ಶುಕ್ರವಾರ, ಏಪ್ರಿಲ್ 23, 2021
28 °C

ರಸ್ತೆಯಲ್ಲಿ ಚರಂಡಿ ನೀರು: ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತಾಲ್ಲೂಕಿನ ಮಾದ್ವಾರ ಗ್ರಾಮದಲ್ಲಿ ಸಿಸಿ ರಸ್ತೆಯ ಮೇಲೆ ಚರಂಡಿ ನೀರು ನಿಲ್ಲುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ಈ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಇಲ್ಲಿಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮದ್ವಾರ ಗ್ರಾಮ ಪಂಚಾಯಿತಿ 2ನೇ ವಾರ್ಡ್‌ನಲ್ಲಿ ಚರಂಡಿಯ ನೀರು ಹಾಗೂ ಮಳೆ ನೀರು ಸಿಸಿ ರಸ್ತೆಯ ಮೇಲೆ ನಿಲ್ಲುತ್ತಿದೆ. ಇದರಿಂದ ರಸ್ತೆಯು ಕೆರೆಯಂತೆ ಭಾಸವಾಗುತ್ತಿದೆ. ಈ ಸಮಸ್ಯೆ ಕಳೆದ ಎರಡು ವರ್ಷಗಳಿಂದ ಆರಂಭವಾಗಿದ್ದು, ಅಧಿಕಾರಿಗಳು ಕೇವಲ ಸ್ಥಳ ಪರಿಶೀಲನೆ ಮಾಡಿ ಹೋಗುತ್ತಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.ಸಿಸಿ ರಸ್ತೆಯ ಮೇಲೆ ನಿಲ್ಲುವ ಕೆಸರು ನೀರಿನಿಂದ ಗ್ರಾಮದ ಜನರಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ. ಹಲವಾರು ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡಿದಂತಾಗಿದೆ. ವೃದ್ಧರು, ಅಂಗವಿಕಲರು, ಮಕ್ಕಳಿಗೆ ನೀರು ನಿಂತ ರಸ್ತೆಯಲ್ಲಿ ಓಡಾಡಲು ತೊಂದರೆಯಾಗಿದೆ. ಅಂಗನವಾಡಿ ಕೇಂದ್ರವೂ ಜಲಾವೃತ್ತವಾಗುತ್ತಿದ್ದು, ಕೇಂದ್ರಕ್ಕೆ ಹೋಗುವ ಪುಟ್ಟ ಮಕ್ಕಳು, ಗರ್ಭಿಣಿಯರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.ರೈತರು ಹೊಲಗಳಿಗೆ ತೆರಳುವುದಕ್ಕೂ ಅನಾನುಕೂಲವಾಗಿದೆ. ಎತ್ತಿನ ಬಂಡಿಗಳು ಸಾಗಲು ತೊಂದರೆ ಆಗುತ್ತಿದೆ. ಸುತ್ತಲೂ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇಲ್ಲಿಯವರೆಗೆ ಕೆಳಹಂತದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಕಾಮಗಾರಿ ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಇಂತಹ ಸಣ್ಣ ಸಮಸ್ಯೆಯನ್ನು ಪರಿಹರಿಸದೇ ಜನರಿಗೆ ಆಗುತ್ತಿರುವ ತೊಂದರೆಯನ್ನು ಹೆಚ್ಚಿಸುತ್ತಿದ್ದಾರೆ. ಕೇವಲ ಅಧಿಕಾರಿಗಳು ಭರವಸೆ ನೀಡಿ ಹೋಗುತ್ತಿದ್ದಾರೆ. ಯಾವುದೇ ಕೆಲಸ ಆಗುತ್ತಿಲ್ಲ. ಮೂರು ದಿನಗಳ ಒಳಗಾಗಿ ಕಾಮಗಾರಿಗೆ ಚಾಲನೆ ನೀಡದೇ ಇದ್ದಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ, ಗ್ರಾಮ ಘಟಕದ ಅಧ್ಯಕ್ಷ ಎಂ.ಎಸ್. ರಾಚು, ಶಿವಶಂಕರ ಪಾಟೀಲ ಕಾನಗುಡ್ಡ, ವಿರುಪಾಕ್ಷಿ ಸಾಹುಕಾರ, ಸಾಯಿಬಣ್ಣ ಮಡಿವಾಳ, ಪೀರ್ ಪಟೇಲ್ ದಳಪತಿ, ಬಾಬು ಕೊಂಕಲ್, ರಾಚಪ್ಪ ಕುಂಬಾರ, ತಾಯಪ್ಪ ದೊಬ್ಬಲ್, ಬನ್ನಪ್ಪ ಕಲಾಲ, ಶಂಕರ ಸಿಂಗ್, ಬುಗ್ಗಪ್ಪ ಬಾಗ್ಲಿ, ಹಣಮಂತು ಸಾಹುಕಾರ, ಖತಲಪ್ಪ, ತಾಯಪ್ಪ ವಡ್ಡರ, ಜಾನಿ ಪಟೇಲ್, ಶಿವರಾಜ, ಚೆನ್ನಪ್ಪ ವಾರದ, ಗೋಪಾಲ, ಬನ್ನಪ್ಪ, ಹಣಮಂತು ನಂಗಿ ಮುಂತಾದವರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.