ರಸಗೊಬ್ಬರ: ರೈತ ವಿರೋಧಿ ಕೇಂದ್ರ
ಗುಲ್ಬರ್ಗ: ತನ್ನ ರಸಗೊಬ್ಬರ ನೀತಿಯ ಮೂಲಕ ಕೇಂದ್ರ ಸರ್ಕಾರವು ರೈತ ವಿರೋಧಿ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರವು 2007ರಿಂದ ಇಲ್ಲಿ ತನಕ ರಸಗೊಬ್ಬರ ಬೆಲೆಯಲ್ಲಿ ಶೇಕಡಾ 160ರಿಂದ 300ಕ್ಕೂ ಹೆಚ್ಚು ದರ ಏರಿಸಿದೆ. ರೈತರು ರಸಗೊಬ್ಬರ ಖರೀದಿಸದಂತೆ ಮಾಡಿದೆ. ರಸಗೊಬ್ಬರ ಕಂಪೆನಿಗಳಿಗೆ ಮಾರುಕಟ್ಟೆಯಲ್ಲಿ ದರ ನಿಗದಿಗೊಳಿಸಲು ಮುಕ್ತ ಅವಕಾಶ ಮಾಡಿಕೊಟ್ಟಿದೆ. ಇದರಿಂದ ರಸಗೊಬ್ಬರ ಬೆಲೆ ಅನಿಯಂತ್ರಿತವಾಗಿ ಏರುತ್ತಿದೆ ಎಂದು ಆರೋಪಿಸಿದರು.
ಸಕ್ಕರೆ ಬೆಲೆ ನಿಯಂತ್ರಿಸುವ ಕೇಂದ್ರವು ಕಬ್ಬು ಬೆಳೆಗಾರರಿಗೆ ನಿಯಂತ್ರಿತ ದರದಲ್ಲಿ ರಸಗೊಬ್ಬರ ನೀಡುವುದಿಲ್ಲ, ಅಕ್ಕಿಯನ್ನು ಲೇವಿ ರೂಪದಲ್ಲಿ ನಿಯಂತ್ರಿಸುವ ಕೇಂದ್ರ ರೈತ ಖರೀದಿಸುವ ಗೊಬ್ಬರಕ್ಕೆ ಸಹಾಯಧನ ನೀಡುವುದಿಲ್ಲ. ಸರ್ಕಾರದ ಈ ಧೋರಣೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಬಸವರಾಜ ಮಾಲಿಪಾಟೀಲ್, ಶರಣಪ್ಪ ತಳವಾರ, ಬಸವರಾಜ ಎನ್.ಪವಾಡಶೆಟ್ಟಿ, ಮಲ್ಲಿಕಾರ್ಜುನ ಲಿಂಗದಹಳ್ಳಿ, ವಿದ್ಯಾಸಾಗರ ಶಹಬಾದಿ, ಮುಕುಂದ ದೇಶಪಾಂಡೆ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.