ಶನಿವಾರ, ಜೂನ್ 19, 2021
28 °C

ರಸ್ತೆಯಲ್ಲಿ ಸಿಕ್ಕ ರೂ 5 ಲಕ್ಷ ಹಿಂದಿರುಗಿಸಿದ ಶಿವರಂಜಿನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಸ್ತೆಯಲ್ಲಿ ಸಿಕ್ಕಿದ ₨ 5 ಲಕ್ಷ ನಗದು ಇದ್ದ ಬ್ಯಾಗನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಕರ್ತವ್ಯನಿರತ ಮಹಿಳಾ ಗೃಹರಕ್ಷಕ ಸಿಬ್ಬಂದಿ ಪ್ರಾಮಾಣಿಕತೆ ಮೆರೆದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.ನಗರದ ರಾಮಸ್ವಾಮಿ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ನಿಯೋಜನೆಗೊಂಡಿದ್ದ ಶಿವರಂಜಿನಿ, ಹಣದ ಬ್ಯಾಗ್‌ ಮರಳಿಸಿದ ಗೃಹರಕ್ಷಕ ದಳದ ಸಿಬ್ಬಂದಿ. ಆಕೆಯ ಕರ್ತವ್ಯಪ್ರಜ್ಞೆಗೆ ಕೆ.ಆರ್‌. ಸಂಚಾರ ಠಾಣೆಯ ಪೊಲೀಸ್‌ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬ್ಯಾಗ್‌ ಕಳೆದುಕೊಂಡು ಪರಿತಪಿಸುತ್ತಿದ್ದ ಮಂಡ್ಯದ ಗುತ್ತಲು ಬಡಾವಣೆಯ ಮಂಜುನಾಥ್‌, ಹಣ ಮರಳಿ ಸಿಕ್ಕ ಖುಷಿಯೊಂದಿಗೆ ಹಿಂದಿರುಗಿದರು.ಘಟನೆ ನಡೆದಿದ್ದು ಹೀಗೆ: ಮಂಡ್ಯದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಆಗಿರುವ ಮಂಜುನಾಥ್‌ ಅವರು ಮೈಸೂರಿನ ನ್ಯಾಯಾಂಗ ಬಡಾವಣೆಯ ನಿವೇಶನವನ್ನು ವಿದ್ಯಾರಣ್ಯಪುರಂ ನಿವಾಸಿ ನಂದೀಶ್‌ ಎಂಬುವವರಿಗೆ ಮಾರಾಟ ಮಾಡಿದ್ದರು. ಮುಂಗಡ ಹಣವನ್ನು ಪಾವತಿಸಿದ ಬಳಿಕ ನಂದೀಶ್‌ ₨ 5 ಲಕ್ಷದ ಚೆಕ್‌ ನೀಡಿದ್ದರು. ಆದರೆ, ಬ್ಯಾಂಕಿಗೆ ಚೆಕ್‌ನ್ನು ಹಾಕುವ ಮುನ್ನವೇ ಮಂಜುನಾಥ್‌ ಅವರನ್ನು ಸಂಪರ್ಕಿಸಿದ ನಂದೀಶ್‌, ಮೈಸೂರಿಗೆ ಬಂದು ಹಣವನ್ನು ತೆಗೆದುಕೊಳ್ಳುವಂತೆ ಕೋರಿದರು. ಹೀಗಾಗಿ, ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮಂಜುನಾಥ್‌ ಹಣವನ್ನು ಕಾಲೇಜು ಬ್ಯಾಗಿನಲ್ಲಿ ಇಟ್ಟುಕೊಂಡು ಮಂಡ್ಯಕ್ಕೆ ಹೊರಟಿದ್ದರು.ದ್ವಿಚಕ್ರವಾಹನದ ಮುಂಭಾಗದಲ್ಲಿ ಇಟ್ಟುಕೊಂಡಿದ್ದ ಹಣದ ಬ್ಯಾಗ್‌ ಬಿದ್ದಿರುವುದು ಚಾಮರಾಜ ಜೋಡಿ ರಸ್ತೆಯ ಗಾಯತ್ರಿ ಚಿತ್ರಮಂದಿರ ಬಳಿ ಬಂದಾಗ ಗಮನಕ್ಕೆ ಬಂತು. ಇದರಿಂದ ಆತಂಕಕ್ಕೆ ಒಳಗಾದ ಮಂಜುನಾಥ್‌ ಬ್ಯಾಗ್‌ ಹುಡುಕಿಕೊಂಡು ಅದೇ ರಸ್ತೆಯಲ್ಲಿ ಮರಳಿ ಹೊರಟರು. ರಾಮಸ್ವಾಮಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಶಿವರಂಜಿನಿ ಅವರನ್ನು ಕೇಳಿದಾಗ, ಬ್ಯಾಗ್‌ ಕುರಿತು ಮಾಹಿತಿ ಇಲ್ಲ ಎಂದಿದ್ದಾರೆ.ಇದಾದ ಕೆಲ ಸಮಯದ ಬಳಿಕ ವೃತ್ತದ ಸಮೀಪದಲ್ಲಿ ಯುವಕನೊಬ್ಬ ಅನುಮಾನಾಸ್ಪದ ವಾಗಿ ನಿಂತಿದ್ದನ್ನು ಗಮನಿಸಿದ ಶಿವರಂಜಿನಿ, ತಕ್ಷಣ ಆತನ ಬಳಿ ತೆರಳಿ ವಿಚಾರಿಸಿದ್ದಾರೆ. ಇದರಿಂದ ಬೆದರಿದ ಯುವಕ ಬ್ಯಾಗ್‌ ಬಿಟ್ಟು ಪರಾರಿಯಾದ. ತಕ್ಷಣ ಪೊಲೀಸರಿಗೆ ಶಿವರಂಜಿನಿ ಮಾಹಿತಿ ನೀಡಿ, ಕೆ.ಆರ್‌. ಠಾಣೆಯ ಸಂಚಾರ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗೇಗೌಡ ಅವರಿಗೆ ಬ್ಯಾಗ್‌ ಹಸ್ತಾಂತರಿಸಿದರು. ಇದೇ ಸಮಯಕ್ಕೆ ಲಕ್ಷ್ಮೀಪುರಂ ಠಾಣೆಗೆ ತೆರಳಿದ ಮಂಜುನಾಥ್‌ ಅವರಿಗೆ ಬ್ಯಾಗ್‌ ಸಿಕ್ಕಿರುವುದು ಗೊತ್ತಾಗಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಹಣವನ್ನು ಹಿಂದಿರುಗಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.