ಬುಧವಾರ, ಜುಲೈ 15, 2020
27 °C

ರಸ್ತೆಗೆ ಬಿದ್ದ ಟೊಮೆಟೊ ಬೆಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಗೆ ಬಿದ್ದ ಟೊಮೆಟೊ ಬೆಳೆ

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಟೊಮೆಟೊ ಸೇರಿದಂತೆ ಇತರ ಬೆಳೆಗಳ ಬೆಲೆ ಕುಸಿದ ಪರಿಣಾಮ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಪೂರೈಕೆ, ಬೆಳೆ ಹಾನಿ, ನೀರಾವರಿ ಮುಂತಾದ ಸಮಸ್ಯೆಗಳು ಇನ್ನು ರೈತರನ್ನು ಪಾತಾಳಕ್ಕೆ ಸಿಲುಕಿಸಿವೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಚೆಗೆ ಮಂಡಿಸಿದ ಕೃಷಿ ಬಜೆಟ್ ಮಂಡಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯ ರೈತರ ಆರೋಪ.  ಒಂದೆಡೆ ಅಸಮರ್ಪಕ ವಿದ್ಯುತ್ ಪೂರೈಕೆ ಮತ್ತೊಂದೆಡೆ ಆರ್ಥಿಕ ಸಮಸ್ಯೆ ಕಾರಣಗಳಿಂದಾಗಿ ರೈತರು ಇನ್ನಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ.ತಾಲ್ಲೂಕಿನ ರೈತರು ಶೇ.90ರಷ್ಟು ಒಣ ಬೇಸಾಯದ ಮೇಲೆ ಅವಲಂಬಿತರಾದರೆ, ಶೇ. 5ರಷ್ಟು ರೈತರು ಕೊಳವೆ ಬಾವಿಗಳ ಮೇಲೆ ಅವಲಂಬಿತರಾಗಿದ್ದಾರೆ. ನೀರಿನ ಮೂಲಗಳ ಕಣ್ಮರೆ ಹಾಗೂ ಅಂತರ್ಜಲ ಸಮಸ್ಯೆಯು ರೈತರಲ್ಲಿ ಚಿಂತಿ ಮೂಡಿಸಿದೆ. ಕೊಳವೆ ಬಾವಿ ಮತ್ತು ಪಂಪ್‌ಸೆಟ್ ಮೂಲಕ ನೀರು ಹಾಯಿಸಲು ಯತ್ನಿಸಿದರೂ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಅಸಾಧ್ಯವಾಗಿದೆ.ಈ ಎಲ್ಲ ಸಮಸ್ಯೆಗಳ ನಡುವೆಯೇ ದಿನನಿತ್ಯದ ಬದುಕಿಗೆ ಕೆಲ ರೈತರು ತರಕಾರಿ ಬೆಳೆಗಳಿಗೆ ಮೊರೆಹೋಗಿದ್ದರು. ಈಗ ಅದಕ್ಕೂ ಕೂಡಾ ಸೂಕ್ತ  ಬೆಲೆ ಸೀಗದೆ ರೈತರಲ್ಲಿ ಆತಂಕ ಹೆಚ್ಚಿಸಿದೆ. ಬಹುತೇಕ ಎಲ್ಲ ತರಕಾರಿಗಳ ಬೆಲೆ ಕುಸಿದಿದೆ. ಟೊಮೆಟೊ ಸೇರಿದಂತೆ ಇತರ ಬೆಳೆಗಳ ಬೆಲೆ ಕುಸಿದಿರುವುದರಿಮದ ರೈತರು ಬೇಸರದಿಂದ ಅವುಗಳನ್ನು ತಿಪ್ಪೆಗೆ ಎಸೆಯುತ್ತಿರುವುದು ಕಂಡುಬರುತ್ತಿದೆ.ತಾಲ್ಲೂಕಿನಲ್ಲಿ ಸುಮಾರು 6 ಸಾವಿರ ಎಕರೆಯಲ್ಲಿ  ಟೊಮೆಟೊ ಬೆಳೆಯಲಾಗುತ್ತಿದೆ. ಇದರಲ್ಲಿ ಕೆಲ ಜೂಸ್ ಕಂಪೆನಿಯ ಮಾಲೀಕರ ರೈತರ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಡುವ ಮೂಲಕ ಹೈಬ್ರೀಡ್ ತಳಿಯನ್ನು ಸುಮಾರು ಎರಡು ಸಾವಿರ ಎಕರೆ ಪ್ರದೇಶದಲ್ಲಿ ಹೈಬ್ರೀಡ್ ತಳಿ ಬೆಳೆಯುತ್ತಾರೆ. ಕಳೆದ ವರ್ಷ ಒಂದು ಬಾಕ್ಸ್‌ಗೆ (14 ಕೆ.ಜಿ) 150 ರೂಪಾಯಿ ಇತ್ತು. ಆದರೆ ಈಗ ಕೇವಲ 20 ರೂಪಾಯಿ. ತಾಲ್ಲೂಕಿನಲ್ಲಿ ಹೈಬ್ರೀಡ್ ತಳಿ ಬಹುತೇಕ ರೈತರು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹೈಬ್ರೀಡ್ ತಳಿ ಟೊಮೊಟೆನ್ನು ಜೂಸ್ ಹಾಗು ಸಾಸ್ ತಯಾರಿಸಲು ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಕಾರ್ಖಾನೆಗಳಿಗೆ ಸಾಗಿಸಲಾಗುತ್ತಿದೆ.‘ಕನಿಷ್ಠ ಕೂಲಿಯೂ ಸಿಗುವುದಿಲ್ಲ. ಬಂಡವಾಳ ಇಲ್ಲ. ಸಾರಿಗೆ ವೆಚ್ಚ ಹಾಗೂ ಮಂಡಿ ಮಾಲೀಕರ ಕಮಿಷನ್ ಸೇರಿದಂತೆ ಎಲ್ಲವೂ ಲೆಕ್ಕ ಹಾಕಿದರೆ ವೆಚ್ಚ ಜಾಸ್ತಿ.  ಬೆಳೆದ ತೋಟಗಳಲ್ಲಿಯೇ ವ್ಯಾಪಾರ-ವಹಿವಾಟು ನಡೆದರೆ ಕೊಂಚ ಲಾಭ ದೊರೆಯುತ್ತದೆ’ ಎನ್ನುತ್ತಾರೆ ರೈತ ಮಿಟ್ಟೇಮರಿ ರಮೇಶ್.‘ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರು ಬಹುತೇಕ ಟೊಮೆಟೊ ಬೆಳೆಯುತ್ತಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಬೇಕು. ತಾಲ್ಲೂಕಿನಲ್ಲಿ ಕಾರ್ಖಾನೆ ಮತ್ತು ಶೀತಲ ಘಟಕಗಳನ್ನು ಸ್ಥಾಪಿಸಬೇಕು ಎಂದು ಮಂಡಿ ಮಾಲೀಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎಸ್.ನರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.