ಸೋಮವಾರ, ಜನವರಿ 27, 2020
16 °C

ರಸ್ತೆಯಲ್ಲಿಲ್ಲ ನಾಗರಿಕರಿಗೆ ಸುರಕ್ಷೆ

ಪ್ರಜಾವಾಣಿ ವಾರ್ತೆ/ ಜಯಸಿಂಹ.ಆರ್‌ Updated:

ಅಕ್ಷರ ಗಾತ್ರ : | |

ರಸ್ತೆಯಲ್ಲಿಲ್ಲ ನಾಗರಿಕರಿಗೆ ಸುರಕ್ಷೆ

ಬೆಂಗಳೂರು: ನೀರು ತುಂಬಿಕೊಂಡಿರುವ ಹಳ್ಳದ ಬದಿಗಳಲ್ಲಿ ತಡೆಗೋಡೆಗಳಿಲ್ಲ, ಪಾದಾಚಾರಿ ಮಾರ್ಗವಿಲ್ಲದೆ  ಹಳ್ಳದ ಅಂಚಿನಲ್ಲಿ ಪರದಾಡುತ್ತಾ ಸಾಗುವ ನಾಗರಿಕರು, ರಸ್ತೆಗೆ ಬಿದ್ದಿರುವ ವಿಭಜಕದ ಇಟ್ಟಿಗೆಗಳು, ಏಕಮುಖ ಸಂಚಾರವಿದ್ದರೂ ದುತ್ತನೆ ಎದುರಾಗುವ ವಾಹನಗಳು.ನಗರದ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದ ಬಳಿ ಬಹಳ ದಿನಗಳಿಂದ ಕಂಡುಬರುತ್ತಿರುವ ದೃಶ್ಯಗಳಿವು.ಚಿತ್ರಮಂದಿರದ ಬಳಿ ಮಾಗಡಿ ರಸ್ತೆಯನ್ನು ಹಾದುಹೋಗುವ    ರಾಜಕಾಲುವೆಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಕಾಲುವೆಯ ಎತ್ತರ ಮತ್ತು ಅಗಲವನ್ನು ಹೆಚ್ಚಿಸುವ ಕಾಮಗಾರಿಗೆ  ಬಿಬಿಎಂಪಿ ಚಾಲನೆ ನೀಡಿದೆ.ಆದರೆ ಸಂಚಾರ ದಟ್ಟಣೆಯ ಈ ರಸ್ತೆಯಲ್ಲಿ ಕಾಮಗಾರಿ  ಸ್ಥಳದಲ್ಲಿ      ಪಾಲಿಕೆ ಯಾವುದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ಇದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಕಾಮಗಾರಿಗಾಗಿ ತೋಡಲಾಗಿರುವ ಹಳ್ಳದ ಒಂದು ಭಾಗದಲ್ಲಿ  ತೆರೆದ ಕಾಲುವೆಯಿದ್ದು ಮತ್ತೊಂದು ಭಾಗದಲ್ಲಿ ಬೃಹತ್ ‘ಪ್ರೀಕ್ಯಾಸ್ಟ್ ಎಲಿಮೆಂಟ್‌’ಗಳನ್ನು ಜೋಡಿಸಲಾಗಿದೆ.ಆದರೆ ಉಳಿದ ಎರಡು ಭಾಗಗಳಲ್ಲಿ ವಾಹನಗಳ ಮತ್ತು ಜನರ ಸಂಚಾರವಿದ್ದರೂ  ತಡೆಗೋಡೆಯನ್ನು ಅಳವಡಿಸಿಲ್ಲ.  ಕೇವಲ ಒಂದು ಬದಿಯಲ್ಲಿ  ಬೊಂಬುಗಳಿಗೆ ರೇಡಿಯಂ ಟೇಪನ್ನು ಕಟ್ಟಿದ್ದಾರೆ. ಉಳಿದಂತೆ ಮಣ್ಣು ತೆರವು ಮಾಡಿರುವ 25 ಅಡಿಗಳಷ್ಟು ಉದ್ದದ  ಸ್ಥಳದಲ್ಲಿ ಯಾವುದೇ ತಡೆಯನ್ನು ನಿರ್ಮಿಸಿಲ್ಲ. ರಸ್ತೆಯ ಈ ಸ್ಥಿತಿಯಿಂದಾಗಿ  ಪಾದಚಾರಿ­ಗಳಂತೂ ಇತ್ತ  ಓಡಾಡುವಂತಿಲ್ಲ.ರಾಜಕಾಲುವೆಯಿಂದ ತೆರವುಗೊಳಿಸಿದ ಮಣ್ಣು ಮತ್ತು ಸೈಜುಗಲ್ಲುಗಳನ್ನು ರಸ್ತೆಯ ಬದಿಯೇ ಸುರಿಯಲಾಗಿದೆ.ಕಾಮಗಾರಿಗೆ ಅನುಕೂಲವಾಗಲೆಂದು ಸಂಚಾರ ಪೊಲೀಸರು ಟೋಲ್‌ಗೇಟ್‌ನಿಂದ ಅಗ್ರಹಾರ ದಾಸರಹಳ್ಳಿಯ ಕಡೆಗೆ  ವಾಹನಗಳ ಪ್ರವೇಶ ನಿಷೇಧಿಸಿದ್ದರೂ ವಾಹನಗಳು ಎರಡೂ ದಿಕ್ಕಿನಲ್ಲಿ ಸಂಚರಿಸುತ್ತಿವೆ.‘ಒಂದ್‌ ಕಡೆ   ಗ್ಯಾರೇಜ್‌ಗೆ, ಪೆಟ್ರೋಲ್‌ ಬಂಕಿಗೆ ಗಾಡಿಗಳು ಓಡಾಡುತ್ತವೆ. ಇನ್ನೊಂದ್‌ ಕಡೆ  ಹಳ್ಳ. ಸ್ಕೂಲ್ ಬಸ್ ಇಲ್ಲೇ ಬರೋದು. ಈ ದಾರೀಲಿ ಓಡಾಡೋಕೆ ಭಯ ಆಗುತ್ತೆ’ ಎಂದು ಮಕ್ಕಳನ್ನು ಶಾಲಾ ಬಸ್‌ಗೆ  ಹತ್ತಿಸಲು ಬಂದಿದ್ದ ಸ್ಥಳೀಯ  ನಿವಾಸಿ ಸುನಿತಾ ಆತಂಕ ವ್ಯಕ್ತಪಡಿಸುತ್ತಾರೆ.‘ಹೋಟೆಲ್‌ಗೆ ಹೋಗೋಕೆ ಈ ಕಡೇನೆ ಬರಬೇಕು. ಇಲ್ಲಿ ಹಳ್ಳ ತೋಡಿದಾರೆ. ಬ್ಯಾರಿಕೇಡ್ ಹಾಕಿಲ್ಲ. ಎರಡೂ ಕಡೆಯಿಂದ ಗಾಡಿಗಳು ಮೈಮೇಲೆ ಬಂದಂಗೆ ಬರುತ್ತವೆ. ನಾವ್ ರೋಡಲ್ಲಿ ಓಡಾಡಂಗೆ ಇಲ್ವಾ’ ಎಂದು ಪ್ರಶ್ನಿಸುತ್ತಾರೆ ಕಾಲೇಜು ವಿದ್ಯಾರ್ಥಿ ರೋಹನ್.‘ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದೆ. ಮುಂಭಾಗದಿಂದ ಕಾರ್ ಬಂತು ಹೇಗೋ ಸಾವರಿಸಿಕೊಂಡು ಈ ಕಡೆ ತಿರುಗಿಸಿದರೆ ಹಳ್ಳ. ಕತ್ತಲಲ್ಲಿ ಹಳ್ಳ ಇರೋದು  ಯಾರಿಗೂ ಕಾಣಿಸೋದೆ ಇಲ್ಲ.  ಯಾರಾದರು ಬೀಳುವವರೆಗೂ ಪಾಲಿಕೆಯವರ ತಲೆಗೆ ಇದೆಲ್ಲಾ ಹೊಳೆಯೋದೇ ಇಲ್ಲ’ ಎಂಬುದು ಬೈಕ್ ಸವಾರ ಆದಿನಾರಾಯಣ ಆವರ ಆಕ್ರೋಶ.‘ಹಳ್ಳಕ್ಕೆ ಅಡ್ಡ ಏನೂ ಹಾಕಿಲ್ಲ.  ಬೆಳಕು ಬೇರೆ ಇರಲ್ಲ. ಸೆಕೆಂಡ್ ಷೋ ಪಿಚ್ಚರ್ ನೋಡ್ಕೊಂಡ್ ಜನ ಹೋಗುವಾಗ  ಅತ್ತ ಕಡೆ ಹೋಗಬೇಡಿ ಅಂತ ಹೇಳಿ ಹೇಳಿ ಸಾಕಾಗೋಗುತ್ತೆ’ ಎಂದು ಬೇಸರಿಸಿದವರು ವೀರೇಶ್ ಚಿತ್ರಮಂದಿರದ ಕಾವಲುಗಾರ ಮಹೇಶ್.ಮಾಗಡಿ ರಸ್ತೆ ಟೋಲ್‌ಗೇಟ್ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಆಗ್ರಹಾರ ದಾಸರಹಳ್ಳಿ ಮತ್ತು ವಿಜಯನಗರ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಿದು. ಕೈಗಾರಿಕಾ ಪ್ರದೇಶಗಳಿಗೆ ಹೋಗುವ ಸರಕು ಸಾಗಣೆ ವಾಹನಗಳು, ಕಾರ್ಮಿಕರು, ನಗರ ಸಾರಿಗೆ  ಮತ್ತು ಖಾಸಗಿ ಬಸ್ಸುಗಳಿಂದ ರಸ್ತೆ ಕಿಕ್ಕಿರಿದು ತುಂಬಿರುತ್ತದೆ.ಚಿತ್ರಮಂದಿರ, ಕಾಲೇಜು ಮತ್ತು ಅಂಗಡಿಗಳು ಇರುವುದರಿಂದ ಜನರ ಓಡಾಟ ಮತ್ತು ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಏಕಮುಖ ಸಂಚಾರ ಕಟ್ಟುನಿಟ್ಟಾಗಿ ಜಾರಿಯಾಗದೆ ಇರುವ ಕಾರಣದಿಂದ ಅಪಘಾತಗಳ ಸಂಭವವೂ ಉಂಟು.ಪಾದಾಚಾರಿ ಮಾರ್ಗ ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಜನರು ರಸ್ತೆಗೆ ಇಳಿದು ಪಾಲಿಕೆ ತೋಡಿರುವ ಹಳ್ಳಕ್ಕೆ ಬೀಳುವ ಅಥವಾ  ವಾಹನಗಳಿಗೆ ಸಿಲುಕುವ ಅಪಾಯವಿದೆ.ತರಾತುರಿಯಲ್ಲಿ ಕಾಮಗಾರಿ ಮುಗಿಸುವ ಧಾವಂತದಲ್ಲಿರುವ ಪಾಲಿಕೆ ಸುರಕ್ಷಾ ಕ್ರಮಗಳೆಡೆಗೆ ಗಮನ ಹರಿಸಿಲ್ಲ.ಪತ್ರಿಕೆಯ ಪ್ರಯತ್ನ  ಶ್ಲಾಘನೀಯ: ಮೇಯರ್‌

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆಗಳ ದುರವಸ್ಥೆಗೆ ಕನ್ನಡಿ ಹಿಡಿಯುವ ಪತ್ರಿಕೆಯ ಪ್ರಯತ್ನ ಶ್ಲಾಘನೀಯ. ಅಪಾಯಕಾರಿ ರಸ್ತೆ ಗುಂಡಿಗಳು ಮತ್ತು ತೆರೆದ ಚರಂಡಿಗಳನ್ನು ತಕ್ಷಣ ಮುಚ್ಚಲು ಹಾಗೂ ಹದಗೆಟ್ಟ ರಸ್ತೆಗಳಿಗೆ ಡಾಂಬರು ಹಾಕಲು ಬಿಬಿಎಂಪಿ

ಕ್ರಮವನ್ನು ತೆಗೆದುಕೊಳ್ಳುತ್ತದೆ. ನಮ್ಮ ಈ ಕಾರ್ಯದಲ್ಲಿ ಕೈ ಜೋಡಿಸಿರುವುದಕ್ಕಾಗಿ  ‘ಪ್ರಜಾವಾಣಿ’ ದಿನಪತ್ರಿಕೆಗೆ ಧನ್ಯವಾದಗಳು

–ಬಿ.ಎಸ್‌.ಸತ್ಯನಾರಾಯಣ

ಮೇಯರ್‌


(ಈ ಮೇಲ್‌ನಲ್ಲಿ ನೀಡಿದ ಪ್ರತಿಕ್ರಿಯೆ)ಓದುಗರ ಗಮನಕ್ಕೆ

ನಗರದ ರಸ್ತೆಗಳು ತೀರಾ ಹಾಳಾಗಿವೆ. ಇಂತಹ ರಸ್ತೆಗಳ ಚಿತ್ರಗಳನ್ನು ಓದುಗರು ಈ ಮೇಲ್‌ ಮೂಲಕ ಕಳುಹಿಸಿದರೆ ‘ಪ್ರಜಾವಾಣಿ’ ಆಯ್ದ ಚಿತ್ರಗಳನ್ನು ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಲಿದೆ. ಗುಂಡಿ ಬಿದ್ದ ರಸ್ತೆಗಳು ಹಾಗೂ ನಿಂತು ಹೋದ ಬಿಬಿಎಂಪಿ, ಜಲಮಂಡಳಿ ಕಾಮಗಾರಿಗಳ ಬಗ್ಗೆ ಓದುಗರು ಮಾಹಿತಿಯನ್ನೂ ಈ ಮೇಲ್‌ ವಿಳಾಸ bangalore@prajavani.co.in ಇಲ್ಲಿಗೆ ಕಳಿಸಬಹುದು.

ಪ್ರತಿಕ್ರಿಯಿಸಿ (+)