ಸೋಮವಾರ, ಮೇ 16, 2022
29 °C

ರಸ್ತೆಗೆ ಬಲಿಯಾಗುತ್ತಿರುವ `ಲಾಲ್ ತಲಾಬ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ತಾಲ್ಲೂಕಿನ ತಾವರಗೇರಾ ಗ್ರಾಮದ ಬಳಿ ಇರುವ ಲಾಲ್ ತಲಾಬ್ (ಕೆಂಪುಕೆರೆ) ಅನ್ನು ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಮುಚ್ಚುತ್ತಿರುವ ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಕೆರೆ ಉಳಿಸಿ ಅಭಿವೃದ್ಧಿಪಡಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.ಗಂಗಾವತಿ ರಸ್ತೆಯಲ್ಲಿ 52 ಎಕರೆ ಸರ್ಕಾರಿ ಗೋಮಾಳದಲ್ಲಿರುವ ಈ ಕೆರೆ ಹಳೆಯದಾಗಿದ್ದು, ಜಾನುವಾರುಗಳಿಗೆ ನೀರಿನ ಮತ್ತು ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಬೆಸಿಗೆಯಲ್ಲೂ ನೀರಿನ ಆಸರೆಯಾಗಿರುತ್ತದೆ. ಆದರೆ ಮುದಗಲ್- ಕುಡತಿನಿ ರಾಜ್ಯ ಹೆದ್ದಾರಿ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಕೆರೆಯನ್ನೇ ಮುಚ್ಚುವ ಹುನ್ನಾರ ನಡೆದಿದೆ ಎಂದು ಮುಖಂಡರಾದ ಇಮಾಮ್ ಖಾನ್‌ಸಾಬ್, ಹೈ.ಕ ಹೋರಾಟ ಸಮಿತಿ ಸಂಚಾಲಕ ಶಹಮೀದ ದೋಟಿಹಾಳ, ಪರಶುರಾಮ, ಶಾಮಣ್ಣ ಮತ್ತಿತರರು ದೂರಿದ್ದಾರೆ.ಕೆರೆಯ ಅರ್ಧ ಭಾಗವನ್ನು ಈಗಾಗಲೇ ಮುಚ್ಚಲಾಗಿದೆ. ಹೀಗೆ ಬಿಟ್ಟರೆ ಇನ್ನು ಕೆಲ ದಿನಗಳಲ್ಲಿ ಕೆರೆ ರಸ್ತೆಗೆ ಆಹುತಿಯಾಗುತ್ತದೆ. ಆದರೆ ನೂರಾರು ವರ್ಷಗಳಿಂದಲೂ ಜನ ಜಾನುವಾರುಗಳಿಗೆ ಮತ್ತು ಅಂತರ್ಜಲ ಹೆಚ್ಚಳಕ್ಕೆ ಆಸರೆಯಾಗಿರುವ ಲಾಲ್‌ತಲಾಬ್ ಅನ್ನು ರಕ್ಷಿಸಿ ಪಕ್ಕದಲ್ಲಿರುವ ಸರ್ಕಾರಿ ಜಾಗೆಯಲ್ಲಿ ರಸ್ತೆ ನಿರ್ಮಿಸಲು ಅವಕಾಶ ಇದ್ದು ಅದನ್ನು ಬಳಸಿಕೊಳ್ಳುವಂತೆ ಜನ ಮನವಿ ಮಾಡಿದರೂ ಲೋಕೋಪಯೋಗಿ ಇಲಾಖೆ ಜನರ ಹಿತವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.ಊರಿಗೊಂದು ಕರೆ ನಿರ್ಮಿಸುವ ಮತ್ತು ಇದ್ದ ಕರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದೆಡೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದರೆ ಇನ್ನೊಂದೆಡೆ ಕೆರೆಗಳನ್ನೇ ಮುಚ್ಚಿ ರಸ್ತೆ ನಿರ್ಮಿಸುವಂಥ ಅಭಿವೃದ್ಧಿ ಜನರಿಗೆ ಬೇಕಾಗಿಲ್ಲ. ಪಕ್ಕದಲ್ಲಿ ರಸ್ತೆಗಾಗಿ ಜಾಗ ಇದ್ದರೂ ಅದನ್ನು ಬಿಟ್ಟು ಕೆರೆಯನ್ನೇ ಬಲಿ ತೆಗೆದುಕೊಳ್ಳಲು ಹೊರಟಿರುವ ಸರ್ಕಾರದ ವಿರುದ್ಧ ಜನ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮುಖಂಡ ಶಹಮೀದ ದೋಟಿಹಾಳ ಹೇಳಿದರು.ಪರಿಸರ ಪ್ರಿಯರ ವಿರೋಧದ ನಡುವೆಯೂ ರಸ್ತೆ ವಿಸ್ತರಣೆಗಾಗಿ ಈಗಾಗಲೇ ಎರಡೂ ಬದಿಯಲ್ಲಿದ್ದ ಬೃಹತ್ ಗಾತ್ರದ ಸಾವಿರಾರು ಮರಗಳ ಮಾರಣಹೋಮ ನಡೆದಿದೆ. ರಸ್ತೆಯ ಒಂದು ಬದಿಯಲ್ಲಿನ ಮರಗಳನ್ನಾದರೂ ಉಳಿಸುವಂತೆ ಮಾಡಿದ ಪ್ರಯತ್ನ ಫಲಿಸಲಿಲ್ಲ. ಮರಗಳನ್ನು ಕಡಿಯುವುದು ಬಹಳಷ್ಟು ಸುಲಭ, ಆದರೆ ಅವುಗಳನ್ನು ಬೆಳೆಸಿರುವುದರ ಹಿಂದಿನ ಪರಿಶ್ರಮ ಮತ್ತು ಪೂರ್ವಜರ ಚಿಂತನೆಯನ್ನು ಸರ್ಕಾರ ಅರ್ಥಮಾಡಿಕೊಳ್ಳದಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಊರಿಗೆ ಹತ್ತಿರ ಇರುವ ಕೆರೆಯನ್ನು ಅಭಿವೃದ್ಧಿಪಡಿಸಿದರೆ ಸುಂದರ ತಾಣವಾಗಲಿದೆ. ಜನ ಜಾನುವಾರುಗಳು, ಕಾಡಿನ ಪ್ರಾಣಿ, ಪಕ್ಷಿಗಳಿಗೆ ನೀರಿನ ಅನುಕೂಲವಾಗುತ್ತದೆ, ಅಷ್ಟೇ ಅಲ್ಲ ಸುಂದರ `ಪಿಕನಿಕ್ ಸ್ಪಾಟ್' ಆಗುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಮತ್ತು ಮುಚ್ಚಿರುವ ಕೆರೆಯಲ್ಲಿನ ಮಣ್ಣನ್ನು ತೆರವುಗೊಳಿಸಲು ಮುಂದಾಗಬೇಕು ಎಂಬುದು ತಾವರಗೇರಾ ಗ್ರಾಮಸ್ಥರ ಒತ್ತಾಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.