ಗುರುವಾರ , ಮೇ 19, 2022
23 °C

ರಸ್ತೆಗಿಳಿದ ಅತ್ಯಂತ ಉದ್ದ ಬಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಗಿಳಿದ ಅತ್ಯಂತ ಉದ್ದ ಬಸ್

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ 105 ಮಂದಿ ಪ್ರಯಾಣಿಸಬಹುದಾದ 14.5 ಮೀಟರ್ ಉದ್ದದ ಬಸ್ ನಗರದಲ್ಲಿ ಶನಿವಾರ ಪ್ರಾಯೋಗಿಕವಾಗಿ ಪ್ರಯಾಣ ಆರಂಭಿಸಿತು.ವೊಲ್ವೊ ಸಂಸ್ಥೆ ನಿರ್ಮಿಸಿರುವ 7400 ಎಕ್ಸ್‌ಎಲ್, ಸ್ಟೀರ್ಡ್‌ ಆಕ್ಸಲ್‌ನ ಬಸ್‌ನಲ್ಲಿ 46 ಮಂದಿ ಕುಳಿತುಕೊಂಡು ಹಾಗೂ 59 ಮಂದಿ ನಿಂತುಕೊಂಡು ಪ್ರಯಾಣಿಸಬಹುದು. ಈ ವರೆಗೆ ನಗರದ ರಸ್ತೆಗಳಲ್ಲಿ 12 ಮೀಟರ್ ಉದ್ದದ ಬಸ್‌ಗಳು ಸಂಚಾರ ಮಾಡುತ್ತಿದ್ದವು. ಹೊಸ ಬಸ್ ತಿರುವಿನಲ್ಲಿ ಹಾಗೂ ಸಣ್ಣ ರಸ್ತೆಗಳಲ್ಲೂ ಸುಲಲಿತವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಬಸ್‌ನಲ್ಲಿ ಸಿ.ಸಿ.ಟಿವಿ ಹಾಗೂ ಟಿ.ವಿಗಳನ್ನು ಅಳವಡಿಸಲಾಗಿದೆ.ಅಪಘಾತವನ್ನು ನಿಯಂತ್ರಿಸುವ ಸಲುವಾಗಿ ಚಾಲನೆ ಮಾಡುವ ಸಂದರ್ಭದಲ್ಲಿ ಬಸ್ ಚಾಲಕ ಸೈಕಲ್ ಸವಾರರು ಹಾಗೂ ಪಾದಚಾರಿಗಳನ್ನು ನೋಡಲು ವಿಶೇಷ ಕನ್ನಡಿ ಅಳವಡಿಕೆ ಮಾಡಲಾಗಿದೆ. ಈ ಬಸ್‌ನ ಟಿಕೆಟ್ ದರ ಹವಾನಿಯಂತ್ರಿತ ಬಸ್‌ಗಳ ಟಿಕೆಟ್ ದರದಷ್ಟೇ ಇರಲಿದೆ.`ಪ್ರಾಯೋಗಿಕವಾಗಿ ಬನಶಂಕರಿಯಿಂದ ಐಟಿಪಿಎಲ್, ಮೆಜೆಸ್ಟಿಕ್-ಕಾಡುಗೋಡಿ, ಮೆಜೆಸ್ಟಿಕ್-ಬನ್ನೇರುಘಟ್ಟ, ಸೆಂಟ್ರಲ್ ಸಿಲ್ಕ್ ಬೋರ್ಡ್-ಹೆಬ್ಬಾಳ ಮಾರ್ಗದಲ್ಲಿ ಬಸ್ ಸಂಚಾರ ನಡೆಸಲಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಹೊಸ ಬಸ್ ಖರೀದಿಸಿ ಜಯನಗರ, ಮಲ್ಲೇಶ್ವರ ಹಾಗೂ ಕೆ.ಆರ್.ಪುರ ಮಾರ್ಗಗಳಲ್ಲಿ ಸಂಚಾರ ನಡೆಸಲು ಯೋಚಿಸಲಾಗಿದೆ. ಈ ಬಸ್ ಮೂಲಕ ಕಾರು, ದ್ವಿಚಕ್ರ ವಾಹನ ಹಾಗೂ ರಿಕ್ಷಾಗಳಲ್ಲಿ ಪ್ರಯಾಣ ಮಾಡುವವರನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ.ಬಸ್‌ಗೆ ಚಾಲನೆ ನೀಡಿದ ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, `ಸಂಚಾರ ದಟ್ಟಣೆ, ಮಾಲಿನ್ಯ ನಿಯಂತ್ರಣ ಹಾಗೂ ಡೀಸೆಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಈ ಬಸ್ ಅನ್ನು ಪ್ರಾಯೋಗಿಕವಾಗಿ ಓಡಿಸಲಾಗುತ್ತಿದೆ. ಈ ಬಸ್‌ನಿಂದ ಪರಿಸರ ಹಾನಿ ಕಡಿಮೆ. ಈ ಬಸ್ ಏಷ್ಯಾದಲ್ಲೇ ದೊಡ್ಡದಾದ ಬಸ್. ಭಾರತದ ರಸ್ತೆಗಳಿಗೆ ಹೊಂದಿಕೆಯಾಗುವಂತೆ ವೊಲ್ವೊ ಸಂಸ್ಥೆ ವಿನ್ಯಾಸ ಮಾಡಿದೆ~ ಎಂದರು.ಶಾಸಕ ಹಾಗೂ ಬಿಎಂಟಿಸಿ ಉಪಾಧ್ಯಕ್ಷ ಎಂ. ಕೃಷ್ಣಪ್ಪ, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್.ಶ್ರೀನಿವಾಸ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.