ಶನಿವಾರ, ಜೂನ್ 12, 2021
23 °C

ರಸೆಲ್ ಮಾರ್ಕೆಟ್ ಬದುಕು ಕಟ್ಟುತ್ತಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸೆಲ್ ಮಾರ್ಕೆಟ್ ಬದುಕು ಕಟ್ಟುತ್ತಾ...

`ನನ್ನ ಮನೆ ರಸೆಲ್ ಮಾರ್ಕೆಟ್‌ನಿಂದ ಕೇವಲ ಇನ್ನೂರು ಮೀಟರ್ ದೂರದಲ್ಲಿದೆ. ದಿನವೂ ಬೆಳಿಗ್ಗೆ 5ಕ್ಕೆ ಏಳುವ ರೂಢಿ. ಅವೊತ್ತು ಬೆಳಗಿನ ಗಾಳಿ ಜತೆಗೆ ಹೊಗೆಯ ಘಾಟು ಕೂಡ ಇತ್ತು. ರಸ್ತೆ ಬದಿಯಲ್ಲಿ ಮಲಗುವ ಭಿಕ್ಷುಕರೋ ಅಥವಾ ಮಾರುಕಟ್ಟೆಗೆ ತರಕಾರಿ ಹೊತ್ತು ತರುವ ರೈತರೋ ಚಳಿಕಾಯಿಸಿಕೊಳ್ಳಲು ಜೋರು ಬೆಂಕಿ ಹಾಕಿಕೊಂಡಿರಬೇಕು ಅಂದುಕೊಂಡೆ. ಆದರೆ ಆಗಿದ್ದೇ ಬೇರೆ. ಹಬೆಯಾಡುತ್ತಿದ್ದ ಕಾಫಿ ಹೀರುತ್ತ ವಾರ್ತೆ ನೋಡೋಣ ಎಂದು ಟೀವಿ ಆನ್ ಮಾಡಿದೆ. ಧಗಧಗಿಸಿ ಉರಿಯುತ್ತಿದ್ದ ರಸೆಲ್ ಮಾರ್ಕೆಟ್‌ನ್ನು ಕಂಡು ಆಘಾತವಾಯ್ತು. ಬೆಳಗಿನ ಹತ್ತು ಗಂಟೆವರೆಗೆ ದಟ್ಟ ಹೊಗೆ, ಫೈರ್ ಎಂಜಿನ್ ಸೈರನ್ ಸದ್ದು ಮೊಳಗುತ್ತಲೇ ಇತ್ತು. ಇದೊಂದು ದೊಡ್ಡ ದುರಂತ~ಫೆಬ್ರುವರಿ 25ರ ಬೆಳಗಿನ ಜಾವ ಅಗ್ನಿ ದುರಂತಕ್ಕೆ ತುತ್ತಾದ ರಸೆಲ್ ಮಾರ್ಕೆಟ್ ಕುರಿತು 67ರ ಅಂಚಿನಲ್ಲಿರುವ ಅನ್ವರ್ ಹುಸೇನ್ ಭಾವುಕರಾಗಿ  ನೆನಪಿಸಿಕೊಳ್ಳುತ್ತಿದ್ದರು. `ಚಿಕ್ಕವನಿದ್ದಾಗಿನಿಂದಲೂ ರಸೆಲ್ ಮಾರ್ಕೆಟ್‌ಗೂ ನನಗೂ ಬಿಡದ ನಂಟು. ಸುಮಾರು 50 ವರ್ಷಗಳ  ಬಾಂಧವ್ಯವಿದೆ. ಸಣ್ಣವನಿದ್ದಾಗ ಬೊಂಬೆ ಕೊಳ್ಳಲು ಇಲ್ಲಿಗೆ ಬರುತ್ತಿದ್ದೆ. ನನ್ನ ತಾಯಿ ತರಕಾರಿ ತರಲು ಸಿದ್ಧರಾದರೆ,  ನಾನು ಆಕೆಯ ಸೀರೆಯ ಚುಂಗು ಹಿಡಿದು ಬರುತ್ತಿದ್ದೆ. ಆಗೆಲ್ಲಾ ನನ್ನಮ್ಮ ನನ್ನ ತಲೆ ಮೇಲೆ ಮೊಟಕುತ್ತಿದ್ದಳು. ದೊಡ್ಡವನಾದ ಮೇಲೆ ನಾನೇ ತರಕಾರಿ, ಹಣ್ಣು, ಹೂ ಹಾಗೂ ಮಾಂಸ ಕೊಳ್ಳಲು ಬರುತ್ತಿದ್ದೆ. ಅಮ್ಮ ಕಾಲವಾದಳು. ಮಕ್ಕಳೊಂದಿಗೆ ಬರುತ್ತಿದ್ದೆ. ಈಗ ಮೊಮ್ಮಕ್ಕಳು ನನ್ನಂತೆಯೇ ಬೊಂಬೆಗಾಗಿ ಬರುತ್ತವೆ.~ಹೀಗೆ ರಸೆಲ್ ಮಾರುಕಟ್ಟೆಯೊಂದಿಗೆ ತಲೆಮಾರುಗಳ ಸಂಬಂಧ, ಒಡನಾಟ ಇರಿಸಿಕೊಂಡಿರುವ ಹಲವರು ಈ ಪ್ರದೇಶದಲ್ಲಿದ್ದಾರೆ. ರಸೆಲ್ ಮಾರ್ಕೆಟ್ ಅಗ್ನಿ ದುರಂತಕ್ಕೆ ತುತ್ತಾದಾಗ ಅನೇಕರು ಆಘಾತಕ್ಕೆ ಒಳಗಾಗಿದ್ದರು. ರಸೆಲ್ ಮಾರ್ಕೆಟ್ ಜತೆ ಜತೆಗೆ ಬದುಕು ಕಟ್ಟಿಕೊಂಡವರಿಗೆ ಮಾತ್ರ ಬರಸಿಡಿಲು ಬಡಿತಂತಾಗಿತ್ತು.ರಸೆಲ್ ಮಾರ್ಕೆಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿ 18 ದಿನಗಳೇ ಕಳೆದಿವೆ. ಅಗ್ನಿ ದುರಂತದಲ್ಲಿ ಎಲ್ಲವನ್ನು ಕಳೆದುಕೊಂಡ ವರ್ತಕರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ಕೆ ಮಾತ್ರ ಸರ್ಕಾರ ಮುಂದಾಗಲಿಲ್ಲ. ಪರಿಹಾರವೆಂದು ಸ್ವಲ್ಪ ಹಣವನ್ನು ನೀಡಿ ಮರೆತೇ ಬಿಟ್ಟಿತು. ರಸೆಲ್ ಮಾರ್ಕೆಟ್ ದುರಸ್ತಿ ಮಾಡಿಕೊಡಿ ಎಂದು ವರ್ತಕರು ಬಿಬಿಎಂಪಿ ಮೊರೆ ಹೋದರು. ಇನ್ನೂ ಆರು ತಿಂಗಳ ಸಮಯ ಬೇಕು ಎಂದರು. ಆರು ತಿಂಗಳು ಕೆಲಸವಿಲ್ಲದೇ ಕೂರಲು ವರ್ತಕರಿಗೆ ಸಾಧ್ಯವಿಲ್ಲ. ಏಕೆಂದರೆ ನಿತ್ಯ ತುತ್ತಿನ ಚೀಲ ತುಂಬ ಬೇಕು ಎಂದರೆ ದುಡಿಯಲೇ ಬೇಕು. ಇಲ್ಲದಿದ್ದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಇಟ್ಟು ಮಲಗಬೇಕು.ಜೀವನದ ಹೋರಾಟಕ್ಕೆ ಅಣಿಗೊಂಡ ಇವರ ಮನಸ್ಸಿನಲ್ಲಿ ಹಲವು ಯೋಚನೆಗಳು ಮೂಡಿದವು. ಎಲ್ಲ ವರ್ತಕರು, ಕೂಲಿಗಳು ಒಂದೆಡೆ ಸೇರಿದರು. ತಾವೇ ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು. ಇದಕ್ಕಾಗಿಯೇ ರಸೆಲ್ ಮಾರ್ಕೆಟ್ ಟ್ರೇಡರ್ಸ್‌ ಅಸೋಸಿಯೇಶನ್‌ನಲ್ಲಿ ದುರಸ್ತಿ ಯೋಜನೆ ರೂಪುಗೊಂಡಿತು.  ಇದು ಕೇವಲ ಆರಂಭಶೂರತ್ವ ಆಗಿರಲಿಲ್ಲ. ರಸೆಲ್ ಮಾರ್ಕೆಟ್ ದುರಸ್ತಿಗೆ ಕಟಿಬದ್ಧರಾದ ನಂತರ ಎಲ್ಲರೂ ಹಗಲು ರಾತ್ರಿ ಎನ್ನದೇ ಹಣ ನೀಡಿದರು. ತಮ್ಮ ಮಳಿಗೆ ಕಟ್ಟಲು ತಾವೂ ಕೈಗೂಡಿಸಿದರು. ಅವರ ಸಾಂಘಿಕ ಶ್ರಮ ಈಗ ಫಲ ಕೊಟ್ಟಿದೆ. ಇನ್ನೂ ಮೂರೇ ದಿನದಲ್ಲಿ ರಸೆಲ್ ಮಾರ್ಕೆಟ್‌ನಲ್ಲಿ ಮತ್ತೆ ಎಂದಿನ ವ್ಯಾಪಾರ ವಹಿವಾಟು ಪ್ರಾರಂಭಗೊಳ್ಳಲಿದೆ. ಅಗ್ನಿ ದುರಂತಕ್ಕೆ ಮುನ್ನ...

ರಸೆಲ್ ಮಾರ್ಕೆಟ್ ಅಗ್ನಿ ದುರಂತಕ್ಕೆ ತುತ್ತಾಗುವ ಮುನ್ನ ಪ್ರತಿದಿನವೂ ಜನಜಾತ್ರೆ. ಸೂರ್ಯ ಹುಟ್ಟುವ ಮೊದಲೇ ದಿನಚರಿ ಆರಂಭವಾಗುತ್ತಿತ್ತು. ಎಂಟರಿಂದ ಹತ್ತು ಸಾವಿರ ಜನ ಜಮಾಯಿಸುತ್ತಿದ್ದರು. ಮಾರುವ ಕೊಳ್ಳುವ ವಹಿವಾಟು ಜೋರಾಗಿ ನಡೆಯುತ್ತಿತ್ತು. ಒಂದು ದಿನಕ್ಕೆ ಇಡೀ ಮಾರ್ಕೆಟ್‌ನಲ್ಲಿ ಎರಡರಿಂದ ಎರಡೂವರೆ ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿತ್ತು.ಅಗ್ನಿ ದುರಂತದ ನಂತರ...

ಈಗ ಇಲ್ಲಿಗೆ ಬರುವವರ ಸಂಖ್ಯೆ ಒಂದು ಸಾವಿರವನ್ನು ದಾಟುವುದಿಲ್ಲ. ವ್ಯಾಪಾರ ಇಪ್ಪತ್ತೈದು ಸಾವಿರದ ಗಡಿ ದಾಟುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಮಾರ್ಕೆಟ್ ಅನ್ನು ಆವರಿಸಿರುವ ಕತ್ತಲು. ವಿದ್ಯುತ್ ಇಲ್ಲದೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ.ಮಾರ್ಕೆಟ್‌ನಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಧೂಳು, ಮಣ್ಣು ಮಾರ್ಕೆಟ್ ತುಂಬಾ ತುಂಬಿಕೊಂಡಿದೆ. ನೀರಿನ ಪೂರೈಕೆ ಸರಿಯಿಲ್ಲ. ಇವೆಲ್ಲದರ ನಡುವೆಯೇ ಇಲ್ಲಿನ ವರ್ತಕರು ತಮ್ಮ ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲಿ ಯಶಸ್ವಿಯಾಗಿದ್ದಾರೆ. ಅವರ ಹೋರಾಟ ಹಾಗೂ ಪಟ್ಟ ಬವಣೆಯನ್ನು ರಸೆಲ್ ಮಾರ್ಕೆಟ್ ಟ್ರೇಡರ್ಸ್‌ ಅಸೋಸಿಯೇಶನ್‌ನ ಪದಾಧಿಕಾರಿಗಳು ಹಂಚಿಕೊಂಡಿದ್ದು ಹೀಗೆ...`ಮಾರ್ಕೆಟ್‌ನಲ್ಲಿ ನಿತ್ಯ 10 ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಾರೆ. ದಿನಕ್ಕೆ ಮುನ್ನೂರು ನಾನೂರು ದುಡಿದರೆ ಅವರ ಇಡೀ ಕುಟುಂಬದ ತುತ್ತಿನ ಚೀಲ ತುಂಬುವುದು. ಸರ್ಕಾರ ನೀಡಿದ ಪರಿಹಾರದ ಹಣದಿಂದ ಆರು ತಿಂಗಳು ಜೀವನ ಮಾಡುವುದೂ ಅಸಾಧ್ಯ. ವರ್ತಕರೆಲ್ಲರೂ ಒಂದೆಡೆ   ಚರ್ಚಿಸಿ ಪರಿಹಾರದಿಂದ ಸಿಕ್ಕ ಅಲ್ಪ ಮೊತ್ತವನ್ನು ಜೋಡಿಸಿಕೊಂಡು, ಉಳಿದಿದ್ದನ್ನು ತಮ್ಮ ಕೈಯಿಂದಲೇ ಹಾಕಿ ದುರಸ್ತಿ ಕಾರ್ಯಕ್ಕೆ ಮುಂದಾದೆವು. ದುರಸ್ತಿಗೆ ಈಗ 45ರಿಂದ 50 ಲಕ್ಷ ಖರ್ಚಾಗಿದೆ. ಈ ಹಣವನ್ನು ಸಂಪೂರ್ಣವಾಗಿ ವರ್ತಕರಿಂದಲೇ ಸಂಗ್ರಹಿಸಲಾಗಿದೆ. ಅಗ್ನಿ ಆಕಸ್ಮಿಕದಲ್ಲಿ ಹಾನಿಗೊಳಗಾದ ಭಾಗ ಸಂಪೂರ್ಣವಾಗಿ ಮರದಿಂದ ಕೂಡಿತ್ತು. ಈಗ ಮರಕ್ಕೆ ಬದಲಾಗಿ ಕಬ್ಬಿಣ ಬಳಕೆ ಮಾಡಿ ನಿರ್ಮಾಣ ಮಾಡಿದ್ದೇವೆ. ಬಿಬಿಎಂಪಿಯವರು ನೀವು ಅವೈಜ್ಞಾನಿಕ ರೀತಿಯಲ್ಲಿ ದುರಸ್ತಿ ನೆಡೆಸುತ್ತಿದ್ದೀರಿ ಎಂದು ನೋಟಿಸ್ ನೀಡಿದ್ದಾರೆ.ಆದರೆ ನಾವು ಪೂರ್ತಿ ಬಂದೋಬಸ್ತ್ ಇರುವ ರೀತಿಯಲ್ಲೇ ಪುನರ್ ನಿರ್ಮಾಣ ಮಾಡಿದ್ದೇವೆ. ಇನ್ನು ಮೂರು ದಿನಗಳಲ್ಲಿ ಮಾರುಕಟ್ಟೆ ಪುನರಾರಂಭಗೊಳ್ಳಲಿದೆ~ ಎನ್ನುತ್ತಾರೆ ರಸೆಲ್ ಮಾರ್ಕೆಟ್ ಟ್ರೇಡರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಎನ್.ನಾಸಿರ್ ಅಹಮದ್.`ಇಲ್ಲಿರುವ ವರ್ತಕರೆಲ್ಲಾ ಜಾಗದ ಮಾಲೀಕರಲ್ಲ. ಲೈಸೆನ್ಸ್‌ಹೋಲ್ಡರ್ಸ್‌ ಮಾತ್ರ. ನಮಗೆ ಇದುವರೆಗೂ ಕರೆಂಟ್ ಸಿಕ್ಕಿಲ್ಲಾ. ಮಾರುಕಟ್ಟೆ ತುಂಬಾ ಕತ್ತಲು ಆವರಿಸಿಕೊಂಡಿದೆ. ಬೆಸ್ಕಾಂನವರನ್ನು ಕೇಳಿದರೆ ಬಿಬಿಎಂಪಿಯಿಂದ ಅನುಮತಿ ಪತ್ರ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಆದರೆ ಬಿಬಿಎಂಪಿಯವರು ಮಾತ್ರ ಇದಕ್ಕೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ~ ಎನ್ನುತ್ತಾರೆ ಸಂಘದ ಉಪಾಧ್ಯಕ್ಷ ವಿ.ಸಿರಾಜ್ ಅಹಮದ್.`ದಿನ ಪೂರ್ತಿ ಇಲ್ಲಿ ಮೈಮುರಿಯುವಂತೆ ದುಡಿವ ವರ್ಗವಿದೆ. ಅಂದಿನ ದುಡಿಮೆಯಿಂದಲೇ ನಮ್ಮ ಹೊಟ್ಟೆ ತುಂಬಬೇಕು. ಮಾರ್ಕೆಟ್‌ನಲ್ಲಿ ಮೂಲ ಸಮಸ್ಯೆಗಳು ಇವೆ. ಮುಖ್ಯವಾಗಿ ನಮ್ಮ ಹೊಟ್ಟೆಮೇಲೆ ಹೊಡೆಯುತ್ತಿರುವುದು ವಿದ್ಯುತ್ ಸಮಸ್ಯೆ. ಅಂದು ಶಾರ್ಟ್ ಸರ್ಕ್ಯೂಟ್ ಆಗಿ ನಮ್ಮ ಬದುಕು ಹೋಯಿತು. ಈಗ ಕತ್ತಲೆ ಕಿತ್ತು ತಿನ್ನುತ್ತಿದೆ. ಹೇಗಾದರೂ ಮಾಡಿ ನಮ್ಮ ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಶಯಕ್ಕೆ ಬಿಬಿಎಂಪಿ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಒಂದೊಂದು ಅಂಗಡಿಯನ್ನು ದುರಸ್ತಿ ಮಾಡಲು ಎಪ್ಪತ್ತರಿಂದ ಎಂಬತ್ತು ಸಾವಿರ ರೂಪಾಯಿಗಳಷ್ಟು ಹಣ ಬೇಕು.ರಸೆಲ್ ಮಾರ್ಕೆಟ್‌ಗೆ ಒಂದು ಇತಿಹಾಸವಿದೆ. ಅದರ ಪಾರಂಪರಿಕತೆಗೆ ಮುಕ್ಕಾಗದಂತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ~  ಎನ್ನುತ್ತಾರೆ ಸಂಘದ ಸದಸ್ಯ ನಿಸಾರ್ ಅಹಮದ್.

ದುರಸ್ತಿ ಕಾರ್ಯ ನಡೆಯುತ್ತಿದ್ದ ಸ್ಥಳದಲ್ಲೇ ಪುಟ್ಟ ಮಗುವೊಂದು ಆಟವಾಡುತ್ತಿತ್ತು.ಬೆಂಕಿಗೆ ಆಹುತಿಯಾದ ಮರದ ತುಂಡುಗಳು ಅಲ್ಲೇ ಬಿದ್ದಿದ್ದವು. ಮಗು ಅಂಬೆಗಾಲಿಡುತ್ತಾ ಆ ಅರೆಬೆಂದ ಕಟ್ಟಿಗೆ ಹಿಡಿದುಕೊಂಡಾಗ ಕೈಗೆ ಮಸಿ ಕೂಡ ಮೆತ್ತಿಕೊಂಡಿತು. ಹಾಗೆಯೇ ಕಣ್ಣುಜ್ಜಿಕೊಂಡಾಗ ಅದರ ಕೆಂಪು ಕೆನ್ನೆಯ ಮೇಲೆ ಮಸಿ ಮೆತ್ತಿಕೊಂಡಿತು. ಅದರ ಅಮ್ಮ ನೋಡಿ ನಕ್ಕಳು. ಮಗುವೂ. ಆ ಮಗುವಿನ ನಗುವಿನಲ್ಲಿ ರಸೆಲ್ ಮಾರ್ಕೆಟ್‌ನ ಹದ ಮತ್ತು ಮುದ ಎರಡು ಮರುಕಳಿಸುವ ಭರವಸೆ ಕಾಣುತ್ತಿತ್ತು.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.