ಗುರುವಾರ , ಫೆಬ್ರವರಿ 25, 2021
27 °C
ನಗರದ ಸಂಚಾರ ದಟ್ಟಣೆಯ ರಸ್ತೆಗಳತ್ತ ಕಾಳಜಿ ವಹಿಸಿದ ಮಹಾನಗರ ಪಾಲಿಕೆ

ರಸ್ತೆಗಳೋ... ಮಸಣದ ದಾರಿಗಳೋ...

ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ರಸ್ತೆಗಳೋ... ಮಸಣದ ದಾರಿಗಳೋ...

ತುಮಕೂರು: ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳಿಗೆ ಡಾಂಬರು ಹಾಕಿ ವೈನಾಗಿ ಕಾಣುವಂತೆ ಮಾಡುವ ಕೆಲಸ ನಡೆಯುತ್ತಿದೆ.  ಆದರೆ ಇಷ್ಟೇ ಮುತುವರ್ಜಿ ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳಿಗೆ ಮಹಾನಗರ ಪಾಲಿಕೆ ತೋರುತ್ತಿಲ್ಲ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.ವಾರ್ಡ್ ಸದಸ್ಯರು ತಮ್ಮ ತಮ್ಮ ಬಡಾವಣೆ ರಸ್ತೆಗಳಿಗೆ ಡಾಂಬರು ಮೆತ್ತುವ ಕೆಲಸ ಮಾಡಿದ್ದಾರೆ. ಕೆಲವು ವಾರ್ಡ್ ಗಳಲ್ಲಿ ಈ ರಸ್ತೆಗಳು ಚೆನ್ನಾಗಿವೆ. ಮತ್ತಷ್ಟು ಕಡೆ ಕಳಪೆ ಕಾಮಗಾರಿಯ ಕಥೆ ಹೇಳುತ್ತಿವೆ.ಐದಾರು ತಿಂಗಳಲ್ಲೇ ಸಿಮೆಂಟ್‌ ರಸ್ತೆಗಳು ಹಳೆಯ ರಸ್ತೆಗಳಂತೆ ಗುಂಡಿಗಳ ಚಿತ್ತಾರ ಬಿಡಿಸಿಕೊಂಡು ನಿಂತಿರುವ ಉದಾಹರಣೆಗಳು ಸಾಕಷ್ಟು ಬಡಾವಣೆಗಳಲ್ಲಿ ಕಾಣುತ್ತಿದೆ.ಇದೇನೆ ಇರಲಿ, ಕೊನೆ ಪಕ್ಷ ವಾಹನ ಸಂಚಾರ ಹೆಚ್ಚಿರುವ ರಸ್ತೆಗಳ ಕಡೆಗೆ ಪಾಲಿಕೆ ಕಣ್ಣೋಟ ಹರಿಸಬೇಕಿತ್ತು. ಇದಾಗದ ಕಾರಣ ಪ್ರಯಾಣಿಕರು ಪಾಲಿಕೆಗೆ ಹಿಡಿಶಾಪ ಹಾಕುವಂತಾಗಿದೆ.ರೈಲು ನಿಲ್ದಾಣದಿಂದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‌ ಮೂಲಕ ಎಸ್‌.ಎಸ್‌.ಪುರಂ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ ಅಧೋಗತಿ ತಲುಪಿದೆ. ಈ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಇದಕ್ಕೂ ಚಾಲನೆ ನೀಡಿಲ್ಲ, ಅತ್ತ ರಸ್ತೆಯನ್ನು ದುರಸ್ತಿಗೊಳಿಸಿಲ್ಲ.ನ್ಯಾಯಾಧೀಶರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ಹಿರಿ–ಕಿರಿಯ ಅಧಿಕಾರಿಗಳೆಲ್ಲರೂ ಓಡಾಡುವ ಶಿರಾ ರಸ್ತೆಯ ಪಾಡು ದೇವರಿಗೆ ಪ್ರೀತಿ.

