ರಸ್ತೆಯಲ್ಲೇ ಕಟ್ಟಡ ಸಾಮಗ್ರಿ: ಸಂಚಾರ ದುಸ್ತರ

ಬುಧವಾರ, ಜೂಲೈ 17, 2019
28 °C

ರಸ್ತೆಯಲ್ಲೇ ಕಟ್ಟಡ ಸಾಮಗ್ರಿ: ಸಂಚಾರ ದುಸ್ತರ

Published:
Updated:

ಹಾಸನ: ನಗರದ ರಸ್ತೆಗಳಲ್ಲಿ ಓಡಾಡುವುದು ಎಷ್ಟು ದುಸ್ತರ ಮತ್ತು ಎಷ್ಟು ಅಪಾಯಕಾರಿ ಎಂಬ ವಿಚಾರ ಎಲ್ಲರಿಗೂ ತಿಳಿದದ್ದೇ. ಮೊದಲೇ ಹದಗೆಟ್ಟ ಮತ್ತು ಅಗಲ ಕಿರಿದಾದ ರಸ್ತೆಗಳು, ಅದರಲ್ಲೂ ಯಾವುದೇ ನೀತಿ ನಿಯಮವಿಲ್ಲದೆ ಯರ‌್ರಾಬಿರ‌್ರಿಯಾಗಿ ವಾಹನಗಳನ್ನು ಓಡಿಸುವ ಕೆಲವು ಚಾಲಕರು ಸಂಚಾರವನ್ನು ನಿಜವಾಗಿಯೂ ಅಪಾಯಕಾರಿಯಾಗಿಸಿದ್ದಾರೆ.ಈ ಮಧ್ಯದಲ್ಲಿ ಕೆಲವು ನಾಗರಿಕರು ಫುಟ್‌ಪಾತ್ ಇದ್ದರೂ ರಸ್ತೆ ಮಧ್ಯದಲ್ಲೇ ನಡೆದಾಡುವುದನ್ನು ರೂಢಿ ಸಿಕೊಂಡಿದ್ದಾರೆ. ಸಾಲದೆಂಬಂತೆ ರಸ್ತೆ ಪಕ್ಕದಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸುವವರು ಜಲ್ಲಿ ಸಿಮೆಂಟ್ ಮರಳನ್ನೂ ತಂದು ರಸ್ತೆಗೆ ಸುರಿಯುತ್ತಿದ್ದಾರೆ.ವಿವಿಧ ಬಡಾವಣೆಗಳಲ್ಲಿ ಒಂದಿಲ್ಲ ಒಂದು ಭಾಗದಲ್ಲಿ ಮನೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಜಾಗದ ಕೊರತೆ ಇರುವುದರಿಂದ ಕೆಲವೊಮ್ಮೆ ರಸ್ತೆ ಮೇಲೆ ಸುರಿಯುವುದು ಅನಿವಾರ್ಯವಾದರೂ, ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರ ವಹಿಸಬಹುದು.ಜತೆಗೆ ಒಂದು ಅಥವಾ ಎರಡು ದಿನಗಳಲ್ಲಿ ಅದನ್ನು ತೆಗೆದು ಸಾರ್ವಜನಿಕರಿಗೆ ಅಡಚಣೆಯಾಗುವುದನ್ನು ತಡೆಯಬಹುದು ಆದರೆ ಆ ಕಾರ್ಯ ಆಗುತ್ತಿಲ್ಲ. ಸಾಕಷ್ಟು ಮುಂಚಿತವಾಗಿಯೇ ಕಟ್ಟಡ ನಿರ್ಮಿಸುವವರು ಇಂಥ ಸಾಮಗ್ರಿ ತಂದು ಸುರಿಯುತ್ತಾರೆ. ಅದನ್ನು ತೆರವು ಮಾಡುವುದು ತಮ್ಮ ಮನೆಯ ಗೃಹಪ್ರವೇಶದ ದಿನವೇ.ಬಡಾವಣೆಗಳ ಸ್ಥಿತಿ ಒಂದಾದರೆ ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲೂ ಈಚೆಗೆ ಇದೇ ಸ್ಥಿತಿ ಕಂಡುಬರುತ್ತಿದೆ. ಶಂಕರಮಠ ರಸ್ತೆಯಲ್ಲಿ ದ್ವಿಮುಖ ಸಂಚಾರ ಆರಂಭ ಮಾಡಿದ ದಿನದಿಂದಲೇ ಈ ರಸ್ತೆ ನಗರದ ಅತ್ಯಂತ ಅಪಾಯಕಾರಿ ರಸ್ತೆಗಳ ಪಟ್ಟಿಗೆ ಸೇರಿಬಿಟ್ಟಿದೆ.

 

ಈಗ ಈ ರಸ್ತೆಯಲ್ಲಿ ಮರಳು-ಜಲ್ಲಿ ಸುರಿದಿದ್ದಾರೆ. ಕೆಲವೆಡೆ ಕಟ್ಟಡ ನಿರ್ಮಿಸುವವರು ಸುರಿದಿದ್ದರೆ ಇನ್ನೂ ಕೆಲವು ಕಡೆಯಲ್ಲಿ ರಸ್ತೆ ನಿರ್ಮಾಣಕ್ಕಾಗಿ ಜಲ್ಲಿ, ಮರಳು ಸುರಿದಿದ್ದಾರೆ.

 

ಈ ರಸ್ತೆಯಲ್ಲಿ ಒಂದು ಕಾರು ಸಹ ಸರಿಯಾಗಿ ಓಡಾಡಲು ಸಾಧ್ಯವಿಲ್ಲದ ರೀತಿಯಲ್ಲಿ ಜಲ್ಲಿ-ಮರಳು ಸುರಿದಿದ್ದಾರೆ ಎಂದ ಮೇಲೆ ಕಾಮಗಾರಿ ನಡೆಸುವವರಿಗೆ ಇರುವ ನಾಗರಿಕ ಪ್ರಜ್ಞೆ ಎಂಥದ್ದು ಎಂಬುದು ಅರ್ಥವಾಗುತ್ತದೆ.ಹೀಗೆ ರಸ್ತೆ ಮೇಲೆಯೇ ಜಲ್ಲಿ-ಮರಳು ಸುರಿಯುವುದನ್ನು ನಿಷೇಧಿಸಬೇಕು, ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯಲ್ಲಿ ಹಿಂದೊಮ್ಮೆ ಚರ್ಚೆಯಾಗಿತ್ತು. ಇದಾದ ಬಳಿಕ ಕೆ.ಆರ್.ಪುರಂಗೆ ಬಂದಿದ್ದ ಅಧಿಕಾರಿಗಳು ಒಂದೆರಡು ಕಡೆ ತೆರವು ಕಾರ್ಯಾಚರಣೆಯನ್ನೂ ಮಾಡಿದ್ದರು. ಇದಾದ ಬಳಿಕ ಎಂದಿನಂತೆ ಎಲ್ಲರೂ ಎಲ್ಲವನ್ನೂ ಮರೆತು ನಿದ್ದೆಗೆ ಜಾರಿದ್ದಾರೆ.ಹಾಸನದಲ್ಲಿ ಈ ಬಾರಿಯೂ ಮಳೆ ಕೈಕೊಟ್ಟಿದೆ. ಒಂದೊಮ್ಮೆ ಮಳೆ ಆರಂಭವಾದರೆ ಇಂಥ ರಸ್ತೆಗಳಲ್ಲಿ ಓಡಾಟ ನಿತ್ಯದ ನರಕವಾಗಲಿದೆ ಎಂಬುದು ಖಚಿತ. ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ನಾಗರಿಕರಿಗೆ ಆಗುವ ಅನನುಕೂಲಗಳನ್ನು ತಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry