ಭಾನುವಾರ, ಮೇ 9, 2021
28 °C

ರಸಭರಿತ ಗಾಯನ

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಶೇಷಾದ್ರಿಪುರಂ ಕಾಲೇಜಿನ ಬಯಲು ರಂಗಮಂದಿರಲ್ಲಿ ನಡೆದ ರಾಮಸೇವಾ ಸಮಿತಿಯ ಸಂಗೀತ ಕಾರ್ಯಕ್ರಮದಲ್ಲಿ ಶ್ರೀವಲ್ಸನ್ ಹಾಗೂ ತಂಡದವರು ನೀಡಿದ ಕಛೇರಿಯಲ್ಲಿ ಕಲ್ಪನಾಸ್ವರಗಳು ಮನಸೂರೆಗೊಂಡವು.ಮನಕ್ಕೆ ಮುದ ನೀಡುವ ಕಂಠ. ಅದನ್ನು ಭಾವ ಮತ್ತು ಕಲಾತ್ಮಕವಾಗಿ ದುಡಿಸಿಕೊಳ್ಳುವ ಮನೋಧರ್ಮ. ಆಳ-ವಿಸ್ತಾರಗಳನ್ನು ಪ್ರಕಟಗೊಳಿಸಿ ಸಂಗೀತ ಪ್ರೇಮಿಗಳನ್ನು ಒಲಿಸಿಕೊಳ್ಳುವ ಕೌಶಲ್ಯ. ತಂತ್ರ ಪರಿಣತಿಯಲ್ಲೂ ಒಂದು ಕೈ ಮುಂದು.ಗಾಯಕ ಶ್ರೀವಲ್ಸನ್ ಮೆನನ್ ಇಂಥ ಗುಣಗಳಿಂದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಭಾನುವಾರ ಶೇಷಾದ್ರಿಪುರಂ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದ ಶ್ರೀ ಶೇಷಾದ್ರಿಪುರಂ ರಾಮಸೇವಾ ಸಮಿತಿಯ 64ನೆ ಶ್ರೀರಾಮನವಮಿ ಸಂಗೀತ ಕಾರ್ಯಕ್ರಮಸರಣಿಯಲ್ಲಿ ಅವರು ಹಾಡಿ ಅಭಿನಂದನೆಗೆ ಭಾಜನರಾದರು.ಕಲ್ಯಾಣಿ ವರ್ಣ, ಮಲಹರಿ ರಾಗದ `ಪಂಚಮಾತಂಗ~ದ ನಂತರ ಶ್ರೀರಂಜಿನಿ ರಾಗಾಲಾಪನೆ ಮುದ ನೀಡಿತು. ಈ ಔಢವ ರಾಗದ ಸೌಂದರ್ಯವನ್ನು ಸರಳ ಹಾಗೂ ರಸಭರಿತ ಸಂಗತಿಗಳು ಮತ್ತು ಸಂಚಾರಗಳ ಮೂಲಕ ಜಾಹೀರುಪಡಿಸಿದರು. ಆಕರ್ಷಕ ರೀತಿಯಲ್ಲಿ `ಮಾರುಬಲ್ಕ~ ಕೀರ್ತನೆಯ ಪ್ರತಿ ಸಾಲನ್ನೂ ಹಾಡಿ ದ್ರುತಗತಿಯಲ್ಲಿ ಸ್ವರಗಳನ್ನು ಹಾಕಿದರು.ರಾಗ ಭಾವ ಮತ್ತು ಸಂಚಾರಕ್ಕೆ ಒಪ್ಪುವಂತೆ ಸರ್ವಲಘು, ದಾಟು ಮತ್ತು ಜಂಟಿಸ್ವರಗಳನ್ನು ಅದರಲ್ಲಿ ಹೇರಳವಾಗಿ ತುಂಬಿ ಅದನ್ನು ಸಮದ್ಧಗೊಳಿಸಿದರು. ನೆರವಲ್ ಹಾಡಲಿಲ್ಲವಲ್ಲ ಎಂಬ ಕೊರಗು ಉಳಿದುಹೋಯಿತು.ಪೂರ್ವಿಕಲ್ಯಾಣಿ ರಾಗದ (ಜ್ಞಾನಮೊಸಗರಾದ) ವ್ಯಾಪಕ ಪ್ರಸರಣೆಯಲ್ಲಿ ಅವರ ಮೌಲಿಕತೆ ಪ್ರಕಟಗೊಂಡಿತು. ಸೊಗಸಾದ ಆಲಾಪನೆ ಮತ್ತು ಕೀರ್ತನೆಯ ಗಾಯನದ ನಂತರ ಅವರು ಕೈಗೊಂಡ `ಪರಿಪೂರ್ಣ ನಿಷ್ಕಳಂಕ ನಿರವಧಿ ಸುಖದಾಯಕ~ ಎಂಬ ನೆರೆವಲ್ ಅವರ ಒಟ್ಟಾರೆ ಪ್ರತಿಪಾದನೆಯನ್ನು ಸಂಪೂರ್ಣವಾಗಿ ಅರ್ಥೈಸಿತು.ಕಲ್ಪನಾಸ್ವರಗಳೂ ಪ್ರಕಾಶಿಸಿದವು. ನಿಧಾನಗತಿಯಲ್ಲಿ ನೀಲಾಂಬರಿ ರಾಗದ `ಅಂಬಾ ನೀಲಾಯತಾಕ್ಷಿ~ ಕೀರ್ತನೆ ಮನಮುಟ್ಟಿತು. ಘನ ಮತ್ತು ನಯ ಅಂಶಗಳನ್ನು ಅವರು ನಿರ್ವಹಿಸಿದ ರೀತಿ ಪ್ರಶಂಸನೀಯ.ಸ್ವಾತಿ ತಿರುನಾಳರ ನವರಾತ್ರಿಕತಿಗಳಲ್ಲಿ ಒಂದಾದ ಭೈರವಿ ರಾಗದ `ಜನನಿ ಮಾಮವ~ ಕೀರ್ತನೆಯನ್ನು ಕೇಳುವ ಅಪೂರ್ವ ಸದವಕಾಶ ದೊರಕಿತು. ಕ್ರಮಬದ್ಧವಾಗಿ ಭೈರವಿರಾಗವನ್ನು ಬೆಳೆಸಿ ಆ ಭವ್ಯ ಕೀರ್ತನೆಗೆ ಅನುಕೂಲಕರ ಅಡಿಪಾಯವನ್ನು ಹಾಕಿದರು. `ಅನುಭವಿತ ಕಮಲಾ~ ಎಂಬಲ್ಲಿ ನೆರೆವಲ್ ಮಾಡಿ ಎರಡು ಕಾಲಗಳಲ್ಲಿ ಸ್ವರಗಳನ್ನು ಹಾಡಿದರು. ಅವರೊಂದಿಗೆ ಬಿ.ಯು.ಗಣೇಶ್‌ಪ್ರಸಾದ್ (ಪಿಟೀಲು), ಸುಧೀಂದ್ರ (ಮೃದಂಗ) ಮತ್ತು ರಂಗನಾಥ ಚಕ್ರವರ್ತಿ (ಘಟ) ಸೊಗಸಾಗಿ ಸ್ಪಂದಿಸಿದರು.ರೋಚಕ ನಿರೂಪಣೆಗಳುವಿಶೇಷವಾದ ರಾಗಸಂಸ್ಕಾರ ಮತ್ತು ಕಲ್ಪನಾ ಶಕ್ತಿಯನ್ನು ವರವಾಗಿ ಪಡೆದುಕೊಂಡಿರುವ ಹಿರಿಯ ಗಾಯಕ ಟಿ.ವಿ. ಶಂಕರನಾರಾಯಣನ್ ಅವರು ಮೇಲಿನ ಸ್ಥಳದಲ್ಲೇ ಮೊನ್ನೆ ದಿನ ಹಾಡುತ್ತಾ ಹಾಡುತ್ತಾ ತಮ್ಮ ನೆನಪಿನಂಗಳ ಹೊಕ್ಕಿಬಂದರು. ಸುಮಾರು ಅರವತ್ತರ ದಶಕದಲ್ಲಿ ತಾವು ಮೇಲಿನ ಸಮಿತಿಯ ಆಶ್ರಯದಲ್ಲಿ ಹಾಡಲು ಆರಂಭಿಸಿದಾಗ ಅವರಿಗಾದ ಅನುಭವವನ್ನು ಅವರು ಹಂಚಿಕೊಂಡು ಹಾಡಿದರು.ಮಹಾಗಣಪತಿಯನ್ನು ಹಂಸಧ್ವನಿಯಲ್ಲಿ ವಂದಿಸಿ `ರಾಮಭಕ್ತಿ ಸಾಮ್ರೋಜ್ಯ~ (ಶುದ್ಧಬಂಗಾಳ)ದ ವೈಭವವನ್ನು ತಮ್ಮ ಗಾಯನ ವೈವಿಧ್ಯದ ಮೂಲಕ ಪ್ರಚುರಪಡಿಸಿದರು. ಅವರ ಮಾಮೂಲಿನ ಶೈಲಿಯ ಕಲ್ಪನಾಸ್ವರಗಳು ನಿತ್ಯನವೀನವಾಗಿದ್ದವು. ಪುರಂದರದಾಸರ `ಬಾರಯ್ಯ ವೆಂಕಟ~(ಸಾವೇರಿ)ದ ನಿರೂಪಣೆ ತಿಳಿಹೇಳಿದಂತಿತ್ತು. ನಿಧಿಯೇ ಶಬ್ದವನ್ನು ತಾರಸ್ಥಾಯಿಯಲ್ಲಿ ಹಾಡಿ ನಿಲ್ಲಿಸಿದ್ದು ರೋಮಾಂಚಕ. ವಸಂತ ರಾಗದ ಚಿತ್ತಾರವನ್ನು ಸುದೀರ್ಘವಾಗಿ ಬಿಡಿಸಿದ್ದು ಅವರ ಪ್ರೌಢಿಮೆಯ ಪ್ರತಿಬಿಂಬವಾಗಿತ್ತು. ತ್ಯಾಗರಾಜರ `ಸೀತಮ್ಮ ಮಾಯಮ್ಮ~ ಕೀರ್ತನೆಯನ್ನು ಸೂಕ್ಷ್ಮಭಾವಗಳಿಂಬ ಪರಿಪೂರಿತಗೊಳಿಸಿ ಅವರು ನಿರೂಪಿಸಿದರು.

 

`ಮಾಯಮ್ಮ~ ಎಂದು ಅವರು ತಾರ ಸ್ಥಾಯಿಯಲ್ಲಿ ನಿವೇದಿಸಿದ್ದು ರೋಚಕವಾಗಿತ್ತು. ಆಲಾಪನೆ ಮತ್ತು ಸಂಗತಿಗಳ ನಿರೂಪಣೆಯಲ್ಲಿ `ಹರಿ~ ಶಬ್ದದ ಬಳಕೆ, ಪಳಗಿರುವ ಧ್ವನಿ ಸಂಸ್ಕಾರಜನ್ಯ ಮಾದರಿಗಳು ಅವರತಣವನ್ನು ಸಾರಿ ಹೇಳಿದವು.ಮುಂದಿನ ಷಣ್ಮುಖಪ್ರಿಯ (ಮರಿವೇರೆ) ಮತ್ತು ಶಂಕರಾಭರಣ (ಎಂದುಕು ಪೆದ್ದಲ) ರಾಗಗಳ ಮತ್ತು ಕೃತಿಗಳ ವಿಸ್ತರಣೆಯಲ್ಲಿ ಅವರದ್ದೇ ಎನಿಸಿಕೊಂಡು, ಅಪಾರ ಸಂಖ್ಯೆಯ ಬಿಂಬ-ಪ್ರತಿಬಿಂಬಗಳು ಕೇಳುಗರಿಗೆ ರಸದೌತಣ ಉಂಡ ತೃಪ್ತಿ ನೀಡಿತು. ಮಾಧವ್ (ಪಿಟೀಲು), ನೇವೇಲಿ ನಾರಾಯಣನ್ (ಮೃದಂಗ) ಮತ್ತು ಭಾರ್ಗವ ಹಾಲಂಬಿ (ಖಂಜರಿ) ಪ್ರೌಢ ಗಾಯನಕ್ಕೆ ತಕ್ಕುದಾದ ರೀತಿಯಲ್ಲಿ ತಮ್ಮ ಪಾತ್ರಗಳನ್ನು ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.