ಅಂತರಸನಹಳ್ಳಿಯಲ್ಲಿ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿಯ ಈ ರಸ್ತೆಯಲ್ಲಿ ವಾಹನ ಸಂಚಾರ ದ್ವಿಗುಣಗೊಂಡಿದೆ. ಆದರೆ ರಸ್ತೆ ಉದ್ದಕ್ಕೂ ಗುಂಡಿ ಬಿದ್ದಿವೆ. ಗುಂಡಿಯ ಜತೆಗೆ ದೂಳು, ದ್ವಿಚಕ್ರ ವಾಹನ ಸವಾರರನ್ನು ಹೈರಾಣು ಮಾಡುತ್ತಿದೆ.ಶಿರಾಗೇಟ್‌ ವೃತ್ತವನ್ನು ಅಭಿವೃದ್ಧಿಗೊಳಿಸಲು ಮುಂದಾಗಿದ್ದರೂ ಕೆಲಸವೂ ವೇಗ ಪಡೆದುಕೊಂಡಿಲ್ಲ.  ವೈಜ್ಞಾನಿಕ ರೀತಿಯಲ್ಲಿ ವೃತ್ತ ಅಭಿವೃದ್ಧಿಗೊಳಿಸುವ ಕೆಲಸ ಆಗಿಲ್ಲ. ವೃತ್ತದ ಸುತ್ತಲೂ ಒತ್ತುವರಿ ತೆರವುಗೊಳಿಸದೇ ಇದ್ದಲ್ಲಿ ಇದು ಮತ್ತೊಂದು ಅಪಘಾತ ವಲಯವಾಗಲಿದೆ ಎನ್ನುತ್ತಾರೆ ಇಲ್ಲಿನ ಜನರು.ಮಧುಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಮುನಿಸ್ವಾಮಯ್ಯನಪಾಳ್ಯ– ದೇವರಾಯನದುರ್ಗದ ರಸ್ತೆಗಳು ಹಾದು ಹೋಗಿವೆ. ಆದರೆ ವೃತ್ತದಲ್ಲಿ ನಿಂತರೆ ಈ ರಸ್ತೆಗಳು ಮರೆಯಾದಂತೆ ಕಾಣುತ್ತವೆ ಎನ್ನುತ್ತಾರೆ ಇಲ್ಲಿನ ಜನರು.ಮುನಿಸ್ವಾಮಯ್ಯನಪಾಳ್ಯ– ಅಂತರಸನಹಳ್ಳಿ–ದೇವರಾಯನದುರ್ಗ ರಸ್ತೆಯನ್ನು 150 ಅಡಿಗೆ ವಿಸ್ತರಿಸುವುದಾಗಿ ಟೂಡ ಯೋಜನೆಯಲ್ಲಿ ಸೇರಿಸಲಾಗಿದೆ. ಈ  ರಸ್ತೆಯು ಮುತ್ಸಂದ್ರಕ್ಕೂ ಸಂಪರ್ಕ ಕಲ್ಪಿಸಲಿದೆ. ಮುತ್ಸಂದ್ರದಲ್ಲಿ ಟೂಡ ಹೊಸ ಬಡಾವಣೆ ನಿರ್ಮಾಣ ಯೋಜನೆ ಕೈಗೊಂಡಿರುವ ಕಾರಣ ಈ ರಸ್ತೆಯನ್ನು150 ಅಡಿಗೆ ವಿಸ್ತರಣೆ ಮಾಡಲೇಬೇಕು. ಆಗಷ್ಟೇ ನಗರದ ಸಮತೋಲಿತ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬ ಅಭಿಪ್ರಾಯವು ಕೇಳಿಬಂದಿದೆ.ಬಿ.ಎಚ್‌. ರಸ್ತೆಯ ಅಧ್ವಾನವನ್ನು ಹೇಳುವಂತೆಯೇ ಇಲ್ಲ. ಅಲ್ಲಲ್ಲಿ ಬಿದ್ದ ಗುಂಡಿಗಳು ಸಂಚಾರ ವ್ಯವಸ್ಥೆಗೆ ಮಾರಕವಾಗಿವೆ. ಹೆದ್ದಾರಿಯ ಇಕ್ಕೆಲಗಳಲ್ಲಿ ಸರ್ವೀಸ್‌ ರಸ್ತೆಯ ಅಭಿವೃದ್ಧಿಯೂ ಅರ್ಧಕ್ಕೆ ನಿಂತಿದೆ. ವಿಶ್ವವಿದ್ಯಾಲಯದ ಎದುರು, ಬಿಜಿಎಸ್‌ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಸ್ಕೈವಾಕ್‌ಗಳು ಅರ್ಧಕ್ಕೆ ನಿಂತಿವೆ.‘ಬಿ.ಎಚ್‌.ರಸ್ತೆಯಲ್ಲಿ ಇಕ್ಕೆಲಗಳ ಚರಂಡಿಗಳ ಮೇಲೆ ಹಾಕಿದ್ದ ಮುಚ್ಚಳಗಳು ಅಲ್ಲಲ್ಲಿ ಕುಸಿದುಬಿದ್ದಿವೆ. ರಾತ್ರಿ ವೇಳೆ ಪಾದಚಾರಿಗಳು ಮುಚ್ಚಳವಿಲ್ಲದ ಕಡೆ ಕಾಲಿಟ್ಟು ಬಿದ್ದಿರುವ ಅನೇಕ ಪ್ರಸಂಗಗಳು ನಡೆದಿವೆ. ಕೆಲವು ಸಲ ಕಾರು, ದ್ವಿಚಕ್ರವಾಹನಗಳು ಚರಂಡಿಗೆ ಬಿದ್ದ ಘಟನೆಗಳು ನಡೆದಿವೆ. ಆದರೂ ಈ ಬಗ್ಗೆ ಯಾರೂ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ’ ಡಿವೈಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ರಾಘವೇಂದ್ರ.ಬಟವಾಡಿ 80 ಅಡಿ ರಸ್ತೆಯಿಂದ ಸಿದ್ದರಾಮೇಶ್ವರ ಬಡಾವಣೆ ಮೂಲಕ ರಿಂಗ್ ರಸ್ತೆಗೆ ಸಂಪರ್ಕ ಕಲ್ಲಿಸುವ ರಸ್ತೆಯ ಶಾಪ ಪೂರ್ಣವಾಗಿ ವಿಮೋಚನೆಗೊಂಡಿಲ್ಲ.

ರೈಲು ಗೇಟ್‌ವರೆಗೆ ಈ ರಸ್ತೆಯನ್ನು ವಿಸ್ತರಣೆ ಮಾಡಲಾಗಿದೆ. ನಂತರದ ರಸ್ತೆಯನ್ನು ದುರಸ್ತಿ ಮಾಡದೇ ಬಿಡಲಾಗಿದೆ. (ಭಾನುವಾರ ಸಚಿವರ ಕಾರ್ಯಕ್ರಮದ ಕಾರಣ ರಸ್ತೆಗೆ ಒಂದಿಷ್ಟು ತೇಪೆ ಹಚ್ಚಲಾಗಿದೆ) ಈಚೆಗೆ ನಡೆದ ಯುಜಿಡಿ ಒಳಚರಂಡಿ ಕಾಮಗಾರಿ ಬಳಿಕ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವೇ ಇಲ್ಲದಂಥ ಸ್ಥಿತಿ ಇದೆ.ಮಳೆಗಾಲದಲ್ಲಿ ರಸ್ತೆಯ ಗುಂಡಿಗಳು ಮಳೆ ನೀರು ತುಂಬಿದರೆ, ಮಳೆ ಇಲ್ಲದ ದಿನ ಇಡೀ ರಸ್ತೆ ದೂಳುಮಯವಾಗುತ್ತದೆ. ಮಳೆ ಬಂದರೂ ಕಷ್ಟ, ನಿಂತರೂ ಕಷ್ಟ ಎಂಬಂಥ ಸ್ಥಿತಿ ಇಲ್ಲಿಯದಾಗಿದೆ.ಯುಜಿಡಿ ಕೆಲಸ ಮಾಡುತ್ತಿರುವ ಬಹುತೇಕ ಕಡೆಗಳಲ್ಲಿ ಅಗೆದ ಮಣ್ಣನ್ನು ತೆಗೆಯದ ಕಾರಣ ರಸ್ತೆಗಳೆಲ್ಲ ದೂಳುಮಯವಾಗಿವೆ. ರಸ್ತೆಯ ದೂಳು ಗುಡಿಸಲೆಂದೇ ಪಾಲಿಕೆಯಲ್ಲಿ ವಾಹನ ಇದೆ. ಈಗ ಆ ವಾಹನ ಎಲ್ಲಿದೆ ಎಂಬುದೇ ಗೊತ್ತಿಲ್ಲವಾಗಿದೆ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.