ರಸ್ತೆಯಲ್ಲಿ ಶಿಸ್ತು... ಸುರಕ್ಷೆಗೆ ಅಸ್ತು

7

ರಸ್ತೆಯಲ್ಲಿ ಶಿಸ್ತು... ಸುರಕ್ಷೆಗೆ ಅಸ್ತು

Published:
Updated:
ರಸ್ತೆಯಲ್ಲಿ ಶಿಸ್ತು... ಸುರಕ್ಷೆಗೆ ಅಸ್ತು

`ರಸ್ತೆ ಅಪಘಾತದ ಬಗ್ಗೆ  ಯೋಚಿಸಿದ್ರೇನೆ ಮೈ ಜುಮ್ ಅನ್ನುತ್ತೆ. ನಾನಂತೂ ನನ್ನ ಆತ್ಮೀಯ ಸ್ನೇಹಿತನನ್ನು ಅಪಘಾತದಲ್ಲಿ ಕಳಕೊಂಡೆ. ಬಹುಶಃ ಆನಂತರವೇ ನಾನು ಮೈಯೆಲ್ಲ ಕಣ್ಣಾಗಿ ಗಾಡಿ ಓಡಿಸುತ್ತೇನಪ್ಪ~ ಅಂದರು ನಟಿ ರಮ್ಯಾ ಬಾರ್ನಾ.`ರಸ್ತೆ ಇರೋದೇ ನಮಗಾಗಿ ಅಂತ ಪ್ರತಿಯೊಬ್ರೂ ನಮಗೆ ಬೇಕಾದ ಹಾಗೆ ವಾಹನ ಚಲಾಯಿಸಿದ್ರೆ ಪಕ್ಕದಲ್ಲಿ ಶಿಸ್ತಿನಿಂದ ಗಾಡಿ ಓಡಿಸ್ತಾ ಇರೋರ ಗತಿಯೇನು? ಒಬ್ಬೊಬ್ಬರೂ ವೈಯಕ್ತಿಕವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ನಮ್ಮ ನಗರದಲ್ಲಿ ನಡೀತಿರೋ ರಸ್ತೆ ಅಪಘಾತ, ಸಾವು, ನೋವುಗಳನ್ನು ನಿಯಂತ್ರಿಸಬಹುದು. ಪ್ಲೀಸ್ ನಾವೆಲ್ಲರೂ ಶಿಸ್ತಿನಿಂದ ಗಾಡಿ ಓಡಿಸುತ್ತೇವಂತ ಪ್ರಮಾಣ ಮಾಡೋಣ~ ಅಂತ ಮಾಧ್ಯಮದವರನ್ನೇ ವಿನಂತಿಸಿದರು.92.7 ಬಿಗ್ ಎಫ್‌ಎಂ, ಟೋಟಲ್ ಕ್ವಾರ್ಟ್ಸ್ ತೈಲ ಕಂಪನಿಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಸ್ತೆ ಸುರಕ್ಷತಾ ಮಾಸಾಚರಣೆಯ ಅಂಗವಾಗಿ ಬುಧವಾರ ಲ್ಯಾವೆಲ್ಲೆ ರಸ್ತೆಯ ಹೋಟೆಲೊಂದರಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು `ರಸ್ತೆ ಸುರಕ್ಷತೆ ನನ್ನ ಕರ್ತವ್ಯ~ ಎಂದು ಬರೆದು ಸಹಿ ಕೂಡಾ ಮಾಡಿದರು ರಮ್ಯಾ.ಹೆಚ್ಚುವರಿ ಪೊಲೀಸ್ ಕಮಿಷನರ್ (ಟ್ರಾಫಿಕ್)ಡಾ.ಎಂ.ಎ. ಸಲೀಂ ಅವರ ಮಾತು ಭಾರತೀಯರಿಗೆ ಅಶಿಸ್ತು ಅನ್ನೋದು ರಕ್ತದಲ್ಲೇ ಆವಾಹನೆಗೊಂಡಿದೆ ಎಂಬ ಅಸಮಾಧಾನವಿತ್ತು.ವಾಹನ ಓಡಿಸಿದರೆ ವೇಗವಾಗಿಯೇ ಓಡಿಸಬೇಕು ಎಂಬ ಭಾವನೆ ನಮ್ಮನ್ನು ಆವರಿಸಿಕೊಂಡುಬಿಟ್ಟಿದೆ. ಕಳೆದ ವರ್ಷ ದೇಶದಲ್ಲಿ 1.42 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳಕೊಂಡರೆ, ಒಂದು ದಶಲಕ್ಷ ಮಂದಿ ಗಾಯಗೊಂಡರು.ಕೊಲ್ಲಿ ರಾಷ್ಟ್ರಗಳಂತೆ ಕಟ್ಟುನಿಟ್ಟಿನ ಸಂಚಾರ ನಿಯಮಗಳನ್ನು ಜಾರಿಗೊಳಿಸುವುದು ಇಲ್ಲವೇ ಯುರೋಪಿಯನ್ ರಾಷ್ಟ್ರಗಳ ಮಾದರಿಯಲ್ಲಿ ಪ್ರತಿಯೊಬ್ಬರೂ ಹುಟ್ಟಿನಿಂದಲೇ ಶಿಸ್ತಿನ ಸಿಪಾಯಿಗಳಾಗಬೇಕು. ಆದರೆ ಇವೆರಡೂ ನಮ್ಮ ದೇಶದಲ್ಲಿ ಸಾಧ್ಯವೇ ಎಂಬುದು ಯಕ್ಷಪ್ರಶ್ನೆ ಎಂದವರು ಮತ್ತೆ ನಿರಾಶರಾದರು.ಸಂಚಾರ ನಿಯಂತ್ರಿಸುವಲ್ಲಿ ಟ್ರಾಫಿಕ್ ಪೊಲೀಸರ ಜತೆ ಟ್ರಾಫಿಕ್ ವಾರ್ಡನ್‌ಗಳು ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಟ್ರಾಫಿಕ್ ವಾರ್ಡನ್ ಎಂ. ಟಿ. ನಾಯಕ್ ಹೇಳಿದರು.

 

ಸಹಾಯಕ ಪೊಲೀಸ್ ಕಮಿಷನರ್ (ಕೇಂದ್ರ ವಿಭಾಗ) ಸುಬ್ರಹ್ಮಣ್ಯ, ಮಾನವ ಚಾರಿಟಿಯ ರಾಜೇಂದ್ರ ಕುಲಕರ್ಣಿ, ಟ್ರಾಫಿಕ್ ವಾರ್ಡನ್ ಸಂಸ್ಥೆಯ ಎಸಿಪಿ ಮೋಹನ ನಂಬಿಯಾರ್, 92.7 ಬಿಗ್ ಎಫ್‌ಎಂನ ಮುಖ್ಯಸ್ಥ ರೋಹನ್‌ಚಂದ್ರ, ಟೋಟಲ್‌ನ ಇಂಡಿಯಾ ಮ್ಯಾನೇಜರ್ ಇಂದ್ರಜಿತ್ ಮೊಹಾಂತಿ ರಸ್ತೆ ಸಂಚಾರ ನಿಯಮಗಳ ಪಾಲನೆ ಬಗ್ಗೆ ಮಾತನಾಡಿದರು.ತಮ್ಮ ಚಾನೆಲ್‌ನಲ್ಲಿ ಈ ತಿಂಗಳಿಡೀ ರಸ್ತೆ ಸುರಕ್ಷತೆ ಬಗ್ಗೆ ವಾರಕ್ಕೊಂದರಂತೆ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತದೆ. ನವೆಂಬರ್ ನಾಲ್ಕರಂದು `ಸುರಕ್ಷೆಗಾಗಿ ಓಟ~ ನಡೆಯಲಿದ್ದು, ಹೆಸರು ನೋಂದಾಯಿಸಿಕೊಳ್ಳಲು ಇಚ್ಚಿಸುವವರು ಎಫ್‌ಎಂಗೆ ಕಿವಿಯಾನಿಸಿ ಎಂದು ತಿಳಿಸಿದರು ಆರ್‌ಜೆ ರಶ್ಮಿ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry