಲವರು ಸಂಪ್ರದಾಯದ ಪ್ರಕಾರ ಬೇಸಾಯ ಮಾಡಿದರೆ, ಮತ್ತೆ ಕೆಲವರು ಒಂದಿಷ್ಟು ಪ್ರಯೋಗಗಳನ್ನು ಮಾಡಿ ಅನೇಕ ಸಲ ನಷ್ಟಕ್ಕೆ ಒಳಗಾಗುತ್ತಾರೆ. ಏಕೆಂದರೆ ಬೇಸಾಯ ಮಾಡುವಾಗ ಒಂದಿಷ್ಟು ಎಚ್ಚರ ತಪ್ಪಿದರೂ ಇಳುವರಿಯಲ್ಲಿ ಕುಂಠಿತ ಖಂಡಿತ.ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುವುದು ಮಹತ್ವದ ಕೆಲಸ. ಯಾವ ಯಾವ ಬೆಳೆಗೆ ಎಷ್ಟು ಗೊಬ್ಬರವನ್ನು ಹಾಕಬೇಕು ಎನ್ನುವುದು ತಿಳಿದಿದ್ದರೆ ಒಳ್ಳೆಯದು. ಅನಗತ್ಯವಾಗಿ ಗೊಬ್ಬರವನ್ನು ಸುರಿಯುವುದರಿಂದ ಹೆಚ್ಚಿನ ಲಾಭವೇನು ಆಗುವುದಿಲ್ಲ.ಹೆಚ್ಚಿನ ಇಳುವರಿಗೆ ರಾಸಾಯನಿಕ ಗೊಬ್ಬರ ಬಳಸಬೇಕೆಂಬುದು ಬಹುತೇಕ ರೈತರಿಗೆ ತಿಳಿದಿರುವ ವಿಷಯ. ರಾಸಾಯನಿಕ ಗೊಬ್ಬರಗಳಿಂದ ಬೆಳೆಗಳಿಗೆ ಕೂಡಲೇ ಪೋಷಕಾಂಶಗಳು ದೊರೆಯುತ್ತವೆ.ವ್ಯವಸ್ಥಿತವಾಗಿ ಸಾವಯವ ಗೊಬ್ಬರ ಬಳಸುವುದರಿಂದಲೂ ಹೆಚ್ಚಿನ ಇಳುವರಿ ಪಡೆಯಬಹುದು. ಆದರೆ ಯಾವುದೇ ಗೊಬ್ಬರ ಬಳಸುವುದಕ್ಕಿಂತ ಮುಂಚೆ ಎಷ್ಟು ಹಾಕಬೇಕು ಎಂಬುದನ್ನು ಮಣ್ಣಿನ ಪರೀಕ್ಷೆ ಮಾಡಿಸಿ ತಿಳಿಯುವುದು ಒಳ್ಳೆಯದು. ರಾಸಾಯನಿಕ ಗೊಬ್ಬರ ಬಳಸುವವರಂತೂ ಮಣ್ಣು ಪರೀಕ್ಷೆ ಮಾಡಿಸಲೇಬೇಕು.ಬಹಳಷ್ಟು ರೈತರು ಪ್ರತಿ ವರ್ಷ ಹಾಕಿದಷ್ಟೆ ರಾಸಾಯನಿಕ ಗೊಬ್ಬರಗಳನ್ನು ಸುರಿಯುತ್ತಾರೆ. ಇದರಿಂದ ವರ್ಷದಿಂದ ವರ್ಷಕ್ಕೆ ಇಳುವರಿ ಜಾಸ್ತಿಯಾಗುವ ಬದಲು ಕಡಿಮೆಯಾಗುತ್ತಾ ಬರುತ್ತದೆ. ಬೇಕಾಬಿಟ್ಟಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿರುವ ಸಾವಯವ ವಸ್ತುಗಳು ಕಡಿಮೆಯಾಗುತ್ತವೆ.ಮಣ್ಣಿನ ರಂದ್ರ ಕಡಿಮೆ ಮಾಡಿ ಆಮ್ಲಜನಕದ ಹರಿಯುವಿಕೆಗೆ ಅಡ್ಡಿ ಮಾಡುತ್ತವೆ. ತೇವಾಂಶ ಹಿಡಿದಿಡುವ ಮಣ್ಣಿನ ಶಕ್ತಿ ಕಡಿಮೆಯಾಗುತ್ತದೆ. ಸ್ವಾಭಾವಿಕವಾಗಿ ನಡೆಯುವ ಬ್ಯಾಕ್ಟೀರಿಯಾಗಳ ಚಟುವಟಿಕೆ ನಿಂತು ಹೋಗುತ್ತದೆ. ಮಣ್ಣಿನ ಜೈವಿಕ ಗುಣವೇ ಹಂತ ಹಂತವಾಗಿ ನಾಶವಾಗುತ್ತಾ ಹೊಗುತ್ತದೆ. ಎರೆಹುಳು ಮತ್ತಿತರ ಜೀವಿಗಳು ನಾಶ, ನೀರು ಕೂಡ ಮಲಿನವಾಗುತ್ತದೆ.ಮುನ್ನೆಚ್ಚರಿಕೆ

ರಸಗೊಬ್ಬರ ಎಂದರೆ ರಾಸಾಯನಿಕಗಳ ಮಿಶ್ರಣ. ಆದುದರಿಂದ ಇದನ್ನು ಬಳಸುವಾಗ ಹೆಚ್ಚಿನ ಎಚ್ಚರಿಕೆ ಬೇಕು. ಗೊಬ್ಬರ ಹಾಕುವಾಗ ಅದು ಎಲೆ ಮೇಲೆ ಬಿದ್ದರೆ ಆ ಜಾಗ ಸುಟ್ಟಂತಾಗಿ ನಂತರ ಎಲೆ ಕೊಳೆಯುತ್ತದೆ. ಗೊಬ್ಬರ ಮುಟ್ಟಿದ ಕೈಗಳನ್ನು ಸಾಬೂನು ಹಾಕಿ ತೊಳೆದುಕೊಳ್ಳಬೇಕು. ಕೈಯಲ್ಲಿ ಗಾಯಗಳಿದ್ದರೆ ಗೊಬ್ಬರ ಮುಟ್ಟಲೇ ಬೇಡಿ.ಕೈಗವಸು ಬಳಸಿ. ಗೊಬ್ಬರ ಹಾಕಲು ಬಳಸುವ ವಸ್ತುಗಳನ್ನು ಚೆನ್ನಾಗಿ ತೊಳೆದು ಮತ್ತೆ ಬಳಸಿ. ಪುಡಿ ಗೊಬ್ಬರ ತೂರುವಾಗ ಮೂಗು ಮತ್ತು ಬಾಯಿಗೆ ಬಟ್ಟೆ ಕಟ್ಟಿ ಕೊಳ್ಳಿ. ಕಾಯಿ ಬಿಟ್ಟ ತರಕಾರಿ ಗಿಡಗಳಿಗೆ ಗೊಬ್ಬರ ಹಾಕುವಾಗ ಎಚ್ಚರದಿಂದಿರಬೇಕು.ರಾಸಾಯನಿಕ ಗೊಬ್ಬರಗಳನ್ನು ತೇವ ಇಲ್ಲದ ಜಾಗದಲ್ಲಿ ಇಡಬೇಕು. ಗಾಳಿಗೆ ತೆರೆದಿಟ್ಟರೆ ಕೆಲ ಗೊಬ್ಬರಗಳು ಉಂಡೆಯಾಗಿ, ನಂತರ ಬಳಸಲು ಕಷ್ಟವಾಗುತ್ತದೆ. ಮಕ್ಕಳು ಗೊಬ್ಬರವನ್ನು ಮುಟ್ಟದಂತೆ ಎಚ್ಚರವಹಿಸಬೇಕು.* ಮಣ್ಣಿನ ಪರೀಕ್ಷೆ ಮಾಡಿಸಿ, ಯಾವ ಪೋಷಕಾಂಶ ಕೊರತೆ ಇದೆ ಎಂದು ತಿಳಿದು ಅದನ್ನೇ ನೀಡಿ.* ನೀವು ಕೊಳ್ಳುವ ರಸಗೊಬ್ಬರದಲ್ಲಿ ನಿಮ್ಮ ಜಮೀನಿಗೆ ಬೇಕಾದ ಪೋಷಕಾಂಶ ಇದೆಯೇ ಎಂದು ನೋಡಿ ತೆಗೆದುಕೊಳ್ಳಿ.* ಭಾರಿ ಮಳೆ ಬರುವ ಸೂಚನೆಗಳಿದ್ದರೆ ಗೊಬ್ಬರ ಹಾಕಬೇಡಿ. ಹಾಕಿದ ಗೊಬ್ಬರ ನೀರಿನಲ್ಲಿ ಕೊಚ್ಚಿ ಹೋಗಬಹುದು.*ಗೊಬ್ಬರ ಮಣ್ಣಿನಲ್ಲಿ ಬೆರೆಯಲು ನೀರು ಬೇಕು. ಗೊಬ್ಬರ ಹಾಕಿದ ಮೇಲೆ ನೀರು ಕೊಡಿ. ಬತ್ತಕ್ಕೆ ಗೊಬ್ಬರ ಕೊಟ್ಟ ನಂತರ ಗದ್ದೆಯಲ್ಲಿರುವ ನೀರು ಹೊರ ಹೋಗದಂತೆ ನೋಡಿಕೊಳ್ಳಿ.*ಗೊಬ್ಬರ ಹಾಕಿದ ಜಾಗಕ್ಕೆ ಮತ್ತೆ ಮತ್ತೆ ಗೊಬ್ಬರ ಸುರಿಯಬೇಡಿ. ನಿಗದಿತ ಪ್ರಮಾಣದಲ್ಲಿಯೇ ಗೊಬ್ಬರ ಕೊಡಿ.*ಅಗತ್ಯವಿರುವಾಗಲೇ ಗೊಬ್ಬರ ನೀಡಬೇಕು. ಬೆಳೆ ಬೆಳೆದ ಮೇಲೆ ಗೊಬ್ಬರ ಕೊಟ್ಟರೆ ಹೆಚ್ಚಿನ ಇಳುವರಿ ಸಾಧ್ಯವಿಲ್ಲ.ಗಮನಿಸಬೇಕಾದ ಅಂಶ

* ರಸಗೊಬ್ಬರ ಚೀಲದ ಬಾಯಿ ಹೊಲೆದಿರಬೇಕು. ಕೈಯಿಂದ ಹೊಲೆದಿದ್ದರೆ ಅದಕ್ಕೆ ಸೀಸದ ಮೊಹರಿರಬೇಕು. * ಚೀಲವನ್ನು ತೂಕ ಮಾಡಿಸಿಯೇ ಕೊಳ್ಳಬೇಕು.*ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆ ನೀಡಬಾರದು ಮತ್ತು ಕೊಂಡಿದ್ದಕ್ಕೆ ನಮೂನೆ ಎಂ.ನಲ್ಲಿ ರಸೀತಿ ಪಡೆಯಬೇಕು.  ಇದರಲ್ಲಿ ಖರೀದಿಯ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿದ್ದು ರೈತರ ಮತ್ತು ಮಾರಾಟಗಾರರ ಸಹಿಯಿರಬೇಕು.*ಚೀಲದ ಮೇಲೆ `ರಸಗೊಬ್ಬರದ ಹೆಸರು, ತಯಾರಕರ ಹೆಸರು ಮತ್ತು ವಿಳಾಸ, ಬ್ರಾಂಡ್, ಪೋಷಕಾಂಶಗಳ ವಿವರ, ಗರಿಷ್ಠ ಮಾರಾಟ ಬೆಲೆ, ಗರಿಷ್ಠ ಮತ್ತು ನಿವ್ವಳ ತೂಕ, ಬ್ಯಾಚ್ ಸಂಖ್ಯೆ ಮತ್ತು ರಿಜಿಸ್ಟ್ರೇಷನ್ ಸಂಖ್ಯೆ~ ಇರುವುದನ್ನು ಗಮನಿಸಬೇಕು.ಪ್ರಾಥಮಿಕ ಹಂತದಲ್ಲಿಯೇ ಈ ವಿವರ ಪರೀಕ್ಷಿಸಿ ಅಧಿಕೃತ ಮಾರಾಟಗಾರರಿಂದ ಮಾತ್ರ ಕೊಂಡರೆ ನಕಲಿ ಹಾಗೂ ಕಲಬೆರಕೆ ಹಾವಳಿಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು. ಕೊಂಡ ನಂತರ ಕೆಲವು ಸರಳ ಪರೀಕ್ಷೆಗಳಿಂದ ಅವು ನಕಲಿಯೇ ಅಥವಾ ಕಲಬೆರಕೆಯಾಗಿದೆಯೇ ಎಂಬುದನ್ನು ಪತ್ತೆ ಹಚ್ಚಬಹುದು.ಭೌತಿಕ ಪರೀಕ್ಷೆ

ಹರಳು ರೂಪದ ರಸಗೊಬ್ಬರಗಳು ಒಂದೇ ಬಣ್ಣ, ಆಕಾರ, ಗಾತ್ರದಿಂದ ಕೂಡಿದ್ದು ಕಣ್ಣಿಗೆ ಕಾಣುವಂತಹ ಇತರೆ ಪದಾರ್ಥಗಳು ಇರಬಾರದು.  ಹೆಚ್ಚು ಪುಡಿ ಮತ್ತು ಹೆಚ್ಚಿನ ತೇವಾಂಶ ಹೊಂದಿರಬಾರದು. ಹರಳು ರೂಪದ ರಂಜಕ ಗೊಬ್ಬರ ಮತ್ತು ಜಿಪ್ಸಂ ಹರಳುಗಳು ಮೃದುವಾಗಿದ್ದು ಬೇರೆ ರಸಗೊಬ್ಬರದ ಹರಳುಗಳು ಗಟ್ಟಿಯಾಗಿರುತ್ತವೆ.ನೀರಿನಲ್ಲಿ ಕರಗುವ ಪರೀಕ್ಷೆ

ಕೆಲವು ರಸಗೊಬ್ಬರಗಳು (ಯೂರಿಯ, ಅಮೋನಿಯಂ ಸಲ್ಫೇಟ್, ಅಮೋನಿಯಂ ಕ್ಲೋರೈಡ್, ಮ್ಯೂರಿಯೇಟ್ ಆಫ್ ಪೊಟ್ಯಾಷ್, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್) ನೀರಿನಲ್ಲಿ ಸಂಪೂರ್ಣ ಕರಗುತ್ತವೆ. ಅವನ್ನು ಪರೀಕ್ಷೆಗಾಗಿ ನೀರಿನಲ್ಲಿ ಹಾಕಿದಾಗ ಕರಗದೆ ಇರುವ ಪದಾರ್ಥ ಉಳಿದರೆ ಅದು ಕಲಬೆರಕೆ.ಕೆಲವು ರಸಗೊಬ್ಬರಗಳು ನೀರಿನಲ್ಲಿ ಕರಗಿಸಿದಾಗ ತಣ್ಣನೆ ಅನುಭವ ನೀಡುತ್ತವೆ (ಯೂರಿಯ, ಅಮೋನಿಯಂ ಕ್ಲೋರೈಡ್, ಎಂಒಪಿ, ಸಿಎಎನ್, ನೈಟ್ರೋ ಫಾಸ್ಫೇಟ್ 20:20, 15:15:15, 19:19:19 ಇತ್ಯಾದಿ). ಹಾಗಿರದಿದ್ದಲ್ಲಿ ಅವು ಕಲಬೆರಕೆಯಾಗಿರುವ ಸಾಧ್ಯತೆಗಳಿರುತ್ತವೆ.ಬಿಸಿ ಮಾಡುವ ಪರೀಕ್ಷೆ

ಯೂರಿಯವನ್ನು ಬಿಸಿ ಮಾಡಿದಾಗ ಸಂಪೂರ್ಣವಾಗಿ ಕರಗುತ್ತದೆ.  ಕರಗದೇ ಇರುವ ವಸ್ತುಗಳು ಉಳಿದರೆ ಕಲಬೆರಕೆಯಾಗಿದೆ ಎಂದು ತಿಳಿಯಬೇಕು. ಡಿಎಪಿಯನ್ನು ಒಂದು ತಗಡಿನ ಮೇಲೆ ಬಿಸಿ ಮಾಡಿದಾಗ ಹರಳುಗಳು ಸುಣ್ಣದಂತೆ ಅರಳುತ್ತವೆ  ಮತ್ತು ತಳಕ್ಕೆ ಅಂಟಿಕೊಳ್ಳುತ್ತವೆ. ಇದಿಲ್ಲದಿದ್ದರೆ ಕಲಬೆರಕೆ, ನಕಲಿ ಎಂದರ್ಥ.ಪೋಷಕಾಂಶಗಳ ಪರೀಕ್ಷೆ

ಸಾರಜನಕದ ಪರೀಕ್ಷೆ:
ಅಮೋನಿಯ ರೂಪದ ಸಾರಜನಕವಿರುವ ರಸಗೊಬ್ಬರಗಳನ್ನು ತೇವ ಮಾಡಿ ಸುಟ್ಟ ಸುಣ್ಣದಿಂದ ತೀಡಿದಾಗ ಅಮೋನಿಯ ಘಾಟು ವಾಸನೆ ಬರುತ್ತದೆ. ಅದು ಬರದಿದ್ದರೆ ನಕಲಿ ಎಂದು ತಿಳಿಯಬಹುದು. ಹೀಗೆ 30 ರಸಗೊಬ್ಬರಗಳ ಪರೀಕ್ಷೆ ಮಾಡಬಹುದು.ರಂಜಕದ ಪರೀಕ್ಷೆ: ಸ್ವಲ್ಪ ರಸಗೊಬ್ಬರವನ್ನು ನೀರಿನಲ್ಲಿ ಕರಗಿಸಿ. ಸೂಪರ್ ಫಾಸ್ಫೇಟ್ ಮತ್ತು ಡಿಎಪಿ ರಸಗೊಬ್ಬರಗಳಾದಲ್ಲಿ ಸಿಲ್ವರ್ ನೈಟ್ರೇಟ್  ದ್ರಾವಣ, ಇತರೆ ಸಾರಜನಕ, ರಂಜಕ ಮತ್ತು ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ರಸಗೊಬ್ಬರಗಳಿಗೆ ಫೆರಿ ಕ್ಲೋರೈಡ್ ದ್ರಾವಣ ಹಾಕಿದಾಗ ಹಳದಿ, ಬಿಳಿ ಮಿಶ್ರಿತ ಹಳದಿ ಬಣ್ಣ ಬರಬೇಕು.ಅದಿಲ್ಲದಿದ್ದರೆ ನಕಲಿ.ಪೊಟ್ಯಾಷ್ ಪರೀಕ್ಷೆ:
ಪೊಟ್ಯಾಷ್ ಅಂಶವನ್ನು ಕೋಬಾಲ್ಟ್ ನೈಟ್ರೇಟ್ ದ್ರಾವಣದಿಂದ ಕಂಡು ಹಿಡಿಯಬಹುದು. ನಕಲಿ ಗೊಬ್ಬರ ಕೊಬಾಲ್ಟ್ ನೈಟ್ರೇಟ್‌ನೊಂದಿಗೆ ಬೆರೆತರೂ ಹಳದಿ ಬಣ್ಣವನ್ನು ಕೊಡುವುದಿಲ್ಲ. ಮಾಹಿತಿಗೆ: 96322 02521.

ಡಾ. ಎನ್. ಶ್ರೀನಿವಾಸ್,ಡಾ. ಎಸ್.ಎಸ್. ಪ್ರಕಾಶ್ ಮತ್ತುಡಾ. ಆರ್. ಕೃಷ್ಣಮೂರ್ತಿ

 (ಅಧ್ಯಾಪಕರು, ಮಣ್ಣು ವಿಜ್ಞಾನ ವಿಭಾಗ, ಕೃಷಿ  ಕಾಲೇಜು, ಮಂಡ್ಯ)

ಕಾಂಪೋಸ್ಟ್‌ನಲ್ಲೂ ಕಳಪೆ ಗೊಬ್ಬರ

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಗೆ ಹೆಚ್ಚು ಒತ್ತು ಸಿಕ್ಕಿದೆ. ಅದಕ್ಕೆ ಪೂರಕವಾಗಿ ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯಗಳು ಇತ್ಯಾದಿ ಸಾವಯವ ವಸ್ತುಗಳನ್ನು ಬಳಸಿ ಕಾಂಪೋಸ್ಟ್ ತಯಾರಿಸಲಾಗುತ್ತಿದೆ. ಇವು ಕಡಿಮೆ ಪ್ರಮಾಣದಲ್ಲಿ ಸಿಗುವುದರಿಂದ ಅನೇಕ ರೈತರು ಇವನ್ನೂ ಖರೀದಿಸುವ ಹಂತ ತಲುಪಿದ್ದಾರೆ.ಹೀಗೆ ಮಾರುಕಟ್ಟೆಯಲ್ಲಿ ಇಂದು ನಾನಾ ಬ್ರಾಂಡ್‌ಗಳ ಹೆಸರಿನಲ್ಲಿ ಸಾವಯವ ಗೊಬ್ಬರಗಳ ಮಾರಾಟವಾಗುತ್ತಿದೆ. ಈ ರಂಗದಲ್ಲೂ ಕಾಳಸಂತೆಯ ಜಾಲ ಹರಡಿರುವುದರಿಂದ ಕೊಂಡುಕೊಳ್ಳುವ ಸಾವಯವ ಗೊಬ್ಬರದ ಗುಣಮಟ್ಟವನ್ನು ಕೂಡ ಪರೀಕ್ಷಿಸಬೇಕಿದೆ.ಅದು ಸಂಪೂರ್ಣವಾಗಿ ಕಳಿತಿದೆಯೇ, ಬಳಸಲು ಯೋಗ್ಯವೇ ಇತ್ಯಾದಿ ವಿಷಯಗಳನ್ನು ಗಮನಿಸಬೇಕಿದೆ. ಆದ್ದರಿಂದ ಕಾಂಪೋಸ್ಟ್ ಗೊಬ್ಬರದ ಪಕ್ವತೆಯನ್ನು ಪರೀಕ್ಷಿಸುವುದು ಅತಿ ಮುಖ್ಯವಾಗಿದೆ.ಪಕ್ವತೆ ಪರೀಕ್ಷೆ

ಕಾಂಪೋಸ್ಟ್ ಗೊಬ್ಬರ ಪಕ್ವವಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಲು ಬೀಜಗಳ ಮೊಳಕೆಯ ವಿಧಾನ ಅನುಸರಿಸಬಹುದು.ಇದರಲ್ಲಿ ಬೇಗ ಮೊಳಕೆ ಒಡೆಯುವ ಮೂಲಂಗಿ, ಕಡಲೆ, ಸೋಯಾಅವರೆ ಬೀಜ ಬಳಸಬಹುದು.ಕಾಂಪೋಸ್ಟ್ ಚೆನ್ನಾಗಿ ಕಳಿತಿದ್ದರೆ ಅದರಲ್ಲಿ ಸಸ್ಯ ನಂಜುಕಾರಕ ಸಾವಯವ ಆಮ್ಲಗಳಿರುವುದಿಲ್ಲ. ಈ ಆಮ್ಲಗಳು ಬೀಜಗಳ ಭ್ರೂಣಗಳನ್ನು ಕೊಲ್ಲುತ್ತವೆ. ಬೀಜಗಳು ಮೊಳಕೆಯೊಡೆಯುವುದಿಲ್ಲ ಅಥವಾ ಮೊಳಕೆಯೊಡೆದ ಕೂಡಲೇ ಸಾಯುತ್ತವೆ.ಆದ್ದರಿಂದ ಈ ವಿಧಾನವು ಕಾಂಪೋಸ್ಟಿನ ಪಕ್ವತೆ, ಸ್ಥಿರತೆಯನ್ನು ಪರೀಕ್ಷಿಸಲು ಉತ್ತಮ ವಿಧಾನ.ಬೇಕಾಗುವ ಸಾಮಗ್ರಿ: ಕಾಂಪೋಸ್ಟ್ ಗೊಬ್ಬರದ ಮಾದರಿ, ಪ್ಲಾಸ್ಟಿಕ್ ಬಟ್ಟಲುಗಳು, ಶುದ್ಧ ನೀರು, ಬಟ್ಟೆ, ಮಣ್ಣಿನ, ಪ್ಲಾಸ್ಟಿಕ್‌ನ ಸಣ್ಣ ತಟ್ಟೆಗಳು, ಕಾಗದ. ಪ್ಲಾಸ್ಟಿಕ್ ಬಟ್ಟಲಿನಲ್ಲಿ 1/4 ಭಾಗದಷ್ಟು ಕಾಂಪೋಸ್ಟ್ ತೆಗೆದುಕೊಂಡು ಅದಕ್ಕೆ ಬಟ್ಟಲಿನ ಅರ್ಧದಷ್ಟು ನೀರು ಹಾಕಿ 2 ಗಂಟೆ ಇಡಬೇಕು. ನಂತರ ಬಟ್ಟೆಯ ಮೂಲಕ ಸೋಸಿ ದೊರೆತ ದ್ರಾವಣವನ್ನು ಬಳಸಬೇಕು. ಮಣ್ಣಿನ, ಪ್ಲಾಸ್ಟಿಕ್ ಸಣ್ಣ ತಟ್ಟೆಗಳಲ್ಲಿ ಕಾಗದವನ್ನು ಹರಡಿ ಅದರ ಮೇಲೆ 10 ಬೀಜಗಳನ್ನು ಸಮಾನ ದೂರದಲ್ಲಿ ಇಡಬೇಕು.ಒಂದು ಜೊತೆ ತಟ್ಟೆಗಳಿಗೆ ಕಾಂಪೋಸ್ಟ್ ದ್ರಾವಣವನ್ನು, ಮತ್ತೊಂದು ಜೊತೆ ತಟ್ಟೆಗಳಿಗೆ ಶುದ್ಧ ನೀರನ್ನು ಹಾಕಬೇಕು.  24, 48, 72 ಮತ್ತು 96 ಗಂಟೆಗಳ ನಂತರ ಬೀಜ ಮೊಳಕೆ ಲೆಕ್ಕ ಮಾಡಿ ಶೇಕಡಾ ಪ್ರಮಾಣವನ್ನು ತಿಳಿಯಬೇಕು.
ನಕಲಿ, ಕಲಬೆರಕೆ ಗೊಬ್ಬರ ಪತ್ತೆ ಹೇಗೆ?

ಇತ್ತೀಚೆಗೆ ಕಲಬೆರಕೆ ರಸಗೊಬ್ಬರಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ರೈತರು ಎಚ್ಚರ ವಹಿಸಬೇಕು. ಅದಕ್ಕಾಗಿ ರಸಗೊಬ್ಬರದ ಚೀಲದ ಮೇಲಿನ ಲೇಬಲ್ ಮತ್ತು ಬಿಲ್ ಜೋಪಾನವಾಗಿಡಬೇಕು. ಕಲಬೆರಕೆ ಗೊಬ್ಬರ ಕೊಟ್ಟು ಮೋಸಮಾಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಇದು ಬೇಕು. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುವ ಗೊಬ್ಬರವನ್ನು ಎಂದೂ ಕೊಳ್ಳಬಾರದು.

ಕಲಬೆರಕೆಯಲ್ಲಿ ನಾನಾ ವಿಧ. ಯೂರಿಯ ಗೊಬ್ಬರದೊಂದಿಗೆ ಉಪ್ಪು, ಕಲ್ಲಿನ ಪುಡಿ ಬೆರೆಸಿರಬಹುದು. ಸೂಪರ್ ಫಾಸ್ಫೇಟ್ ಜೊತೆಗೆ ಜೇಡಿ ಮಣ್ಣು, ಬೂದಿ, ಹಾರು ಬೂದಿ, ಸುಣ್ಣ ಅಥವಾ ಬಿಳಿ ಕಲ್ಲಿನ ಪುಡಿ ಸೇರಿಸುವ ಸಾಧ್ಯತೆಗಳಿವೆ. ಜಿಂಕ್ ಸಲ್ಫೇಟ್ ಹೆಸರಲ್ಲಿ ಹಾರು ಬೂದಿ, ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಮಾರುತ್ತಾರೆ. ಪೊಟ್ಯಾಷ್ ಜೊತೆಗೆ ಮರಳು, ಹಾರು ಬೂದಿ, ಸುಣ್ಣ, ಉಪ್ಪು, ನುಣ್ಣನೆ ಇದ್ದಿಲು ಸೇರಿಸುತ್ತಾರೆ.

ಕಲಬೆರಕೆ ರಸಗೊಬ್ಬರದಲ್ಲಿ ಭೌತಿಕ ಗುಣಗಳಾದ ರೂಪ, ಆಕಾರ ಮುಂತಾದವು ಬೇರೆ ಬೇರೆಯಾಗಿರುತ್ತವೆ. ಅವುಗಳ ಪೋಷಕಾಂಶ ನಿಗದಿತ  ಪ್ರಮಾಣಕ್ಕಿಂತ ಕಡಿಮೆ, ಹೆಚ್ಚಾಗಿರುತ್ತದೆ.

ಪೋಷಕಾಂಶ ಹೊರತುಪಡಿಸಿ ಇತರೆ ಅನವಶ್ಯಕ ಹಾನಿಕಾರಕ ಪದಾರ್ಥಗಳನ್ನು ಗೊಬ್ಬರಗಳೊಂದಿಗೆ ಮಿಶ್ರ ಮಾಡಿದ್ದರೆ ಅಂತಹ ರಸಗೊಬ್ಬರಗಳನ್ನು ನಕಲಿ ಹಾಗೂ ಕಲಬೆರಕೆ ಎನ್ನಬಹುದು. ಇವನ್ನು ಪ್ರಯೋಗಾಲಯದಲ್ಲಿ ರಾಸಾಯನಿಕವಾಗಿ ಪರೀಕ್ಷಿಸಿ ನಕಲಿ ಅಥವಾ ಕಲಬೆರಕೆ ಎಂಬುದನ್ನು ಪತ್ತೆ ಹಚ್ಚಬಹುದು. ಆದರೆ ಇದು ದುಬಾರಿ. ಆದ್ದರಿಂದ ರೈತರೇ ಕಡಿಮೆ ಖರ್ಚಿನಲ್ಲಿ ಕಲಬೆರಕೆ ಪತ್ತೆ ಹಚ್ಚಲು ಕೆಲವು ವಿಧಾನಗಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry