ರಸ್ತೆಯೂ ಇಲ್ಲ, ಸಾರಿಗೆ ಸಂಪರ್ಕ ಮೊದಲೇ ಇಲ್ಲ!

7

ರಸ್ತೆಯೂ ಇಲ್ಲ, ಸಾರಿಗೆ ಸಂಪರ್ಕ ಮೊದಲೇ ಇಲ್ಲ!

Published:
Updated:

ಹೊಳಲ್ಕೆರೆ: ಗಾಂಧೀಜಿ ಅವರ ಹಳ್ಳಿಗಳ ಉದ್ಧಾರದ ಕನಸು ಸ್ವಾತಂತ್ರ್ಯ ಬಂದು 65 ವರ್ಷಗಳಾದರೂ ಈಡೇರಿಲ್ಲ ಎಂಬುದಕ್ಕೆ ಇಲ್ಲಿನ ಮೂರು ಗ್ರಾಮಗಳ ದುಸ್ಥಿತಿಯೇ ಸಾಕ್ಷಿ.  ತಾಲ್ಲೂಕಿನ ಸಿಹಿನೀರುಕಟ್ಟೆ, ಅಮಟೆ ಮತ್ತು ಹುಣಸೆಪಂಚೆ ಎಂಬ ಗ್ರಾಮಗಳು ಇಂದಿಗೂ ಮೂಲಸೌಕರ್ಯ ಇಲ್ಲದೆ ಸೊರಗಿವೆ. ತಾಲ್ಲೂಕು ಕೇಂದ್ರದಿಂದ ಆರೇಳು ಕಿ.ಮೀ. ದೂರದಲ್ಲಿದ್ದರೂ, ಈ ಗ್ರಾಮಗಳಿಗೆ ರಸ್ತೆ ಮತ್ತು ಸಾರಿಗೆ ಸಂಪರ್ಕವಿಲ್ಲದೆ ಜನ ಇಂದಿಗೂ ಪಟ್ಟಣಕ್ಕೆ ನಡೆದುಕೊಂಡೇ ಬರುವ ಸ್ಥಿತಿ ಇದೆ.ರಾಷ್ಟ್ರಿಯ ಹೆದ್ದಾರಿ-13ರಲ್ಲಿ ಕುಡಿನೀರಕಟ್ಟೆ ಗೇಟ್‌ನಿಂದ ಬಲಕ್ಕೆ ಹೋದರೆ ಒಂದೇ ಮಾರ್ಗದಲ್ಲಿ ಈ ಮೂರು ಕುಗ್ರಾಮಗಳು ಸಿಗುತ್ತವೆ. ಕುಡಿನೀರಕಟ್ಟೆವರೆಗೆ ರಸ್ತೆ ಇದೆಯಾದರೂ, ಮುಂದೆ ಸಿಗುವ ನೂರು ಮನೆಗಳಿರುವ ಸಿಹಿನೀರಕಟ್ಟೆ, 50 ಮನೆಗಳಿರುವ ಅಮಟೆ, 40 ಮನೆಗಳಿರುವ ಹುಣಸೆಪಂಚೆ ಗ್ರಾಮಗಳಿಗೆ ಸುಸಜ್ಜಿತ ರಸ್ತೆಸೌಲಭ್ಯ ಇಲ್ಲ. ಇರುವ ಕಚ್ಛಾ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಸದಾ ಮಳೆನೀರಿನಿಂದ ತುಂಬಿರುತ್ತವೆ.ಇದರಿಂದ ದ್ವಿಚಕ್ರವಾಹನ, ಆಟೋರಿಕ್ಷಾ ಮತ್ತಿತರ ಚಿಕ್ಕವಾಹನಗಳು ಸಂಚರಿಸುವುದೇ ಕಷ್ಟವಾಗಿದೆ. ರಸ್ತೆಯ ತುಂಬ ಉರುಳು ಕಲ್ಲುಗಳು ತುಂಬಿರುವುದರಿಂದ ಚಿಕ್ಕವಾಹನಗಳು ಮತ್ತು ಜನ ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಬಂಡೆಗಳು ಇದ್ದು, ವಾಹನಗಳು ಉರುಳಿ ಬೀಳುವ ಅಪಾಯ ಇದೆ.`ನಮ್ಮ ಊರಿಗೆ ಇದುವರೆಗೆ ಯಾರೂ ರಸ್ತೆ ಮಾಡಿಲ್ಲ. ಚುನಾವಣೆ ಬಂದಾಗ ಓಟು ಕೇಳಲು ಬರುವುದು ಬಿಟ್ಟರೆ ಮತ್ತೆ ಈ ಕಡೆ ಯಾರೂ ತಿರುಗಿ ನೋಡುವುದಿಲ್ಲ. ಸುಮಾರು 7 ಕಿ.ಮೀ. ದೂರ ಇರುವ ಪಟ್ಟಣಕ್ಕೆ ಸಂತೆ ಮತ್ತಿತರ ಕೆಲಸಗಳಿಗೆ ನಡೆದುಕೊಂಡೇ ಹೋಗುತ್ತೇವೆ.ವಯಸ್ಸಾದವರು, ರೋಗಿಗಳು ನಡೆದು ಹೋಗಲಾರದೆ ಗ್ರಾಮದಲ್ಲಿಯೇ ಇರಬೇಕು. ರಸ್ತೆ ಸರಿಯಿಲ್ಲದೆ ಇರುವುದರಿಂದ ಊರಿಗೆ ಆಟೋರಿಕ್ಷಾಗಳೂ ಬರುವುದಿಲ್ಲ. ದಿನಕ್ಕೆ ಒಂದೋ ಎರಡೋ ಬಂದರೆ 7 ಕಿ.ಮೀ. ದೂರವಿರುವ ಪಟ್ಟಣಕ್ಕೆ ಹೋಗಲು ಒಬ್ಬರಿಗೆ ್ಙ 30, 40 ಕೇಳುತ್ತಾರೆ. ಸಂಜೆ ಬೆಳಕಿದ್ದಾಗಲೇ ಊರು ಸೇರಿಕೊಳ್ಳಬೇಕು.ಇಲ್ಲವಾದರೆ ಕತ್ತಲಲ್ಲಿ ಕರಡಿ, ಹಂದಿ, ಚಿರತೆ ಮತ್ತಿತರ ಕಾಡುಪ್ರಾಣಿಗಳ ಕಾಟದಿಂದ ನಡೆದುಕೊಂಡು ಬರಲಾಗುವುದಿಲ್ಲ. ರಾತ್ರಿವೇಳೆಯಲ್ಲಿ ಆಟೋದವರನ್ನು ಕೇಳಿದರೆ ್ಙ 300, 400 ಬಾಡಿಗೆ ಕೇಳುತ್ತಾರೆ. ನಾವು ಬಡವರು ಅಷ್ಟು ದುಡ್ಡುಕೊಟ್ಟು ಬರಲಾಗುವುದಿಲ್ಲ. ಆದ್ದರಿಂದ ಬಸ್‌ನಿಲ್ದಾಣದಲ್ಲಿಯೇ ಮಲಗಿ ಬೆಳಿಗ್ಗೆ ಎದ್ದು ಬರುತ್ತೇವೆ~ ಎನ್ನುತ್ತಾರೆ ಹುಣಸೆಪಂಚೆ ಗ್ರಾಮದ  ಹನುಮಂತಪ್ಪ, ಗುರುಸ್ವಾಮಿ, ದುಗ್ಗಪ್ಪ, ಚಂದ್ರಮ್ಮ ಮತ್ತಿತರರು. ಮೂರು ಗ್ರಾಮಗಳಿಗೆ ಒಂದು ಶಾಲೆ ಮಾಡಿದ್ದು, ಮಕ್ಕಳು ಸುಮಾರು ಒಂದು ಕಿ.ಮೀ. ದೂರ ನಡೆದುಕೊಂಡು ಹೋಗಬೇಕು. ಆರನೇ ತರಗತಿಗೆ ನಾಲ್ಕು ಕಿ.ಮೀ. ದೂರದ ಕುಡಿನೀರಕಟ್ಟೆಗೆ ಹೋಗಬೇಕು. ಮಳೆಗಾಲದಲ್ಲಿ ಶಾಲೆಗೆ ಹೋಗುವುದು ಬಹಳ ಕಷ್ಟ. ಇನ್ನು ಹೈಸ್ಕೂಲು, ಕಾಲೇಜಿಗೆ ಹೋಗುವುದು ಕನಸಿನ ಮಾತು.ಗ್ರಾಮದಲ್ಲಿ ಪರಿಶಿಷ್ಟ ಕುಟುಂಬಗಳಿದ್ದು, ಯಾವುದೇ ಸರ್ಕಾರಿ ಸೌಲಭ್ಯಗಳು ದೊರೆತಿಲ್ಲ. ಕೆಲವರಿಗೆ ಬರುತ್ತಿದ್ದ ವೃದ್ಧಾಪ್ಯ, ವಿಧವಾ, ಅಂಗವಿಕಲವೇತನಗಳನ್ನೂ ನಿಲ್ಲಿಸಿದ್ದಾರೆ. ಇಲ್ಲಿ ಹೆಚ್ಚಾಗಿ ಅನಕ್ಷರಸ್ಥರೇ ಇರುವುದರಿಂದ ಈ ಬಗ್ಗೆ ಯಾರನ್ನು ಕೇಳಬೇಕು ಎಂದೇ ತಿಳಿಯುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಸಿಹಿನೀರುಕಟ್ಟೆ ಗ್ರಾಮದ ಗೋಪಾಲನಾಯ್ಕ, ಜಯಾನಾಯ್ಕ, ಲಕ್ಷ್ಮಾನಾಯ್ಕ, ರಾಮ್‌ಜಿನಾಯ್ಕ ಮತ್ತಿತರರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry