ಸೋಮವಾರ, ಏಪ್ರಿಲ್ 12, 2021
26 °C

ರಸ್ತೆಯಲ್ಲಿ ರಂಗುರಂಗಾದ ರಂಗೋಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಲೇಶ್ವರಂ ಮೈದಾನದ ರಸ್ತೆಯು ಈ ವಾರಾಂತ್ಯದಲ್ಲಿ ಹೊಸ ಅವತಾರವನ್ನೇ ತಳೆದಿತ್ತು. ಹಿತ್ತಲು ಅಂಗಳಗಳಿಲ್ಲದ ಮನೆಗಳೇ ಹೆಚ್ಚಾಗಿರುವ ಬೆಂಗಳೂರಿನಲ್ಲಿ ರಂಗೋಲಿ ಎಂಬುದು ಸ್ಟಿಕರ್‌ಗೆ, ಪೇಂಟಿಂಗ್‌ಗೆ ಸೀಮಿತವಾಗಿದೆ. ಆದರೆ ಕಳೆದ ವಾರಾಂತ್ಯದಲ್ಲಿ ರಂಗೋಲಿಯಲ್ಲಿ ಗಣೇಶ, ಕೃಷ್ಣ, ರಾಧೆಯರು ಮೈತಳೆದಿದ್ದರು.ವಿದ್ಯಾರಣ್ಯಪುರ ಯುವಕ ಸಂಘ ಏರ್ಪಡಿಸಿದ್ದ ಮೊದಲ ಸುತ್ತಿನ ರಂಗಾರಂಗ ರಂಗೋಲಿ ಸ್ಪರ್ಧೆ ಅದು. ಸ್ಪರ್ಧೆ ಅಂದರೆ ಅಂತಿಂಥ ಸ್ಪರ್ಧೆಯಲ್ಲ, ಇಡೀ ಬೆಂಗಳೂರಿನ 400 ಯುವತಿಯರು, ಮಹಿಳೆಯರು ಪಾಲ್ಗೊಂಡಿದ್ದ ವಿಶೇಷ ಸ್ಪರ್ಧೆಯದು.

ಸ್ಪರ್ಧೆಗೆ ಯಾವುದೇ ನಿರ್ದಿಷ್ಟ ವಿಷಯವನ್ನು ನೀಡಿರಲಿಲ್ಲ. ಎಲ್ಲ ಅವರವರ ಕಲ್ಪನೆ ಹಾಗೂ ಸಾಮರ್ಥ್ಯಕ್ಕೆ ಬಿಡಲಾಗಿತ್ತು.ಆದರೆ ಬಹುತೇಕ ಜನರ ರಂಗೋಲಿಯಲ್ಲಿ ಸಾಮ್ಯತೆ ಇದ್ದುದು ಕೇವಲ ಚಿತ್ರಗಳ ವಿಷಯದಲ್ಲಿ. ಗಣೇಶ, ಕೃಷ್ಣ, ದೀಪ ಮುಂತಾದವುಗಳು ಸಾಮಾನ್ಯವಾಗಿದ್ದವು. ಎಲ್ಲರೂ ತಮ್ಮ ರಂಗೋಲಿ ವಿನ್ಯಾಸ ಗುಂಪಿನಲ್ಲಿ ಎದ್ದು ಕಾಣುವಂತಾಗಲಿ ಎಂದು ಬಯಸುವವರೇ.

ಗಾಢ ನೀಲಿ, ಗಾಢ ಗುಲಾಬಿ, ಹಳದಿ, ಹಸಿರು ವರ್ಣಗಳು ಗಮನ ಸೆಳೆದವು. ಜ್ಯಾಮಿತಿಯ ವಿನ್ಯಾಸ ವಿವಿಧ ಹೂ-ಬಳ್ಳಿಗಳು ರಸ್ತೆಯ ಮೇಲೆ ಬಣ್ಣಗಟ್ಟಿದ್ದವು.400 ಜನರಲ್ಲಿ 100 ಜನರು ಅಂತಿಮ ಸುತ್ತಿಗೆ ಅರ್ಹರಾದರು. ಅಂತಿಮ ಸ್ಪರ್ಧೆ ಸೆ.2ರಂದು ಕಮರ್ಷಿಯಲ್ ರಸ್ತೆಯಲ್ಲಿ ಏರ್ಪಡಿಸಲಾಗಿದೆ.ಭಾರತೀಯ ಹಬ್ಬಗಳ ತಯಾರಿಯಲ್ಲಿ ಮನೆಯಂಗಳದಲ್ಲಿ ಅಥವಾ ಹೊಸ್ತಿಲ ಮುಂದೆ ರಂಗೋಲಿ ಎಳೆ ಕಾಣದಿದ್ದರೆ ಅದು ಅಪೂರ್ಣವೆಂದೇ ಆಗುತ್ತದೆ. ಇದು ಕಾಲಾತೀತವಾದ ಕಲೆ ಎನ್ನುತ್ತಾರೆ  ವಿದ್ಯಾರಣ್ಯ ಯುವಕ ಸಂಘದ ಮ್ಯಾನೇಂಜಿಗ್ ಟ್ರಸ್ಟಿ ಎಸ್.ಎಂ. ನಂದೀಶ್.ರಂಗಾರಂಗ ರಂಗೋಲಿ ಸ್ಪರ್ಧೆಯು ಗುಣಮಟ್ಟದಲ್ಲಿಯೂ ಸಂಖ್ಯಾತ್ಮಕವಾಗಿಯೂ ಈ ವರ್ಷ ಅತ್ಯಮೂಲ್ಯವಾಗಿತ್ತು. ಸ್ಪರ್ಧಾರ್ಥಿಗಳು ಬಿಡಿಸಿದ ರಂಗೋಲಿ ವಿನ್ಯಾಸಗಳೂ ವಿಶೇಷವಾಗಿದ್ದವು. ಎಲ್ಲಿಯೂ ಸಾಮಾನ್ಯ ಎನಿಸುವಂಥ ರಂಗೋಲಿಗಳು ಕಂಡು ಬರಲಿಲ್ಲ ಎನ್ನುತ್ತಾರೆ ಅವರು.ಚಳಿಗಾಳಿಯ ನಡುವೆ ಮಳೆನೀರ ಹನಿಯ ಸಿಂಚನವಾಗುತ್ತಿದ್ದರೂ ಮಹಿಳೆಯರು ಅತಿ ಸಂಯಮದಿಂದ ತಮ್ಮ ವಿನ್ಯಾಸವನ್ನು ಬಿಡಿಸಿದರು. ಗಂಟೆಗಟ್ಟಲೆ ನಿಂತು, ಕುಳಿತು, ರಂಗೋಲಿ ಎಳೆ ಬಿಟ್ಟರು. ನಂತರ ಬಣ್ಣದುಂಬಿದರು. ಬಣ್ಣದುಂಬಿದ ರಂಗೋಲಿಯಲ್ಲಿ ಬಿಡಿಸಿದವರ ಭಾವವೂ ಎದ್ದುಕಾಣುವಂತಿತ್ತು.ಚಂದದ ರಂಗೋಲಿಯಿಂದ ಅಂದಗಾಣುತ್ತಿದ್ದ ರಸ್ತೆ, ಅಂತಿಮ ಸ್ಪರ್ಧೆಯನ್ನು ಇನ್ನೂ ಹೆಚ್ಚು ರಂಗುರಂಗಾಗಿರುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.