ರಸ್ತೆಗಳೆಲ್ಲ ಹಾಳು, ನಿಲ್ಲದ ಸಂಚಾರದ ಗೋಳು

7

ರಸ್ತೆಗಳೆಲ್ಲ ಹಾಳು, ನಿಲ್ಲದ ಸಂಚಾರದ ಗೋಳು

Published:
Updated:
ರಸ್ತೆಗಳೆಲ್ಲ ಹಾಳು, ನಿಲ್ಲದ ಸಂಚಾರದ ಗೋಳು

ಬೆಂಗಳೂರು: ಬಿಬಿಎಂಪಿ ಹೂಡಿ ಉಪವಿಭಾಗದ ದೊಡ್ಡನೆಕ್ಕುಂದಿ ವಾರ್ಡ್‌ನ ತೂಬರನಹಳ್ಳಿ - ಮುನೇಕೊಳಾಲು ನಡುವಿನ ಒಳವರ್ತುಲ ರಸ್ತೆ ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೇ ಹಾಳಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಮೂರು ವರ್ಷಗಳಿಂದಲೂ ಈ ರಸ್ತೆಯನ್ನು ದುರಸ್ತಿಪಡಿಸಿಲ್ಲ. ತೂಬರನಹಳ್ಳಿಯ ವೆಂಕಟೇಶ್ವರ ದೇವಾಲಯದಿಂದ ಮುನೇಕೊಳಾಲುವರೆಗಿನ ಒಳವರ್ತುಲ ರಸ್ತೆಯು ಸಂಪೂರ್ಣ ಹಾಳಾಗಿದೆ. ಇದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲು ಹಾಗೂ ಗುಂಡಿಗಳಿಂದ ಬೈಕ್ ಸವಾರರು ಪ್ರಯಾಸದಿಂದ ಸಂಚಾರಿಸುವಂತಾಗಿದೆ. ರಾತ್ರಿ ವೇಳೆ ರಸ್ತೆಯಲ್ಲಿ ಓಡಾಡುವುದು ಸವಾಲಿನಂತಾಗಿದೆ' ಎಂದು ಸ್ಥಳೀಯರಾದ ಕೆ.ಪುರುಷೋತ್ತಮ ದೂರಿದದ್ದಾರೆ.`4.2 ಕಿ.ಮೀ ಉದ್ದ ಹಾಗೂ 18 ಮೀಟರ್ ಅಗಲದ ರಸ್ತೆ ಅಭಿವೃದ್ಧಿಗಾಗಿ ಬಿಬಿಎಂಪಿ  ್ಙ 2 ಕೋಟಿ ವೆಚ್ಚದಲ್ಲಿ 2010ರ ಏಪ್ರಿಲ್ 19ರಂದು ಟೆಂಡರ್ ಕರೆದಿತ್ತು. ಆದರೆ, ಅದೇ ವರ್ಷದ ಮೇ 6ರಂದು ಸಿದ್ಧಪಡಿಸಿರುವ ಕಾಮಗಾರಿಯ ಯೋಜನಾ ವರದಿಯಲ್ಲಿ ರಸ್ತೆ ವಿಸ್ತೀರ್ಣವನ್ನು 18ರಿಂದ 12 ಮೀಟರ್‌ಗೆ ಇಳಿಸಲಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಪಾಲಿಕೆಯ ಹಿರಿಯ ಅಧಿಕಾರಿಗಳು ತನಿಖೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.`2010ರಲ್ಲಿ ಆರಂಭವಾದ ರಸ್ತೆ ಅಭಿವೃದ್ಧಿ ಕಾಮಗಾರಿ ಕೆಲ ದಿನಗಳಲ್ಲೇ ಸ್ಥಗಿತಗೊಂಡಿತು. ರಸ್ತೆಯ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕಾಗಿ ಅಗೆದಿದ್ದ ಗುಂಡಿಗಳು ಈಗ ಕೊಳಚೆ ನೀರಿನ ಸಂಗ್ರಹಾಗಾರಗಳಾಗಿವೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಡೆಂಗೆ, ಮಲೇರಿಯಾದಂಥ ಮಾರಕ ಕಾಯಿಲೆಗಳಿಗೆ ಇದು ಕಾರಣವಾಗಲಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ರಸ್ತೆ  ಅಭಿವೃದ್ಧಿಗಾಗಿ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ಹಾಳಾಗಿರುವುದರಿಂದ ತೂಬರನಹಳ್ಳಿ ಮತ್ತು ಮುನೇಕೊಳಾಲು ನಡುವಿನ ಸಂಪರ್ಕಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಈ ಒಳವರ್ತುಲ ರಸ್ತೆ ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು' ಎಂದು ಒತ್ತಾಯಿಸಿದ್ದಾರೆ.

ರಾಮಮೂರ್ತಿನಗರದ ಟಿ.ಸಿ.ಪಾಳ್ಯ ಮುಖ್ಯರಸ್ತೆಯ ಪಿ ಅಂಡ್ ಟಿ ಲೇಔಟ್‌ನಲ್ಲಿ ಬೆಂಗಳೂರು ಜಲಮಂಡಳಿ ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿದ್ದು, ಬಡಾವಣೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು `ಪ್ರಜಾವಾಣಿ' ಓದುಗ ಗಿರೀಶ್ ಶೆಣೈ ದೂರಿದ್ದಾರೆ.`ಒಂದೂವರೆ ವರ್ಷದ ಹಿಂದೆ ಜಲಮಂಡಳಿಯು ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಆರಂಭಿಸಿತು. ಅಲ್ಲಿಂದ ಇಲ್ಲಿಯವರೆಗೂ ರಸ್ತೆಗಳಲ್ಲಿ ಹಳ್ಳ, ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಪೈಪ್ ಅಳವಡಿಕೆಗಾಗಿ ರಸ್ತೆಯ ಮಧ್ಯದಲ್ಲಿ ಗುಂಡಿ ತೋಡಿರುವ ಜಲಮಂಡಳಿ ಸಿಬ್ಬಂದಿ ಸಮರ್ಪಕವಾಗಿ ಗುಂಡಿ ಮುಚ್ಚಿಲ್ಲ. ಇದರಿಂದ ಮಳೆ ಬಂದರೆ ರಸ್ತೆಯ ಮಣ್ಣು ಕುಸಿದು ವಾಹನಗಳು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ. ಬಡಾವಣೆಯಲ್ಲಿ ಗುಂಡಿ, ಹೊಂಡಗಳ ಮಧ್ಯೆ ರಸ್ತೆಗಳು ಮಾಯವಾಗಿವೆ. ರಸ್ತೆ ದುರಸ್ತಿಗಾಗಿ ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ರಸ್ತೆಗಳು ಹಾಳಾಗಿರುವುದರಿಂದ ಶಾಲಾ ವಾಹನಗಳು ಸೇರಿದಂತೆ ಯಾವುದೇ ವಾಹನಗಳ ಸಂಚಾರ ಸಾಧ್ಯವಾಗುತ್ತಿಲ್ಲ. ಇದರಿಂದ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವೃದ್ಧರು ಹಾಗೂ ಅನಾರೋಗ್ಯಕ್ಕೆ ಒಳಗಾದವರು ರಸ್ತೆಗಳಲ್ಲಿ ಓಡಾಡುವುದು ದುಸ್ಸರವಾಗಿದೆ. ತುರ್ತು ಸಂದರ್ಭಗಳಲ್ಲಿ ಬಡಾವಣೆಗೆ ಆಂಬುಲೆನ್ಸ್ ಅಥವಾ ಅಗ್ನಿಶಾಮಕ ವಾಹನಗಳು ಬರಲೂ ಸಾಧ್ಯವಾಗುವುದಿಲ್ಲ. ಹೀಗಾಗಿ ಬಡಾವಣೆಯಲ್ಲಿ ಹಾಳಾಗಿರುವ ರಸ್ತೆಗಳನ್ನು ಆದಷ್ಟು ಬೇಗ ದುರಸ್ತಿಗೊಳಿಸಬೇಕು' ಎಂದು ಸ್ಥಳೀಯರಾದ ಕೆ.ರಾಮಚಂದ್ರನ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry