ರಸಸಾರದ ಕುಸಿತ: ಇಳುವರಿಗೆ ಹೊಡೆತ

7

ರಸಸಾರದ ಕುಸಿತ: ಇಳುವರಿಗೆ ಹೊಡೆತ

Published:
Updated:

ಬೆಂಗಳೂರು: `ರಾಜ್ಯದಲ್ಲಿ 13 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಕಡಿಮೆ ರಸಸಾರ (ಪಿಎಚ್) ಹೊಂದಿದೆ. ಈ ಅಂಶ ಆಹಾರ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ~ ಎಂದು ಬೆಂಗಳೂರು ಕೃಷಿ ವಿವಿಯ ಕುಲಪತಿ ಡಾ. ಕೆ.ನಾರಾಯಣ ಗೌಡ ಕಳವಳ ವ್ಯಕ್ತಪಡಿಸಿದರು. ಕೃಷಿ ವಿವಿ ಆಶ್ರಯದಲ್ಲಿ ಗುರುವಾರ ನಡೆದ `ಅತಿ ಕಡಿಮೆ ರಸಸಾರದಲ್ಲಿ ಸಸ್ಯ ಮತ್ತು ಮಣ್ಣಿನ ಕ್ರಿಯೆ~ ಕುರಿತ ಅಂತರರಾಷ್ಟ್ರೀಯ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ದೇಶದಲ್ಲಿ ರಸಸಾರ  ಕಡಿಮೆ ಇರುವ 480 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ 250 ಲಕ್ಷ ಹೆಕ್ಟೇರ್ ಭೂಮಿ 5.5ಕ್ಕಿಂತ ಕಡಿಮೆ ರಸಸಾರ ಹಾಗೂ 230 ಲಕ್ಷ ಹೆಕ್ಟೇರ್ ಜಮೀನು 6.5ಕ್ಕಿಂತ ಕಡಿಮೆ ರಸಸಾರ ಹೊಂದಿದೆ~ ಎಂದರು.`ಕಡಿಮೆ ರಸಸಾರ ಹೊಂದಿರುವ ಭೂ ಪ್ರದೇಶಗಳಲ್ಲಿ ಫಲವತ್ತತೆ ಹೆಚ್ಚಿಸುವ ಬಗ್ಗೆ ಕೃಷಿ ವಿವಿ ಅಧ್ಯಯನ ನಡೆಸಿದೆ. ಇಂಥ ಪ್ರದೇಶಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಕ್ಯಾಲ್ಸಿಯಂ (ಸುಣ್ಣ) ಸೇರಿದಂತೆ ವಿವಿಧ ಪರ್ಯಾಯ ಅಂಶಗಳನ್ನು ಭೂಮಿಗೆ ಸೇರಿಸಲು ಸೂಚಿಸಲಾಗುತ್ತಿದೆ. ಇದರಿಂದ ರಸಸಾರವನ್ನು ಹೆಚ್ಚಿಸಬಹುದು~ ಎಂದು ಅವರು ಸಲಹೆ ನೀಡಿದರು.  ಮಣ್ಣು ವಿಜ್ಞಾನಿಗಳ ಭಾರತೀಯ ಸಂಘಟನೆಯ ಬೆಂಗಳೂರು ಘಟಕದ ಅಧ್ಯಕ್ಷ ಡಾ.ಎಂ.ಎಸ್.ಬದ್ರಿನಾಥ್, `ಕರಾವಳಿ ಹಾಗೂ ಗುಡ್ಡ ಪ್ರದೇಶಗಳಲ್ಲಿ ಮಣ್ಣಿನ ಸಾರ ತೀರ ಕಡಿಮೆ ಇದೆ. ಕರಾವಳಿಯಲ್ಲಿ ವಾರ್ಷಿಕ 4,000 ಮಿ.ಮೀ ಮಳೆಯಾಗುತ್ತದೆ. ಮಳೆ ಅಬ್ಬರಕ್ಕೆ ಮಣ್ಣಿನ ಸಾರವೆಲ್ಲ ಕೊಚ್ಚಿಕೊಂಡು ಹೋಗಿ ಸಮುದ್ರ ಸೇರುತ್ತದೆ. ಇದರಲ್ಲಿ ಅಲ್ಯುಮಿನಿಯಂ, ಕಬ್ಬಿಣ, ಮ್ಯಾಂಗನೀಸ್ ಇತರೆ ಲೋಹದ ಅಂಶ ಜಾಸ್ತಿ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಸುಣ್ಣ ಬಳಸಬೇಕು~ ಎಂದು ಸಲಹೆ ನೀಡಿದರು.ನೀರು ಪರೀಕ್ಷೆ: `ಗಂಗಾವತಿ, ವಿಜಾಪುರ, ಸಿರಗುಪ್ಪ ಸೇರಿದಂತೆ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಮಣ್ಣಿನಲ್ಲಿ ಸೋಡಿಯಂ ಅಂಶ ಜಾಸ್ತಿ. ಇಲ್ಲಿ ಮಣ್ಣಿಗೆ ಜಿಪ್ಸಂ ಹಾಕಬೇಕು. ರೈತರು ಮಣ್ಣು ಪರೀಕ್ಷೆಗೆ ತರುವ ಸಂದರ್ಭದಲ್ಲಿ ನೀರನ್ನೂ ತಂದರೆ ಮಣ್ಣಿನ ವಿಜ್ಞಾನಿಗಳಿಗೆ ಪರೀಕ್ಷೆ ನಡೆಸಲು ಸಹಕಾರಿಯಾಗುತ್ತದೆ. ಮಣ್ಣು ಪರೀಕ್ಷೆ ಮಾಡದೆ ಯಾವುದೇ ಸಾರ ಹಾಕುವುದು ಸರಿಯಲ್ಲ~ ಎಂದರು.ಸಂಘಟನಾ ಕಾರ್ಯದರ್ಶಿ ಡಾ.ಎನ್. ಬಿ.ಪ್ರಕಾಶ್, `ಭಾರತದಲ್ಲಿ ಮೊದಲ ಬಾರಿ ಈ ಸಮಾವೇಶ ನಡೆಯುತ್ತಿದೆ. ಈ ಹಿಂದಿನ ಸಮಾವೇಶ ಚೀನಾದಲ್ಲಿ ನಡೆದಿತ್ತು. ವಿದೇಶದ 109 ಮಂದಿ ಭಾಗವಹಿಸುತ್ತಿದ್ದಾರೆ. 11 ದಿಕ್ಸೂಚಿ ಭಾಷಣಗಳು, 31 ಉಪನ್ಯಾಸಗಳು, ಆರು ತಾಂತ್ರಿಕ ಹಾಗೂ ಎರಡು ವಿಶೇಷ ಉಪನ್ಯಾಸಗಳು, ವಿವಿಧ ಗೋಷ್ಠಿಗಳನ್ನು ಆಯೋಜಿಸಲಾಗಿದೆ~ ಎಂದರು. ಸಮಾವೇಶದ ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಾ.ಲಿಯೋನ್ ಕೊಚಿಯಾನ್, ಸ್ಥಳೀಯ ಸಂಘಟನಾ ಸಮಿತಿಯ ಮುಖ್ಯಸ್ಥ ಡಾ.ಎಚ್.ಶಿವಣ್ಣ ಉಪಸ್ಥಿತರಿದ್ದರು.`ಕಟ್ಟಡ ನಿರ್ಮಾಣಕ್ಕೆ ಕೃಷಿ ಭೂಮಿ~


`ದೇಶದಲ್ಲಿ ಜನಸಂಖ್ಯೆ ಸ್ಫೋಟದ ಹಿನ್ನೆಲೆಯಲ್ಲಿ ಈಚಿನ ವರ್ಷಗಳಲ್ಲಿ ಫಲವತ್ತಾದ ಕೃಷಿ ಭೂಮಿಗಳಲ್ಲೇ ಕಟ್ಟಡ, ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಇದೊಂದು ಕಳವಳಕಾರಿ ಬೆಳವಣಿಗೆ~ ಎಂದು ಭಾರತೀಯ ಕೃಷಿ ವಿಜ್ಞಾನಿಗಳ ನೇಮಕ ಮಂಡಳಿಯ ಮಾಜಿ ಅಧ್ಯಕ್ಷ ಡಾ.ಕೀರ್ತಿ ಸಿಂಗ್ ಅಭಿಪ್ರಾಯಪಟ್ಟರು.ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, `ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ದೇಶದಲ್ಲಿ ಆಹಾರ ಉತ್ಪಾದನೆ ಪ್ರಮಾಣ ತೀರ ಕಡಿಮೆ ಇತ್ತು. ಈಗ ಉತ್ಪಾದನೆಯಲ್ಲಿ ಹಲವು ಪಟ್ಟು ಜಾಸ್ತಿ ಆಗಿದೆ. ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಆಹಾರ ಉತ್ಪಾದನೆ ಪ್ರಮಾಣ ಹೆಚ್ಚಿಸುವುದು ದೊಡ್ಡ ಸವಾಲಾಗಿದೆ. ಆದರೆ ವಾಣಿಜ್ಯ ಚಟುವಟಿಕೆಗಳಿಗೆ ಕೃಷಿ ಭೂಮಿ ಬಳಕೆಯಿಂದ ಆಹಾರ ಉತ್ಪಾದನೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ~ ಎಂದರು.`ವಾತಾವರಣ ಬದಲಾವಣೆ ಸೇರಿದಂತೆ ಕೃಷಿ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗಳಿಗೆ ಇನ್ನಷ್ಟು ಒತ್ತು ನೀಡಬೇಕು~ ಎಂದು ಅವರು ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry