ಶನಿವಾರ, ಮೇ 8, 2021
18 °C
ಜಿಲ್ಲಾಧಿಕಾರಿ ದಿಢೀರ್ ದಾಳಿ

ರಸ್ತೆಗೆ ತ್ಯಾಜ್ಯ: ವ್ಯಾಪಾರಸ್ಥರಿಗೆ ದಂಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅಂಗಡಿ ಮುಂದಿನ ರಸ್ತೆಯೇ ತಮ್ಮದು ಎಂದು ಅತಿಕ್ರಮಿಸಿದ, ರಸ್ತೆಯೇ ಅಂಗಡಿಯೊಳಗಿನ ಕಸ ಹಾಕಲು ಇರುವ ತಿಪ್ಪೆ ಎಂದು ಭಾವಿಸಿ ಕಸ ಸುರಿಯುತ್ತಿದ್ದ ವ್ಯಾಪಾರಸ್ಥರಿಗೆ ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಅವರು ಗುರುವಾರ ಮತ್ತೊಮ್ಮೆ ಬಿಸಿ ಮುಟ್ಟಿಸಿ ಹೌಹಾರುವಂತೆ ಮಾಡಿದರು.ಮಂಗಳವಾರ ಗಂಜ್ ರಸ್ತೆ ಮತ್ತು ಪಟೇಲ್ ರಸ್ತೆಯಲ್ಲಿ ಕಾಲ್ನಡುಗೆಯಲ್ಲೇ ಸಂಚರಿಸಿ ಕಸ ತೆರವು, ಅಂಗಡಿ ಮುಂಗಟ್ಟುಗಳಿಂದ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದಾಗಿದ್ದ ಜಿಲ್ಲಾಧಿಕಾರಿ ನಾಗರಾಜ, ಗುರುವಾರವೂ ನಗರ ಸ್ವಚ್ಛತೆ ಮತ್ತು ಸಾರ್ವಜನಿಕ ರಸ್ತೆ ಅತಿಕ್ರಮೇಣ ತೆರವು ಅಭಿಯಾನ ಮುಂದುವರಿಸಿದರು.ಹರಿಹರ ರಸ್ತೆಯ ಬಟ್ಟೆ ಅಂಗಡಿಯೊಂದರ ಮಾಲೀಕ ಅಂಗಡಿ ಮುಂದೆಯೇ ಸುಮಾರು ಎರಡು ಟ್ರ್ಯಾಕ್ಟರ್‌ನಷ್ಟು ತ್ಯಾಜ್ಯ ಬಟ್ಟೆ, ಕಸ ಕಡ್ಡಿಯನ್ನು ಸಂಗ್ರಹಿಸಿಟ್ಟಿದ್ದನ್ನು ಕಂಡ ಜಿಲ್ಲಾಧಿಕಾರಿ ಕೆಂಡಾಮಂಡಲರಾದರು.ಆ ತ್ಯಾಜ್ಯ ಬಟ್ಟೆ, ಕಸ ಕಡ್ಡಿಯನ್ನು ಆ ಅಂಗಡಿಯೊಳಗೆ ಹಾಕಿಸಿದರು. ಅಂಗಡಿ ಮಾಲೀಕನಿಗೆ ತರಾಟೆಗೆ ತೆಗೆದುಕೊಂಡಾಗ ಸುತ್ತಮುತ್ತಲಿನ ವ್ಯಾಪಾರಸ್ಥರು ಕಕ್ಕಾಬಿಕ್ಕಿಯಾದರು.ತೀನ್ ಕಂದೀಲ್ ವೃತ್ತದ ಏಷಿಯನ್ ಹೊಟೆಲ್ ಹತ್ತಿರ ರಸ್ತೆ ಅತಿಕ್ರಮಣ, ಚರಂಡಿ ಮುಚ್ಚಿ ಅದರ ಮೇಲೆ ಅಂಗಡಿ ಇಟ್ಟುಕೊಂಡಿದ್ದನ್ನು ತೆರವು ಮಾಡಲು ಮುಂದಾದರು. ಅಡುಗೆ ಅನಿಲ್ ಜಪ್ತಿ ಮಾಡಿ 5 ಸಾವಿರ ದಂಡ ಹಾಕಿದರು. ನಾಳೆಯಯೊಳಗೆ ತೆರವು ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಕೆಲ ಪೆಟ್ಟಿಗೆ ಅಂಗಡಿ, ಅಡುಗೆ ಅನಿಲ, ಸಾಮಾನು ಸರಂಜಾಮುಗಳನ್ನು ನಗರಸಭೆ ಟ್ರ್ಯಾಕ್ಟರ್‌ಗೆ ಹಾಕಿಸಿ ಸಾಗಿಸಿದರು.ತೀನ್ ಕಂದೀಲ್ ವೃತ್ತದಿಂದ ಅಶೋಕ ಡಿಪೋಗೆ ಹೋಗುವ ರಸ್ತೆಯ ಪಕ್ಕ ಹಣ್ಣು ಸಗಟು ವ್ಯಾಪಾರಿಗಳು ಚರಂಡಿಯಲ್ಲಿ ಹಾಕಿದ್ದ ಕೊಳೆತ ಹಣ್ಣು, ಕಸ ಕಡ್ಡಿ ಹಾಕಿದ್ದು ಕಂಡು ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು 10,000 ದಂಡ ವಿಧಿಸಿದರು.ಅಶೋಕ ಡಿಪೋ, ತೀನ್ ಕಂದೀಲ್, ಹರಿಹರ ರಸ್ತೆ, ಬಟ್ಟೆ ಬಜಾರದಲ್ಲಿ ಈ ದಿನ ಜಿಲ್ಲಾಧಿಕಾರಿ ನಾಗರಾಜ, ನಗರಸಭೆ ಎಂಜಿನಿಯರ್‌ಗಳಾದ ವೆಂಕಟೇಶ, ಮೋಹನರಾಜ, ನೈರ್ಮಲ್ಯ ಅಧಿಕಾರಿ ಮಲ್ಲಿಕಾರ್ಜುನ ಹಾಗೂ ನಗರಸಭೆ ಸ್ವಚ್ಛತಾ ಸಿಬ್ಬಂದಿ ಸಂಚರಿಸಿದರು.ಜಿಲ್ಲಾಧಿಕಾರಿ ಎಸ್.ಎನ್ ನಾಗರಾಜ ಅವರು, ಸ್ವಚ್ಛತೆ ಉದ್ದೇಶದಿಂದ ರಸ್ತೆಗಳಲ್ಲಿ ಸಂಚರಿಸಿ ಯಾರ ಅಂಗಡಿ ಮುಂದೆ ಕಸ ಕಡ್ಡಿ, ತ್ಯಾಜ್ಯ ಇರುತ್ತದೋ ಅದೇ ಅಂಗಡಿಯೊಳಗೆ ಹಾಕಿಸುತ್ತಿರುವುದು ಪ್ರಮುಖ ರಸ್ತೆ ಅಂಗಡಿ ವ್ಯಾಪಾರಸ್ಥರಿಗೆ ಭಯ ಹುಟ್ಟಿದಂತಾಗಿದೆ.ಅಂಗಡಿ ಮುಂದೆ ಕಸ ಹಾಕಿದರೆ ಡಿಸಿ ಬಂದು ಒಳಗಡೆ ಹಾಕಿಸ್ತಾರೆ ಎಂದು ವ್ಯಾಪಾರರು ಮಾತನಾಡಿಕೊಳ್ಳುತ್ತಿದ್ದು, ನಾಳೆ ಇನ್ಯಾವ ರಸ್ತೆಗೆ ಡಿಸಿ ಬರ‌್ತಾರೋ? ಎಂಬ ಪ್ರಶ್ನೆ ರಸ್ತೆ ಪಕ್ಕದ ಅಂಗಡಿ ವ್ಯಾಪಾರಸ್ಥರು ಚಿಂತಿಸುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.