ರಸಗೊಬ್ಬರ ಬೆಲೆ ದ್ವಿಗುಣ: ರೈತರ ಗೋಳು

7

ರಸಗೊಬ್ಬರ ಬೆಲೆ ದ್ವಿಗುಣ: ರೈತರ ಗೋಳು

Published:
Updated:
ರಸಗೊಬ್ಬರ ಬೆಲೆ ದ್ವಿಗುಣ: ರೈತರ ಗೋಳು

ನಾಪೋಕ್ಲು: ಮುಂಗಾರಿಗೂ ಮುನ್ನವೇ ರಸಗೊಬ್ಬರದ ಬೆಲೆ ದ್ವಿಗುಣಗೊಂಡಿದ್ದು ಕಾಫಿ ಹಾಗೂ ಶುಂಠಿ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈಗಾಗಲೇ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಬಳಲುತ್ತಿರುವ ರೈತವರ್ಗಕ್ಕೆ ರಸಗೊಬ್ಬರದ ಬೆಲೆಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.ನಾಪೋಕ್ಲು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ಕಾಫಿ ತೋಟಗಳಿಗೆ ರಸಗೊಬ್ಬರ ಪೂರೈಸಲು ಇದು ಸಕಾಲ. ಬೆಳೆಗಾರರು ಗೊಬ್ಬರ ಒದಗಿಸುವ ಪ್ರಯತ್ನದಲ್ಲಿರುವಾಗಲೇ ಕೂಲಿ ಕಾರ್ಮಿಕರ ಅಭಾವ ಹಾಗೂ ರಸಗೊಬ್ಬರದ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಾಫಿಗೆ ಮುಂಗಾರು ಪೂರ್ವ ಅವಧಿಯಲ್ಲಿ ಹಾಗೂ ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಎರಡು ಬಾರಿ ರಸಗೊಬ್ಬರ ಹಾಕುವುದು ವಾಡಿಕೆ.ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಕೆಲ ಕಾಫಿ ಬೆಳೆಗಾರರು ಮೂರು, ನಾಲ್ಕು ಬಾರಿ ರಸಗೊಬ್ಬರ ಹಾಕುವುದಿದೆ. ಆದರೆ ಬೆಲೆ ಏರಿಕೆಯಿಂದಾಗಿ ಇದಕ್ಕೂ ಕಡಿವಾಣ ಬೀಳಲಿದೆ.ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿರುವು ಹಾಗೂ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಹಿನ್ನೆಲೆಯಲ್ಲಿ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಸರ್ಕಾರ ಕಡಿತಮಾಡಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಯೋಜಿಸುತ್ತಿದೆ.ಪರಿಣಾಮ ರಸಗೊಬ್ಬರಗಳ ಬೆಲೆ ಗಗನಕ್ಕೇರಿದೆ ಎನ್ನಲಾಗಿದೆ. ಕಚ್ಚಾ ವಸ್ತುಗಳಾದ ಪೊಟ್ಯಾಶ್, ಫಾಸ್ಪರಿಕ್ ಅ್ಯಸಿಡ್ ಹಾಗೂ ಸಲ್ಫ್ಯೂರಿಕ್ ಆ್ಯಸಿಡ್‌ಗಳ ಬೆಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಪರೀತ ಏರಿಕೆ ಕಂಡಿದೆ. ಪ್ರತಿವರ್ಷ ರಸಗೊಬ್ಬರದ ಬಳಕೆಯೂ ಹೆಚ್ಚುತ್ತಿದೆ. ಹೀಗಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.ಸಕಾಲದಲ್ಲಿ ಸಿಗದ ಗೊಬ್ಬರಕಾಂಪ್ಲೆಕ್ಸ್ ಗೊಬ್ಬರಗಳು ಬೆಳೆಗಾರರಿಗೆ ಲಭಿಸುತ್ತಿಲ್ಲ. ಕಾಫಿ ಬೆಳೆಗಾರರು ಯೂರಿಯಾ, ಡಿ.ಎ.ಪಿ, ಪೊಟ್ಯಾಶ್ ಮಿಶ್ರಣ ಮಾಡಿ ಬಳಕೆ ಮಾಡುತ್ತಿದ್ದಾರೆ. ಸಕಾಲದಲ್ಲಿ ಎಲ್ಲ ಗೊಬ್ಬರಗಳು ಒಟ್ಟಿಗೆ ಸಿಗುತ್ತಿಲ್ಲ ಎಂಬುದು ಬೆಳೆಗಾರರ ಅಳಲು. ಕಳೆದ ಮೇ ತಿಂಗಳಿನಲ್ಲಿ ರೂ. 450 ಕ್ಕೆ ಸಿಗುತ್ತಿದ್ದ 50 ಕೆ.ಜಿ. ಕೃಷಿಕ ರಸಗೊಬ್ಬರ ಚೀಲಕ್ಕೆ ಈಗ ಬರೋಬ್ಬರಿ ರೂ. 795 ಬೆಲೆ. ಕೃಷಿಗೆ ಬೇಕಾದ ಗೊಬ್ಬರ, ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಬೆಳೆಗಾರರು ಹೆಣಗಾಡಬೇಕಾಗಿದೆ.ಯಾಂತ್ರೀಕರಣ ಕೈಗೊಳ್ಳಲು ಸಣ್ಣ ಬೆಳೆಗಾರರಿಗೆ ಸಾಕಷ್ಟು ಸವಲತ್ತು ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ನಡುವೆ ಕಾಫಿ ಉತ್ಪಾದನೆಯ ಸಮತೋಲನ ಕಾಪಾಡುವಲ್ಲಿ ರಾಸಾಯನಿಕ ಗೊಬ್ಬರಗಳ ಅಗತ್ಯವಿದ್ದು ದುಬಾರಿ ದರದಿಂದಾಗಿ ಸಾಕಷ್ಟು ಸಣ್ಣ ಬೆಳೆಗಾರರು ತೋಟಗಳಿಗೆ ಪೂರೈಸುವ ಗೊಬ್ಬರದ ಪ್ರಮಾಣ ಕಡಿಮೆಮಾಡುತ್ತಿದ್ದಾರೆ.ತೋಟಗಳ ಮಣ್ಣಿನ ಪರೀಕ್ಷೆ ಮಾಡುವುದರ ಮೂಲಕ ಯಾವ ಅಂಶದ ಕೊರತೆ ಇದೆ ಎಂಬುದನ್ನು ಪರೀಕ್ಷಿಸಿ ಅಗತ್ಯವಿರುವ ರಸಗೊಬ್ಬರವನ್ನಷ್ಟೇ ಪೂರೈಸಿದರಷ್ಟೇ ಸಣ್ಣ ಬೆಳೆಗಾರರು ಬೆಲೆ ಏರಿಕೆಯ ಬಿಸಿಯ ನಡುವೆಯೂ ಇಳುವರಿಯ ಲಾಭ ಪಡೆಯಬಹುದು.

                                             ಇವರೇನಂತಾರೆ?

ವೈಜ್ಞಾನಿಕವಾಗಿರಲಿ

ಕೃಷಿಗೆ ಬೇಕಾದ ಗೊಬ್ಬರ, ಸಣ್ಣ ಬೆಳೆಗಾರರಿಗೆ ಬೇಕಾದ ಯಾಂತ್ರೀಕರಣ ಸೌಲಭ್ಯವನ್ನು ಸರ್ಕಾರ ಒದಗಿಸಬೇಕು. ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸಲು ಪರಿಹಾರ ಮಾರ್ಗ ಕೈಗೊಳ್ಳುವ ತುರ್ತು ಅಗತ್ಯವಿದೆ. ತೋಟಗಳಿಗೆ ವೈಜ್ಞಾನಿಕ ರೀತಿಯಲ್ಲಿ ಗೊಬ್ಬರ ಪೂರೈಕೆ ಮಾಡುವ ಅಗತ್ಯವಿದೆ.

 

ಅನಗತ್ಯವಾದ  ರಾಸಾಯನಿಕ ಗೊಬ್ಬರಗಳನ್ನು ತೋಟಕ್ಕೆ ಒದಗಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಾವಯವ ಕೃಷಿ ನಿಧಾನವಾದ ಪ್ರಕ್ರಿಯೆ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಜಾನುವಾರುಗಳ ಸಾಕುವಿಕೆಯೂ ಬಹಳ ಕಡಿಮೆಯಾಗಿರುವುದರಿಂದ ಉತ್ಪಾದನೆಯ ಸಮತೋಲನ ಕಾಪಾಡುವಲ್ಲಿ ರಾಸಾಯನಿಕ ಗೊಬ್ಬರ ಅಗತ್ಯ.

-ಸಣ್ಣುವಂಡ ಕಾವೇರಪ್ಪ,ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ

 

ಉತ್ಪಾದನೆಯ ಮೇಲೆ ಪರಿಣಾಮ


ರಸಗೊಬ್ಬರಗಳ ಬೆಲೆ ವರ್ಷದಿಂದ ವರ್ಷಕ್ಕೆ ಏರುಮುಖದಲ್ಲಿ ಸಾಗುತ್ತಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡುಮಾಡಿದೆ. ಕೊಡಗಿನಲ್ಲಿ ಮಳೆಯ ಪ್ರಮಾಣ ಹೆಚ್ಚಿರುವುದರಿಂದ ರಸಗೊಬ್ಬರಗಳ ಪೂರೈಕೆ ಅಗತ್ಯ. ಜೊತೆಗೆ ಎರಡು ವರ್ಷಗಳಿಗೊಮ್ಮೆ ಕಾಫಿ ತೋಟಗಳಿಗೆ ಸುಣ್ಣ ಹಾಕಬೇಕು. ಸಕಾಲದಲ್ಲಿ ರಸಗೊಬ್ಬರ ಹಾಕದಿದ್ದರೆ ಕಾಫಿ ಉತ್ಪಾದನೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

-ಚೆಂಗೇಟಿರ ಅಚ್ಚಯ್ಯ, ಕಾಫಿ ಬೆಳೆಗಾರ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry