ರಸಗೊಬ್ಬರ ಕೃತಕ ಅಭಾವ: ಎಚ್ಚರಿಕೆ

7

ರಸಗೊಬ್ಬರ ಕೃತಕ ಅಭಾವ: ಎಚ್ಚರಿಕೆ

Published:
Updated:
ರಸಗೊಬ್ಬರ ಕೃತಕ ಅಭಾವ: ಎಚ್ಚರಿಕೆ

ಲಿಂಗಸುಗೂರ: ತಾಲ್ಲೂಕಿಗೆ ಬೇಕಾಗಬಹುದಾದ 15690 ಟನ್ ರಸಗೊಬ್ಬರ ನೀಡಲು ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿ ಅನುಮೋದನೆ ನೀಡಿದೆ. ಸಹಕಾರಿ ಸಂಘಗಳಿಗೆ 7845 ಟನ್ ಗೊಬ್ಬರ ನೀಡಲು ಕೂಡ ಒಪ್ಪಿಗೆ ನೀಡಿದೆ. ಅನಗತ್ಯ ಕಾರಣ ಹೇಳಿಕೊಂಡು ವ್ಯಾಪಾರಸ್ಥರು ಮತ್ತು ಸಹಕಾರಿ ಸಂಘಗಳು ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಲು ಮುಂದಾಗದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ಮಾನಪ್ಪ ವಜ್ಜಲ ಮನವಿ ಮಾಡಿದರು.ಕೃಷಿ ಇಲಾಖೆಯಲ್ಲಿ ಮಂಗಳವಾರ ಕರೆದಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೆ ತಾಲ್ಲೂಕಿಗೆ ಮಂಜೂರಾದ ಕೋಟಾದಲ್ಲಿ ಗೊಬ್ಬರ ತಂದುಕೊಳ್ಳುವಲ್ಲಿ ಇಲ್ಲದ ನೆಪ ಹೇಳಿಕೊಂಡು ಅಲೆಯುತ್ತಿರುವುದು ನೋವುಂಟು ಮಾಡಿದೆ. 7845 ಟನ್‌ನಲ್ಲಿ ಕೇವಲ 1770 ಟನ್ ಗೊಬ್ಬರ ಮಾತ್ರ ತಂದುಕೊಳ್ಳಲಾಗಿದೆ. ಯಾವೊಂದು ಸಂಘದ ಕಾರ್ಯದರ್ಶಿಗಳು ದೂರು ನೀಡಿಲ್ಲ. ಲಾಭಕ್ಕಿಂತ ಸೇವಾ ಮನೋಭಾವನೆ ಮೈಗೂಡಿಸಿಕೊಳ್ಳುವಂತೆ ಅವರು ಸಲಹೆ ಮಾಡಿದರು.ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ಶಾಖೆಯನ್ನು ಮುಂಬರುವ ದಿನಗಳಲ್ಲಿ ಲಿಂಗಸುಗೂರ ತಾಲ್ಲೂಕು ಕೇಂದ್ರದಲ್ಲಿಯೆ ತೆರೆಯುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ.

ಶೀಘ್ರದಲ್ಲಿಯೆ ಶಾಖೆ ಆರಂಭಿಸುವುದರಿಂದ ರೈತರಿಗೆ ಎಂಆರ್‌ಪಿ ದರದಲ್ಲಿಯೆ ಗೊಬ್ಬರ ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತದೆ. ಕೃತಕ ಅಭಾವ ಅಥವಾ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಕಡಿವಾಣ ಹಾಕಬಹುದಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ರೈತ ಮುಖಂಡ ಅಮರಣ್ಣ ಗುಡಿಹಾಳ ಮಾತನಾಡಿ, ವ್ಯಾಪಾರಸ್ಥರು ಮತ್ತು ಸಂಘದ ನಿರ್ದೇಶಕರು ಪರಸ್ಪರ ಒಡಂಬಡಿಕೆಯಿಂದ ಗೊಬ್ಬರದ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ವ್ಯಾಪಾರಸ್ಥರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ಸಭೆಯಲ್ಲಿದ್ದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ಅವರಿಗೆ ಪ್ರತಿಯೊಂದು ಅಂಗಡಿಗೆ ತೆರಳಿ ಪರಿಶೀಲಿಸಿ ಎಂಆರ್‌ಪಿ ದರದಲ್ಲಿಯೆ ಗೊಬ್ಬರ ವಿತರಣೆಗೆ ಕ್ರಮ ಕೈಕೊಳ್ಳುವಂತೆ ಸೂಚಿಸಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹನುಮಂತರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನಕುಮಾರ, ಸಹಕಾರಿ ಸಂಘಗಳ ಸಹಾಯಕ ನೋಂದಣಾಧಿಕಾರಿ ಎಸ್.ಬಿ. ಅಮೀನಗಡ ಉಪಸ್ಥಿತರಿದ್ದರು. ವ್ಯವಸಾಯ ಸಹಕಾರಿ ಸಂಘಗಳ ಕಾರ್ಯದರ್ಶಿಗಳು, ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry