ರಸ್ತೆಯೇ ಒಕ್ಕಣೆ ಕಣ: ಎಲ್ಲಿ ನಿಯಂತ್ರಣ?

7

ರಸ್ತೆಯೇ ಒಕ್ಕಣೆ ಕಣ: ಎಲ್ಲಿ ನಿಯಂತ್ರಣ?

Published:
Updated:

ಕೋಲಾರ: ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಬಹುತೇಕ ರಸ್ತೆಗಳು ಒಕ್ಕಣೆ ಕಣಗಳಾಗಿವೆ. ರೈತರಿಗೆ ತತ್ಕಾಲದ ಅನುಕೂಲ ಕಲ್ಪಿಸುವ ಈ ‘ರಸ್ತೆ ಒಕ್ಕಣೆ ಕಣ’ಗಳು ವಾಹನ ಸವಾರರಿಗೆ ಮಾತ್ರ ಅಪಾಯದ ಆಮಂತ್ರಣ ನೀಡುತ್ತಿವೆ. ರೈತರಿಗೆ ಬುದ್ಧಿ ಹೇಳಿ, ರಸ್ತೆಯನ್ನು ಸುರಕ್ಷಿತ ಸಂಚಾರಕ್ಕೆ ಮುಕ್ತಗೊಳಿಸಬೇಕಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ಮಾತ್ರ ಸುಮ್ಮನಿವೆ. ಇದೇ ವೇಳೆ, ಒಕ್ಕಣೆ ಕಣ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆ ನೀಡುವ ಸಹಾಯಧನ ಪಡೆಯುವ ಪ್ರಯತ್ನವನ್ನೂ ಹೆಚ್ಚು ರೈತರು ಮಾಡುತ್ತಿಲ್ಲ ಎಂಬುದೂ ಬೆಳಕಿಗೆ ಬಂದಿದೆ.ಅದೇ ಕಾರಣದಿಂದ ರೈತರು ಯಾವ ಅಂಜಿಕೆಯೂ ಇಲ್ಲದೆ, ರಸ್ತೆಯುದ್ದಕ್ಕೂ ಧಾನ್ಯ ಹರಡುತ್ತಾರೆ. ಎತ್ತುಗಳನ್ನು ಕಟ್ಟಿ ಮೆದೆ ಮಾಡುತ್ತಾರೆ. ಆ ಮಾರ್ಗದಲ್ಲಿ ವಾಹನಗಳು ಬಂದರೂ ಈ ರೈತರು ಪಕ್ಕಕ್ಕೆ ಸರಿದು ಜಾಗ ಬಿಡುವ ಸೌಜನ್ಯ ತೋರುವುದಿಲ್ಲ. ದಾರಿ ಕೇಳಿದ ಜನ ಕೆಲವೆಡೆ ರೈತರ ಕೋಪಕ್ಕೂ ತುತ್ತಾಗಬೇಕಾಗುತ್ತದೆ. ಅಪಘಾತಗಳು: ರೈತರು ಮತ್ತು ವಾಹನ ಸವಾರರ ನಡುವೆ ಮಾತಿನ ಸಂಘರ್ಷ ನಡೆಯುತ್ತಲೇ ಇವೆ. ಅದರಿಂದ ಹೆಚ್ಚು ದುಷ್ಪರಿಣಾಮವೇನೂ ಇಲ್ಲ. ಆದರೆ ‘ರಸ್ತೆ ಕಣ’ದಲ್ಲಿ ಹೋಗುವಾಗ ವಾಹನಗಳಿಂದ ಜಾರಿ ಬಿದ್ದ ಪ್ರಕರಣಗಳೂ ಇವೆ.ಸಣ್ಣಪುಟ್ಟ ಗಾಯಗಳೊಡನೆ ಅಪಾಯದಿಂದ ಪಾರಾಗುವ ಪ್ರಕರಣಗಳನ್ನು ಪಕ್ಕಕ್ಕಿಟ್ಟರೂ, ರಸ್ತೆ ಕಣದ ಪರಿಣಾಮವಾಗಿಯೇ ಸಂಭವಿಸಿದ ಅಪಘಾತಗಳಲ್ಲಿ ಸಾವಿಗೀಡಾದ ಪ್ರಕರಣ ನಿರ್ಲಕ್ಷ್ಯಿಸುವಂತಿಲ್ಲ. ಒಕ್ಕಣೆ ಕಣದ ಪರಿಣಾಮ ರಸ್ತೆಯುದ್ದಕ್ಕೂ ಏಳುವ ಧೂಳು ಕೂಡ ಅಪಘಾತಗಳಿಗೆ ತನ್ನ ಕೊಡುಗೆ ನೀಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಕಣದಲ್ಲಿ ಹೆಚ್ಚು ಕಾಣುವುದು ರಾಗಿ ತೆನೆಗಳು. ಜಾರಿಕೆ ಗುಣವುಳ್ಳ ಸಣ್ಣ ಸಣ್ಣ ರಾಗಿ ಕಾಳುಗಳೇ ಅಪಘಾತಕ್ಕೆ ಹೆಚ್ಚು ಕಾರಣ. ರೈತರು ಅಪಾಯದ ಅರಿವಿದ್ದೂ ಇಂಥ ಕೆಲಸ ಮಾಡುತ್ತಿರುವುದು ವಿಷಾದನೀಯ ಎನ್ನುತ್ತಾರೆ ತಾಲ್ಲೂಕಿನ ಬಾರಂಡಹಳ್ಳಿಯ ರೈತ ರಾಮಚಂದ್ರ.ಒಕ್ಕಣೆ ಕಣ ನಿರ್ಮಿಸಿಕೊಳ್ಳಲು ಕೃಷಿ ಇಲಾಖೆಯು ಸಮುದಾಯ ಮತ್ತು ವೈಯಕ್ತಿಕ ನೆಲೆಯಲ್ಲಿ ಸಹಾಯಧನ ನೀಡುತ್ತಿದೆ. ಸಮುದಾಯ ಒಕ್ಕಣೆ ಕಣಕ್ಕೆ 50 ಸಾವಿರ ಮತ್ತು ವೈಯಕ್ತಿಕ ಒಕ್ಕಣೆ ಕಣಕ್ಕೆ 25 ಸಾವಿರ ರೂಪಾಯಿ ಸಹಾಯಧನ ನೀಡುತ್ತದೆ. ಆದರೆ ಅದನ್ನು ಬಳಸಿಕೊಳ್ಳುವಲ್ಲಿ ರೈತರು ನಿರುತ್ಸಾಹ ಹೊಂದಿದ್ದಾರೆ ಎಂಬುದು, ಸ್ವತಃ ಒಕ್ಕಣೆ ಕಣ ಹೊಂದಿರುವ, ತಾಲ್ಲೂಕಿನ ನೆನಮನಹಳ್ಳಿಯ ರೈತ ಎನ್.ಆರ್.ಚಂದ್ರಶೇಖರ್ ಅವರ ನುಡಿ.‘ರಸ್ತೆಯಲ್ಲಿ ಧಾನ್ಯ ಒಕ್ಕಣೆ ಮಾಡುವುದರಿಂದ ಅಪಘಾತವಷ್ಟೆ ಆಗುವುದಿಲ್ಲ. ರಸ್ತೆಯಲ್ಲಿನ ಹೊಲಸು, ಮಣ್ಣು ಕೂಡ ಧಾನ್ಯದಲ್ಲಿ ಬೆರೆತು ಅದನ್ನು ಬಳಸುವರ ಆರೋಗ್ಯದ ಮೇಲೂ ದೂರಗಾಮಿ ಪರಿಣಾಮ ಬೀರುತ್ತದೆ. ಅಷ್ಟೆ ಅಲ್ಲ, ರಸ್ತೆ ಪಕ್ಕದ ಮಣ್ಣಿನಲ್ಲಿ, ವಾಹನಗಳ ಚಕ್ರದಲ್ಲಿ ಸೇರುವ ಧಾನ್ಯ ನಷ್ಟವಾಗುತ್ತದೆ. ಒಟ್ಟು ಧಾನ್ಯದಲ್ಲಿ ಶೇ.10ರಿಂದ 15ರಷ್ಟು ನಷ್ಟವಾಗುತ್ತದೆ ಎಂಬ ಸಂಗತಿಯನ್ನು ರೈತರು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ’ ಎನ್ನುತ್ತಾರೆ ಅವರು.ಪರಿಹಾರ: ಈ ಸಮಸ್ಯೆಗೆ ಇರುವ ಪರಿಹಾರ ಒಂದೇ. ರೈತರು ಒಕ್ಕಣೆ ಕಣ ಸಿದ್ಧಪಡಿಸಿಕೊಳ್ಳುವುದು ಅಗತ್ಯ. ಇರುವಷ್ಟು ನೆಲವನ್ನೆ ಸಾರಿಸಿ ಅಚ್ಚುಕಟ್ಟಾಗಿ ಕಣ ಮಾಡಿಕೊಳ್ಳುತ್ತಿದ್ದ ಸಂಪ್ರದಾಯ ಗೌರವಿಸಬೇಕು. ಸಹಾಯಧನ ಪಡೆದು ಕಾಂಕ್ರೀಟ್ ಒಕ್ಕಣೆ ಕಣ ನಿರ್ಮಿಸಿಕೊಳ್ಳಬೇಕು ಎಂಬು ಕೃಷಿ ಅಧಿಕಾರಿ ಮಂಜುನಾಥ್ ಅವರ ಸಲಹೆ. ವೈಯಕ್ತಿಕವಾಗಿ ರೈತರು ಒಕ್ಕಣೆ ಕಣ ನಿರ್ಮಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂಬುದು ಒಂದು ಸಮಸ್ಯೆಯಾದರೆ, ಸಮುದಾಯ ಒಕ್ಕಣೆ ಕಣ ನಿರ್ಮಿಸಲು ಗ್ರಾಮ ಪಂಚಾಯಿತಿಗಳು ಸೂಕ್ತ ಸ್ಥಳ ಒದಗಿಸದಿರುವುದು ಸಮಸ್ಯೆಯ ಮತ್ತೊಂದು ಮುಖ ಎನ್ನುತ್ತಾರೆ ಅಧಿಕಾರಿಯೊಬ್ಬರು. ವೈಯಕ್ತಿಕ ಮತ್ತು ಸಾಮುದಾಯಿಕ ನೆಲೆಯಲ್ಲಿ ಸಮವಾಗಿ ಪ್ರಯತ್ನ ನಡೆದರೆ ಮಾತ್ರ ‘ರಸ್ತೆ ಒಕ್ಕಣೆ ಕಣ’ಕ್ಕೆ ಅಂತ್ಯ ಹಾಡಬಹುದು ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry