ಬುಧವಾರ, ನವೆಂಬರ್ 20, 2019
25 °C

ರಸ್ತೆಯಲ್ಲಿ ಗುಂಡಿ: ತೀವ್ರ ತೊಂದರೆ

Published:
Updated:
ರಸ್ತೆಯಲ್ಲಿ ಗುಂಡಿ: ತೀವ್ರ ತೊಂದರೆ

ಯಲಹಂಕ:  ವಾರ್ಡ್ ಸಂಖ್ಯೆ-1ರ ವ್ಯಾಪ್ತಿಯ ಮಾರುತಿ ನಗರದಲ್ಲಿ ಬೆಂಗಳೂರು ಜಲಮಂಡಳಿ ವತಿಯಿಂದ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಗೆದಿರುವ ರಸ್ತೆಯನ್ನು ನಂತರ ಸರಿಯಾಗಿ ಸಮತಟ್ಟು ಮಾಡದ ಪರಿಣಾಮ ಮಾರ್ಗದಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಒಳಚರಂಡಿ ವ್ಯವಸ್ಥೆಗೆ ರಸ್ತೆಯನ್ನು ಅಗೆದು ಕೊಳವೆಮಾರ್ಗ ಅಳವಡಿಸುವ ಕಾಮಗಾರಿ ಪೂರ್ಣಗೊಂಡು 6 ತಿಂಗಳು ಕಳೆದಿದ್ದರೂ ಇದುವರೆಗೂ ಸರಿಪಡಿಸಿಲ್ಲ. ಅಧಿಕಾರಿಗಳು ಹಾಗೂ ಗುತ್ತಿದಾರರ ಧೋರಣೆಯ ವಿರುದ್ಧ ಬಡಾವಣೆಯ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾರುತಿನಗರದ 7,8 ಮತ್ತು 9ನೇ ಅಡ್ಡ ರಸ್ತೆಯ ಮಧ್ಯಭಾಗದಲ್ಲಿ ಹೊಂಡಗಳು ಬಿದ್ದಿದ್ದು, ವಾಹನಗಳು ಸಂಚರಿಸಲು ಸಾಧ್ಯ ಇಲ್ಲದಂತಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಡಿ.ಎಸ್.ವೆಂಕಟಾಚಲಪತಿ ದೂರಿದರು.ರಸ್ತೆಗಳು ಹಾಳಾಗಿರುವುದರಿಂದ ಯಲಹಂಕದಿಂದ ಮಾರುತಿನಗರಕ್ಕೆ ಬರಲು ಆಟೊ ಚಾಲಕರನ್ನು ಕೇಳಿದರೆ, ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಅಗೆದ ಮಣ್ಣನ್ನು ಚರಂಡಿಗಳ ಪಕ್ಕದಲ್ಲಿ ರಾಶಿ ಹಾಕಿರುವುದರಿಂದ ಮಣ್ಣು ಚರಂಡಿ ಪಾಲಾಗುತ್ತಿದೆ. ಇದರಿಂದಾಗಿ ಚರಂಡಿಯಲ್ಲಿ ಕೊಳಚೆನೀರು ಹರಿಯಲು ಅವಕಾಶವಿಲ್ಲದೆ ತ್ಯಾಜ್ಯ ವಸ್ತುಗಳು ಸಂಗ್ರಹವಾಗಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸೂಕ್ತ ಯೋಜನೆ ರೂಪಿಸದೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.ಬಡಾವಣೆಯಲ್ಲಿ ನಿರಂತರವಾಗಿ ನೀರಿನ ಸಮಸ್ಯೆಯಿದ್ದು, 15 ದಿನಕ್ಕೊಮ್ಮೆ ನಲ್ಲಿಗಳಲ್ಲಿ ನೀರು ಬಿಡುವುದರಿಂದ ದಿನನಿತ್ಯ ಬಳಕೆಗೆ ತೊಂದರೆಯಾಗುತ್ತಿದೆ. ವಿಧಿಯಿಲ್ಲದೆ ಟ್ಯಾಂಕರ್‌ಗೆ 400 ರೂಪಾಯಿ ತೆತ್ತು ನೀರು ಕೊಂಡುಕೊಳ್ಳಬೇಕಾಗಿದೆ. ಹಣ ನೀಡಿದವರಿಗೆ 2 ದಿನಕ್ಕೊಮ್ಮೆ ಹಾಗೂ ತೋಟಗಳಿಗೆ 24 ಗಂಟೆಯೂ ನೀರು ಸರಬರಾಜು ಆಗುತ್ತದೆ. ಈ ಬಗ್ಗೆ ವಾಟರ್‌ಮನ್‌ಗಳನ್ನು ಪ್ರಶ್ನಿಸಿದರೆ, ಮೋಟಾರ್ ಕೆಟ್ಟಿದೆ ಎಂಬ ಸಬೂಬು ನೀಡುತ್ತಾನೆ ಎಂದು ಸ್ಥಳೀಯ ನಿವಾಸಿ ವೀರೇಶ್ ದೂರಿದರು.   `ಕಾಮಗಾರಿ ಶೀಘ್ರ ಪೂರ್ಣ'

7 ವಾರ್ಡ್‌ಗಳ ವ್ಯಾಪ್ತಿಯ ಒಳಚರಂಡಿ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಒಬ್ಬರೇ ಪಡೆದಿದ್ದಾರೆ. ಪರಿಚಯವಿಲ್ಲದ ತುಂಡು ಗುತ್ತಿಗೆದಾರರಿಗೆ ಅವರು ಕೆಲಸ ವಹಿಸುವುದರಿಂದ ಎಲ್ಲಿಯೂ ಸರಿಯಾಗಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ಕಾಮಗಾರಿಯನ್ನು ನಿಲ್ಲಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದರೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಐಲಾಗುವುದು.

-ೈ.ಎನ್.ಅಶ್ವಥ್, ಬಿಬಿಎಂಪಿ ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ`ಕೊಳವೆಮಾರ್ಗ ಒಡೆದು ಸಮಸ್ಯೆ'


ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಕೊಳವೆಮಾರ್ಗ ಅಳವಡಿಸಿದ ನಂತರ ಬಿಬಿಎಂಪಿಯಿಂದ ನೀರಿನ ಸಂಪರ್ಕಕ್ಕೆ ಕೊಳವೆಮಾರ್ಗ ಅಳವಡಿಸುವ ಕಾಮಗಾರಿ ಆರಂಭಿಸಿದರು. ನಂತರ ಕೆಲವು ಸ್ಥಳಗಳಲ್ಲಿ ಕೊಳವೆ ಮಾರ್ಗಗಳು ಒಡೆದು, ಕೆಲವು ಕಡೆ ಸೋರಿಕೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸ್ವಲ್ಪ ಸಮಯ ಹಿಡಿಯಿತು. ಈಗ ಎಲ್ಲ ಕಾಮಗಾರಿ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ರಸ್ತೆಗೆ ಜಲ್ಲಿ ಹಾಕಿ ಸಮತಟ್ಟು ಮಾಡುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

-ರವೀಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಜಲಮಂಡಳಿ                         

                                   

 

ಪ್ರತಿಕ್ರಿಯಿಸಿ (+)