ರಸ್ತೆಗಿಳಿದ ವೈದ್ಯರು, ವಿದ್ಯಾರ್ಥಿಗಳು, ಮಹಿಳೆಯರು

ಶುಕ್ರವಾರ, ಜೂಲೈ 19, 2019
24 °C

ರಸ್ತೆಗಿಳಿದ ವೈದ್ಯರು, ವಿದ್ಯಾರ್ಥಿಗಳು, ಮಹಿಳೆಯರು

Published:
Updated:

ಬಾಗಲಕೋಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಯುಷ್ ವೈದ್ಯರು, ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮತ್ತು ಮಹಿಳಾ ಸಮಾಖ್ಯಾ ಕರ್ನಾಟಕದ ನೂರಾರು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ತುಂತುರು ಮಳೆಯ ನಡುವೆ ಸರಣಿ ಪ್ರತಿಭಟನೆ ಮತ್ತು ಮುಷ್ಕರ ನಡೆಸಿದರು.ಆಯುಷ್ ವೈದ್ಯರ ಮುಷ್ಕರ

ವೃತ್ತಿನಿರತ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧಿಗಳನ್ನು ಬಳಸಲು ರಾಜ್ಯ ಸರ್ಕಾರ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ಮುಷ್ಕರ ನಡೆಯಿತು.ನವನಗರದ ಎಪಿಎಂಸಿಯಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಜಾಥಾ ನಡೆಸಿದ ಆಯುಷ್ ವೈದ್ಯರು,  ಎರಡು ದಿನಗಳ ಮುಷ್ಕರ ಆರಂಭಿಸಿದರು.ತುರ್ತು ಸಂದರ್ಭದಲ್ಲಿ ಅಲೋಪಥಿ ಔಷಧಿ ಬಳಸಲು ಅನುವಾಗುವಂತೆ ರಾಜ್ಯ ಸರ್ಕಾರ, ಡ್ರಗ್ಸ್ ಆಂಡ್ ಕಾಸ್ಮೆಡಿಕ್ಸ್ ಆಕ್ಟ್ 1940 ಹಾಗೂ ನಿಯಮ 1945(2)(ಇಇ)ಗೆ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಬಿರಾದಾರ, ಉಪಾಧ್ಯಕ್ಷ ಎ.ಎಂ. ಗೌಡರ, ಕಾರ್ಯದರ್ಶಿ ಆರ್.ಐ. ಜಂಬಗಿ, ವಿ.ಕೆ.ಹೊಸಳ್ಳಿ, ರುದ್ರಸ್ವಾಮಿಮಠ್, ಹೊಸಮನಿ, ವಿ.ಎಸ್.ಚಂದರಗಿ, ಡಾ. ಸಿ.ಎಸ್.ಸಜ್ಜನ ಮತ್ತಿತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.ಮಹಿಳಾ ಸಮಾಖ್ಯಾ ಕರ್ನಾಟಕ: ಕುಡಿಯುವ ನೀರನ್ನು ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಕರ್ನಾಟಕ ಮಹಿಳಾ ಸಮಾಖ್ಯಾದ ಜಿಲ್ಲಾ ಘಟಕದ ಕಾರ್ಯಕರ್ತೆಯರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.`ರಾಷ್ಟ್ರೀಯ ನೀರಿನ ನೀತಿ-2012~ ಮತ್ತು `ಕನ್ನಡ ಗಂಗಾ ಯೋಜನೆ~ಯ ಹಿಂದೆ ಖಾಸಗೀಕರಣ ಹುನ್ನಾರ ಅಡಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.ಪಾರ್ವತಿ ಹಿರೇಮಠ ಬೈರಮಟ್ಟಿ, ಇಂದ್ರವ್ವ ಚಲವಾದಿ ಬೀಳಗಿ, ಮೀನಾಕ್ಷಮ್ಮ ಗೌಡರ ಹುನಗುಂದ, ಉದ್ದವ್ವ ಮುಧೋಳ, ಪುಷ್ಪಾ ಪಾಟೀಲ ಬಾದಾಮಿ ಸೇರಿದಂತೆ 200ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಎಬಿವಿಪಿ ಪ್ರತಿಭಟನೆ

ರಾಜ್ಯದ ಪಾಲಿಟೆಕ್ನಿಕ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 3ನೇ ಮತ್ತು 4ನೇ ಸೆಮಿಸ್ಟರ್ ತರಗತಿಗಳಿಗೆ ಈ ಹಿಂದಿನ ಪದ್ಧತಿಯಂತೆ (ಕ್ಯಾರಿ ಓವರ್) ಪ್ರವೇಶ ನೀಡಬೇಕೆಂದು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ನಗರದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರಾಜ್ಯದ ಪಾಲಿಟೆಕ್ನಿಕ್‌ಗಳಿಗೆ ಮೂಲಸೌಲಭ್ಯ ಒದಗಿಸಬೇಕು. 2013-14ನೇ ಸಾಲಿನಿಂದ ಸರಿಯಾದ ಪ್ರವೇಶ ನೀತಿಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಎಬಿವಿಪಿ ಜಿಲ್ಲಾ ಘಟಕದ ಸಂಚಾಲಕ ಬೇಲೂರಪ್ಪ ವಡ್ಡರ್, ಮಲ್ಲನಗೌಡ ಗಂಗಾಪುರ, ಮಹೇಶ, ವಿನೋದ, ಕುಮಾರಸ್ವಾಮಿ, ಗದ್ದೆಪ್ಪ, ಚನ್ನಬಸು, ಸ್ಪೂರ್ತಿ, ವಿದ್ಯಾ, ಶಿವಾನಂದ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಕಸಾಪದಿಂದ ಇಂದು ಪ್ರತಿಭಟನೆ

ಬಾದಾಮಿ:
ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೆಯ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆದಿರುವುದನ್ನು ಖಂಡಿಸಿ ಕಸಾಪ  ಜಿಲ್ಲಾ ಘಟಕದ ಕರೆಯ ಮೇರೆಗೆ ತಾಲ್ಲೂಕು ಘಟಕದ ಆಶ್ರಯದಲ್ಲಿ ಇದೇ 21ರಂದು ಒಂದು ದಿನ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಶಂಕರ ಹೂಲಿ ತಿಳಿಸಿದ್ದಾರೆ.ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದೆ. ಸಾಹಿತಿಗಳು, ಬುದ್ಧಿಜೀವಿಗಳು, ಕನ್ನಡಾಭಿಮಾನಿ ಗಳು  ಧರಣಿಯಲ್ಲಿ ಪಾಲ್ಗೊಳ್ಳುವರು ತಿಳಿಸಿದ್ದಾರೆ.ಕಸಾಪ ಧರಣಿ ಇಂದು

ಹುನಗುಂದ: ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಿಂದ ಸರ್ಕಾರಿ ಹಿರಿಯ ಪ್ರಾಥಮಿಕ 341 ಶಾಲೆಗಳಲ್ಲಿ 6 ನೇ ವರ್ಗದಿಂದ ಆಂಗ್ಲ ಮಾಧ್ಯಮ ಜಾರಿ ಮಾಡಿದ ಕ್ರಮವನ್ನು ಖಂಡಿಸಿ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಇದೇ 21 ರಂದು ಶನಿವಾರ ಮುಂಜಾನೆ 10 ರಿಂದ ಸಂಜೆ 4 ರ ತನಕ ತಾಲ್ಲೂಕು ತಹಶೀಲ್ದಾರ ಕಚೇರಿ ಎದಿರು ಧರಣಿ ಹಮ್ಮಿಕೊಂಡಿದೆ.ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಬುದ್ಧಿಜೀವಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮತ್ತು ಕರಾವೇ ಪದಾಧಿಕಾರಿಗಳು, ಕಲಾವಿದರು, ಕಸಾಪ ಸದಸ್ಯರು ಹಾಗೂ ಭಾಷಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟನೆಯ ಪರವಾಗಿ ತಾಲ್ಲೂಕು ಘಟಕ ಅಧ್ಯಕ್ಷ ಮಹಾಂತೇಶ ಗಜೇಂದ್ರಗಡ, ಗೌರವ ಕಾರ್ಯದರ್ಶಿ ವಿಜಯ ಗದ್ದನಕೇರಿ ಮತ್ತು ಮಹಾಂತೇಶ ಹಳ್ಳೂರ ಮತ್ತು ಗೌರವ ಕೋಶಾಧ್ಯಕ್ಷ ಜಾಕೀರ್‌ಹುಸೇನ್ ತಾಳಿಕೋಟಿ ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry