ಮಂಗಳವಾರ, ಜನವರಿ 28, 2020
29 °C
ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?

ರಸವೂ ನೀರಸವೂ

ವಸುಧೇಂದ್ರ Updated:

ಅಕ್ಷರ ಗಾತ್ರ : | |

ರಸವೂ ನೀರಸವೂ

ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸಜ್ಜಾಗುತ್ತಿದೆ. ಈ ಸಾಹಿತ್ಯ  ಸಮ್ಮೇಳನ ಹೇಗಿರಬೇಕು? ಈ ಸಮ್ಮೇಳನದಲ್ಲಿ ಸಾಹಿತ್ಯಾಸಕ್ತಿಯೇ ವಿಜೃಂಭಿಸಬೇಕೆಂಬ ಆಶಯ ಈಡೇರುವುದು ಸಾಧ್ಯವೇ? ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ಮೂಡಲು ಸಾಹಿತ್ಯ ಸಮ್ಮೇಳನ ವೇದಿಕೆಯಾಗುವುದು ಹೇಗೆ? ಇತ್ಯಾದಿ ಪ್ರಶ್ನೆಗಳ ಸುತ್ತ ಲೇಖಕ ವಸುಧೇಂದ್ರ ಅವರು ಮಂಡಿಸಿರುವ ವಿಚಾರಗಳು ಇಲ್ಲಿವೆ...ಏಳು ವರ್ಷಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿ­ಸಿದ್ದೇನೆ. ‘ಛಂದ ಪುಸ್ತಕ’ದ ಪುಸ್ತಕ ಮಳಿಗೆಯನ್ನು ಈ ಎಲ್ಲಾ ಸಮ್ಮೇಳನ­ಗಳಲ್ಲೂ ನಾನೇ ಖುದ್ದಾಗಿ ನೋಡಿಕೊಂಡಿದ್ದೇನೆ. ಅದರ ಅನುಭವವನ್ನು ಓದುಗರೊಡನೆ ಹಂಚಿ­ಕೊಂಡಿದ್ದೇನೆ. ಈ ವರ್ಷ ಮಡಿಕೇರಿಯಲ್ಲಿಯೂ ಪುಸ್ತಕದ ಮಳಿಗೆಯನ್ನು ನಿರ್ವಹಿಸಲು ಹಲವು ಹೊಸ ಪುಸ್ತಕಗಳೊಡನೆ ಸಿದ್ಧವಾಗಿದ್ದೇನೆ. ಈ ಸಲದ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ಕಾರಣಗಳಿಗಾಗಿ ನನ್ನಲ್ಲಿ ಉತ್ಸಾಹವನ್ನು ಮೂಡಿಸುತ್ತಿದೆ.ನಾ.ಡಿಸೋಜ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ನನಗೆ ಅತ್ಯಂತ ಮಹತ್ವದ ಸಂಗತಿಯಾಗಿ ಕಾಣುತ್ತದೆ. ಅಕ್ಷರ ಲೋಕಕ್ಕೆ ಪ್ರಾಮಾಣಿಕವಾಗಿದ್ದುಕೊಂಡು, ಎಲ್ಲ ತರಹದ ಗುಂಪುಗಾರಿಕೆಯಿಂದ ದೂರವಿದ್ದು, ಓದುಗರಿಗೆ ಹತ್ತಿರವಾಗಿದ್ದು, ಸಮಾಜದ ಸಮಸ್ಯೆಗಳಿಗೆ ಹೃದಯಸ್ಪರ್ಶಿಯಾಗಿ ಯಾವತ್ತೂ ಸ್ಪಂದಿಸಿದ ಈ ಹಿರಿಯ ಸಾಹಿತಿಗೆ ನಾಡು ಸಲ್ಲಿಸುತ್ತಿರುವ ಬಹುಮುಖ್ಯ ಗೌರವ ಇದಾಗಿದೆ. ಯಾವುದಾದರೂ ಗುಂಪಿನೊಡನೆ ಒಂದಾಗದೆ ನಮ್ಮ ಪಾಡಿಗೆ ನಾವು ಸಾಹಿತಿಯಾಗಿ ಬದುಕುವುದೇ ಕಷ್ಟವೆನ್ನುವ ಅತಿರೇಕದ ಪ್ರಸ್ತುತ ವಾತಾವರಣದ ನಡುವೆ, ಇಂತಹ ಸಂಗತಿ ನನ್ನಂತಹ ಯುವ ಬರಹಗಾರರಿಗೆ ಆಶಾದಾಯಕವಾಗಿ ಕಂಡಿದೆ.ವಿಜಾಪುರದಲ್ಲಿ ನಡೆದ ಈ ಹಿಂದಿನ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳ ಅನುಭವಗಳನ್ನು ವಿವರವಾಗಿ ದಾಖಲಿಸಿ, ಹೇಗೆ ಅದನ್ನು ಉತ್ತಮ ಪಡಿಸಬಹುದೆಂಬ ಸಲಹೆಗಳೊಂದಿಗೆ ಲೇಖನವನ್ನು ಪತ್ರಿಕೆಯೊಂದರಲ್ಲಿ ಬರೆದಿದ್ದೆ. ಅದು ಪ್ರಕಟವಾದ ತಕ್ಷಣ, ಸಾಹಿತ್ಯ ಪರಿಷತ್ತಿನ ಕೊಡುಗು ಜಿಲ್ಲಾ ಘಟಕದ ಅಧ್ಯಕ್ಷರು ನನಗೆ ಫೋನಾಯಿಸಿ ‘ನಿಮ್ಮ ಲೇಖನ ಓದಿದೆ ಸಾರ್. ಮುಂದಿನ ವರ್ಷ ನಮ್ಮ ಮಡಿಕೇರಿಯಲ್ಲಿ, ನೀವು ಹೇಳಿದ ಎಲ್ಲಾ ಸಲಹೆಗಳನ್ನು ಅಳವಡಿಸಿ­ಕೊಳ್ಳುತ್ತೇವೆ. ದಯವಿಟ್ಟು ಬನ್ನಿ’ ಎಂದು ಅತ್ಯಂತ ಆತ್ಮವಿಶ್ವಾಸದ ಧ್ವನಿಯಲ್ಲಿ ಹೇಳಿದ್ದರು.ಸಾಹಿತ್ಯ ಸಮ್ಮೇಳನ ನಡೆಸುವಾಗ ಕಾರ್ಯಕರ್ತರಿಗೆ ತನ್ನದೇ ಆದ ತೊಂದರೆಗಳು, ಇತಿ-ಮಿತಿಗಳು ಇದ್ದೇ ಇರುತ್ತವೆ. ಅದೆಷ್ಟರ ಮಟ್ಟಿಗೆ ನನ್ನ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತದೋ ಎಂಬ ಬಗ್ಗೆ ನನಗೇ ಅನುಮಾನವಿದೆ. ಆದರೆ ಸಂಬಂಧಪಟ್ಟ ವ್ಯಕ್ತಿಯೊಬ್ಬರು ಖುದ್ದಾಗಿ ಫೋನ್ ಮಾಡಿ ಉತ್ಸಾಹ ತೋರಿದರಲ್ಲವೆ, ಅದು ನನಗೆ ಮತ್ತೊಮ್ಮೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಉತ್ಸಾಹ ತುಂಬಲು ಸಾಕೆನ್ನಿಸಿದೆ.ಈ ಹಿಂದಿನ ಸಮ್ಮೇಳನಗಳಲ್ಲಿ ಬಯಲಿನಲ್ಲಿ ಮಳಿಗೆಯಲ್ಲಿ ಕೂತು ರಾಶಿ, ರಾಶಿ ಬಿಸಿಲನ್ನು ಅನುಭವಿಸಿದ್ದೇನೆ! ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನಾದರೂ ರಣಬಿಸಿಲನ್ನು ಪ್ರೀತಿಸುವ ಹೃದಯವಂತಿಕೆ ನನಗಿಲ್ಲ. ಈ ಬಾರಿ ಮಡಿಕೇರಿಯಲ್ಲಿ ತೀವ್ರ ಚಳಿ. ತಯಾರಾಗಿ ಬನ್ನಿ ಎಂಬ ಮಾತನ್ನು ಪತ್ರಿಕೆಯಲ್ಲಿ ಓದಿದ್ದೇ ಖುಷಿಯಾಗಿಬಿಟ್ಟಿದೆ. ಕೊನೆಗೂ ಒಂದು ಸಮ್ಮೇಳನದಲ್ಲಿ ತಣ್ಣಗೆ ಪುಸ್ತಕಗಳನ್ನು ಮಾರಬಹುದೆಂಬ ಭಾವವೇ ನನಗೆ ಖುಷಿ ಮೂಡಿಸಿದೆ.ಸಾಹಿತ್ಯದ ನೆಪದಲ್ಲಿ ಲಕ್ಷಾಂತರ ಕನ್ನಡಿಗರು ಒಂದೆಡೆ ಸೇರುವ ಪವಾಡದಲ್ಲಿ ಬೆರೆಯುವ ಸಂಗತಿ ನನಗೆ ಯಾವತ್ತೂ ಮುಖ್ಯವಾದದ್ದೇ ಆಗಿದೆ. ಆದರೆ ಸಾಹಿತಿಯಾಗಿ ನನಗೆ ಯಾವತ್ತೂ ಈ ಸಮ್ಮೇಳನಗಳು ಹೊಸತನ್ನು ಕಂಡುಕೊಳ್ಳಲು ಸಹಾಯ ಮಾಡಿಲ್ಲ.  ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸುವ ಹಲವು ಸಾಹಿತಿಗಳ ಹೆಸರನ್ನೇ ಕೆಲ­ವೊಮ್ಮೆ  ಕೇಳಿರುವುದಿಲ್ಲ. ಗೋಷ್ಠಿಗಳಲ್ಲಿ ಆಗುವ ಚರ್ಚೆಗಳೂ ನನಗೆ ಸ್ವಾರಸ್ಯಕರವಾಗಿ ಕಂಡಿಲ್ಲ.ಕೋಟಿಗಟ್ಟಲೆ ಹಣವನ್ನು ಸಾಹಿತ್ಯದ ಹೆಸರಿನಲ್ಲಿ ವ್ಯಯ ಮಾಡಿದರೂ, ಸಾಹಿತ್ಯಕ್ಕೆ ಈ ಸಮ್ಮೇಳನಗಳಲ್ಲಿ ಕೊನೆಯ ಸ್ಥಾನವಿರುವುದನ್ನು ಕಂಡು ನೋವುಂಡಿದ್ದೇನೆ. ‘ನೀನಾಸಂ’ ಶಿಬಿರದಲ್ಲೋ, ಧಾರವಾಡ ‘ಸಾಹಿತ್ಯ ಸಂಭ್ರಮ’ದಲ್ಲೋ ಅಥವಾ ‘ಆಳ್ವಾಸ್ ನುಡಿಸಿರಿ’ಯಲ್ಲೋ ಆದಷ್ಟು ಗಂಭೀರ ಸಾಹಿತ್ಯದ ಚರ್ಚೆಗಳು ಇಲ್ಲಿ ನಡೆಯುವುದಿಲ್ಲ. ಕೊನೆಯ ದಿನ ವೀರಾವೇಶದಲ್ಲಿ ಮಂಡಿಸುವ ನಿರ್ಣಯಗಳನ್ನಂತೂ ಮರುದಿನಕ್ಕೇ ಎಲ್ಲರೂ ಮರೆತು ಬಿಡುತ್ತಾರೆ.ಮುಂದಿನ ಸಾಹಿತ್ಯ ಸಮ್ಮೇಳನದಲ್ಲಿ ಅವುಗಳ ಸ್ಥಿತಿಗತಿಗಳೇನು ಎಂಬ ಸಂಗತಿಯ ಬಗ್ಗೆ ಯಾರಿಗೂ ಆಸಕ್ತಿಯಿರುವುದಿಲ್ಲ. ನಿಜಕ್ಕೂ ಈ ತರಹದ ಸಮ್ಮೇಳನಗಳು ಸಾಹಿತ್ಯಾಸಕ್ತರಿಗೆ ಬೇಕಾಗಿದೆಯೇ? ಎಂಬ ಪ್ರಶ್ನೆ ಯಾವತ್ತೂ ನನ್ನನ್ನು ಕಾಡುತ್ತದೆ. ವರ್ಷದಿಂದ ವರ್ಷಕ್ಕೆ ಈ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತಿಗಳು ಭಾಗವಹಿಸುವುದು ಕಡಿಮೆಯಾಗುತ್ತಿರುವುದನ್ನು ನೋವಿನಿಂದಲೇ ಗಮನಿಸುತ್ತಿದ್ದೇನೆ.

ಪ್ರತಿಕ್ರಿಯಿಸಿ (+)